ಛತ್ತೀಸ್‌ಗಢ ಹೈಕೋರ್ಟ್ ತೀರ್ಪು- ಇತಿಹಾಸದಲ್ಲಿ ದಾಖಲಾದ ಅನ್ಯಾಯದ ತೀರ್ಪು

Most read

ಗಂಡಾಳಿಕೆ, ಪುರುಷಕೇಂದ್ರಿತ ಮನಸ್ಸುಗಳಿಂದ ಹೊರಬರದ ಈ  ಸೋಕಾಲ್ಡ್‌ ಛತ್ತೀಸ್‌ ಗಡ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಸಾಯುವ ವ್ಯಕ್ತಿಯ ಹೇಳಿಕೆ ಆಕೆಯ ಅಂತರಾಳದ ದನಿ ಅಂತ ಅನಿಸಲಿಲ್ಲವೇಕೆ?  ಆಕೆ ಸಾಯುವ ಮುನ್ನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿದ ಹೇಳಿಕೆಯನ್ನೂ ಅನುಮಾನದ ದೃಷ್ಟಿಯಿಂದ ನೋಡಿ ಅಪರಾಧಿಯನ್ನು ಖುಲಾಸೆ ಮಾಡಿದ್ದು ಅತ್ಯಂತ ಖಂಡನೀಯ..ಅತ್ಯಂತ ಕೆಟ್ಟ ತೀರ್ಪು ಇದು.  ಇತಿಹಾಸದಲ್ಲಿ ದಾಖಲಾದ ಅನ್ಯಾಯದ ತೀರ್ಪು ರೇಣುಕಾ ನಿಡಗುಂದಿ, ದೆಹಲಿ.

ಮದುವೆಯೆಂದರೆ ಏಳೇಳು ಜನ್ಮದ ಅನುಬಂಧ, ದೇವರೆ ಜೋಡಿಗಳನ್ನು ಸೃಷ್ಟಿಸಿ ಕಳಿಸಿರ್ತಾನೆ ಎಂದು ನಂಬಿಕೊಂಡು ಹೊಂದಿಕೊಂಡು ಬಾಳಿದವರೂ ಈ ಭೂಮಿಯ ಮೇಲೆ ಇದ್ದರು ಹಿಂದೆ ನಮ್ಮ ಅಜ್ಜ ಅಜ್ಜಿಯರ ಕಾಲದಲ್ಲಿ. ನಾವು ಬೆಳೆದ ವಾತಾವರಣದಲ್ಲಿ ಅಪ್ಪ ಅವ್ವನ ಹುಸಿಮುನಿಸು,  ಹುಸಿಜಗಳ, ಚೇಷ್ಟೆ ,ಅನ್ಯೋನ್ಯತೆ, ಸರಸಮಯ ದಾಂಪತ್ಯದಲ್ಲಿ  ಅಜ್ಜ ಅಜ್ಜಿಯರೂ ಕಡಿಮೆಯಿದ್ದಿಲ್ಲ. ಇಂತಹ ಚೆಂದದ ವಾತಾವಣದಲ್ಲಿ ಬೆಳೆದಿದ್ದೆವು. ಈಗಿನ ವರ್ತಮಾನದಲ್ಲಿ ಮದುವೆಯ ಸಖ್ಯದ ಕಟುಮಧುರದ ವ್ಯಾಖ್ಯಾನವೇ ಬದಲಾಗಿದೆ.  ಬಾಂಧವ್ಯ ಎನ್ನುವುದಕ್ಕೆ ಯಾವ ಅರ್ಥವೂ ಇಲ್ಲ. ಸಾಂಗತ್ಯವೆಂದರೆ ಹೇಗಿರಬೇಕು ಎಂಬ ಅಕ್ಕರಾಸ್ಥೆಯೂ  ಇಲ್ಲ.  ಪತಿಯ ಸೊತ್ತಿನಂತೆ ಮಾಡಿದ್ದನ್ನು ಮಾಡಿಸಿಕೊಂಡು ಬಿದ್ದಿರುವುದನ್ನೇ ಮದುವೆಯೆನ್ನುವುದಾದರೆ ಈ ಗುಲಾಮಗಿರಿ ಯಾರಿಗೂ ಬೇಡ. 

ನಾವಿರುವ ಇಪ್ಪತ್ತೊಂದನೇ ಶತಮಾನದಲ್ಲೂ  ಮದುವೆಯೆಂಬ ಚೌಕಟ್ಟಿನಲ್ಲಿ ಮಹಿಳೆ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಮನಸ್ಸು ದೇಹ ಯಾವುದೂ ಅವಳದಲ್ಲ, ಆಕೆಯೊಬ್ಬನ ಆಸ್ತಿ. ಅವನು ಹೊಡೆಯಲಿ, ಬಡಿಯಲಿ ಹೇಗೆ ಬೇಕೋ ಹಾಗೆ ದೌರ್ಜನ್ಯ ಎಸಗಿದರೂ ಅದು ದಾಂಪತ್ಯ. ಗಂಡನಿಗೆ ಎಲ್ಲ ಅಧಿಕಾರವೂ ಇದೆ, ಹೇಗೆ ಬೇಕೋ ಹಾಗೆ ಅವನಿಚ್ಛೆಯಂತೆ ಭೋಗಿಸಲು.  ಅವಳ ದೇಹವೂ ಅವಳದಲ್ಲ, ಅವನಿಗೆ ಸೇರಿದ್ದು. ಆಕೆ ನಿರಾಕರಿಸಿದರೂ  ಆತ ಕ್ಯಾರೇ ಎನ್ನದೇ ಮನಬಂದಂತೆ ಸಂಭೋಗಿಸಬಹುದು. ಅವಳ ನಿರಾಕರಣಕ್ಕೆ  ಯಾವ ಬೆಲೆಯೂ ಇಲ್ಲ ಅನ್ನುವಂತಹ ತೀರ್ಪುಗಳನ್ನು ಇತ್ತೀಚಿನ ಕೆಲ ನ್ಯಾಯಾಲಯಗಳು ನೀಡಿ ಸಮಾಜವನ್ನು ಅಧೋಗತಿಗೆ ತಳ್ಳುತ್ತಿವೆ.

ಛತ್ತೀಸ್‌ಗಢ ಹೈಕೋರ್ಟ್

ಪುರುಷನು ತನ್ನ ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಮತ್ತು ಆದ್ದರಿಂದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಯಾವುದೇ ಅಸ್ವಾಭಾವಿಕ ಲೈಂಗಿಕತೆಯನ್ನು ಪತಿಯು ತನ್ನ ಹೆಂಡತಿಯೊಂದಿಗೆ ಎಸಗಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ.

ಛತ್ತೀಸಗಡದ ಈ ತೀರ್ಪು ಇಡೀ ಹೆಣ್ಣುಕುಲಕ್ಕೆ ಮಾಡಿದ ಅನ್ಯಾಯವಾಗಿದೆ.  ಈ ತೀರ್ಪಿನಿಂದ ಅರ್ಥವಾಗಿದ್ದೆಂದರೆ ನ್ಯಾಯಮೂರ್ತಿಗಳಿಗೆ ಮನುಷ್ಯತ್ವ ಮತ್ತು ಸಂವೇದನಾಶೀಲತೆ, ಕಾಮನ್ ಸೆನ್ಸ್ ಎಂಬುದೇ ಇಲ್ಲ.  ಅವರು ಇತರ ಪುರುಷರಂತೆ ಸಾಮಾನ್ಯ ಪುರುಷ‌ಪುಂಗವರು.   ಪೋಸ್ಟ್‌ ಮಾರ್ಟಂ ಮಾಡಿದ ಡಾಕ್ಟರ್ ಬರೆದ ವರದಿ ಆಕೆಯ ಗುದದ್ವಾರದಲ್ಲಿನ ಸೋಂಕು, ಗಾಯದ ಬಗ್ಗೆ ಹೇಳ್ತಿದೆಯೆಂದಾಗ ಆಕೆಗೆ ಪೈಲ್ಸೇ ಆಗಿರಲಿ ಅಥವಾ ಯಾವುದೇ ಸೋಂಕಿರಲಿ ಆ ಜಾಗದಲ್ಲಿ ಮೃತಳಿಗೆ ನೋವಾಗ್ತಿದೆಯೆಂದಾಗಲೂ ಆ ಗಂಡನಾದವ ಅನಾಗರಿಕನಂತೆ ಕೈಹಾಕಿ ಮತ್ತಿನ್ನೇನೋ ಹಿಂಸೆಕೊಟ್ಟರೆ ಅದು ಕ್ರೌರ್ಯವಲ್ಲದೆ ಮತ್ತೇನು?  ಇದನ್ನೇಕೆ ಕೋರ್ಟ್ ಗಮನಿಸಲಿಲ್ಲ?  ಟ್ರಯಲ್ ಕೋರ್ಟ್ ತನಿಖೆಯನ್ನು‌, ತನ್ನ ಹೋಂವರ್ಕ್‌ ನ್ನು ಸರಿಯಾಗಿ ಮಾಡದೇ ಇದ್ದರೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡು ಸರಿಯಾಗಿ ಹೋಂವರ್ಕ್ ಮಾಡಿಬರಲು ಹೇಳಬಹುದಿತ್ತೇನೋ.  ಅದು ಬಿಟ್ಟು ಆಕೆ ಸಾಯುವ ಮುನ್ನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿದ ಹೇಳಿಕೆಯನ್ನೂ ಅನುಮಾನದ ದೃಷ್ಟಿಯಿಂದ ನೋಡಿ ಅಪರಾಧಿಯನ್ನು ಖುಲಾಸೆ ಮಾಡಿದ್ದು ಅತ್ಯಂತ ಖಂಡನೀಯ..ಅತ್ಯಂತ ಕೆಟ್ಟ ತೀರ್ಪು ಇದು.  ಇಡೀ  ಹೆಣ್ಣುಕುಲಕ್ಕೆ ಮಾಡಿದ ಅನ್ಯಾಯ. ಇತಿಹಾಸದಲ್ಲಿ ದಾಖಲಾದ ಅನ್ಯಾಯದ ತೀರ್ಪು.  ಇದನ್ನು ಮಾನವೀಯ ಕಳಕಳಿಯ  ಸಂಘಟನೆಗಳು, ಜನರು  ಮುಂದೆ ಬಂದು ಪ್ರತಿಭಟಿಸಬೇಕು.  

ಫೆಬ್ರವರಿ 10 ರಂದು ಮೇಲ್ಮನವಿದಾರರನ್ನು ಖುಲಾಸೆಗೊಳಿಸಿ, ಹೈಕೋರ್ಟ್‌ನ ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಅವರು ಆದೇಶದಲ್ಲಿ ಹೀಗೆ ಬರೆದಿದ್ದಾರೆ: “ ಹೆಂಡತಿಯ ವಯಸ್ಸು 15 ವರ್ಷಕ್ಕಿಂತ ಕಡಿಮೆಯಿಲ್ಲದಿದ್ದರೆ, ಪತಿಯು ತನ್ನ ಹೆಂಡತಿಯೊಂದಿಗೆ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ, ಆದ್ದರಿಂದ ಹೆಂಡತಿಯ ಒಪ್ಪಿಗೆಯಿಲ್ಲದಿರುವುದು ಅದರ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ. ಅಂದರೇನರ್ಥ ಸ್ವಾಮಿ.  

ಇನ್ನೂ ಮುಂದೆಹೋಗಿ  ಹೈಕೋರ್ಟ್ ತೀರ್ಪು

ಆರೋಪಿಗಳ ವಿರುದ್ಧ ಕಾನೂನುಬದ್ಧವಾಗಿ ಒಪ್ಪಿಕೊಳ್ಳಬಹುದಾದ ಸಾಕ್ಷ್ಯಾಧಾರಗಳಿಲ್ಲ ಮತ್ತು ಕೇವಲ ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಶಿಕ್ಷೆಯಾಗಿದೆ ಎಂದು ಪ್ರತಿವಾದಿಗಳು ವಾದಿಸಿದರಂತೆ.  ಮಹಿಳೆ ಪೈಲ್ಸ್‌ನಿಂದ ಬಳಲುತ್ತಿದ್ದಳು, ಅದು ರಕ್ತಸ್ರಾವ ಮತ್ತು ಹೊಟ್ಟೆ ನೋವನ್ನು ಉಂಟುಮಾಡುತ್ತದೆ ಎಂದು ಹೇಳಿದ ಇಬ್ಬರು ಸಾಕ್ಷಿಗಳ ಸಾಕ್ಷ್ಯವನ್ನು ವಕೀಲರು ಎತ್ತಿ ತೋರಿಸಿದರು. ಇವರ ಮನೆ ಮಗಳಿಗೆ ಹೀಗಾಗಿದ್ದರೆ ಇವರು ಹೀಗೇ ವಾದಿಸುತ್ತಿದ್ದರೇ?  ಹಣಕ್ಕಾಗಿ ಹೆಣವೂ ಎದ್ದುಕೂರುತ್ತದಂತೆ.  

“ಸಾಯುತ್ತಿರುವ ಘೋಷಣೆಯ ನಿಖರತೆ” ಬಗ್ಗೆಯೂ ನ್ಯಾಯಾಲಯಕ್ಕೆ ಅನುಮಾನವಿದೆಯಂತೆ.  ಯಾಕೆ ಅನುಮಾನ?  ಕಳೆದ ವರ್ಷ ಇದೇ ಸುಪ್ರೀಂ ಕೋರ್ಟ್….In a May 2024 judgment, the Supreme Court of India ruled that a dying declaration can be the sole basis for conviction if it is authentic and inspires the court’s confidence. The court also stated that a dying declaration can be a standalone piece of evidence. 

ಅನ್ನುತ್ತದೆ.  ಹಾಗಿರುವಾಗ ಗಂಡಾಳಿಕೆ, ಪುರುಷಕೇಂದ್ರಿತ ಮನಸ್ಸುಗಳಿಂದ ಹೊರಬರದ ಈ  ಸೋಕಾಲ್ಡ್‌ ಛತ್ತೀಸ್‌ ಗಡ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಸಾಯುವ ವ್ಯಕ್ತಿಯ ಹೇಳಿಕೆ ಆಕೆಯ ಅಂತರಾಳದ ದನಿ ಅಂತ ಅನಿಸಲಿಲ್ಲವೇಕೆ? ಅದೊಂದೇ ಸಾಕಲ್ಲವೇ ಆತ ಮೃಗದಂತೆ ಆಕೆಯನ್ನು ಸಂಭೋಗಿಸಿರಬಹುದು,  ಯಮಯಾತನೆಯಲ್ಲಿ ಆಕೆ ನರಳಿ ಸತ್ತಿದ್ದರ ತನಿಖೆಯಾಗಬೇಕಲ್ಲ.  ಅಪರಾಧಿ ಗಂಡನಾಗಿದ್ದಕ್ಕೆ ಅವನಿಗೆ ಸಾತ್ ಖೂನ್ ಮಾಫ್ ಮಾಡಿತು ಈ ನ್ಯಾಯಾಲಯ.   

ಮಹಾರಾಷ್ಟ್ರ ದ ಒಂದು ಘಟನೆ. ಆಕೆ ಪೊಲೀಸ್ ಪೇದೆಯಾಗಿದ್ದಳು. 2002 ರಲ್ಲಿ ಅಂಬಾಜೋಗಿಯಲ್ಲಿ ಅವಳ ಗಂಡ ಮತ್ತು ಅವನ ಸಹೋದರರು ಸೇರಿ ಅವಳನ್ನು ಸುಟ್ಟು ಕೊಂದರು. ಅವಳು ತನ್ನ ಸಂಬಳವನ್ನು ತನ್ನ ಅತ್ತೆಗೆ ಕೊಡಲು ನಿರಾಕರಿಸಿದ ಏಕೈಕ ಕಾರಣಕ್ಕಾಗಿ ಅವಳ ಬಾಯಿಯನ್ನು ಕಟ್ಟಿ, ಕಟ್ಟಿಹಾಕಿ ಬೆಂಕಿ ಹಚ್ಚಿದರು. ಗಂಡ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ. ಆಕೆ ಸುಟ್ಟ ಗಾಯಗಳಿಂದ ಸಾಯುವ ಮೊದಲು ಹೇಳಿದ ಮರಣಪೂರ್ವ ಹೇಳಿಕೆಗಳನ್ನು ಸುಪ್ರೀಂ ಕೋರ್ಟ್ ಆಕೆಗೆ ನ್ಯಾಯವನ್ನು ಒದಗಿಸಲು ಬಳಸಿಕೊಂಡಿತು.

“ಮರಣಪೂರ್ವ ಹೇಳಿಕೆಯ ಸ್ವೀಕಾರಾರ್ಹತೆ ಹೆಚ್ಚಾಗಿರುತ್ತದೆ ಏಕೆಂದರೆ ಹೇಳಿಕೆಯನ್ನು ಯೋಚಿಸಿ, plan ಮಾಡಿ  ಹೇಳಿರುವುದಿಲ್ಲ. ಒಂದು ಪಕ್ಷವು ಸಾವಿನ ಅಂಚಿನಲ್ಲಿರುವಾಗ, ಸುಳ್ಳು ಹೇಳುವ ಯಾವುದೇ ಉದ್ದೇಶವು ಅಪರೂಪವಾಗಿ ಕಂಡುಬರುತ್ತದೆ ”ಎಂದು ನ್ಯಾಯಮೂರ್ತಿ ಭುಯಾನ್ ಇತ್ತೀಚಿನ ತೀರ್ಪೊಂದರಲ್ಲಿ ಗಮನಿಸಿದ್ದರು.

ಮರಣಪೂರ್ವ ಹೇಳಿಕೆಯು ಒಂದು ಸ್ವತಂತ್ರ ಸಾಕ್ಷಿಯಾಗಿರಬಹುದು ಎಂದು ನ್ಯಾಯಾಲಯವೇ ಹೇಳಿದೆ

ಸಾವಿನ ಅಂಚಿನಲ್ಲಿರುವ ವ್ಯಕ್ತಿಗಳು ಅಪರೂಪಕ್ಕೆ ಸುಳ್ಳು ಹೇಳುತ್ತಾರೆ ಮತ್ತು ಅವರ ಕೊನೆಯ ಮಾತುಗಳು ಕಾನೂನಿನ ದೃಷ್ಟಿಯಲ್ಲಿ “ಹೆಚ್ಚು ಸ್ವೀಕಾರಾರ್ಹತೆ” ಎಂದು ನಂಬಲಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಹೀಗಿರುವಾಗ, ಮನುವಾದಿಗಳು, ಗಂಡಾಳಿಕೆಯನ್ನು ಪೋಷಿಸುವವರು ನ್ಯಾಯ ನೀಡುವ ಸ್ಥಾನದಲ್ಲಿದ್ದರೆ ಇದೇ ಆಗುತ್ತದೆ.  ಮನುಸ್ಮೃತಿಯ ಆಧಾರದ ಮೇಲೆ ಮುಂದಿನ ದಿನಗಳು ಇನ್ನಷ್ಟು ಕರಾಳವಾಗುತ್ತವೆಂಬುದನ್ನು ಅಲ್ಲಗಳೆಯಲಾಗದು. 

ರೇಣುಕಾ ನಿಡಗುಂದಿ

ಕವಿಗಳು

ಇದನ್ನೂ ಓದಿ- ದೇವರಾಗಿಸುವ ಮುನ್ನ ಮನುಷ್ಯರಾಗಿಸೋಣ

More articles

Latest article