ಚಂಡೀಗಢ  ಮೇಯರ್ ಚುನಾವಣೆ:ಫಲಿತಾಂಶ ಕದ್ದು ಸಿಕ್ಕಿಬಿದ್ದ ಬಿಜೆಪಿ

Most read

ಕಳೆದ ಸುಮಾರು ಎರಡು ತಿಂಗಳಿಂದ ಚಂಡೀಗಢ ಭಾರೀ ಸುದ್ದಿಯಲ್ಲಿತ್ತು. ಇಡೀ ದೇಶವೇ ಕುತೂಹಲದಿಂದ ಅತ್ತ ನೋಡುತ್ತಿತ್ತು. ಚಂಡೀಗಢ ಅನೇಕ ಕಾರಣಗಳಿಗೆ ವಿಶಿಷ್ಟ ನಗರವಾದರೂ ಈ ಬಾರಿ ಅದು ಕುತೂಹಲ ಕೆರಳಿಸಿದ್ದು ಆ ಕಾರಣಕ್ಕಲ್ಲ. ಬದಲಿಗೆ ಅಲ್ಲಿನ ಮುನಿಸಿಪಲ್ ಕಾರ್ಪೋರೇಷನ್ ನ ಮೇಯರ್ ಚುನಾವಣೆಯ ಬಗ್ಗೆ.

ಒಂದು ವರ್ಷ ಹಿಂದೆಯೇ ಅಲ್ಲಿ ಮುನಿಸಿಪಲ್ ಚುನಾವಣೆ ನಡೆದಿದ್ದು, ಈ ಬಾರಿ ಎರಡನೆ ಅವಧಿಗೆ ಮೇಯರ್ ಚುನಾವಣೆ ನಡೆಯಬೇಕಿತ್ತು. ಚುನಾವಣೆ ಕಳೆದ ಜನವರಿ 18, 2024 ರಂದು ನಡೆಸುವುದು ಎಂದು ನಿಗದಿಯಾಗಿತ್ತು. ಕೌನ್ಸಿಲ್ ನಲ್ಲಿ ಬಲಾಬಲ ಹೀಗಿತ್ತು. ಆಪ್ 14, ಭಾಜಪ 14, ಕಾಂಗ್ರೆಸ್ 6, ಶಿರೋಮಣಿ ಅಕಾಲಿ ದಳ 1, ಬಿಜೆಪಿ ಸಂಸದರು 1. ಆಪ್ ಮತ್ತು ಕಾಂಗ್ರೆಸ್ ಕೈ ಜೋಡಿಸಿದ್ದರಿಂದ ಈ ಮೈತ್ರಿಕೂಟ  20 ಮತಗಳೊಂದಿಗೆ ಮೇಯರ್ ಅಧಿಕಾರ ಹಿಡಿಯುವುದು ನಿಚ್ಚಳವಾಗಿತ್ತು. ಬಿಜೆಪಿ ಬಳಿ ಇದ್ದುದು ಕೇವಲ 16 ಮತಗಳು.

ಜನವರಿ 18 ರ ಚುನಾವಣೆಗೆ ಕೌನ್ಸಿಲರ್ ಗಳಲ್ಲಿ ಒಬ್ಬರಾದ ಅನಿಲ್ ಮಸೀಹ ರನ್ನು (ಇವರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯ) ಪ್ರಿಸೈಡಿಂಗ್ ಆಫೀಸರ್ ಆಗಿ ಚಂಡೀಗಢ ಡೆಪ್ಯುಟಿ ಕಮಿಷನರ್ ವಿನಯ ಪ್ರತಾಪ ಸಿಂಗ್ ನೇಮಿಸಿದರು. ಪ್ರಿಸೈಡಿಂಗ್ ಆಫೀಸರ್ ಕೆಲಸ ಮೇಯರ್ ಮತ್ತು ಉಪಮೇಯರ್ ಚುನಾಯಿಸುವುದು. ಚುನಾವಣೆಯ ದಿನ ಅವರು ಹಠಾತ್ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದರು (ಇದು ಉದ್ದೇಶಪೂರ್ವಕ ಎನ್ನಲಾಗಿದೆ). ಹಾಗಾಗಿ ಚುನಾವಣೆ ನಡೆಯಲಿಲ್ಲ.

ದೂರು ಪಂಜಾಬ್ ಹರ್ಯಾಣಾ ಹೈಕೋರ್ಟ್ ಗೆ ಹೋಯಿತು. ಈ ನಡುವೆ ಚುನಾವಣೆ ಫೆಬ್ರವರಿ 6, 2024 ರಂದು ನಡೆಸುವುದೆಂದು ನಿರ್ಧಾರವಾಯಿತು. ಇದನ್ನೂ ಕೋರ್ಟ್ ನಲ್ಲಿ ಚಾಲೆಂಜ್ ಮಾಡಲಾಯಿತು. ಆಗ ಕೋರ್ಟ್, ಇಷ್ಟು ದೀರ್ಘಕಾಲಕ್ಕೆ ಮುಂದೂಡುವುದು ಸರಿಯಲ್ಲ, ಮೇಯರ್ ಮತ್ತು ಉಪಮೇಯರ್ ಚುನಾವಣೆ ಜನವರಿ 30, 2024 ರಂದು ನಡೆಯಲೇಬೇಕು ಎಂದು ಹೇಳಿತು.

ಚುನಾವಣಾ ಮೋಸ

ಜನವರಿ 26, 2024 ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಲಾಯಿತು. ಚುನಾವಣೆಯನ್ನು ಜನವರಿ 30 ರಂದು ನಡೆಸಲಾಯಿತು. ಮೇಯರ್ ಚುನಾವಣೆಗೆ ಸ್ಪರ್ಧಿಸಿದವರೆಂದರೆ ಆಪ್ ಕಾಂಗ್ರೆಸ್ ಮೈತ್ರಿಕೂಟದಿಂದ ಕುಲದೀಪ ಕುಮಾರ್, ಬಿಜೆಪಿಯಿಂದ ಮನೋಜ್ ಕುಮಾರ್ ಸೋಂಕರ್. ಚುನಾವಣೆಯನ್ನು ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗಿತ್ತು. ಆಪ್ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಗೆಲ್ಲುವುದು ನಿಚ್ಚಳವಾಗಿತ್ತಾದರೂ ಚುನಾವಣಾಧಿಕಾರಿ ಅನಿಲ್ ಮಸೀಹ ಆಪ್ ನ 8 ಮತಗಳು ಅಸಿಂಧು ಎಂದು ಘೋಷಿಸಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಘೋಷಿಸಿದರು.

ಚುನಾವಣಾಧಿಕಾರಿ ಅನಿಲ್ ಮಸೀಹ

ಇದು ಭಾರೀ ಗಲಾಟೆಗೆ ಕಾರಣವಾಯಿತು. ಯಾಕೆಂದರೆ ಮತಪತ್ರಗಳನ್ನು ಅನಿಲ್ ಮಸೀಹ ಅವರು ವಿರೂಪಗೊಳಿಸಿದ್ದು ವೀಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿತ್ತು. ವಿರೂಪಗೊಳಿಸುವಾಗ ಅವರು ಅನುಮಾನಾಸ್ಪದವಾಗಿ ಎಡಗಡೆಯ ಕ್ಯಾಮರಾದತ್ತ ನೋಡಿದ್ದರು ಕೂಡಾ.

ಪ್ರಕರಣ ಹೈಕೋರ್ಟ್ ಗೆ

ಪ್ರಕರಣ ಮತ್ತೆ ಪಂಜಾಬ್ ಹರ್ಯಾಣಾ ಹೈಕೋರ್ಟ್ ಗೆ ಹೋಯಿತು. ಚುನಾವಣಾ ಫಲಿತಾಂಶ ತಡೆಹಿಡಿಯುವ ಬದಲಿಗೆ ಕೋರ್ಟ್ ನೊಟೀಸ್ ಹೊರಡಿಸಿ ವಿಚಾರಣೆಯನ್ನು ಮೂರು ವಾರ ಮುಂದೂಡಿತು ಹೈಕೋರ್ಟ್.

ಪರಿಣಾಮವಾಗಿ ಸಂತ್ರಸ್ತ ಪಕ್ಷಕಾರರು ಸುಪ್ರೀಂ ಕೋರ್ಟ್ ಕದ ತಟ್ಟಿದರು. ಫೆಬ್ರವರಿ 5, 2024 ರಂದು ಪ್ರಕರಣದ ವಿಚಾರಣೆಯನ್ನು ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠ ಕೈಗೆತ್ತಿಕೊಂಡಿತು. ಚುನಾವಣಾ ಅಕ್ರಮದ ಸಂಪೂರ್ಣ ಸಾಕ್ಷ್ಯ ವೀಡಿಯೋದಲ್ಲಿತ್ತು. ನೋಡಿ ‍ದಂಗಾದ ಸಿಜೆಐ ‘ಇದು ಪ್ರಜಾತಂತ್ರದ ಕಗ್ಗೊಲೆ, ಇದನ್ನು ಹೀಗೇ ಬಿಡುವಂತಿಲ್ಲ, ಚುನಾವಣಾಧಿಕಾರಿ ಮತಪತ್ರಗಳನ್ನು ವಿರೂಪಗೊಳಿಸಿದ ಸಂಪೂರ್ಣ ಸಾಕ್ಷ್ಯ ಇದೆ’ ಎಂದು ಸಿಟ್ಟಿನಿಂದಲೇ ಹೇಳಿ, ಆ ಬ್ಯಾಲೆಟ್ ಪೇಪರ್ ಗಳನ್ನು ಸುರಕ್ಷಿತವಾಗಿ ಇಡುವಂತೆಯೂ, ಫೆಬ್ರವರಿ 19 ರಂದು ಚುನಾವಣಾಧಿಕಾರಿ ಅನಿಲ್ ಮಸೀಹ ನಮ್ಮ ಮುಂದೆ ಹಾಜರಾಗಬೇಕು ಎಂದೂ ಆದೇಶಿಸಿತು.

ಕೋರ್ಟ್ ಮುಂದೆ ಹಾಜರಾದ ಚುನಾವಣಾಧಿಕಾರಿ

ಫೆಬ್ರವರಿ 19, 2024 ರಂದು ಚುನಾವಣಾಧಿಕಾರಿಯನ್ನು ಕೋರ್ಟ್ ಮುಂದೆ ತರಲಾಯಿತು. ಆಗ ಚುನಾವಣಾಧಿಕಾರಿ ಅನಿಲ್ ಮಸೀಹ ಮತ್ತು ಸಿಜೆಐ ನಡುವೆ ನಡೆದ ಪ್ರಶ್ನೋತ್ತರ ಬಹಳ ಕುತೂಹಲಕಾರಿಯಾಗಿ ಹೀಗಿತ್ತು.

ಸಿಜೆಐ ಚಂದ್ರಚೂಡ್: ಮಿಸ್ಟರ್ ಮಸೀಹ, ನಾನು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ನೀವು ಸತ್ಯವನ್ನು ಹೇಳಬೇಕು. ಸುಳ್ಳು ಹೇಳಿದರೆ ಮೊಕದ್ದಮೆ ಎದುರಿಸಬೇಕಾಗುತ್ತದೆ. ಇದು ಕೋರ್ಟ್ ಎನ್ನುವುದು ನೆನಪಿರಲಿ. ನಾವು ವೀಡಿಯೋ ನೋಡಿದ್ದೇವೆ. ನೀವು ಕ್ಯಾಮರಾದೆಡೆಗೆ ನೋಡುತ್ತಾ ಮತಪತ್ರದ ಮೇಲೇ ಏನು ಗುರುತು ಮಾಡಿದ್ದು? ಯಾಕೆ ಗುರುತು ಮಾಡಿದ್ದು?

ಚುನಾವಣಾಧಿಕಾರಿ ಅನಿಲ್ ಮಸೀಹ: ಸರ್, ಅಲ್ಲಿ ಭಾರೀ ಗಲಾಟೆ ಇತ್ತು. ಕ್ಯಾಮರಾ.. ಕ್ಯಾಮರಾ.. ಅನ್ನುತ್ತಿದ್ದರು. ಅದಕ್ಕೆ ಕ್ಯಾಮರಾದೆಡೆಗೆ ನೋಡಿದೆ. ಮತಪತ್ರದಲ್ಲಿ ನಾನು ಸಹಿಮಾಡಬೇಕಾಗಿತ್ತು ಅದನ್ನು ಮಾಡಿದ್ದೇನೆ. ವಿರೂಪಗೊಂಡ ಮತಪತ್ರಗಳನ್ನು ಹೈಲೈಟ್ ಮಾಡಲು ಮಾರ್ಕ್ ಮಾಡಿದೆ.

ಸಿಜೆಐ: ನೀವು ಕೆಲವು ಮತಪತ್ರ ನೋಡುತ್ತಾ ಎಕ್ಸ್ ಗುರುತು ಮೇಲೆ ಇತ್ತೋ ಕೆಳಗೆ ಇತ್ತೋ ಎನ್ನುವುದನ್ನು ಅವಲಂಬಿಸಿ ಅದರಲ್ಲಿ ಕೆಲವುದರ ಮೇಲೆ ಗುರುತು ಮಾಡಿದ್ದು ವೀಡಿಯೋದಲ್ಲಿ ದಾಖಲಾಗಿದೆ. ನೀವು ಗುರುತು ಮಾಡಿದ್ದೀರೋ ಇಲ್ಲವೋ?

ಅನಿಲ್: ನಿಜ. ನಾನು ವಿರೂಪಗೊಂಡ ಮತಪತ್ರಗಳ ಮೇಲೆ ಗುರುತು ಮಾಡಿದೆ.

ಸಿಜೆಐ: ಎಷ್ಟು ಮತಪತ್ರಗಳ ಮೇಲೆ ಗುರುತು ಮಾಡಿದಿರಿ?

ಅನಿಲ್: ಎಂಟು. ನಾನು ಗುರುತು ಮಾಡಿದ ಮೇಲೆ ಆಪ್ ಸದಸ್ಯರು ಮತಪತ್ರ ಕಿತ್ತುಕೊಂಡು ಹಾಳುಮಾಡಿದರು. ಪೊಲೀಸ್ ಮಾರ್ಶಲ್ ಗಳು ಮಧ‍್ಯಪ್ರವೇಶಿಸಬೇಕಾಯಿತು.

ಸಿಜೆಐ: ನೀವು ಮತಪತ್ರ ವಿರೂಪಗೊಳಿಸಿದ್ದು ಯಾಕೆ? ಅದರ ಮೇಲೆ ಗುರುತು ಮಾಡುವ ಅಧಿಕಾರ ನಿಮಗೆಲ್ಲಿದೆ?

ಅನಿಲ್: ಸರ್, ನಾನು ವಿರೂಪಗೊಂಡ ಮತಪತ್ರ ಹೈಲೈಟ್ ಮಾಡಿದ್ದಷ್ಟೇ.

ಸಿಜೆಐ: ಅಂದರೆ ಮತಪತ್ರದ ಮೇಲೆ ಗುರುತು ಮಾಡಿದ್ದನ್ನು ನೀವು ಒಪ್ಪಿಕೊಂಡಿದ್ದೀರಿ.

ಅನಿಲ್: ಹೌದು ಸರ್..

ಸಿಜೆಐ: ಮಿಸ್ಟರ್ ಸಾಲಿಸಿಟರ್. ಆತನ ಉತ್ತರ ಸ್ಪಷ್ಟವಿದೆ. ಆತನ ಮೇಲೆ ಕ್ರಮ ಜರುಗಬೇಕು. ಆತ ರಿಟರ್ನಿಂಗ್ ಆಫೀಸರ್ ಆಗಿ ಚುನಾವಣಾ ಪ್ರಜಾತಂತ್ರದಲ್ಲಿ ಹಸ್ತಕ್ಷೇಪ ಮಾಡಿದ್ದು ಗಂಭೀರ ವಿಷಯ.

ನಾಳೆ ಮಧ್ಯಾಹ್ನ 2 ಗಂಟೆಗೆ  ಆ ಬ್ಯಾಲೆಟ್ ಗಳನ್ನು ತನ್ನ ಮುಂದೆ ಹಾಜರುಪಡಿಸಬೇಕು ಎಂದೂ ಕೋರ್ಟ್ ಆದೇಶಿಸಿತು.

ತೀರ್ಪು

ಅದೇ ಪ್ರಕಾರ ನಿನ್ನೆ ಅಂದರೆ ಫೆಬ್ರವರಿ 20, 2024 ರಂದು ಮತಪತ್ರಗಳನ್ನು ನ್ಯಾಯಾಲಯ ಪರಿಶೀಲಿಸಿತು. ವಕೀಲರಿಗೂ ನೋಡಲು ಅವಕಾಶ ನೀಡಲಾಯಿತು. ಜನವರಿ 30 ರ ಚುನಾವಣಾ ಪ್ರಕ್ರಿಯೆ ವೀಡಿಯೋವನ್ನೂ ಪ್ರದರ್ಶಿಸಲಾಯಿತು. ಅಂತಿಮವಾಗಿ ಕೋರ್ಟ್ ಹೀಗೆ ಹೇಳಿತು, “ವಿರೂಪಗೊಳಿಸಲಾದ ಎಂಟು ಮತಪತ್ರಗಳೂ ಒಂದು ಪಕ್ಷದ ಪರವಾಗಿದ್ದವು. ಚುನಾವಣಾಧಿಕಾರಿಯು ಅವುಗಳನ್ನು ವಿರೂಪಗೊಳಿಸಿರುವುದು ದೃಢಪಟ್ಟಿದೆ. ಹಾಗಾಗಿ ಅವು ಅಸಿಂಧುವಲ್ಲ. ಆದ್ದರಿಂದ ದೂರುದಾರರಿಗೆ  (ಕುಲದೀಪ ಕುಮಾರ್)  20 ಮತಗಳೂ ಇನ್ನೊಂದು ಪಕ್ಷಕ್ಕೆ 16 ಮತಗಳೂ ದೊರೆತಿವೆ. ದೂರುದಾರರು ಚಂಡೀಗಢ ಮುನಿಸಿಪಲ್ ಕಾರ್ಪೋರೇಷನ್ ಮೇಯರ್ ಹುದ್ದೆಗೆ ಚುನಾಯಿತರಾಗಿದ್ದಾರೆ. ಚುನಾವಣಾಧಿಕಾರಿ ಘೋಷಿಸಿದ ಫಲಿತಾಂಶವನ್ನು ಬದಿಗಿರಿಸಲಾಗಿದೆ. ಚುನಾವಣಾಧಿಕಾರಿ ಅನಿಲ್ ಮಸೀಹ ಕಾನೂನು ಬಾಹಿರ ಕೆಲಸ ಮಾಡಿರುವುದರಿಂದ ಅವರ ಮೇಲೆ ಸಿಆರ್ ಪಿಸಿ 340 ರ ಪ್ರಕಾರ ಪ್ರಕ್ರಿಯೆ ಆರಂಭವಾಗಬೇಕು. ರಿಜಿಸ್ಟ್ರಾರ್ ಜುಡಿಶಿಯಲ್ ಅವರು ಅನಿಲ್ ಮಸೀಹರಿಗೆ ನೋಟಿಸ್ ನೀಡಬೇಕು”.

ಬಹಳ ಅಪರೂಪಕ್ಕೆ, ದೇಶದ ಸಂಸದೀಯ ಪ್ರಜಾತಂತ್ರ ರಕ್ಷಣೆಯ ಬಗ್ಗೆ ಭರವಸೆ ನೀಡುವ ಕೋರ್ಟ್ ಆದೇಶವಿದು. ಆದರೆ, ಅದೇ ಹೊತ್ತಿನಲ್ಲಿ ದೇಶದಲ್ಲಿ ಸಂಸದೀಯ ಪ್ರಜಾತಂತ್ರ ಎಂತಹ ಗಂಭೀರ ಅಪಾಯ ಎದುರಿಸುತ್ತಿದೆ ಎನ್ನುವುದನ್ನೂ ಇದು ಸೂಚಿಸುತ್ತದೆ. ಒಂದು ಮುನಿಸಿಪಲ್ ಕಾರ್ಪೋರೇಷನ್ ನ ಸಾಮಾನ್ಯ ಮೇಯರ್ ಚುನಾವಣೆಯಲ್ಲೂ ಅಕ್ರಮ ಎಸಗಿ ಯಾವ ಶಿಕ್ಷೆಯ ಭಯವೂ ಇಲ್ಲದೆ ಫಲಿತಾಂಶವನ್ನು ಕದಿಯುತ್ತಾರೆಂದರೆ, ಇನ್ನು ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಯ ಕತೆಯೇನು? ಹಾಗಾಗಿ ಪ್ರಜಾತಂತ್ರ ನಾಶ ಮಾಡುವ ಶಕ್ತಿಗಳಿಗೆ ಪಾಠ ಕಲಿಸಲು ಮತ್ತು ದೇಶದ ಪ್ರಜಾತಂತ್ರವನ್ನು ಉಳಿಸಲು ಸದ್ಯದಲ್ಲಿಯೇ ಒಂದು ಸುವರ್ಣಾವಕಾಶ ದೇಶದ ಪ್ರಜೆಗಳಿಗೆ ಒದಗಿಬರಲಿದೆ. ಅದನ್ನು ಅವರು ಸಮರ್ಥವಾಗಿ ಬಳಸಿಕೊಳ್ಳಬೇಕು.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ-ಚುನಾವಣಾ ಬಾಂಡ್; ಕೇಂದ್ರದ ನಡೆಗೆ ಸುಪ್ರೀಂ ತಡೆ

More articles

Latest article