ಬಿಜಾಪುರ (ಛತ್ತೀಸ್ಗಢ) : ಹೊಸ ವರ್ಷದ ಮೊದಲ ದಿನದಂದೇ ನಾಪತ್ತೆಯಾಗಿದ್ದ ಪತ್ರಕರ್ತರೊಬ್ಬರು ಸೆಪ್ಟಿಕ್ ಟ್ಯಾಂಕ್ನಲ್ಲಿ ಶವವಾಗಿ ಶುಕ್ರವಾರ ಪತ್ತೆಯಾಗಿರುವ ಘಟನೆ ಛತ್ತೀಸ್ಗಢ ರಾಜ್ಯದ ಬಿಜಾಪುರ ಎಂಬಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್ಗಢ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮುಖೇಶ್ ಚಂದ್ರಾಕರ್ ಮೃತ ಪತ್ರಕರ್ತ. 32 ವರ್ಷದ ಮುಖೇಶ್ ಹಲವು ಮಾಧ್ಯಮಗಳಿಗೆ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ನಕ್ಸಲ್ವಾದ ಕುರಿತು ವರದಿ ಮಾಡುತ್ತಿದ್ದ ಇವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು. ಜನವರಿ 1ರಂದು ಅವರು ಕಾಣೆಯಾಗಿದ್ದರು. ಈ ಬಗ್ಗೆ ಅವರ ಸಹೋದರರೊಬ್ಬರು ದೂರು ನೀಡಿದ್ದರು. ಅಂತಿಮವಾಗಿ ಬಿಜಾಪುರ ರಸ್ತೆಯ ಗುತ್ತಿಗೆದಾರರೊಬ್ಬರ ಮನೆಯ ಆವರಣದಲ್ಲಿರುವ ಸೆಪ್ಟಿಕ್ ಟ್ಯಾಂಕ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಜನವರಿ 1 ರಂದು ಸ್ಥಳೀಯ ಗುತ್ತಿಗೆದಾರನ ಸಂಬಂಧಿಯೊಬ್ಬರಿಂದ ಮೊಬೈಲ್ ಕರೆ ಬಂದ ನಂತರ ಅವರು ನಾಪತ್ತೆಯಾಗಿದ್ದರು. ಗುತ್ತಿಗೆದಾರನ ಸಹೋದರನ ಭೇಟಿ ಮಾಡುವ ಬಗ್ಗೆ ಮುಕೇಶ್ ಇನ್ನೊಬ್ಬ ಪತ್ರಕರ್ತ ಮಿತ್ರನಿಗೆ ಮಾಹಿತಿ ನೀಡಿದ್ದರು. ಜನವರಿ ಒಂದರಂದು ಮಧ್ಯರಾತ್ರಿ 12.30 ಕ್ಕೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಕೇಶ್ ಅವರ ಸಹೋದರ ಯುಕೇಶ್ ಅವರು ಜನವರಿ 2 ರಂದು ಸಹೋದರ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪತ್ರಕರ್ತನ ಪತ್ತೆಗಾಗಿ ಬಸ್ತಾರ್ ಐಜಿ ಪಿ.ಸುಂದರರಾಜ್ ವಿಶೇಷ ತಂಡವನ್ನು ರಚಿಸಿದ್ದರು.
ಜಿಲ್ಲೆಯ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಮುಕೇಶ್ ಇತ್ತೀಚಿಗೆ ಸರಣಿ ವರದಿ ಮಾಡಿದ್ದರು. ಈ ವರದಿಗಳಿಗೂ ಕೊಲೆಗೂ ಸಂಬಂಧವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರು ಈ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪಡೆದುಕೊಂಡಿದ್ದಾರೆ.
ಶಂಕಿತ ಗುತ್ತಿಗೆದಾರನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಪತ್ರಕರ್ತರು ನಗರದ ರಾಷ್ಟ್ರೀಯ ಹೆದ್ದಾರಿ 36ರ ಆಸ್ಪತ್ರೆ ಚೌಕ್ನಲ್ಲಿ ಸಾಂಕೇತಿಕ ರಸ್ತೆ ತಡೆ ನಡೆಸಿದರು. ಜೊತೆಗೆ ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಬೇಕು ಅಥವಾ ವರ್ಗಾವಣೆ ಮಾಡಬೇಕು ಎಂದೂ ಅವರು ಒತ್ತಾಯಿಸಿದರು.