ಧರ್ಮಸ್ಥಳ ಪ್ರಕರಣ: ಚಾರ್ಜ್‌ಶೀಟ್‌ ಸಲ್ಲಿಕೆ ವಿಳಂಬ ಸಾಧ್ಯತೆ; ಹೈಕೋರ್ಟ್‌ ನಲ್ಲಿ ಪ್ರಕರಣ ರದ್ದುಕೋರಿ ಅರ್ಜಿ ಸಲ್ಲಿಸಿದ ಸೌಜನ್ಯ ಪರ ಹೋರಾಟಗಾರರು

Most read

ಬೆಂಗಳೂರು: ಧರ್ಮಸ್ಥಳ ಗ್ರಾಮದ ಅಸಹಜ ಸಾವುಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಈ ಮಾಸಾಂತ್ಯದೊಳಗೆ ವರದಿ ಸಲ್ಲಿಸಲಿದೆ ಎಂದು ಒಂದು ಕಡೆ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು ಹೇಳುತ್ತಿದ್ದರೆ ಚಾರ್ಜ್‌ ಶೀಟ್‌ ಸಲ್ಲಿಸುವುದು ತಡವಾಗಲಿದೆ ಎಂದು ಎಸ್‌ ಐಟಿ ಮೂಲಗಳು ತಿಳಿಸಿವೆ. ಬಿಎಲ್ ಆರ್‌ ಪೋಸ್ಟ್‌ ಈ ಕುರಿತು ವಿಶೇಷ ವರದಿ ಪ್ರಕಟಿಸಿದೆ. ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಹಾಗೂ ವಿಠಲಗೌಡ ಅವರು ಇದೇ ಪ್ರಕರಣದ ಬಿಎನ್‌ ಎಸ್‌ ಎಸ್‌ ಸೆ.35(3) ಅಡಿಯಲ್ಲಿ ತಮಗೆ ನೀಡಲಾಗಿರುವ ಸಮನ್ಸ್‌ ಅನ್ನು ಅನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.  ಇವರ ಪರ ಎಸ್‌ ಬಾಲನ್‌ ವಕಾಲತ್ತು ವಹಿಸಿದ್ದು, ಇಂದು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

ಅಕ್ಟೋಬರ್‌ 31ರೊಳಗೆ ವರದಿ ಸಲ್ಲಿಸುವಂತೆ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಮತ್ತು ಸರ್ಕಾರ ಯಾವುದೇ ಗಡುವು ನಿಗದಿಪಡಿಸಿಲ್ಲ. ಈ ಪ್ರಕರಣದಲ್ಲಿ ಎಸ್‌ ಐಟಿ ತ್ವರಿತವಾಗಿ ತನಿಖೆ ನಡೆಸುತ್ತಿದೆ ಎಂದು ಎಸ್‌ ಐಟಿ ಮೂಲಗಳು ಖಚಿತಪಡಿಸಿವೆ. ಕೆಲವು ಶಂಕಾಸ್ಪದ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸುವ ಕೆಲಸ ಬಾಕಿ ಇದ್ದು, ಚಾರ್ಜ್‌ ಶೀಟ್‌ ಸಲ್ಲಿಸಲು ಮತ್ತಷ್ಟು ಸಮಯ ಬೇಕಾಗಬಹುದು ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಮ್ಯಾಜಿಸ್ಟ್ರೇಟ್‌ ಎದುರು ಆಗಸ್ಟ್ 3 ‌ ರಂದು ಬಿಎನ್‌ ಎಸ್‌ ಎಸ್‌ ಸೆ. 183 ಅಡಿಯಲ್ಲಿ ಸಾಕ್ಷಿ ದೂರುದಾರ ಚಿನ್ನಯ್ಯ ತನ್ನ ಎರಡನೇ ಹೇಳಿಕೆ ದಾಖಲಿಸಿದ ನಂತರ ಸೌಜನ್ಯ ಪರ ಹೋರಾಟಗಾರರಿಗೆ ಸಮನ್ಸ್‌ ನೀಡಿರುವುದು ತನಿಖೆಯ ಭಾಗವಾಗಿದೆ. ಈ ಹೇಳಿಕೆಯಲ್ಲಿ ಚಿನ್ನಯ್ಯ ಸೌಜನ್ಯ ಪರ ಹೋರಾಟಗಾರರ ವಿರುದ್ಧವೇ ಹೇಳಿಕೆ ನೀಡಿರುವುದರಿಂದ ತನಿಖೆಯ ಭಾಗವಾಗಿಯೇ ಇವರಿಗೆ ಸಮನ್ಸ್‌ ನೀಡಲಾಗಿದೆ.  

ಚಿನ್ನಯ್ಯನನ್ನು ಅಗಸ್ಟ್‌  23 ರಂದು ಬಂಧಿಸಲಾಗಿತ್ತು. ಅಪರಾಧ ಕೃತ್ಯಗಳನು ಎಸಗಿದ ನಂತರ ಶವಗಳನ್ನು ತನ್ನಿಂದ ಬಲವಂತವಾಗಿ  ಹೂತುಹಾಕಿಸಲಾಗಿದೆ ಎಂದು ಜುಲೈ 3 ರಂದು ಚಿನ್ನಯ್ಯ ದೂರು ದಾಖಲಿಸಿದ್ದ. ನಂತರ ಆಗಸ್ಟ್ 3 ರಂದು ಬೆಳ್ತಂಗಡಿ ಮ್ಯಾಜಿಸ್ಟ್ರೇಟ್‌ ಎದುರು ನೀಡಿದ ಹೇಳಿಕೆಯಲ್ಲಿ ಸೌಜನ್ಯ ಪರ ಹೋರಾಟಗಾರರ ವಿರುದ್ಧವೇ ಹೇಳಿಕೆ ನೀಡಿದ್ದರಿಂದ ಇವರನ್ನು ವಿಚಾರಣೆಗೊಳಪಡಿಸಬೇಕಾಗಿದೆ ಎನ್ನುವುದು ಎಸ್‌ ಐಟಿ ವಾದವಾಗಿದೆ.

ಜುಲೈ 19 ರಂದು ಸರ್ಕಾರ ಎಸ್‌ ಐಟಿ ರಚಿಸಿತ್ತು. ಚಿನ್ನಯ್ಯ ತೋರಿಸಿದ 15 ಸ್ಥಳಗಳಲ್ಲಿ ಅವಶೇಷಗಳಿಗಾಗಿ ಹುಡುಕಾಟವೂ ನಡೆದಿತ್ತು. ನಂತರ ಚಿನ್ನಯ್ಯ ತನ್ನ ಮೊದಲ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ ಐಆರ್‌ ರದ್ದುಪಡಿಸುವಂತೆ ಸೌಜನ್ಯ ಪರ ಹೋರಾಟಗಾರರು ಹೈಕೋರ್ಟ್‌ ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ಎಸ್‌ ಐಟಿ ವಾದಿಸಲಿದೆ ಎಂದು ನಿರೀಕ್ಷಿಸಲಾಗಿದೆ.

More articles

Latest article