ಕಟ್ಟುಪಾಡುಗಳನ್ನು ಹೇರಿದಷ್ಟೂ ಹವ್ಯಕ ಹೆಣ್ಮಕ್ಕಳು ಹೆದರಿಕೊಂಡು ಸಂಪ್ರದಾಯಸ್ಥ ಕುಟುಂಬಗಳ ಯುವಕರನ್ನು ಮದುವೆಯಾಗಲು ನಿರಾಕರಿಸುವ ಸಾಧ್ಯತೆಗಳೇ ಹೆಚ್ಚಾಗಿವೆ. ಮೊದಲೇ ಈ ಹವ್ಯಕ ಹಾರವರನ್ನು ವಿವಾಹವಾಗಲು ಯುವತಿಯರು ನೂರು ಸಲ ಯೋಚಿಸುತ್ತಾರೆ. ಇನ್ನು ಎರಡು ಮಕ್ಕಳು ತಮಗಾಗಿ ಹಾಗೂ ಹೆಚ್ಚುವರಿ ಮಕ್ಕಳು ಮಠಕ್ಕಾಗಿ ಹುಟ್ಟಿಸಬೇಕು ಎಂದು ಬಲವಂತ ಮಾಡಿದ್ದೇ ಆದರೆ ಹವ್ಯಕ ಯುವತಿಯರು ಬೇರೆ ಜಾತಿಯ ಲಿಬರಲ್ ಯುವಕರನ್ನು ಹುಡುಕಿ ಮದುವೆಯಾಗುತ್ತಾರೆ. ಹವ್ಯಕರ ವಂಶಾಭಿವೃದ್ಧಿ ಯೋಜನೆ ಕನಸಾಗಿಯೇ ಉಳಿಯುತ್ತದೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಬೇಗ ಮದುವೆಯಾಗಿ ಕನಿಷ್ಟ ಮೂರಾದರೂ ಮಕ್ಕಳನ್ನ ಹುಟ್ಟಿಸಿ. ಮೂರಕ್ಕಿಂತ ಹೆಚ್ಚು ಮಕ್ಕಳಾದರೆ ಮಠಕ್ಕೆ ಬಿಡಿ” ಎಂದು ಹವ್ಯಕ ಬ್ರಾಹ್ಮಣರ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗೋಳು ಕರೆ ಕೊಟ್ಟಿದ್ದಾರೆ.
ಇದೇ ಹವ್ಯಕ ಸಮುದಾಯದ ರಾಮಚಂದ್ರಾಪುರದ ರಾಘವೇಶ್ವರ ಭಾರತೀ ಸ್ವಾಮಿಗೋಳು “ಅಳಿದು ಹೋಗುತ್ತಿರುವ ಹವ್ಯಕ ಸಮುದಾಯದ ಉಳಿವಿಗೆ ಎರಡಕ್ಕಿಂತಾ ಹೆಚ್ಚು ಮಕ್ಕಳನ್ನು ಹೆರಬೇಕು ಹಾಗೂ ಎರಡರ ನಂತರ ಹುಟ್ಟುವ ಮಕ್ಕಳ ಜವಾಬ್ದಾರಿಯನ್ನು ನಮ್ಮ ಮಠ ಹೊರಲಿದೆ” ಎಂದು ಅದೇಶಿಸಿದ್ದಾರೆ.
ಒಂದೇ ಜಾತಿಯ ಎರಡು ಮಠಗಳ ಅವಿವಾಹಿತ ಸ್ವಾಮಿಗೋಳು ತಮ್ಮ ಸಮಾಜದ ಸಂಸಾರಿಗಳಿಗೆ “ಸಂತಾನೋತ್ಪತ್ತಿ ಹೆಚ್ಚಿಸಿ, ಜಾತಿ ಉಳಿಸಿ” ಎಂದು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕರೆ ಕೊಟ್ಟಿದ್ದಾರೆ ಮತ್ತು ಹೆಚ್ಚುವರಿಯಾಗಿ ಹುಟ್ಟಿದ ಮಕ್ಕಳ ಜವಾಬ್ದಾರಿಯನ್ನು ಹೊರಲೂ ಸಿದ್ದರಾಗಿದ್ದಾರೆ.
ಆದರೆ.. ಈ ಹವ್ಯಕ ಬ್ರಾಹ್ಮಣ ಜಾತಿಯ ಯುವಕರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ. ವಯಸ್ಸು ನಲವತ್ತು ಐವತ್ತಾದರೂ ಇನ್ನೂ ಅವಿವಾಹಿತರಾಗಿರುವವರೂ ಬೇಕಾದಷ್ಟು ಗಂಡಸರಿದ್ದಾರೆ. ಇರುವ ಕನ್ಯಾಮಣಿಗಳು ಸರಕಾರಿ ನೌಕರಿ ಹಾಗೂ ಸವಲತ್ತುಗಳಿರುವ ನಗರವಾಸಿಗಳನ್ನು ಮದುವೆಯಾಗಲು ಬಯಸುತ್ತಾರೆ. ಈ ಅವಿವಾಹಿತರು ಬೇರೆ ಜಾತಿಯ ಯುವತಿಯರನ್ನು ಮದುವೆಯಾಗಬಹುದಾದರೂ ಇದೇ ಕರ್ಮಠ ಮಠ ಮಾನ್ಯ ಸಂಪ್ರದಾಯಗಳು ವರ್ಣಸಂಕರವನ್ನು ನಿಷೇಧಿಸಿವೆ.
ವಸ್ತುಸ್ಥಿತಿ ಹೀಗಿರುವಾಗ, ಮದುವೆಗೆ ಹೆಣ್ಮಕ್ಕಳೇ ಸಿಗದಿರುವಾಗ ಮದುವೆ ಆಗೋದ್ಯಾವಾಗ? ಮಕ್ಕಳನ್ನ ಮಾಡೋದ್ಯಾವಾಗ? ಹೆಚ್ಚುವರಿ ಮಕ್ಕಳನ್ನು ಹೆತ್ತು ಮಠಕ್ಕೆ ದಾನ ಮಾಡೋದ್ಯಾವಾಗ?
ಹೀಗೆ ಸಂತಾನಾಭಿವೃದ್ಧಿಗೆ ಪ್ರೇರೇಪಿಸುವ ಸ್ವಾಮಿಗಳು ಯಾಕೆ ತಮ್ಮ ಹೇಳಿಕೆಗೆ ಮಾದರಿಯಾಗಿರಬಾರದು? ಮದುವೆಯಾಗಿ ಏಳೆಂಟು ಮಕ್ಕಳನ್ನು ಹೆತ್ತು ಹವ್ಯಕ ಜಾತಿಯ ಬೆಳವಣಿಗೆಗೆ ಕೊಡುಗೆ ಕೊಡಬಾರದು?. ಕೀರ್ತನೆ ಗಾಯಕಿಯ ಜೊತೆಗೆ ಲವ್ವಿಡವ್ವಿ ಆಟ ಆಡಿದ ಸ್ವಾಮಿಗೋಳು ರತಿಕ್ರೀಡೆಯ ಫಲವಾಗಿ ಮಕ್ಕಳನ್ನೂ ಯಾಕೆ ಹುಟ್ಟಿಸಬಾರದು? ಕೇವಲ ಹೇಳುವುದಕ್ಕಿಂತಲೂ ಮಾಡಿ ತೋರಿಸುವುದು ಉತ್ತಮ ಅಲ್ಲವೇ?
ಹೋಗಲಿ, ಮಠದೊಳಗಿನ ಸ್ವಾಮಿ ಮಹಿಳೆ ಕಂಡು ಪುಟಿನೆಗೆದು ಹೋರಿಯಾದರೆ ಯಾವ ನಂಬಿಕೆಯ ಮೇಲೆ ಈ ಮಠಕ್ಕೆ ಮಕ್ಕಳನ್ನು ಹೆತ್ತವರು ದಾನ ಮಾಡುತ್ತಾರೆ? ಅದರಲ್ಲೂ ಹೆಣ್ಣು ಹೆತ್ತವರು ಇಂತಹ ಸ್ವಾಮಿಗಳನ್ನು ನಂಬಲು ಸಾಧ್ಯವೇ? ಮೊದಲು ಸ್ವಾಮಿಗಳ ಕಚ್ಚೆಯೇ ಅಭದ್ರವಾಗಿರುವಾಗ, ಇಂತವರನ್ನು ನಂಬಿ ಯಾವ ಭಕ್ತರು ತಾನೇ ಮಕ್ಕಳನ್ನು ಮಠಕ್ಕೆ ಬಿಟ್ಟುಕೊಟ್ಟಾರು?
ಹೋಗಲಿ, ಸನ್ಯಾಸಿ ವೇಷದ ಈ ಗಂಡು ಸ್ವಾಮಿಗಳೇನೋ ಆಜ್ಞಾಪಿಸುತ್ತಾರೆ. ಅವರಿಗೆಲ್ಲಿ ಗೊತ್ತಿದೆ ಮಹಿಳೆಯರ ಬಸಿರು ಹೆರಿಗೆ ಬಾಣಂತನದ ನೋವು ಸಂಕಟ. ಪ್ರತಿ ಮಗುವಿನ ಹುಟ್ಟಿನ ಜೊತೆಗೆ ತಾಯಿಗೂ ಮರುಹುಟ್ಟು ಎನ್ನುವುದು ಹೆರಲಾಗದವರಿಗೆ ಹೇಗೆ ಅರಿವಾಗಬೇಕು?
ಈ ಮನುವಾದಿ ಸಂಪ್ರದಾಯದ ಮಠಗಳು ಹಾಗೂ ಮಠಾಧಿಪತಿಗಳಿಗೆ ಹೆಣ್ಣು ಎನ್ನುವುದು ಹೆರುವ ಯಂತ್ರ ಅಷ್ಟೇ. ಹೆಣ್ಣು ಅಂದರೆ ಗಂಡಸರ ಸೇವೆಗೆ ಇರುವ ಆಜೀವ ಜೀತದಾಳೆಂದೇ ಮನುಸ್ಮೃತಿ ಹೇಳುತ್ತದೆ. ಈ ಪುರೋಹಿತಶಾಹಿ ಸಂತಾನಗಳು ಸನಾತನ ಸಂಪ್ರದಾಯದ ಪ್ರತಿಪಾದಕರು. ಇವರ ಜಾತಿ ಉಳಿಸಲು, ಧರ್ಮ ಬೆಳೆಸಲು ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರವಾಗಬೇಕು.
ಇಂತಹ ಕಟ್ಟುಪಾಡುಗಳನ್ನು ಹೇರಿದಷ್ಟೂ ಹವ್ಯಕ ಹೆಣ್ಮಕ್ಕಳು ಹೆದರಿಕೊಂಡು ಸಂಪ್ರದಾಯಸ್ಥ ಕುಟುಂಬಗಳ ಯುವಕರನ್ನು ಮದುವೆಯಾಗಲು ನಿರಾಕರಿಸುವ ಸಾಧ್ಯತೆಗಳೇ ಹೆಚ್ಚಾಗಿವೆ. ಮೊದಲೇ ಈ ಹವ್ಯಕ ಹಾರವರನ್ನು ವಿವಾಹವಾಗಲು ಯುವತಿಯರು ನೂರು ಸಲ ಯೋಚಿಸುತ್ತಾರೆ. ಇನ್ನು ಎರಡು ಮಕ್ಕಳು ತಮಗಾಗಿ ಹಾಗೂ ಹೆಚ್ಚುವರಿ ಮಕ್ಕಳು ಮಠಕ್ಕಾಗಿ ಹುಟ್ಟಿಸಬೇಕು ಎಂದು ಬಲವಂತ ಮಾಡಿದ್ದೇ ಆದರೆ ಹವ್ಯಕ ಯುವತಿಯರು ಬೇರೆ ಜಾತಿಯ ಲಿಬರಲ್ ಯುವಕರನ್ನು ಹುಡುಕಿ ಮದುವೆಯಾಗುತ್ತಾರೆ. ಮತ್ತೆ ಅವಿವಾಹಿತ ಹವ್ಯಕ ಗಂಡಸರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಹವ್ಯಕರ ವಂಶಾಭಿವೃದ್ಧಿ ಯೋಜನೆ ಕನಸಾಗಿಯೇ ಉಳಿಯುತ್ತದೆ.
ಈ ಸನಾತನಿ ಸ್ವಾಮಿಗೋಳು ಹೀಗೆ ಮಾಡಬಹುದೇನೋ? ಮೊದಲು ಮಠಗಳಲ್ಲಿ ಮ್ಯಾರೇಜ್ ಬ್ಯುರೋ ಆರಂಭಿಸಲಿ. ಮದುವೆ ವಯಸ್ಸಿಗೆ ಬಂದವರ ಡಾಟಾ ಸಂಗ್ರಹಿಸಲಿ. ಜೋಡಿಗಳನ್ನು ಹೊಂದಾಣಿಕೆ ಮಾಡಲಿ. ಜೊತೆಗೆ ಮದುವೆ ಮಾಡಿಸುವ ಗುತ್ತಿಗೆಯನ್ನೂ ಪಡೆದುಕೊಳ್ಳಲಿ. ನಂತರ ಹೆರಿಗೆ ಆಸ್ಪತ್ರೆಯನ್ನೂ ಸ್ಥಾಪಿಸಿ ಬಸುರಿ ಬಾಣಂತಿಯರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಲಿ. ಜೊತೆಗೆ ಮಕ್ಕಳ ದವಾಖಾನೆ, ಕಿಂಡರ್ ಗಾರ್ಟನ್ ಶಾಲೆಯನ್ನೂ ಆರಂಭಿಸಲಿ. ಹೆಚ್ಚುವರಿ ಮಕ್ಕಳನ್ನು ಹೆತ್ತವರಿಗೆ ಪ್ರೋತ್ಸಾಹಧನವನ್ನು ಮಠವೇ ನೀಡಲಿ. ಹೀಗಾದಾಗ ಈ ಸ್ವಾಮಿಗೋಳ ಜಾತಿ ಉಳಿವಿಗೆ ಸಂತಾನೋತ್ಪತ್ತಿ ಯೋಜನೆ ಯಶಸ್ವಿಯಾಗಬಹುದು.
ಆದರೆ ಇಲ್ಲಿಯೂ ಮತ್ತದೇ ಮೂಲಭೂತ ಸಮಸ್ಯೆ ಇದೆ. ಈ ಹವ್ಯಕರಲ್ಲಿ ಮದುವೆ ವಯಸ್ಸಿನ ಹೆಣ್ಣುಗಳ ಸಂಖ್ಯೆಯೇ ಕಡಿಮೆ ಇದೆ. ಇದಕ್ಕೂ ಒಂದು ಪರಿಹಾರ ಇದೆ. ಏನೆಂದರೆ ಈ ಮಠಗಳು ತಮ್ಮ ಜಾತಿಗ್ರಸ್ತ ಹಿಡಿತ ಸಡಿಲಗೊಳಿಸಬೇಕಿದೆ. “ಹವ್ಯಕ ಗಂಡಸರು ಮುಕ್ತವಾಗಿ ಯಾವ ಜಾತಿಯ ಹೆಣ್ಮಕ್ಕಳನ್ನು ಬೇಕಾದರೂ ಮದುವೆಯಾಗಬಹುದು. ಇದಕ್ಕೆ ಮಠಗಳ ಸಮ್ಮತಿ ಇದೆ, ಸ್ವಾಮಿಗಳ ಅನುಮತಿ ಇದೆ” ಎಂದು ಆದೇಶ ಹೊರಡಿಸಿದರೆ ಅವಿವಾಹಿತ ಹವ್ಯಕರಿಗೆ ಮದುವೆಯಾಗ ಬಹುದಾಗಿದೆ. ಮದುವೆಯಾಗಿ ಬಂದ ಹೆಣ್ಮಕ್ಕಳು ಒಪ್ಪಿದರೆ ಮಕ್ಕಳೂ ಆಗಬಹುದಾಗಿದೆ.
ಆದರೆ ಯಾವುದೇ ಕಾರಣಕ್ಕೂ ವರ್ಣಸಂಕರವನ್ನು ಈ ಸನಾತನ ಸಂಸ್ಕೃತಿಯ ಬ್ರಾಹ್ಮಣ ಮಠಮಾನ್ಯಗಳು ಮಾನ್ಯ ಮಾಡಲು ಸಾಧ್ಯವೇ ಇಲ್ಲ. ಸ್ವಜಾತಿ ವಿವಾಹಕ್ಕೆ ಹೊರತಾದ ಮದುವೆಗಳು ಕರ್ಮಠ ಬ್ರಾಹ್ಮಣರಿಗೆ ಒಪ್ಪಿತವಲ್ಲ. ಅಕಸ್ಮಾತ್ ಯಾವುದೇ ಸ್ವಾಮಿ ವರ್ಣಸಂಕರವನ್ನು ಸಮರ್ಥಿಸಿಕೊಂಡರೆ ಸಂಪ್ರದಾಯದ ಪರಿಧಿಯಲ್ಲೇ ತಿರುಗುವ ಭಕ್ತಾದಿಗಳು ಸ್ವಾಮಿಗಳ ವಿರುದ್ಧವೇ ತಿರುಗಿಬೀಳುವುದು ಖಚಿತ. ಸ್ವಾಮಿಗಳನ್ನೇ ಮಠದಿಂದ ಉಚ್ಚಾಟನೆ ಮಾಡುವುದಂತೂ ನಿಶ್ಚಿತ. ಹೀಗಾಗಿ ಬ್ರಾಹ್ಮಣ ಮಠದ ಯಾವ ಸ್ವಾಮಿಯೂ ವರ್ಣಸಂಕರಣಕ್ಕೆ ಕರೆ ಕೊಡಲಾರ. ವರ್ಣಸಂಕರವಾಗದೆ ವಿವಾಹಗಳು ಸಂಪನ್ನವಾಗಲು ಅಸಾಧ್ಯ. ಮದುವೆಗಳೇ ಆಗದೆ ಮಕ್ಕಳಾಗುವುದಂತೂ ದೂರದ ಮಾತು. ಹೀಗಾದಾಗ ಸ್ವಾಮಿಗಳ ಜಾತಿಯ ಉಳಿವಿಗಾಗಿ ಸಂತಾನಾಭಿವೃದ್ಧಿ ಯೋಜನೆ ಎಂದೂ ಜಾರಿಗೆ ತರಲು ಆಗದು. ಮಠದ ಸೇವೆಗೆ ವಟುಗಳು ದೊರಕಲಾರವು. ಹವ್ಯಕ ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರವಾಗಬಾರದು. ಜಾತಿಗಡಿ ದಾಟದೇ ಈ ಬ್ರಾಹ್ಮಣ ಸಮುದಾಯದ ಸಂತಾನೋತ್ಪತ್ತಿ ಯೋಚನೆ ಸಾಕಾರವಾಗದು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಅಧ್ಯಾತ್ಮದ ಅಸ್ತಿತ್ವಕ್ಕೆ ಹೆಣ್ಣೇ ಗುರಿಯಾಗಬೇಕೇ ?