“ಬದಲಾವಣೆ – ಯಾರಿಂದ?”

Most read

ನಾಡು, ನುಡಿಯ ಬಗೆಗಿನ ಕಾಳಜಿ, ಮುಂದಿನ ತಲೆಮಾರು ಘನತೆಯುಕ್ತ ಬದುಕು ಕಟ್ಟಲು ಪೂರಕವಾದ ರೀತಿಯಲ್ಲಿ, ಸಾಂವಿಧಾನಿಕ ಆಶಯಗಳಿಗೆ ಸರಿಯಾಗಿ ನಡೆದುಕೊಳ್ಳಬಲ್ಲ ಕೆಲವು ಜನರನ್ನಾದರೂ ಆಯಕಟ್ಟಿನ ಜಾಗಗಳಿಗೆ ತರುವ ಮುತ್ಸದ್ದಿತನ, ಪಕ್ವತೆ ಬೇಕಿದೆ. ಈಗಿನ ಪರಿಸ್ಥಿತಿಯಲ್ಲಿ ಅಂತಹವರು ಎಲ್ಲಿದ್ದಾರೆ? – ಡಾ.ಉದಯ ಕುಮಾರ ಇರ್ವತ್ತೂರು

“ಸಾಹಿತ್ಯ ಮತ್ತು ಶಿಕ್ಷಣ” ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಹಳಷ್ಟು ದುರ್ಬಲವಾಗುತ್ತಿರುವ ವಲಯಗಳಲ್ಲಿ ಪ್ರಮುಖವಾದುವುಗಳು ಎನ್ನುವುದು ನನ್ನ ಅನಿಸಿಕೆ. ಇದು ಬಹಳ ಕಳವಳಕಾರಿ ಸಂಗತಿಯೂ ಹೌದು. ಯಾಕೆಂದರೆ ಒಂದು ಸಮಾಜ ಅಧೋಗತಿಗೆ ಹೋಗಬೇಕಿದ್ದರೆ ಮೊದಲು ಶಿಕ್ಷಣ ಕೇತ್ರವನ್ನು ಹಳಿ ತಪ್ಪಿಸಿದ್ರೆ ಸಾಕು ಎನ್ನುವ ಮಾತಿದೆ. ಶಿಕ್ಷಣ ಕೇತ್ರ ಕುಲಗೆಟ್ಟಾಗ ಕೆಟ್ಟ ವೈದ್ಯರು, ಅಪಕ್ವ ತಂತ್ರಜ್ಞರು, ಭ್ರಷ್ಟ ರಾಜಕಾರಣಿಗಳು, ಅದಕ್ಷ ಅಧಿಕಾರಿಗಳು, ಮತ್ತು ಅಯೋಗ್ಯ ನಾಗರೀಕರು ಹೆಚ್ಚಾಗಿ ಸಮಾಜ ತನ್ನಿಂದತಾನೇ ವಿನಾಶದ ಅಂಚಿಗೆ ತಲುಪುತ್ತದೆ ಎನ್ನಬಹುದು. ಯಾವುದೇ ಸಮಾಜದಲ್ಲಿ ಸಾಕ್ಷೀ ಪ್ರಜ್ಞೆಯಾಗಿರುವವರು ನಾಡಿನ ಸಾಹಿತಿಗಳು ಮತ್ತು ಶಿಕ್ಷಕರು. ಈ ಕಾರಣದಿಂದಲೇ ಒಂದು ಸಮಾಜದಲ್ಲಿ ಯಾರು ಭ್ರಷ್ಟರಾದರೂ ಶಿಕ್ಷಕರು ಮತ್ತು ಸಾಹಿತಿಗಳು ಕಲಾವಿದರು ಪ್ರಲೋಭನೆಗೆ ಒಳಗಾಗದೆ, ಆಸೆ, ಆಮಿಷಗಳಿಗೆ ಬಲಿಯಾಗದೆ ಇತರರಿಗಿಂತ ಭಿನ್ನವಾಗಿ ಇರಬೇಕು ಎಂದು ಸಮಾಜ ನಿರೀಕ್ಷೆ ಇಟ್ಟುಕೊಂಡಿರುತ್ತದೆ. ಇದು ಸರಿಯೋ ತಪ್ಪೋ ಗೊತ್ತಿಲ್ಲ. ಒಂದು ವೇಳೆ ಸಾಹಿತಿಗಳು ಮತ್ತು ಶಿಕ್ಷಕರು ಭ್ರಷ್ಟರಾದರೆ, ಹಾದಿ ತಪ್ಪಿದ ಜನರನ್ನು ಸರಿದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುವವರೇ ಇಲ್ಲವಾಗುತ್ತದೆ.

ಉಪಮುಖ್ಯಮಂತ್ರಿಗಳಾದ ಶ್ರೀಯುತ ಡಿ.ಕೆ.ಶಿವಕುಮಾರ್ ಅವರು ಸರಕಾರ ನೇಮಿಸಿದ ವಿವಿಧ ಅಕಾಡೆಮಿಗಳ ಅಧ್ಯಕ್ಷರುಗಳ ಸಭೆಯೊಂದನ್ನು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ನಡೆಸಿದ ಘಟನೆ ಮತ್ತು ಅದರ ಸುತ್ತ ಹುಟ್ಟಿಕೊಂಡ ವಿವಾದದ ಹಿನ್ನೆಲೆಯಲ್ಲಿ ಮೇಲಿನ ವಿಷಯಗಳನ್ನು ಪ್ರಸ್ತಾಪಿಸ ಬೇಕಾಯಿತು. ಸಭೆ ನಡೆದ ನಂತರ ಡಿ.ಕೆ.ಶಿವಕುಮಾರ್ ಅವರು ಮುಂದುವರಿದು ಸಾಹಿತಿಗಳೂ ಒಂದು ರೀತಿಯ ರಾಜಕಾರಣಿಗಳೇ, ಅದರಲ್ಲೇನು ಅಂಥಹ ತಪ್ಪು  ಎಂದು ಹೇಳಿದರೆ ಪಕ್ಷದ ವಕ್ತಾರರು ಉಪಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡು ನಾಡಿನ ಪ್ರಜ್ಞಾವಂತ ಜನರೆಲ್ಲರ ಹುಬ್ಬೇರುವಂತೆ ಮಾಡಿದರು.

ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರನ್ನು ನೇಮಿಸುವುದು ಸರಕಾರ, ಪಕ್ಷವಲ್ಲ. ಅಕಾಡೆಮಿಗಳಿಗೆ ಅದರದ್ದೇ ಆದ ನಿಯಮಗಳಿವೆ. ಅವು ಕೆಲಸ ಮಾಡಬೇಕಾದುದು ನಾಡು, ನುಡಿ ಮತ್ತು ಸಾಮಾಜಿಕ ಏಳಿಗೆಗಾಗಿ. ಇದೊಂದು ಆದರ್ಶ ಸ್ಥಿತಿ ಎಂದುಕೊಂಡರೂ ನಾವು ಮುನ್ನಡೆಯಬೇಕಾದುದು ಇಂತಹ ಆದರ್ಶಗಳ ಕಡೆಗೆ ಎನ್ನುವುದರ ಬಗ್ಗೆ ಯಾರ, ಯಾವ ತಕರಾರೂ ಇರಲಾರದು. ಹಾಗಿದ್ದ ಮೇಲೆ ಅವರು ಯಾವುದೇ ಪಕ್ಷದ ಪರವಾಗಿ, ಗುಂಪಿನ ಪರವಾಗಿ ಕೆಲಸ ಮಾಡಬಾರದು. ಹಾಗಾದರೆ ಈ ಸರಕಾರ ಯಾರದು? ಸರಕಾರ ಈ ನಾಡಿನ ಸಮಸ್ತರಿಗೆ ಸೇರಿದ್ದು. ಸರಕಾರವನ್ನು ಜನಮತದಲ್ಲಿ ಬಹುಮತ ಪಡೆದ ಕಾಂಗ್ರೆಸ್ ಪಕ್ಷ ಮುನ್ನಡೆಸಬಹುದು. ಸರಕಾರ ರಚಿಸಲು ಅಗತ್ಯ ಬಹುಮತ ಪಡೆಯಲು ವಿಫಲವಾದ ಭಾರತೀಯ ಜನತಾ ಪಕ್ಷವೂ ಸರಕಾರದ ನೆರಳಾಗಿರಬೇಕು ಅದು ಸರಕಾರದ ತಪ್ಪು ಒಪ್ಪುಗಳ ಕಟು ವಿಮರ್ಶೆ ನಡೆಸಿ ಶಾಸನಗಳು ಮತ್ತು ಆಡಳಿತ ಜನಪರವಾಗಿ ಇರುವಂತೆ ನೋಡಿಕೊಳ್ಳುವ ಉತ್ತರದಾಯಿತ್ವ ಹೊಂದಿದೆ. ಹಾಗಾಗಿ ಇಡೀ ಶಾಸನ ಸಭೆಯಲ್ಲಿ ಮಂತ್ರಿಮಂಡಲ, ಆಳುವ ಪಕ್ಷದ ಶಾಸಕರು, ಪ್ರತಿಪಕ್ಷದ ಶಾಸಕರು, ಮೇಲ್ಮನೆಯ ಸದಸ್ಯರು ಹೀಗೆ ತಾತ್ವಿಕವಾಗಿ ಎಲ್ಲರೂ ಸರಕಾರದ ಭಾಗವಾಗಿರುತ್ತಾರೆ ಎನ್ನುವ ಅಂಶವನ್ನು ನಾವು ಮರೆಯಬಾರದು.

ಇತ್ತೀಚಿನ ಹಲವು ವರ್ಷಗಳಿಂದ ಸರಕಾರ ಎಂದರೆ ಕೇವಲ ಮಂತ್ರಿಮಂಡಲ ಮಾತ್ರ ಎನ್ನುವ ಭಾವನೆ ಜನಮಾನಸದಲ್ಲಿ ಬೇರೂರಿ ಬಿಟ್ಟಿದೆ. ಹಾಗಾಗಿ ಎಲ್ಲಾ ಶಾಸಕರಿಗೆ, ಆಡಳಿತ ಪಕ್ಷಗಳಿಗೆ ಜಿಗಿಯುವ, ಮಂತ್ರಿಯಾದವನಿಗೆ ಮುಖ್ಯಮಂತ್ರಿಯಾಗುವ ಔಷಧವೇ ಇಲ್ಲದ ಖಾಯಿಲೆ ತಗಲಿದೆ. ಅದರಲ್ಲಿಯೂ ಅಧಿಕಾರದ ರುಚಿ ಕಂಡ ಬಲಪಂಥೀಯ ಸರಕಾರದ ಧೋರಣೆ ಹೇಗಿತ್ತೆಂದರೆ ಅಧಿಕಾರ ಶಾಶ್ವತ, ಪ್ರಶ್ನಾತೀತ ಮತ್ತು ಕಾಲಾತೀತ ಎನ್ನುವ ರೀತಿಯಲ್ಲಿತ್ತು. ಇದಕ್ಕೆ ಪೂರಕವಾಗಿ ವ್ಯವಸ್ಥೆಯ ಸರ್ವಾಂಗಗಳೂ ಇಂತಹ ಭಾವನೆಯನ್ನು ಸ್ವೀಕರಿಸಿವೆ ಮತ್ತು ಇದೇ ಸತ್ಯ ಎನ್ನುವ ಭ್ರಮೆಯನ್ನು ಪ್ರಜ್ಞಾಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ಬೆಳೆಸಲಾಗಿತ್ತು.

ಲೋಕಸಭೆಗೆ ಚುನಾವಣೆ ನಡೆಯುವ ಕೆಲ ಸಮಯದ ಮೊದಲು ಆಡಳಿತಾರೂಢ ಬಿಜೆಪಿಯ ಪ್ರಚಾರದ ಅಬ್ಬರ, ವಿರೋಧ ಪಕ್ಷ ಮತ್ತು ಟೀಕಾಕಾರರ ಬಗೆಗಿನ ತಾತ್ಸಾರಭರಿತ ಧೋರಣೆ ಇನ್ನೇನು ಅಧಿಕಾರದ ತುತ್ತೂರಿಯ ಶಬ್ದ ಬಿಟ್ಟರೆ ಜನಸಾಮಾನ್ಯರ ನೋವು, ಸಂಕಟ, ಆಶಯಗಳು ಯಾರಿಗೂ ಕೇಳದ ಸ್ಥಿತಿ ಇತ್ತು. ಈ ದೇಶದಲ್ಲಿ ಅಧಿಕಾರ ನಡೆಸುವವರು ಕೇವಲ ಒಂದು ಜನವರ್ಗದ ಒಲೈಕೆ ಮಾಡುವುದು, ಸೌಹಾರ್ದದ ಪರಂಪರೆಯನ್ನು ಮುರಿಯುವುದು, ಜನರನ್ನು ವಿಭಜಿಸುವ ವಿಘಟನಾ ಕ್ರಮದ ಮೂಲಕ ಶಾಶ್ವತವಾಗಿ ಅಧಿಕಾರದಲ್ಲಿ ಇರಬಹುದು ಎಂದು ನಂಬಿ ಅದರ ಸುತ್ತವೇ ಚುನಾವಣಾ ತಂತ್ರಗಾರಿಕೆಯನ್ನು ಹೆಣೆಯಲಾಗಿತ್ತು. ಇಂತಹ ಜನವಿರೋಧಿ, ಜೀವವಿರೋಧಿ ನೀತಿಯನ್ನು ಬಲವಾಗಿ ವಿರೋಧಿಸುವ ಜನ ಬಹುಸಂಖ್ಯಾತರಿದ್ದಾರೆ ಎನ್ನುವುದು ದಿನ ಕಳೆದಂತೆ ನಿಧಾನವಾಗಿಯಾದರೂ ಸ್ಪಷ್ಟವಾಗುತ್ತಾ ಬಂತು. ಇದರ ಫಲವಾಗಿ ಮಾಧ್ಯಮಗಳ ಮೂಲಕ ಅಧಿಕಾರದ ವಿವಿಧ ಅಂಗಗಳ ಮೂಲಕ ಉಂಟು ಮಾಡಿದ್ದ ಭ್ರಮೆ ಕಳಚಿ ಬಿದ್ದು ಈ ದೇಶದಲ್ಲಿ ಅಧಿಕಾರದ ನಿಜವಾದ ವಾರಸುದಾರರು ರಾಜಕೀಯ ಪಕ್ಷಗಳಲ್ಲ ಭಾರತೀಯ ಮತದಾರರು ಎನ್ನುವ ಸತ್ಯ ಗೋಚರಿಸಿದೆ.

ಇಂತಹ ಒಂದು ಅಭೂತಪೂರ್ವ ಬೆಳವಣಿಗೆಯ ಹಿಂದೆ ಜನಹಿತ ಕೇಂದ್ರಿತವಾಗಿ, ಸಂವಿಧಾನದ ಆಶಯದಿಂದ ಪ್ರೇರಿತರಾಗಿ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ದುಡಿದ ಲಕ್ಷಾಂತರ ವ್ಯಕ್ತಿಗಳು, ಸಾವಿರಾರು ಸಂಘಟನೆಗಳು, ನೂರಾರು ರಾಜಕೀಯ ಮುತ್ಸದ್ದಿಗಳೂ ಇದ್ದದ್ದು ಸೂರ್ಯ ಸ್ಪಷ್ಟ. ಇಂತಹ ಮನೋಭಾವದ ಜನರ ಪ್ರತಿನಿಧಿಗಳು ಸರಕಾರ ಮತ್ತು ಸರಕಾರ ನೇಮಿಸುವ ಸಂಸ್ಥೆಗಳಲ್ಲಿ ಇರಬೇಕಾದದ್ದು ಈ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು. ಅದರಲ್ಲಿಯೂ ನಾಮನಿರ್ದೇಶನದಂತಹ ಸಂದರ್ಭದಲ್ಲಿ ಸರಕಾರ ನಡೆಸುವವರಿಗೆ ಈ ಸೂಕ್ಷ್ಮ ತಿಳಿಯಬೇಕಾದದ್ದು ಬಹಳ ಅಗತ್ಯ. ಆದರೆ ಅಧಿಕಾರ ಬರುವವರೆಗೆ ದುಡಿಯುವ ಜನ ಮತ್ತು ಅಧಿಕಾರ ಸಿಕ್ಕಿದ ತಕ್ಷಣ ಮುನ್ನಲೆಗೆ ಬಂದು ಜಯಕಾರ ಕೂಗುವ ಜನ ಬೇರೆಯೇ ಆಗಿರುವುದು ನಮ್ಮ ದುರಂತ. ನಾವು ಅಧಿಕಾರ ಪಡೆಯಲಿಕ್ಕೆ ಜಯಕಾರ ಕೂಗುವವರೇ ಕಾರಣ ಎನ್ನುವ ವಿಸ್ಮೃತಿಗೆ ಅಧಿಕಾರ ಹಿಡಿದವರು ಒಳಗಾಗುವುದು ಈ ಎಲ್ಲ ಸಮಸ್ಯೆಗಳಿಗೆ ಕಾರಣ. ಅಧಿಕಾರಕ್ಕೆ ಜೈಕಾರ ಹಾಕುವ ಹೆಚ್ಚಿನವರಿಗೆ ಕುರ್ಚಿ ಮುಖ್ಯವೇ ಹೊರತು ಜನ, ಅವರು ಪ್ರತಿಪಾದಿಸುವ ಸಿದ್ಧಾಂತಗಳಲ್ಲ. ಇಲ್ಲದೇ ಹೋಗಿದ್ದರೆ ಪಕ್ಷಗಳು ಎಷ್ಟೇ ಬದಲಾದರೂ, ಕುರ್ಚಿಯ ಮೇಲಿರುವ ಕೆಲವು ಮುಖಗಳೂ ಬದಲಾಗದೇ ಇರಲು ಸಾಧ್ಯವಿರುತ್ತಿರಲಿಲ್ಲ. ಉಪಮುಖ್ಯಮಂತ್ರಿಯವರು ಮತ್ತು ಅವರ ಪಕ್ಷದ ಸಮರ್ಥನೆ ರಾಜಕೀಯ ಪಕ್ಷಗಳ ಧೋರಣೆ, ನಿಲುವು ಏನಿದೆ ಎನ್ನುವುದನ್ನು ಸರಿಯಾಗಿಯೇ ತಿಳಿಸಿದೆ. ಈ ಧೋರಣೆಯನ್ನು ವಿರೋಧಿಸಿ ಬರಗೂರು ರಾಮಚಂದ್ರಪ್ಪ, ದೇವನೂರು ಮತ್ತು ನಾಡಿನ ಪ್ರಮುಖ ಸಾಹಿತಿಗಳು ತಮ್ಮ ನಿಲುವನ್ನು ಸಮರ್ಥಿಸಿ, ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ದುರಂತ ಸನ್ನಿವೇಶದಲ್ಲಿ ಮುಂದಿನ ಚುನಾವಣೆಯ ಆಚೆಗೆ ಅಂದರೆ ನಾಡು, ನುಡಿಯ ಬಗೆಗಿನ ಕಾಳಜಿ, ಮುಂದಿನ ತಲೆಮಾರು ಘನತೆಯುಕ್ತ ಬದುಕು ಕಟ್ಟಲು ಪೂರಕವಾದ ರೀತಿಯಲ್ಲಿ, ಸಾಂವಿಧಾನಿಕ ಆಶಯಗಳಿಗೆ ಸರಿಯಾಗಿ ನಡೆದುಕೊಳ್ಳಬಲ್ಲ ಕೆಲವು ಜನರನ್ನಾದರೂ ಆಯಕಟ್ಟಿನ ಜಾಗಗಳಿಗೆ ತರುವ ಮುತ್ಸದ್ದಿತನ, ಪಕ್ವತೆ ಬೇಕಿದೆ. ಈಗಿನ ಪರಿಸ್ಥಿತಿಯಲ್ಲಿ ಅಂತಹವರು ಎಲ್ಲಿದ್ದಾರೆ? ಇದು ಯಾವುದೇ ಒಂದು ಪಕ್ಷದ ಸ್ಥಿತಿಯಲ್ಲ. ಎಲ್ಲಾ ಪಕ್ಷಗಳ ದುಸ್ಥಿತಿ. ಈ ಎಲ್ಲಾ ಬೆಳವಣಿಗೆಯ ಬೆಳಕಲ್ಲಿ ರಾಜಕಾರಣಿಗಳು ಬದಲಾಗುತ್ತಾರೋ, ಇಲ್ಲಾ ಅಕಾಡೆಮಿಯ ಪದಾಧಿಕಾರಿಗಳು ಬದಲಾಗುತ್ತಾರೋ?

ಯಾಕೋ ಮಹಾತ್ಮಾ ಗಾಂಧೀಜಿಯವರು ಹೇಳಿದ ಮಾತು ಕಾಡತೊಡಗಿದೆ. “ಜಗತ್ತಿನಲ್ಲಿ ನೀನು ನೋಡ ಬಯಸುವ ಬದಲಾವಣೆ ನಿನ್ನಿಂದಲೇ ಆರಂಭವಾಗಲಿ”.

ಡಾ. ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

More articles

Latest article