ಚಾಮುಂಡಿ ಬೆಟ್ಟಕ್ಕೆ ಬೆಂಕಿ; ಆಕಸ್ಮಿಕ ಅಲ್ಲ, ಮಾನವ ನಿರ್ಮಿತ: ಡಿಸಿಎಫ್‌ ಹೇಳಿಕೆ

Most read

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ಅರಣ್ಯದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದಲ್ಲಿ ಅರಣ್ಯ ಸಂಪತ್ತು ನಾಶವಾಗಿದೆ. ಜಿಲ್ಲಾ ಅರಣ್ಯಾಧಿಕಾರಿ ಬಸವರಾಜು ಅವರು ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ. ಉದ್ದೇಶ ಪೂರ್ವಕವಾಗಿ ಕಾಡಿಗೆ ಬೆಂಕಿ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ.. ಗಾಳಿಯ ವೇಗ ಹಾಗೂ ಬಿಸಿಲಿನ ವಾತಾವರಣ ಹೆಚ್ಚಾಗಿದ್ದ ಕಾರಣ ಬೆಂಕಿ ನಂದಿಸಲು ಕಷ್ಟವಾಗಿದೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಬೆಂಕಿ ಬಿದ್ದ ಭಾಗಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ನಿರಂತರ ಶ್ರಮ ಹಾಕಿದ್ದು, ಸಂಜೆ ವೇಳೆಗೆ ನಿಯಂತ್ರಣಕ್ಕೆ ಬಂದಿತು ಎಂದರು.

3 ತಂಡಗಳ ಜೊತೆಗೆ ವಾಚರ್ಗಳನ್ನೂ ಸೇರಿಸಿ ರಾತ್ರಿ ಇಡೀ ಅರಣ್ಯವನ್ನು ಕಾದಿದ್ದೇವೆ. ಇಂದು ಬೆಳಗ್ಗೆಯೂ ಅಲ್ಲಲ್ಲಿ ಬೆಂಕಿ ಕಂಡು ಬಂದರೆ ಆರಿಸುವಂತೆ ಸೂಚನೆ ನೀಡಿದ್ದೇವೆ. ಸದ್ಯಕ್ಕೆ ಡ್ರೋನ್ ಮೂಲಕ ಪರಿಶೀಲನೆ ಮಾಡಿದ್ದೇವೆ. ದೇವಿಕೆರೆ, ಗೊಲ್ಲಹಳ್ಳ ಭಾಗದಲ್ಲಿ 35 ಎಕರೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬಿಸಿಲು ಇದ್ದುದರಿಂದ ಒಣ ಹುಲ್ಲು ಜಾಸ್ತಿ ಇದ್ದು ಬೆಂಕಿ ಹರಡಲು ಕಾರಣವಾಗಿದೆ ಎಂದರು.

1516 ಎಕರೆ ಮೀಸಲು ಅರಣ್ಯವಿದ್ದು, 4 ಕಡೆ ಬೆಟ್ಟಕ್ಕೆ ಪ್ರವೇಶ ಇದೆ. ಇಡೀ ಅರಣ್ಯವನ್ನು ನಿಗಾ ವಹಿಸುವುದು ಕಷ್ಟ. ನಾನು ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತೇನೆ. ಬಿಡಿ ಸಿಗರೇಟ್ ಸೇದು ಎಸೆಯಬೇಡಿ. ಸಣ್ಣ ಕಿಡಿ ಇಡೀ ಕಾಡನ್ನೇ ನಾಶ ಮಾಡುತ್ತದೆ. ಅದೃಷ್ಟವಶಾತ್ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ಬೆಳಗ್ಗೆ ನಮ್ಮ ವಾಚರ್ ಕಣ್ಣಿಗೆ ಚಿರತೆ ಹಾಗೂ ಮರಿಗಳು ಕಂಡಿವೆ. ಬೆಂಕಿ ಬಿದ್ದ ತಕ್ಷಣ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಭಾಗಕ್ಕೆ ಹೋಗಿವೆ ಎಂದು ತಿಳಿಸಿದರು.

More articles

Latest article