ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ 25ನೇ ವರ್ಷದ ದತ್ತಜಯಂತಿ ಆಚರಣೆಗೆ ಚಾಲನೆ ದೊರೆತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಚಂದ್ರದ್ರೋಣ ಪರ್ವತದ ಸಾಲಿನ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಡಿ. 11ರ ಬೆಳಗ್ಗೆ 6 ರಿಂದ ಡಿ. 15ರ ಬೆಳಗ್ಗೆ 10 ಗಂಟೆವರೆಗೆ ನಾಲ್ಕು ದಿನಗಳ ಕಾಲ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಗಾಳಿಕೆರೆ, ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಪ್ರವಾಸಿಗರು ಭೇಟಿ ನೀಡುವುದನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಕಾರ್ಯಕರ್ತರು ಆಗಮಿಸಲಿದ್ದಾರೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿಗರ ಭೇಟಿಗೆ ನಿಷೇಧ ಹೇರಿದೆ. ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಗೋರಿಗಳಿಲ್ಲ ಇದು ಹಿಂದೂಗಳ ಪವಿತ್ರ ದತ್ತಪೀಠ ಎಂದು ಹಿಂದೂ ಸಂಘಟನೆಗಳು ವಾದಿಸುತ್ತಿದ್ದರೆ, ಮುಸಲ್ಮಾನರು ಬಾಬಾ ಬುಡನ್ ಜೊತೆ ದಾದಾಹಯಾತ್ ಖಲಂದರ್ ಸೇರಿದಂತೆ ಅವರ ಶಿಷ್ಯರ ಗೋರಿಗಳಿರುವ ಪವಿತ್ರ ಸ್ಥಳ ಎಂದು ವಾದಿಸುತಿದ್ದಾರೆ. ಹೀಗಾಗಿ ಹಿಂದೂ ಮುಸ್ಲಿಂ ನಡುವಿನ ಭೂ ವಿವಾದ 25 ವರ್ಷಗಳಿಂದ ಜೀವಂತವಾಗಿದೆ.