ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈ ನಗರದ ಪೌರಕಾರ್ಮಿಕ ಮಹಿಳೆಯೊಬ್ಬರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾಗ ಟಿ.ನಗರದ ಮುಪ್ಪತ್ಮನ್ ದೇವಸ್ಥಾನ ಬೀದಿಯಲ್ಲಿ ಅವರಿಗೆ ರೂ.45 ಲಕ್ಷ ಮೌಲ್ಯದ 360 ಗ್ರಾಂ ತೂಕದ ಚಿನ್ನಾಭರಣಗಳ ಬ್ಯಾಗ್ ಸಿಕ್ಕಿದೆ. ಮನಸ್ಸು ಮಾಡಿದ್ದರೆ ಅಷ್ಟೂ ಚಿನ್ನವನ್ನು ಅವರು ಮನೆಗೆ ತೆಗೆದುಕೊಂಡು ಹೋಗಬಹುದಿತ್ತು. ಆದರೆ ಅವರು ಹಾಗೆ ಮಾಡದೆ ಚಿನ್ನದ ಚೀಲವನ್ನು ಪಾಂಡಿ ಬಜಾರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ನಂತರ ಪೊಲೀಸರು ಚಿನ್ನದ ವಾರಸುದಾರರಿಗೆ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ದೂರು ಸಲ್ಲಿಸಿದ್ದ ನಂಗನಲ್ಲೂರಿನ ನಿವಾಸಿ ರಮೇಶ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಆಭರಣಗಳನ್ನು ಅವರಿಗೆ ಮರಳಿಸಿದ್ದಾರೆ. ಪದ್ಮಾ ಅವರ ಪ್ರಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸನ್ಮಾನಿಸಿ, ರೂ.1 ಲಕ್ಷ ಬಹುಮಾನ ನೀಡಿದ್ದಾರೆ.
ಈ ಹಿಂದೆ ಕೋವಿಡ್ ಸಮಯದಲ್ಲಿ ಪದ್ಮಾ ಅವರ ಪತಿಯೂ ತಮಗೆ ಸಿಕ್ಕಿದ್ದ ರೂ.1.5 ಲಕ್ಷ ಹಣವನ್ನು ಪೊಲೀಸರಿಗೆ ಒಪ್ಪಿಸಿದ್ದರು.ಪದ್ಮಾ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

