ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಸ್ಥಗಿತಗೊಳ್ಳಲು ನಾನೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಪ್ರತಿಪಾದಿಸುತ್ತಿರುವ ಬೆನ್ನಲ್ಲೇ ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತ–ಪಾಕಿಸ್ತಾನ ನಡುವೆ ಶಾಂತಿ ಸ್ಥಾಪನೆಗೆ ಮಧ್ಯವರ್ತಿಯಾಗಿ ಕೆಲಸ ಮಾಡಿರುವುದಾಗಿ ಚೀನಾ ಹೇಳುತ್ತಿದೆ.
ನಿನ್ನೆ ಬೀಜಿಂಗ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧಗಳ ಕುರಿತ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ಬಗೆಹರಿಸಲು ಚೀನಾ ಪ್ರಮುಖ ಪಾತ್ರ ವಹಿಸಿದೆ ಎಂದು ಉಲ್ಲೇಖಿಸಿದ್ದರು.
ಮುಂದುವರೆದು ಅವರು, ಎರಡನೇ ವಿಶ್ವಯುದ್ಧದ ನಂತರ 2025ರಲ್ಲಿ ಅತಿ ಹೆಚ್ಚು ಆಂತರಿಕ ಮತ್ತು ಗಡಿಯಾಚೆಗಿನ ಸಂಘರ್ಷಗಳು ನಡೆದಿವೆ. ಅವುಗಳಲ್ಲಿ ಪ್ರಮುಖವಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ, ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ಸಂಘರ್ಷ, ಇರಾನಿನ ಪರಮಾಣು ಸಮಸ್ಯೆ ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಇತ್ತೀಚಿನ ಘರ್ಷNಯನ್ನು ಕೊನೆಗಾಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇವೆ ಎಂದು ಹೇಳಿದ್ದಾರೆ.
ಆದರೆ ಭಾರತ ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ನೇರ ಮಾತುಕತೆ ನಡೆಸುವ ಮೂಲಕ ಸಂಘರ್ಷವನ್ನು ಬಗೆಹರಿಸಲಾಗಿದೆ ಎಂದು ಪ್ರತಿಪಾದಿಸುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕೊನೆಗೊಳ್ಳುವಲ್ಲಿ ಮೂರನೇ ದೇಶದ ಪಾತ್ರವಿಲ್ಲ ಎಂದೂ ಭಾರತ ಸ್ಪಷ್ಟಪಡಿಸಿದೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ತಾನೇ ಕಾರಣ ಎಂದು ಹೇಳುತ್ತಲೇ ಬಂದಿದ್ದಾರೆ. ಪ್ರಧಾನಿ ಮೋದಿ ಅವರು ಟ್ರಂಪ್ ಹೇಳಿಕೆಗೆ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

