ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ನಾಯಕರು ಬೌದ್ಧಿಕವಾಗಿ ದಿವಾಳಿಯಾಗಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರವರು, ಸಚಿವ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ಕೇಳುತ್ತಿರುವುದು ಅವರ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ ಎಂದು ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗ ಅಧ್ಯಕ್ಷ ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ತೇಜೋವಧೆ ಮಾಡುವ ಕಾರಣಕ್ಕಾಗಿ ಬಿಜೆಪಿ, ಹಲವಾರು ನಾಯಕರಿಗೆ ಹಲವಾರು ಬಹುಮಾನಗಳನ್ನ ಬಳುವಳಿಯಾಗಿ ನೀಡಿರುತ್ತದೆ. ಅಂತಹ ಬಳುವಳಿಗಳಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸ್ಥಾನ ಗಳಿಸಿದ ಛಲವಾದಿ ನಾರಾಯಣಸ್ವಾಮಿ ರವರು, ಮತ್ತೊಮ್ಮೆ ಬಿಜೆಪಿ ಲಾಟರಿ ಯೋಜನೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಪಡೆದಿರುತ್ತಾರೆ. ಸಂಘಪರಿವಾರದ ಅಣತಿಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಯ ಮುಂದೆ ಸ್ವಾಭಿಮಾನವನ್ನು ಬಿಟ್ಟು ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ಚಡ್ಡಿಯನ್ನು ತಲೆಯ ಮೇಲೆ ಹೊತ್ತು ಹೋರಾಟ ಮಾಡಿದ್ದಾರೆ. ಖರ್ಗೆ ಅವರ ಕುಟುಂಬವನ್ನು ವ್ಯಕ್ತಿಗತ ನಿಂದನೆ ಮತ್ತು ಟೀಕೆಯ ಮಾಡುವ ಕಾರಣಕ್ಕಾಗಿ ಚಲವಾದಿ ನಾರಾಯಣಸ್ವಾಮಿ ರವರಿಗೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕರುಣಿಸಿದೆ ಎಂದು ಲೇವಡಿ ಮಾಡಿದ್ದಾರೆ.
ಜನತಾ ಪರಿವಾರದ ಅಂದಿನ ನಾಯಕ ಜೀವರಾಜ್ ಅಳ್ವರ ಮುಖಾಂತರ ರಾಜಕೀಯ ಹೋರಾಟವನ್ನು ಕಂಡುಕೊಂಡ ಛಲವಾದಿ ನಾರಾಯಣಸ್ವಾಮಿ, ತದನಂತರ ರಾಜಕೀಯವಾಗಿ ಬಂಗಾರಪ್ಪನವರ ಆಶ್ರಯದಲ್ಲಿ ಬೆಳೆದು ಬಂದರು. ನಂತರ ಖರ್ಗೆ ರವರ ರಾಜಕೀಯ ಆಶ್ರಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಸ್ಥಾನಗಳನ್ನು ಗಳಿಸಿ ಮತ್ತೆ ಪದವಿ ಆಸೆಗಾಗಿ ಬಿಜೆಪಿ ಕದ ತಟ್ಟಿದ ಛಲವಾದಿ ನಾರಾಯಣಸ್ವಾಮಿ, ಕೇವಲ ವ್ಯಕ್ತಿಗತ ಟೀಕೆಯ ನಿಂದನೆ ಹಿನ್ನೆಲೆಯಲ್ಲಿ ಹಲವಾರು ನಾಯಕರನ್ನು ಹಿಂದಕ್ಕೆ ತಳ್ಳಿ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಹೊಂದಿರುತ್ತಾರೆ . ಬಹುತೇಕ ರಾಜ್ಯದ ಇತಿಹಾಸದಲ್ಲಿ ಅತ್ಯಂತ ವೈಫಲ್ಯದ ವಿರೋಧ ಪಕ್ಷದ ನಾಯಕ ಎನ್ನುವ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ರಾಜ್ಯದ ವಿಷಯಗಳನ್ನು ವಿಧಾನಪರಿಷತ್ತಿನಲ್ಲಿ ಚರ್ಚಿಸಲು ಅಥವಾ ಗಮನಸೆಳೆಯಲು ವಿಫಲರಾಗಿರುವ ಇವರು ವೈಯಕ್ತಿಕ ಟೀಕೆಯ ನೆಲೆಗಟ್ಟಿನಲ್ಲಿ ರಾಜ್ಯನಾಯಕರಾಗಲು ಹಪಾಹಪಿತನವನ್ನು ಹೊಂದಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪಾಠ ಹೇಳುವ ಮೂಲಕ ನಗೆ ಪಾಟಲಿಗೆ ಒಳಗಾಗಿದ್ದಾರೆ. ಬಿಜೆಪಿ ಮಾಜಿ ಮುಖ್ಯಮಂತ್ರಿಗಳು ಪೋಸ್ಕೋ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅವರದೇ ಪಕ್ಷದ ನಾಯಕರು ಅನೇಕ ಸೆಕ್ಸ್ ಪ್ರಕರಣಗಳಲ್ಲಿ ನ್ಯಾಯಾಲಯದ ತಡೆಯಾಜ್ಞೆಗಳನ್ನು ಪಡೆದುಕೊಂಡು ತಲೆ ತಗ್ಗಿಸಿಕೊಂಡು ಓಡಾಡುತ್ತಿದ್ದಾರೆ. ಅವರದೇ ಪಕ್ಷದ ಶಾಸಕರು ಪರಿಶಿಷ್ಟ ಜಾತಿಗಳ ಜಾತಿನಿಂದನೆಯ ಗಂಭೀರ ಆರೋಪದ ಮೇಲೆ ಜಾಮೀನು ಪಡೆದುಕೊಂಡು ಆಚೆ ಇರುತ್ತಾರೆ. ಇಂತಹ ಬಿಜೆಪಿ ನಾಯಕರ ರಾಜೀನಾಮೆ ಕೇಳಲು ನೈತಿಕ ಶಕ್ತಿಯನ್ನು ಇಟ್ಟುಕೊಳ್ಳದ ಚಲವಾದಿ ರವರು, ಕಾಂಗ್ರೆಸ್ ಪಕ್ಷಕ್ಕೆ ಪಾಠ ಹೇಳಲು ಬಂದಿರುವುದು ಅವರ ದಿವಾಳಿತನದ ಪರಮಾವಧಿಯಾಗಿರುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಆತ್ಮಹತ್ಯೆಗೆ ಒಳಗಾಗಿರುವ ಸಚಿನ್ ಪಂಚಾಳ ರವರ ಪ್ರಕರಣದಲ್ಲಿ ಪ್ರಿಯಾಂಕ ಖರ್ಗೆರವರ ಮನವಿಯ ಮೇರೆಗೆ ರಾಜ್ಯ ಸರ್ಕಾರ ಸದರಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿರುತ್ತದೆ. ಈ ಪ್ರಕರಣದಲ್ಲಿ ಆರೋಪಿತರನ್ನು ಶಿಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಪ್ರವೃತ್ತವಾಗಿರುತ್ತದೆ . ಆದರೆ ರಾಜಕೀಯ ಲಾಭಕ್ಕಾಗಿ ಮತ್ತು ವೈಯಕ್ತಿಕ ಲಾಭಕ್ಕಾಗಿ ಖರ್ಗೆ ಕುಟುಂಬವನ್ನು ತೇಜೋವದೆ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರು ಯಾವ ಸಾಕ್ಷ್ಯವನ್ನು ಇಟ್ಟು ಈ ಪ್ರಕರಣದಲ್ಲಿ ರಾಜೀನಾಮೆ ಕೇಳುತ್ತಿದ್ದಾರೆ ಎಂದು ರಮೇಶ್ ಬಾಬು ಪ್ರಶ್ನಿಸಿದ್ದಾರೆ.