ಬಾಲ್ಯದ ನೆರಳು ಭವಿಷ್ಯದುದ್ದಕ್ಕೂ..

Most read

ಕೆಲವರಿಗೆ ಇದ್ದಕ್ಕಿದ್ದಂತೆ ಬದುಕಲ್ಲಿ ಯಾವುದೋ ಸಣ್ಣ ಪುಟ್ಟ ತೊಂದರೆಗಳು ಬಂದಾಗ ಅದರ ಜೊತೆಗೇ ಆಂಕ್ಸೈಟಿ ಅಥವಾ ಖಿನ್ನತೆ ಅಥವಾ ಮತ್ತಿತರ ಮಾನಸಿಕ ಕಾಯಿಲೆಗಳು ಕಾಡುತ್ತವೆ. ‌ಆಗ ಅವರಷ್ಟೇ ಅಲ್ಲ ಅವರಂತೆಯೇ ಇತರರ ಮನಸಲ್ಲಿ ಕಾಡುವ ಪ್ರಶ್ನೆ “ಹೀಗೇಕೆ ಅವರಿಗೆ ಮಾತ್ರ “ ಎಂಬುದು.  ಇದಕ್ಕಿಂತ ಹೆಚ್ಚಿನ ಸವಾಲುಗಳನ್ನು ಎದುರಿಸಿ ಬದುಕಿದ ಅದೆಷ್ಟೋ ಜನರಿದ್ದಾರೆ. ಇದೇಕೆ ಕೆಲವರಿಗೆ ಹೀಗೆ ?

ಅದಕ್ಕೆ ಮೊದಲ ಕಾರಣ ಅವರ ಜೀನ್ಸ್ . ಹುಟ್ಟುವಾಗಲೇ ಬಂದ ಮೆದುಳಿನ ಕೆಲವು ರಚನೆಗಳು.

ಎರಡನೆಯ ಕಾರಣ ಅವರ ಬಾಲ್ಯದ ಪ್ರಾರಂಭಿಕ ಹಂತ. ಅಂದರೆ ಮಗು ಹುಟ್ಟಿದ‌ ಮೊದಲ ಎರಡು ವರ್ಷಗಳು ಬಹಳ ಮುಖ್ಯ. ಹಾಗೆಯೇ ನಂತರದ ಐದಾರು ವರ್ಷ. ಈ ಹಂತದಲ್ಲಿ ಆ ಮಗುವಿನ ಅಪ್ಪ  ಅಮ್ಮ, ಸುತ್ತಮುತ್ತಲಿನ ಜನರು, ಆ ಮಗುವಿಗೆ ಸಿಕ್ಕ ಆರೈಕೆ, ಅನುಭವಗಳು ಎಲ್ಲವೂ ಮಗುವಿನ ಮೆದುಳಿನ ನ್ಯೂರಲ್  ರಚನೆಯನ್ನು ಬದಲಿಸುತ್ತಾ ಹೋಗುತ್ತವೆ.

ಬಹಳ ಜನರಿಗೆ ತಮ್ಮ ಬಾಲ್ಯದ ಘಟನೆಗಳೇ ತಮ್ಮ ಈಗಿನ ಮಾನಸಿಕ ಸ್ಥಿತಿಗೆ ಕಾರಣ ಎಂಬುದೂ ಗೊತ್ತಾಗುವುದಿಲ್ಲ. ಉದಾಹರಣೆಗೆ ಒಂದು ಮಗು ಯಾವುದೋ ಸಮಯದಲ್ಲಿ ಕತ್ತಲನ್ನು ನೋಡಿ ಹೆದರಿ ಬೆಚ್ಚಿರುತ್ತದೆ ಎಂದಾದರೆ ಅದು ಮುಂದೆಯೂ ಕತ್ತಲಿಗೆ ಅಂಜಿಯೇ ಬದುಕುತ್ತದೆ. 

ಅಪ್ಪ ಅಮ್ಮ ಬೇಕಾದ ಯಾವುದೋ ಸಮಯದಲ್ಲಿ ಹೆತ್ತವರು ಮಗುವನ್ನು ಒಂಟಿಯಾಗಿ ಬಿಟ್ಟು ಹೋಗಿ ಮಗುವಿಗೆ ತಾನು ಒಬ್ಬನೇ/ಳೇ ಎಂದನಿಸಿದಾಗ ವಿಭಿನ್ನ ರೀತಿಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಒಂದೋ ಸಂಬಂಧಗಳಲ್ಲಿ ನಂಬಿಕೆ‌ ಕಳೆದುಕೊಂಡು ಒಂಟಿಯಾಗಿಯೇ ಇರುವುದು, ಅಥವಾ ಸಂಬಂಧಗಳಲ್ಲಿ ಹೇಡಿಯಾಗಿಯೋ ಅಥವಾ ಒಂದು ಸಂಬಂಧದಿಂದ ಇನ್ನೊಂದು ಸಂಬಂಧಕ್ಕೆ ಹಾರುವುದು, ಸದಾ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರೀತಿಗಾಗಿ ಹಾತೊರೆಯುವುದು ಇತ್ಯಾದಿಗಳನ್ನು ಮಾಡುತ್ತಾರೆ.

ಹೀಗೆಯೇ, ಮಕ್ಕಳ‌ ಮುಂದೆ ಬಹಳ ಜಗಳ‌ ಗಲಾಟೆ ಮಾಡಿದರೆ ಸಂಸಾರದಲ್ಲಿ ಅವರು ಆಸಕ್ತಿ ಕಳೆದು ಕೊಳ್ಳಬಹುದು. ‌ಬಹುತೇಕ ಜನ ಮದುವೆ ಆಗದೇ ಇರಲು ಬಾಲ್ಯಾವಸ್ಥೆಯಲ್ಲಿ ನೋಡಿದ ಹೆತ್ತವರ  ಜಗಳವೂ ಒಂದು ಕಾರಣವಾಗಿರುತ್ತದೆ..

ಮಗುವಿನ ಮುಂದೆ‌ ಕಣ್ಣೀರು ಹಾಕುತ್ತಾ ಗೊಳೋ ಎನ್ನುವುದೋ ಅಥವಾ ಕೋಪದಲ್ಲಿ ಹೊಡೆಯುವುದೋ ಮಾಡಿದರೆ ಅದೇ‌  ಗುಣಗಳನ್ನು ಮಗು ಮೈಗೂಡಿಸಿಕೊಳ್ಳುತ್ತದೆ.

ಚಿಕ್ಕ ಮಕ್ಕಳಾಗಿರುವಾಗಲೇ‌ ಒಂದು ಮಗುವಿಗೆ ಏನಾದರೂ ಕೊಟ್ಟು ಇನ್ನೊಂದು ಮಗುವಿಗೆ‌ ಕೊಡದೇ ಇದ್ದಾಗ ಆ ಮಗು  ಮುಂದೆ ಹೊಟ್ಟೆಕಿಚ್ಚು ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಹುದು. ಈ ರೀತಿಯ‌ ಘಟನೆ ಹಾಗೂ ಕೆಲವೊಮ್ಮೆ ಹೋಲಿಕೆಯೂ ಸಹಾ ಮಗುವಿನಲ್ಲಿ ನಾರ್ಸಿಸಿಸ್ಟಿಕ್ ಪ್ರವೃತ್ತಿಯನ್ನೂ ತರಬಹುದು.

ಇದನ್ನೂ ಓದಿ- ಸ್ವಯಂ ತಿರಸ್ಕಾರದಿಂದ ಹೊರಬರುವುದು ಹೇಗೆ?

ಈ ಮಕ್ಕಳ ಬಾಲ್ಯ ಮಕ್ಕಳ ಮುಂದಿನ ಭವಿಷ್ಯಕ್ಕೆ‌ ಹೇಗೆ ಮಾರಕ ಅಥವಾ ಪೂರಕವಾಗಬಲ್ಲದು ಎಂಬುದಕ್ಕೆ ಮನಃಶಾಸ್ತ್ರದಲ್ಲಿ ಬಹಳ ಸಂಶೋಧನೆಗಳಾಗಿವೆ. ಅವುಗಳ ಸಂಕ್ಷಿಪ್ತ ಪರಿಚಯ  ಇಲ್ಲಿದೆ-

1. ಅಟಾಚ್ಮೆಂಟ್   ಥಿಯರಿ (ಜಾನ್ ಬೌಲ್ಬಿ) ಸುರಕ್ಷಿತ ವರ್ಸಸ್ ಅಸುರಕ್ಷಿತ ಬಾಂಧವ್ಯ:  ತಂದೆ ತಾಯಿಯ ಜೊತೆಗಿನ ಮಗುವಿನ ಆರಂಭಿಕ ಸಂವಹನಗಳು ಮಗು ಸಂಬಂಧಗಳನ್ನು ನೋಡುವ ಶೈಲಿಗಳಿಗೆ ಕಾರಣವಾಗುತ್ತವೆ

ಸುರಕ್ಷಿತ ಬಾಂಧವ್ಯದಲ್ಲಿ ( ಸೆಕ್ಯೂರ್ಡ್ ಅಟಾಚ್‌ಮೆಂಟಿನಲ್ಲಿ ) ಬೆಳೆದ  ಮಕ್ಕಳು ಜೀವನದುದ್ದಕ್ಕೂ ಆರೋಗ್ಯಕರ ಸಂಬಂಧಗಳನ್ನು ಮತ್ತು ಉತ್ತಮ ಭಾವನಾತ್ಮಕ ನಿಯಂತ್ರಣವನ್ನು ಅಭಿವೃದ್ಧಿ ಪಡಿಸುತ್ತಾರೆ.

ಇದಕ್ಕೆ ತದ್ವಿರುದ್ಧವಾಗಿ, ಅಸುರಕ್ಷಿತ ಬಾಂಧವ್ಯ ಕಂಡ ಮಕ್ಕಳಿಗೆ ಸಂಬಂಧಗಳಲ್ಲಿ ತೊಂದರೆಗಳು, ಅತಿಯಾದ ಸ್ವಾಭಿಮಾನ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

2. ಮೆದುಳಿನ ಆಂತರಿಕ ರಚನೆಗಳು; ಮಾದರಿಗಳು: ಇವು ಬಾಲ್ಯದಲ್ಲಿ ರೂಪುಗೊಂಡವುಗಳು. ತಾನು ಚಿಕ್ಕಂದಿನಲ್ಲಿ ನೋಡಿದ,  ಇತರ ವ್ಯಕ್ತಿಗಳ ವರ್ತನೆ, ಅನುಭವಿಸಿದ ಘಟನೆಗಳು  ಮುಂದೆ ಆ  ವ್ಯಕ್ತಿಗಳು ತಮ್ಮ ಸುತ್ತಲಿನ ಪ್ರಪಂಚವನ್ನು ಹೇಗೆ ಗ್ರಹಿಸುತ್ತಾರೆ ಮತ್ತು ಸಂವಹನ ನಡೆಸುತ್ತಾರೆ ಎಂಬುದನ್ನು ಈ ಆಂತರಿಕ ಕಾರ್ಯ ಮಾದರಿಗಳು ನಿರ್ಧರಿಸುತ್ತವೆ.

3. ನ್ಯೂರೋ ಸೈನ್ಸ್ ಪ್ರಕಾರವೂ ಈ ಮೊದಲ ಆರಂಭಿಕ ವರ್ಷಗಳು ಭವಿಷ್ಯದ ನಿರ್ಣಾಯಕ ಅವಧಿಗಳು 

ಈ ಸಮಯದಲ್ಲಿ, ಮೆದುಳು ಹೆಚ್ಚು ಪ್ಲಾಸ್ಟಿಕ್( ಬೆಳೆಯಬಲ್ಲಂತಹ) ಆಗಿರುತ್ತದೆ ಮತ್ತು ಅನುಭವಗಳಿಂದ ಬದಲಾಗುತ್ತಾ ಹೋಗುತ್ತದೆ. ಈ ಸಮಯದಲ್ಲಿ ಮಕ್ಕಳಿಗೆ ಪ್ರೀತಿ, ಕಾಳಜಿ ಮತ್ತು ಒಳ್ಳೆಯ ಸಂವಹನ ದೊರೆತರೆ ಅವು ಧನಾತ್ಮಕವಾಗಿ ಅವರ ಆರೋಗ್ಯಕರ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ಇದಕ್ಕೆ ವಿರುದ್ಧವಾಗಿ ಚಿಕ್ಕ ವಯಸ್ಸಿನಲ್ಲಿ, ನಿರ್ಲಕ್ಷ್ಯ, ನಿಂದನೆ ಅಥವಾ ದೀರ್ಘಕಾಲದ ಮಾನಸಿಕ ಅಥವಾ ದೈಹಿಕ ಒತ್ತಡವು ಮೆದುಳಿನ ರಚನೆ ಮತ್ತು ಕಾರ್ಯದಲ್ಲಿ ದೀರ್ಘಕಾಲೀನ ನೆಗೆಟೀವ್ ಬದಲಾವಣೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಭಾವನೆಗಳ ನಿಯಂತ್ರಣ ಮತ್ತು ಒತ್ತಡದ ಪ್ರತಿಕ್ರಿಯೆಗೆ ಸಂಬಂಧಿಸಿದ ಭಾಗಗಳಲ್ಲಿ ಈ ಬದಲಾವಣೆಗಳು ಕಂಡು ಬರುತ್ತವೆ.(ಉದಾ., ಅಮಿಗ್ಡಾಲಾ ಮತ್ತು ಪ್ರಿಫ್ರಂಟಲ್ ಕಾರ್ಟೆಕ್ಸ್) 

4. ವರ್ತನೆಯ ಕಂಡೀಷನಿಂಗ್; ಕಲಿಕೆ ಮತ್ತು ನಡವಳಿಕೆಯ ಮಾದರಿಗಳು: ಬಾಲ್ಯದ ಆರಂಭಿಕ ಅನುಭವಗಳು ಸಾಮಾನ್ಯವಾಗಿ ಕಂಡೀಷನಿಂಗ್ ಮೂಲಕ ವರ್ತನೆಯ ಮಾದರಿಗಳನ್ನು ರೂಪಿಸುತ್ತವೆ. ಪಾಲಕರಿಂದ ಮಕ್ಕಳು ಸ್ವೀಕರಿಸುವ ಧನಾತ್ಮಕ ವಿಷಯಗಳು ಮಕ್ಕಳ ಆರೋಗ್ಯಕರ ಅಭ್ಯಾಸಗಳು ಹಾಗೂ ಆತ್ಮ ವಿಶ್ವಾಸದ ಬೆಳವಣಿಗೆಗೆ ಕಾರಣವಾಗಬಹುದು. ಆದರೆ ಋಣಾತ್ಮಕ ವಿಷಯಗಳು ಅಥವಾ ಸರಿಯಾದ ಪಾಲನೆ ಇಲ್ಲದೆ ಇದ್ದಾಗ ಅಂತಹ ಮಕ್ಕಳಲ್ಲಿ ಅಸಮರ್ಪಕ ನಡವಳಿಕೆಗಳು ಮತ್ತು ಕಡಿಮೆ ಆತ್ಮ ವಿಶ್ವಾಸವನ್ನು ಕಾಣಬಹುದು.

5. ಸಾಮಾಜಿಕ ಕಲಿಕೆಯ ಸಿದ್ಧಾಂತ

ನೋಡಿ ಕಲಿಯುವಿಕೆ: ಮಕ್ಕಳು ತಮ್ಮ ಸುತ್ತಮುತ್ತಲಿನವರನ್ನು, ವಿಶೇಷವಾಗಿ ಪೋಷಕರು ಮತ್ತು ಆರೈಕೆ ಮಾಡುವವರನ್ನು ಗಮನಿಸಿ ಮತ್ತು ಅನುಕರಿಸುವ ಮೂಲಕ ನಡವಳಿಕೆಗಳು, ವರ್ತನೆಗಳು ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಕಲಿಯುತ್ತಾರೆ.

ಬಾಲ್ಯದಲ್ಲಿ ಸಕಾರಾತ್ಮಕ ರೋಲ್ ಮಾಡೆಲ್‌ಗಳನ್ನು  ಹೆಚ್ಚಾಗಿ ಕಾಣುವುದು  ಮಕ್ಕಳಲ್ಲಿ ಉತ್ತಮ‌ ಸಾಮಾಜಿಕ ವರ್ತನೆಯನ್ನು ಉತ್ತೇಜಿಸುತ್ತದೆ. ಆದರೆ ನಕಾರಾತ್ಮಕ ಅಥವಾ ಹಾನಿಕಾರಕ ನಡವಳಿಕೆಗೆ ಒಡ್ಡಿಕೊಳ್ಳುವುದು ಮಕ್ಕಳಲ್ಲಿ ಮುಂದೆ ಇದೇ ರೀತಿಯ ಮಾದರಿಗಳನ್ನು ಅಳವಡಿಸಿಕೊಳ್ಳಲು ಕಾರಣವಾಗಬಹುದು.

 6. ಬಾಲ್ಯದ ಕೆಟ್ಟ ಅನುಭವಗಳು:  ಬಾಲ್ಯದಲ್ಲಿ ಆಘಾತಕಾರಿ ಅನುಭವಗಳಾದ ದುರ್ಬಳಕೆ, ನಿರ್ಲಕ್ಷ್ಯ ಅಥವಾ ಮನೆಯ ಅಸಮರ್ಪಕ ಕಾರ್ಯಗಳು ಖಿನ್ನತೆ ಸೇರಿದಂತೆ ಪ್ರೌಢಾವಸ್ಥೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಹೆಚ್ಚಿನ ಅಪಾಯದೊಂದಿಗೆ ಬಲವಾಗಿ ಕನೆಕ್ಟ್ ಆಗಿವೆ. ಇದು  ಆತಂಕ, ಮಾದಕ ವ್ಯಸನ ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು.

ಬಾಲ್ಯದ ಖುಷಿ

ಮಗುವಿನ ಮೊದಲೊಂದಷ್ಟು ವರ್ಷಗಳು ಬಹಳ ಮುಖ್ಯವಾದುದರಿಂದ  ಈ ಹಂತದಲ್ಲಿ ಸಾಧ್ಯವಾದಷ್ಟೂ ತಂದೆ ಅಥವಾ ತಾಯಿ ಅಥವಾ ಮಗುವಿನ ಅಜ್ಜಿ ಅಜ್ಜಿ ಮಗುವಿನ ಜೊತೆಯೇ ಇರಬೇಕು. ತೀರಾ ಅನಿವಾರ್ಯ ಸಮಯದಲ್ಲಿ ಮಗುವನ್ನು ಡೇ ಕೇರ್ ಅಥವಾ ಪ್ಲೇ ಹೋಮಿನಲ್ಲಿ ಬಿಟ್ಟು ಹೋಗುವುದಿದ್ದರೆ ಆ ಡೇ ಕೇರ್ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆಯೇ ಇಲ್ಲವೇ ಎಂಬುದನ್ನು ಗಮನಿಸುವುದಷ್ಟೇ ಅಲ್ಲ  ಆ ಮಗುವಿನ ಕೇರ್ ಟೇಕರ್ ವರ್ತನೆ ಹಾಗು ಪ್ರವೃತ್ತಿಯೂ  ಮಗುವಿಗೆ ಯಾವ ರೀತಿಯಲ್ಲಿ ಒಳಿತು ಎಂಬುದನ್ನು ಗಮನಿಸಬೇಕು.‌ 

ಅಷ್ಟೇ ಅಲ್ಲ ಮಕ್ಕಳು ಒಂದೊಳ್ಳೆ ರೀತಿಯಲ್ಲಿ ಬೆಳೆದು ಉತ್ತಮ‌ ನಾಗರೀಕರಾಗಬೇಕೆಂದರೆ  ಈ ಕೆಳಗಿನವುಗಳು ಬಹಳ ಮುಖ್ಯ

1. ಮಗುವಿಗೆ ಚಿಕ್ಕಂದಿನಿಂದಲೇ ಸಣ್ಣ ಪುಟ್ಟ ಜವಾಬ್ದಾರಿಯನ್ನು ಕಲಿಸಬೇಕು. ಮಕ್ಕಳು ಕೇಳಿದ ಕೂಡಲೇ ಎಲ್ಲವನ್ನೂ ಕೊಡಿಸುವುದರ ಬದಲು ಕೊಂಚ ಕಾಲ  ಕಾಯಿಸಿ ಕೊಡಿಸುವುದು ಒಳ್ಳೆಯದು.

 2. ಮಕ್ಕಳು ಹಠ ಹಿಡಿದದ್ದನ್ನೆಲ್ಲಾ‌ ಮಾಡಲೇಬೇಕೆಂದೇನಿಲ್ಲ.  ಕೊಂಚ ನಿಧಾನಿಸಿ ಮಗುವಿಗೆ ಅದೇಕೆ ತುರ್ತಲ್ಲ ಎಂದು ವಿಷಯ ತಿಳಿಸಿ  ನಿಧಾನಿಸಿ ಅದನ್ನು ಪೂರ್ಣಗೊಳಿಸಬಹುದು.

 3. ತೀವ್ರ ಅಟೆನ್ಷನ್ ಬಯಸುವ ಮಗುವಿಗೆ ಹೊಡೆಯುವುದು ಬೈಯ್ಯುವುದೂ ಕೂಡ ಅಟೆನ್ಷನ್ ಆಗಿ ಕಾಣಬಹುದು. ಈ ಅಟೆನ್ಷನ್ ಗಾಗಿ ಇನ್ನಷ್ಟು ಸತಾಯಿಸ ಬಹುದು. ಇದು ಮುಂದೆ ಅಟೆನ್ಷನ್ ಗಾಗಿ ಏನು ಬೇಕಾದರೂ ಮಾಡುವ ಗುಣ‌ ತರಬಹುದು, ಹಾಗೆಯೇ‌ ಮಗುವಿಗೆ  ನಿಜವಾಗಿ ಬೇಕಾದ ಸಮಯದಲ್ಲಿ ಅಟೆನ್ಷನ್ ಕೊಡದೇ ಇದ್ದರೂ ಸಹಾ ಅದು ಮುಂದೆ ಸಂಬಂಧಗಳಲ್ಲಿ ನಂಬಿಕೆ ಕಳೆದುಕೊಳ್ಳಬಹುದು.

4. ಯಾವಾಗಲೂ ಮಗುವಿನ ವರ್ತನೆಯನ್ನು ಖಂಡಿಸಿ, ಅದು ಬಿಟ್ಟು ಮಗುವನ್ನೇ‌ ಖಂಡಿಸಬೇಡಿ .‌

5. ಯಾವಾಗಲೂ, ನೀನು‌ ಹೀಗೇ ಮಾಡ್ತೀಯ, ನೀನು ದಡ್ಡ, ನೀನು ಸ್ವಲ್ಪ ಮಂದ ಇಂತಹವುಗಳನ್ನು ಬಳಸಲೇ ಬೇಡಿ

6. ಹೊಡೆತ,  ಬಡಿತ ಯಾವತ್ತೂ ಮಗುವಿನ ವರ್ತನೆಯನ್ನು ಸರಿ ಪಡಿಸುವ ವಿಧಾನ ಅಲ್ಲ ‌

7. ಮಗುವಿನ ಮುಂದೆ ದೊಡ್ಡ ಹಾರಾಟ ಕಿರುಚಾಟ, ಜಗಳ, ಅಪ ಶಬ್ದಗಳ ಬಳಕೆ, ಸಾಯಿಸಿ ಬಿಡುವೆ, ನಾನು ಸಾಯುತ್ತೇನೆ , ಬದುಕೇ ಬೇಡ ಎಂಬೆಲ್ಲಾ ಮಾತುಗಳು ದಯವಿಟ್ಟು ಬೇಡವೇ‌ಬೇಡ

8. ಚಿಕ್ಕ ಮಗುವನ್ನು ಬ್ಯುಸಿಯಾಗಿರಿಸಲು  ಮೊಬೈಲ್ ಕೊಟ್ಟು ಕೂರಿಸಬೇಡಿ. ಬದಲಿಗೆ ಒಂದಷ್ಟು ಸಣ್ಣ ಪುಟ್ಟ ಕ್ರಾಫ್ಟಿನಂತಹದ್ದೋ ಅಥವಾ ಪೇಂಟಿಂಗ್ ಕೊಡಿ. ಪೆನ್ಸಿಲ್ ಪೇಪರ್, ಕಲರ್ ಪೆನ್ ಇವುಗಳನ್ನೂ ಕೊಡಬಹುದು. 

9. ಸಾಧ್ಯವಾದಾಗೆಲ್ಲಾ ಮಗುವಿಗೆ  ಒಳ್ಳೆಯ ಕಥೆ ಹೇಳಿ, ಹಾಡು ಹೇಳಿ ಮಲಗಿಸಿ.

10.  ನಿಮ್ಮ ಸಂಸ್ಕೃತಿ, ನಾಡು, ಪುರಾಣಗಳಿಂದ ಉತ್ತಮ ಅಭಿರುಚಿ ಹಾಗು ಒಳ್ಳೆಯ ವಿಷಯಗಳನ್ನು ಹೇಳಿ ಉತ್ತಮ ನಡವಳಿಕೆ ಬೆಳೆಸಬಹುದು.

11. ಹಿಂಸಾತ್ಮಕ ವಿಷಯಗಳು, ಅಶ್ಲೀಲ ಚಿತ್ರಗಳನ್ನು ಮಕ್ಕಳಿಂದ ದೂರವಿಡಿ.

12. ಮಕ್ಕಳಲ್ಲಿ ಕೆಟ್ಟ ಅಥವಾ ಅನುಚಿತ ನಡವಳಿಕೆ ಕಂಡ ಕೂಡಲೇ ತಿದ್ದಿ. ಅವರ ಕೆಟ್ಟ ಭಾಷೆ, ಹಿಂಸಾತ್ಮಕ ಮಾತುಗಳನ್ನು ಪ್ರೋತ್ಸಾಹಿಸಬೇಡಿ.

ಡಾ ರೂಪಾ ರಾವ್

ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ

ಬೆಂಗಳೂರು ವಾಸಿಯಾಗಿರುವ ಇವರು ಮನಃಶಾಸ್ತ್ರದಲ್ಲಿ ಹಾಗೂ ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ಸಂಪರ್ಕ ಸಂಖ್ಯೆ: 97408 66990

More articles

Latest article