ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಇಂದು ಮುಂಜಾನೆ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಪಡೆಗಳ ಜಂಟಿ ತಂಡವು ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ. ಜಿಲ್ಲಾ ಮೀಸಲು ಪೊಲೀಸ್ ಪಡೆ (ಡಿಆರ್‌ಜಿ) ಮತ್ತು ಕೋಬ್ರಾ ಬೆಟಾಲಿಯನ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಫೆಬ್ರುವರಿ 20ರಂದು ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲರು ಮೃತಪಟ್ಟಿದ್ದರು.
ಹತ್ಯೆಯಾದವರಲ್ಲಿ ಕಮಾಂಡರ್ ಆಶಾ ಸೇರಿದ್ದು, ಅವರ ಸುಳಿವು ನೀಡಿದವರಿಗೆ ರೂ. 14 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದರು. ಛತ್ತೀಸಗಢದಲ್ಲಿ ‘ಕೆಬಿ’ ಹೆಸರಿನಲ್ಲಿ ನಕ್ಸಲ್ ಸಂಘಟನೆಯನ್ನು ಆಶಾ ಮುನ್ನೆಡೆಸುತ್ತಿದ್ದರು. ಉಳಿದ ನಕ್ಸಲರ ಬಗೆಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದರು.