ಬೆಂಗಳೂರು: ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನದ ಟಿಕೆಟ್ ದರವನ್ನು 200 ರೂ. ಗಳಿಗಿಂತ ಹೆಚ್ಚಿನ ಮೊತ್ತಕ್ಕೆ ಸಿನಿಮಾ ಟಿಕೆಟ್ ಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ದರ ನಿಗದಿ ಪ್ರಶ್ನಿಸಿ ಮಲ್ಟಿಪ್ಲೆಕ್ಸ್, ಹೊಂಬಾಳೆ ಫಿಲಂಸ್, ವಿಕೆ ಫಿಲಂಸ್ ಅರ್ಜಿ ಸಲ್ಲಿಸಿದ್ದವು. ಇಂದು ಹೈಕೋರ್ಟ್ನಲ್ಲಿ ಈ ಬಗ್ಗೆ ವಾದ ಪ್ರತಿವಾದ ನಡೆಯಿತು.
ಮಲ್ಟಿಪ್ಲೆಕ್ಸ್ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ಮುಖುಲ್ ರೊಹ್ಟಗಿ ಹಾಗೂ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು. ಸರ್ಕಾರ ಏಕಪಕ್ಷೀಯವಾಗಿ ದರ ನಿಗದಿ ಮಾಡಿದ್ದು, ಈ ನಿಯಮ ಕಾನೂನುಬಾಹಿರವಾಗಿದೆ ಹಾಗೂ ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆಯಾಗಿದೆ. 2017ರಲ್ಲಿಯೂ ಸರ್ಕಾರ ಇಂತಹುದೇ ಆದೇಶ ಹೊರಡಿಸಿತ್ತು.ಆಗಲೂ ಈ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಟಿಕೆಟ್ ಖರೀದಿಸಿ ಚಿತ್ರ ನೋಡುವುದು ಗ್ರಾಹಕನಿಗೆ ಬಿಟ್ಟ ಸಂಗತಿ. ಮಲ್ಟಿಪ್ಲೆಕ್ಸ್ ಗಳನ್ನು ನಿರ್ಮಿಸಲು ಕೋಟ್ಯಂತರ ಹಣ ಬಂಡವಾಳ ಹೂಡಲಾಗಿರುತ್ತದೆ. ಕಡಿಮೆ ಆಸನಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಾಗಾಗಿ ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ ಎಂದು ವಾದ ಮಂಡಿಸಿದರು.
ಮತ್ತೊಬ್ಬ ಅರ್ಜಿದಾರರ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ, ಬೆಂಗಳೂರು ಮತ್ತು ಇತರೆ ನಗರ ಪ್ರದೇಶಗಳ ನಡುವೆ ವ್ಯತ್ಯಾಸವಿದೆ. ಭೂಮಿ, ಕಟ್ಟಡದ ಮೌಲ್ಯ ಸವಲತ್ತುಗಳ ವಿಷಯದಲ್ಲೂ ವ್ಯತ್ಯಾಸಗಳಿರುತ್ತವೆ. ಆದ್ದರಿMದ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕೆಂದು ಮನವಿ ಮಾಡಿದರು.
ಹೊಂಬಾಳೆ ಫಿಲ್ಮ್ಸ್ ಪರ ವಾದ ಮಂಡಿಸಿದ ವಕೀಲ ಧ್ಯಾನ್ ಚಿನ್ನಪ್ಪ ಕಾಂತಾರದಂತಹ ಭಾರಿ ಮೊತ್ತದ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾ ನಿರ್ಮಿಸಲು ಅಪಾರ ಶ್ರಮ, ಬಂಡವಾಳ ಬೇಕಾಗುತ್ತದೆ. ಅಂಕಿ ಅಂಶ ಸಂಗ್ರಹಿಸದೇ ಸರ್ಕಾರ ಏಕಪಕ್ಷೀಯ ನಿರ್ಧಾರ ಪ್ರಕಟಿಸಿದೆ ಎಂದರು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಇಸ್ಮಾಯಿಲ್ ಜಬೀವುಲ್ಲಾ, ಸರ್ಕಾರ ಬಜೆಟ್‌ನಲ್ಲೇ ಸಿನಿಮಾ ಟಿಕೆಟ್ ದರ ಮಿತಿ ಬಗ್ಗೆ ಘೋಷಿಸಿತ್ತು. ಕರಡು ಅಧಿಸೂಚನೆಗೆ ಕೇಳಿ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರಕ್ಕೆ ಟಿಕೆಟ್ ದರ ನಿಗದಿಪಡಿಸುವ ಅಧಿಕಾರವಿದೆ ಎಂದು ವಾದಿಸಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ವಾದಿಸಿದ ವಿ.ಲಕ್ಷ್ಮೀನಾರಾಯಣ್, ವಾಣಿಜ್ಯ ಮಂಡಳಿಯ ಮನವಿಯ ಮೇರೆ ಸರ್ಕಾರ ಟಿಕೆಟ್ ದರಗಳನ್ನು ಕಡಿಮೆಗೊಳಿಸಿದೆ. ಈ ನಿರ್ಧಾರ ಸರಿಯಾಗಿದೆ ಎಂದು ಹೇಳಿದರು.
ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾ.ರವಿ ವಿ. ಹೊಸಮನಿ ಅವರ ಪೀಠ, ಆದೇಶವನ್ನು ಕಾಯ್ದಿರಿಸಿದ್ದಾರೆ.
ದರ ಎಷ್ಟಿರಲಿದೆ?:ಯಾವುದೇ ಭಾಷೆಯ ಚಿತ್ರವಾದರೂ ಗರಿಷ್ಠ ಟಿಕೆಟ್ ದರ ರೂ.200 ದಾಟುವಂತಿಲ್ಲ. ಟಿಕೆಟ್ ಮೇಲೆ ಶೇ. 18ರಷ್ಟು ತೆರಿಗೆ ವಿಧಿಸಬಹುದಾಗಿದೆ. ಚಿತ್ರಮಂದಿರದಲ್ಲಿ ಎರಡು ಅಥವಾ ಮೂರು ಕ್ಲಾಸ್‌ಗಳ ಆಸನ ವ್ಯವಸ್ಥೆ ಇದ್ದರೆ ಅವುಗಳ ಬೆಲೆಯೂ ರೂ.150 ಕ್ಕಿಂತ ಕಡಿಮೆ ಆಗಲಿದೆ.
ಇದುವರೆಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರದ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿರಲಿಲ್ಲ. ಕೆಲವು ಚಿತ್ರಗಳ ಟಿಕೆಟ್ ದರ ರೂ.2,000 ದಿಂದ ರೂ.3000 ದಾಟುತ್ತಿತ್ತು.
ಅಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದ ರಾಜೇಂದ್ರ ಸಿಂಗ್ ಬಾಬು ಅವರು ತಮಿಳುನಾಡು ಮಾದರಿಯಲ್ಲೇ ಕರ್ನಾಟಕದಲ್ಲೂ ಟಿಕೆಟ್ ದರವನ್ನು ನಿಗದಿ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಸಮ್ಮತಿ ಸೂಚಿಸಿತ್ತು. ಅದರ ಫಲಶೃತಿಯೇ ದರ ಇಳಿಕೆಯಾಗಿದೆ.