ಚಿತ್ತಾಪುರ: rss ಪಥಸಂಚಲನ; ಮತ್ತೊಂದು ಸುತ್ತಿನ ಸಭೆಗೆ ಹೈಕೋರ್ಟ್‌ ಸೂಚನೆ; ವಿಚಾರಣೆ ನ.7ಕ್ಕೆ ಮುಂದೂಡಿಕೆ

Most read

ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ ಎಸ್‌ ಎಸ್ ಪಥಸಂಚಲನ ಕುರಿತ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ನವಂಬರ್‌ 5ಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಸುವಂತೆ ಸೂಚಿಸಿ ಕರ್ನಾಟಕ ಹೈಕೋರ್ಟ್‌ ನ ಕಲಬುರಗಿ ವಿಭಾಗೀಯ ಪೀಠ ವಿಚಾರಣೆಯನ್ನು ನ.7ಕ್ಕೆ ಮುಂದೂಡಿದೆ.

ಚಿತ್ತಾಪುರದಲ್ಲಿ ಆರ್‌ ಎಸ್‌ ಎಸ್ ಪಥಸಂಚಲನ ಕುರಿತ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರು ಇಂದೂ ಸಹ ಮುಂದುವರಿಸಿದರು. ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ ಶಾಂತಿ ಸಭೆಯಲ್ಲಿ ಅರ್ಜಿದಾರರು ಪಾಲ್ಗೊಂಡಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅರ್ಜಿದಾರ ಪರ ವಕೀಲ ಅರುಣ ಶಾಮ್, ಉತ್ತರಿಸಿ ಅರ್ಜಿದಾರರ ಸಂಬಂಧಿಕರು ಮರಣಹೊಂದಿದ್ದರಿಂದ ಅವರು ಭಾಗವಹಿಸಲು ಸಾಧ್ಯವಾಗಿರಲಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಶಾಂತಿ ಸಭೆಯ ಗಂಭೀರತೆಯನ್ನು ಅರಿತು ಅರ್ಜಿದಾರರು ಸಭೆಯಲ್ಲಿ ಭಾಗವಹಿಸಬೇಕಿತ್ತು ಎಂದು ನ್ಯಾಯಮೂರ್ತಿಗಳು ಹೇಳಿದಾಗ ಅರುಣ ಶಾಮ್, ಇನ್ನೊಮ್ಮೆ ಸಭೆ ನಡೆಸಿದರೆ, ಅರ್ಜಿದಾರರು ಭಾಗವಹಿಸುತ್ತಾರೆ ಎಂದು ಭರವಸೆ ನೀಡಿದರು.

ಇನ್ನೊಂದು ಸುತ್ತಿನ ಸಭೆಗೆ ದಿನಾಂಕ ನಿಗದಿಪಡಿಸಲು ಸಾಧ್ಯವೇ ಎಂದು ನ್ಯಾಯಾಲಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ಕೇಳಿದಾಗ ಇನ್ನೊಂದು ಸುತ್ತಿನ ಸಭೆ ನಡೆಸಲು ತಮ್ಮ ಅಭ್ಯಂತರ ಇಲ್ಲ ಎಂದು ಉತ್ತರಿಸಿದರು.

ಆಗ ನ್ಯಾಯಮೂರ್ತಿಗಳು ನವೆಂಬರ್ 5 ರಂದು ಸಂಜೆ 5 ಗಂಟೆಗೆ ಇನ್ನೊಂದು ಶಾಂತಿ ಸಭೆ ನಡೆಸಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿ ಅರ್ಜಿದಾರ ಪರ ವಕೀಲರು, ಸರ್ಕಾರದ ಪರ ವಕೀಲರು ಹಾಗೂ ಜಿಲ್ಲಾಧಿಕಾರಿ ಸಭೆಯಲ್ಲಿ ಪಾಲ್ಗೊಳ್ಳಲಿ ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ನ.7ಕ್ಕೆ ಮುಂದೂಡಿದರು. ಎರಡನೇ ಸುತ್ತಿನ ಸಭೆಯನ್ನು ಬೆಂಗಳೂರಿನಲ್ಲಿ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಅವರ ಕಚೇರಿಯಲ್ಲಿ ನಡೆಯಲಿದೆ.

More articles

Latest article