ನಾಡಿನ ಮಹಿಳೆಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೃದಯಸ್ಪರ್ಶಿ ಪತ್ರ

Most read

ಬೆಂಗಳೂರು: ಕರ್ನಾಟಕದ ಎಲ್ಲ ಮಹಿಳೆಯರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದು, ಪತ್ರದ ಪೂರ್ಣಪಾಠ ಈ ಕೆಳಕಂಡಂತಿದೆ.

ನನ್ನ ಪ್ರೀತಿಯ ತಾಯಂದಿರೇ ಮತ್ತು ಅಕ್ಕ-ತಂಗಿಯರೇ,

ಹದಿನೆಂಟನೇ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರವಾಗಲಿರುವುದು ರಾಜಕೀಯ ಪಕ್ಷಗಳ ಸೋಲು-ಗೆಲುವುಗಳು ಮಾತ್ರ ಅಲ್ಲ, ಈ ಚುನಾವಣೆ ಮಹಿಳೆಯರ ಪರವಾದ ಸರ್ಕಾರದ ಕಾರ್ಯಕ್ರಮಗಳ ಸೋಲು-ಗೆಲುವನ್ನು ಕೂಡಾ ನಿರ್ಧರಿಸಲಿದೆ. ‘‘ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ’’ ಎಂದು ಖಡಾಖಂಡಿತವಾಗಿ ಸಾರಿದ ಮನುಶಾಸ್ತ್ರವನ್ನು ನಂಬಿರುವ ಭಾರತೀಯ ಜನತಾ ಪಕ್ಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಸ್ಥಾನಮಾನ ನೀಡಬೇಕೆಂದು ಸಾರಿದ ಸಂವಿಧಾನಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಗಳ ನಡುವೆ ಇಂದಿನ ಮಹಿಳೆಯರು ಆಯ್ಕೆ ಮಾಡಬೇಕಾಗಿದೆ.

ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ನ ಸಿದ್ಧಾಂತ ಮತ್ತು ನಡವಳಿಕೆ ಸ್ಪಷ್ಟವಾಗಿ ಮಹಿಳಾ ವಿರೋಧಿಯಾದುದು. ಗುಜರಾತ್ ನಿಂದ ಮಣಿಪುರದ ವರೆಗೆ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ಕರ್ನಾಟಕದಲ್ಲಿ ಸ್ತ್ರೀಪೀಡಕರ ಜೊತೆಗೆ ಬಿಜೆಪಿ ಕೈಜೋಡಿಸಿರುವುದು ಇತ್ತೀಚಿನ ಉದಾಹರಣೆ. ಕಾಯಾ ವಾಚಾ ಮನಸಾ ಬಿಜೆಪಿ ಮಹಿಳಾ ವಿರೋಧಿ ಪಕ್ಷ.

ನಮ್ಮ ಸರ್ಕಾರ ‘‘ಗೃಹಲಕ್ಷ್ಮಿ’’ ಮತ್ತು ‘‘ಶಕ್ತಿ’’ ಯೋಜನೆಗಳನ್ನು ಶುರುಮಾಡಿದ ದಿನದಿಂದಲೂ ಬಿಜೆಪಿ ನಾಯಕರು ಇದರ ವಿರುದ್ದ ಅಪಪ್ರಚಾರದ ಆಂದೋಲವನ್ನು ಪ್ರಾರಂಭಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗುತ್ತಿದೆ ಎಂದು ಕೆಲವರು ಆರೋಪಿಸಿದರೆ ಇನ್ನು ಕೆಲವರು ಇನ್ನೂ ಮುಂದಕ್ಕೆ ಹೋಗಿ ಈ ರೀತಿಯ ನೆರವು ನೀಡಿದರೆ ಹೆಣ್ಣುಮಕ್ಕಳು ಮನೆಬಿಟ್ಟು ಹಾದಿ ತಪ್ಪುತ್ತಾರೆ ಎಂದು ತೀರಾ ಕ್ಷುಲ್ಲಕತನದ ಆರೋಪ ಮಾಡಿದ್ದಾರೆ.

ಬಿಜೆಪಿ ನಾಯಕರ ವಿರೋಧಕ್ಕೆ ಮುಖ್ಯ ಕಾರಣ ಮಹಿಳೆಯರ ಸಬಲೀಕರಣವಾಗಬಾರದೆಂಬ ದುಷ್ಟ ಉದ್ದೇಶ. ಮಹಿಳಾ ಸಬಲೀಕರಣವನ್ನು ಕಾಂಗ್ರೆಸ್ ಪಕ್ಷ ಎಂದೂ ರಾಜಕೀಯ ಕಾರ್ಯಕ್ರಮವಾಗಿ ನೋಡಿಲ್ಲ, ಅದು ನಮ್ಮ ಪಾಲಿಗೆ ಸಾಮಾಜಿಕ ಜವಾಬ್ದಾರಿ. ನಮ್ಮ ಪಕ್ಷ ಮತ್ತು ಸರ್ಕಾರ ಮಹಿಳಾ ಪರವಾಗಿ ನಿಂತಿರುವುದಕ್ಕೆ 2013-18ರ ಅವಧಿಯ ನಮ್ಮ ಹಳೆಯ ಸರ್ಕಾರ ಮತ್ತು ಕಳೆದ ಹತ್ತು ತಿಂಗಳ ಅವಧಿಯ ನಮ್ಮ ಹೊಸ ಸರ್ಕಾರದ ಸಾಧನೆಗಳು ಸಾಕ್ಷಿ.

ಐದು ವರ್ಷಗಳ ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಿ ಹಲವಾರು  ಯೋಜನೆಗಳನ್ನು ಜಾರಿಗೊಳಿಸಿದ್ದೆವು. ಸ್ನಾತಕೋತ್ತರ ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಸ್ತ್ರೀ ಶಕ್ತಿ ಸಂಘಗಳ ಆವರ್ತ ನಿಧಿ 5000 ರೂ.ಗಳಿಂದ 25 ಸಾವಿರಕ್ಕೆ ಏರಿಕೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡುವ ಮಾತೃಪೂರ್ಣ, ತಾಯಿ ಮತ್ತು ಮಗುವಿಗಾಗಿಯೇ 20 ವಿಶೇಷ ಆಸ್ಪತ್ರೆಗಳ ಪ್ರಾರಂಭ, ಮಹಿಳಾ ಉದ್ಯಮಿಗಳಿಗೆ ಆರು ಪ್ರತ್ಯೇಕ ಕೈಗಾರಿಕಾ ಪಾರ್ಕ್… ಹೀಗೆ ಮಹಿಳೆಯರ ಹಿತವನ್ನೇ ಗುರಿಯಾಗಿಟ್ಟುಕೊಂಡು ಜಾರಿಗೊಳಿಸಿರುವ ಯೋಜನೆಗಳ ಫಲವನ್ನು ನೀವು ಪಡೆದಿದ್ದೀರಿ.

ನಮ್ಮ ಈಗಿನ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳು ಸೇರಿದಂತೆ ಒಟ್ಟು ಯೋಜನೆಗಳಲ್ಲಿ ಮಹಿಳೆಯರ ಅಭಿವೃದ್ದಿಗೆ ಆದ್ಯತೆ ನೀಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ 1.21 ಕೋಟಿ ಮನೆ ಯಜಮಾನಿಗೆ ತಿಂಗಳಿಗೆ ರೂ.2000 ಜಮೆ ಆಗುತ್ತಿದೆ. ಶಕ್ತಿ ಯೋಜನೆಯಡಿ ಇಲ್ಲಿಯ ವರೆಗೆ 201 ಕೋಟಿಗೂ ಅಧಿಕ ಬಾರಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಗ್ರಾಮೀಣ ಮಹಿಳೆಯರ ಮಕ್ಕಳ ಪಾಲನೆ ಮತ್ತು ಪೋಷಣೆಗೆ ಅನುಕೂಲವಾಗಲಿ ಎಂಬ ಉದ್ದೇಶದೊಂದಿಗೆ ರಾಜ್ಯದಲ್ಲಿ 4,000 ಕೂಸಿನ ಮನೆಗಳ ಸ್ಥಾಪಿಸಿದ್ದೇವೆ, ಶುಚಿ ಯೋಜನೆಯಡಿ 19,27,355 ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ನೀಡಿದ್ದೇವೆ. ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರೂ.86,423 ಕೋಟಿ ಅನುದಾನ ಒದಗಿಸಲಾಗಿದೆ.

ಇಂದಿರಾಗಾಂಧಿ ಎಂಬ ಉಕ್ಕಿನ ಮಹಿಳೆಯನ್ನು ದೇಶಕ್ಕೆ ಕೊಟ್ಟ ಪಕ್ಷ ಕಾಂಗ್ರೆಸ್. ಅವರು ಪಕ್ಷದ ಅಧ್ಯಕ್ಷೆಯಾಗಿ ಮತ್ತು ದೇಶದ ಪ್ರಧಾನಿಯಾಗಿ ಸುಮಾರು ಮೂರು ದಶಕಗಳ ಕಾಲ ದೇಶಕ್ಕೆ ಮಾಡಿರುವ ಸೇವೆ ಅನುಪಮವಾದುದು. ಪಕ್ಷದ ಸಾರಥ್ಯ ವಹಿಸಿಕೊಂಡ ದಿನದಿಂದ ಸೋನಿಯಾ ಗಾಂಧಿಯವರು ಮಹಿಳೆಯರ ಸಬಲೀಕರಣಕ್ಕಾಗಿ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಇವರು ಪ್ರಾರಂಭದಿಂದಲೇ ಮಹಿಳೆಯರ ರಾಜಕೀಯ ಮೀಸಲಾತಿ ಪರ ದನಿ ಎತ್ತುತ್ತಾ ಬಂದಿದ್ದಾರೆ.

ಪಂಚಾಯತ್ ರಾಜ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿಯನ್ನು ಕರ್ನಾಟಕದಲ್ಲಿ ಜಾರಿಗೆ ತಂದಿರುವ ಶ್ರೇಯಸ್ಸು ನಮಗೆ ಸಲ್ಲಬೇಕು.

 ಈಗಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮ ಪಕ್ಷ ಆರು ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ. ರಾಜ್ಯದ ಮಟ್ಟಿಗೆ ಇದೊಂದು ದಾಖಲೆ. ಪಕ್ಷಭೇದ ಮರೆತು ಇವರನ್ನು ಗೆಲ್ಲಿಸುವ ಮೂಲಕ ಮಹಿಳಾ ಶಕ್ತಿಯ ಪ್ರದರ್ಶನವನ್ನು ಜಗತ್ತಿಗೆ ತೋರಿಸಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೇರೆ ರಾಜಕೀಯ ಪಕ್ಷಗಳು ಕೂಡಾ ಮಹಿಳೆಯರಿಗೆ ಅವಕಾಶ ನೀಡಲು ಒತ್ತಡ ಹೇರಿದಂತಾಗುತ್ತದೆ.

ಸುಮಾರು ಐದು ಸಾವಿರ ವರ್ಷಗಳಿಂದ ನಿರಂತರವಾಗಿ ತಾರತಮ್ಯ, ಶೋಷಣೆ ಮತ್ತು ಅವಕಾಶಗಳ ವಂಚನೆಗೆ ತುತ್ತಾಗಿರುವ ಮಹಿಳೆಯರ ಸಬಲೀಕರಣದ ಕೆಲಸ ದೀರ್ಘಕಾಲೀನವಾದುದು. ಈ ಪ್ರಯತ್ನ ಮುಂದುವರಿದುಕೊಂಡು ಹೋಗಬೇಕಾದರೆ ಮಹಿಳೆಯರು ತಮ್ಮ ಕೈ ಬಲಪಡಿಸುವವರ ಕೈ ಹಿಡಿಯಬೇಕು, ಬೆಂಬಲಿಸಬೇಕು. ಇಂತಹದ್ದೊಂದು ಅವಕಾಶವನ್ನು ಈ ಲೋಕಸಭಾ ಚುನಾವಣೆ ಮಹಿಳೆಯರಿಗೆ ನೀಡಿದೆ. ಈ ಚುನಾವಣೆಯಲ್ಲಿ ನಿಮ್ಮ ಬೆಂಬಲದ ಬಲವನ್ನು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ನೀಡಿ ಗೆಲ್ಲಿಸಿ. ನಮ್ಮನ್ನು ಹರಸಿ, ಹಾರೈಸಬೇಕೆಂದು ಕೋರುತ್ತೇನೆ. ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿಯೇ ಮಹಿಳೆಯರ ಗೆಲುವಿದೆ.

ಇತೀ ನಿಮ್ಮವ

ಸಿದ್ದರಾಮಯ್ಯ

ಮುಖ್ಯಮಂತ್ರಿಗಳು

ಕರ್ನಾಟಕ ಸರ್ಕಾರ

More articles

Latest article