ಬೆಂಗಳೂರು: ಬೆಂ.ಗ್ರಾಮಾಂತರ, ಬೆಂ. ದಕ್ಷಿಣ, ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಮ್ಮ ಪಕ್ಷ ಬೆಂಬಲ ನೀಡುತ್ತದೆ ಎಂದು ತಮಿಳುನಾಡಿನ ಚಿದಂಬರಂ ಕ್ಷೇತ್ರದ ಸಂಸದ ತಿರುಮಾವಳನ್ ಘೋಷಿಸಿದ್ದಾರೆ.
ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಕರ್ನಾಟಕ ಸಿಎಂ, ಡಿಸಿಎಂ ಅವರನ್ನ ಭೇಟಿ ಮಾಡಿ ನಾವು ರಾಜ್ಯದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸುವ ಬಗ್ಗೆ ತಿಳಿಸಿದ್ದೇವೆ. ಇಂದು ನಾಳೆ ಈ ಭಾಗದಲ್ಲಿ ನಾವು ಪ್ರಚಾರ ಆರಂಭಿಸುತ್ತೇವೆ ಎಂದರು.
ಬಿಜೆಪಿ ಮತ್ತು ಆರ್.ಎಸ್.ಎಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಈ ಎರಡರ ಅಜೆಂಡಾ ಸಂವಿಧಾನ ವಿರೋಧಿಯಾಗಿದೆ. ನಾವು ಆರ್.ಎಸ್.ಎಸ್ ವಿಚಾರಗಳ ಪ್ರಬಲ ವಿರೋಧಿಗಳಾಗಿದ್ದೇವೆ. ಬಿಜೆಪಿ ಆಡಳಿತದ ಕಳೆದ 10 ವರ್ಷ ದೇಶದಲ್ಲಿ ಅಭಿವೃದ್ಧಿಯೇ ಆಗಿಲ್ಲ. ಅದಾನಿ, ಅಂಬಾನಿಯಷ್ಟೇ ಅಭಿವೃದ್ಧಿಯಾಗಿದ್ದಾರೆ. ಮೋದಿ ಸರ್ಕಾರ ಕಾರ್ಪೋರೇಟ ಸರ್ಕಾರವಾಗಿದ್ದು ಇದು ಜನಪರವಾಗಿಲ್ಲ.. ಸಂಘ ಪರಿವಾರದ ವಿರುದ್ಧ ನಮ್ಮ ಹೋರಾಟ ನಿರಂತರ. ಹೀಗಾಗಿ ಎಲ್ಲರೂ ಒಂದಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಜನ ಬುದ್ಧಿಕಲಿಸುತ್ತಾರೆ ಎಂದರು.
ಒಂದು ದೇಶದ ಪ್ರಧಾನಿಯಾಗಿ ಅಲ್ಪಸಂಖ್ಯಾತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ದೇಶದ ಮುಸ್ಲಿಂ ಸಮುದಾಯದ ವಿರುದ್ಧ, ಕಾಂಗ್ರೆಸ್ ಪಕ್ಷದ ವಿರುದ್ಧ ಕಪೋಲಕಲ್ಪಿತ ಹೇಳಿಕೆಗಳನ್ನು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಾತನಾಡುತ್ತಾರೆ. ಇವರ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಮರೀಚಿಕೆಯಾಗಿದೆ. ಒಂದು ಸಮುದಾಯದ ಜನರನ್ನು ಮತ್ತೊಂದು ಸಮುದಾಯದ ಜನರ ವಿರುದ್ಧ ಎತ್ತಿಕಟ್ಟುವುದೇ ಇವರ ಕೆಲಸವಾಗಿದೆ. ಜನರನ್ನು ಒಟ್ಟುಗೂಡಿಸುವ ಕೆಲಸವಾಗದೆ ಜನರನ್ನು ಪ್ರಚೋದಿಸುವ ಕೆಲಸವಾಗುತ್ತಿದೆ. ಇದರಿಂದ ರಾಜಕೀಯ ಲಾಭ ಪಡೆಯುವುದೇ ಇವರ ಗುರಿಯಾಗಿದೆ. ಹೀಗಾಗಿ ಇಂತಹ ದೇಶವಿರೋಧಿಗಳಿಗಾಗಿ ಎಲ್ಲರೂ ಒಗ್ಗಟ್ಟಾಗಬೇಕಾಗಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ನಮ್ಮ ಲಿಬರೇಶನ್ ಟೈಗರ್ಸ್ ಪಾರ್ಟಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದೆ ಎಂದರು.