ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ

Most read

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಶಾಸಕ ಮುನಿರತ್ನ ಸೇರಿ 7 ಆರೋಪಿಗಳ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಲಾಗಿದೆ.
ಒಟ್ಟು 3 ಸಾವಿರ ಪುಟಗಳ ಚಾರ್ಜ್‌ ಶೀಟ್‌ ನಲ್ಲಿ ಶಾಸಕ ಮುನಿರತ್ನ, ಸುಧಾಕರ್, ಇನ್‌ ಸ್ಪೆಕ್ಟ‌ರ್ ಐಯ್ಯಣ್ಣ ರೆಡ್ಡಿ, ಲೋಹಿತ್ ಗೌಡ, ಶ್ರೀನಿವಾಸ್, ಕಿರಣ್ ಕುಮಾರ್, ಮಂಜುನಾಥ್ ಅವರ ಹೆಸರನ್ನು ಉಲ್ಲೇಖ ಮಾಡಲಾಗಿದೆ.
ಆರೋಪಿಗಳು ಪೊಳೀಸ್‌ ಇನ್‌ ಸ್ಪೆಕ್ಟರ್‌ ಗಳು ಹಾಗೂ ಎಸಿಪಿಗಳ ಅಶ್ಲೀಲ ವಿಡಿಯೋ ಮತ್ತು ಫೋಟೊ ಮಾಡಿರುವುದನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ಪರವಾಗಿ ಮತ್ತು ತಮ್ಮ ಎಲ್ಲ ಕೆಲಸಗಳನ್ನು ಮಾಡುವಂತೆ ಬ್ಲ್ಯಾಕ್ ಮೇಲ್ ಮಾಡಲು ಈ ತಂತ್ರ ಅನುಸರಿಸುತ್ತಿದ್ದರು ಎಂಬ ಅಂಶವನ್ನು ನಮೂದು ಮಾಡಲಾಗಿದೆ.
ಈ ಪ್ರಕರಣ ಸಂಬಂಧ ಎಚ್‌ ಐವಿ ಸೋಂಕಿತ ಸಂತ್ರಸ್ತೆ, ನೊಂದ ಮಹಿಳೆಯಿಂದ ಸಿಐಡಿ ಅಧಿಕಾರಿಗಳು ಹೇಳಿಕೆಗಳನ್ನು ಪಡೆದಿದ್ದರು. ಜತೆಗೆ ಸಾಕ್ಷ್ಯಗಳ ಹೇಳಿಕೆಯನ್ನೂ ಪಡೆಯಲಾಗಿತ್ತು. ಶಾಸಕ ಮುನಿರತ್ನ ಅವರನ್ನೂ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ 63 ಪ್ರಶ್ನೆಗಳನ್ನು ಮುನಿರತ್ನ ಅವರಿಗೆ ಕೇಳಲಾಗಿತ್ತು.
ಗುತ್ತಿಗೆದಾರರಿಗೆ ಜೀವ ಬೆದರಿಕೆ, ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣವನ್ನು ಶಾಸಕ ಮುನಿರತ್ನ ಎದುರಿಸುತ್ತಿದ್ದಾರೆ. ಈ ಪೈಕಿ ಅವರ ವಿರುದ್ಧದ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಯತ್ನದ ಆರೋಪ ಬಹಳ ಗಂಭೀರ ಸ್ವರೂಪ ಪಡೆದುಕೊಂಡಿರುವ ಆರೋಪಗಳಾಗಿವೆ.
ಮುನಿರತ್ನ ನಾಯ್ಡು ಬಳಿ ಹಲವರ ಖಾಸಗಿ ಅಶ್ಲೀಲ ವಿಡಿಯೋಗಳಿವೆ. ಅವರ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪ ಇವರ ಮೇಲಿದೆ. ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಖಾಸಗಿ ವಿಡಿಯೋಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಸಂತ್ರಸ್ತೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪದಡಿ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ವಿವಿದ ಐಪಿಸಿ ಸೆಕ್ಷನ್‌ ಗಳ ಅಡಿಯಲ್ಲಿ ಎಫ್‌ ಐ ಆರ್‌ ದಾಖಲಾಗಿದೆ.

More articles

Latest article