ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಹೋಮ-ಹವನ: ವಿದ್ಯಾರ್ಥಿಗಳ ಕಳವಳ

Most read

ರಾಜ್ಯದ ಏಕೈಕ ಕೇಂದ್ರಿಯ ವಿಶ್ವವಿದ್ಯಾಲಯವಾಗಿರುವ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಹಿತಕರ ಬೆಳವಣಿಗೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದೆ. ಒಂದು ಶೈಕ್ಷಣಿಕ ವಾತಾವರಣ ಇರಬೇಕಾದ ಕಡೆಯಲ್ಲಿ ಸಿದ್ದಾಂತ, ಮಣ್ಣು ಮಸಿ ತುಂಬಿಕೊಂಡ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುವುದು ಬಿಟ್ಟು ಹೋಮ-ಹವನ, ಬೈಠಕ್ ಮಾಡಿಕೊಂಡು ಕಾಲ ಕಳೆಯುತ್ತಿರುವುದು ಕಂಡುಬಂದಿದೆ.


ಈ ಬಗ್ಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಕಳವಳ ವ್ಯಕ್ತಪಡಿಸಿದ್ದು, ಗ್ರಂಥಾಲಯದಲ್ಲಿ ಸಿಬ್ಬಂದಿ ವರ್ಗವು ಸರಸ್ವತಿ ಪೂಜೆ ಮತ್ತು ಹೋಮ ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಯಾವುದೇ ಸಾರ್ವಜನಿಕ ಶೈಕ್ಷಣಿಕ ಸಂಸ್ಥೆಯಲ್ಲಿ ಧಾರ್ಮಿಕ ಪ್ರಾರ್ಥನೆ, ಪೂಜೆಗಳನ್ನು ಮಾಡುವಂತಿಲ್ಲ. ಇದು ಸಂವಿಧಾನಕ್ಕೆ ವಿರುದ್ಧವಾದುದು. ಹೀಗಿರುವಾಗ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಸ್ವತಃ ಆಡಳಿತ ಮಂಡಳಿಯೇ ಇಂತಹ ತಪ್ಪು ನಡೆಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

ನೆನ್ನೆ ಈ ಕುರಿತು ವಿವಿಯ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದು, ವಿಶ್ವವಿದ್ಯಾಲಯವನ್ನು ಹೀಗೆ ಧಾರ್ಮಿಕ ಮಂದಿರವಾಗಿಸುವುದು ತಪ್ಪಲ್ಲವೇ ಎಂದು ಗ್ರಂಥಪಾಲಕರಾದ ಪರಶುರಾಮ್ ಕಟ್ಟಿಮನಿ ಅವರನ್ನು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಸೂಕ್ತ ರೀತಿಯಲ್ಲಿ ಉತ್ತರ ದೊರಕಿಲ್ಲ ಎಂದು ಅವರು ಕನ್ನಡ ಪ್ಲಾನೆಟ್ ಗೆ ತಿಳಿಸಿದರು. ʼಈ ಹಿಂದೆ ವಿಶ್ವವಿದ್ಯಾಲಯದ ಆಡಳಿತ ವರ್ಗವೇ ಸರಸ್ವತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿತ್ತು. ಇದು ಇಲ್ಲಿಗೆ ವಿದ್ಯಾಭ್ಯಾಸಕ್ಕೆಂದು ಬರುವ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ನೀಡುತ್ತದೆ. ಹೀಗಾಗಿ ನಾವು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿಲ್ಲಿಸಿದ್ದೇವೆ. ಆ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗ ನಮಗೆ ಬಹಳಷ್ಟು ತೊಂದರೆ ಕೊಟ್ಟಿದ್ದರುʼ ಎಂದು ಅವರು ಹೇಳಿದರು.


ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳ ಕುರಿತು ಸಂವಾದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಇಂತಹ ಧಾರ್ಮಿಕ ಸರಸ್ವತಿ ಪೂಜೆ, ಹೋಮ-ಹವನ ಮಾಡಿದರೆ ಸಂಪೂರ್ಣ ಅನುಮತಿ ಅವಕಾಶವಿದೆ ಎಂಬುದು ವಿದ್ಯಾರ್ಥಿಗಳ ದೂರು. “ಎರಡು ದಿನಗಳ ಹಿಂದೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಹಾರ ಹಾಕಲು ಹೋದಾಗ, ಸೆಕ್ಯೂರಿಟಿ ಆಫೀಸರ್ ಬಂದು ನಮ್ಮ ಮೇಲೆ ಹಲ್ಲೆ ಮಾಡಿದ್ದರು. ಶೈಕ್ಷಣಿಕ ವಾತಾವರಣ ಇರಬೇಕಾದ ಕಡೆಯಲ್ಲಿ ಮತೀಯ ಭಾವನೆಗಳನ್ನು ಬೆಳೆಸುವ ಕೆಲಸವನ್ನು ಇಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಅದೇ ವೇಳೆಗೆ ಸಂವಿಧಾನ ವಿರೋಧಿ ಚಿಂತನೆಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ” ಎಂದು ನಂದಕುಮಾರ್ ಕಳವಳ ವ್ಯಕ್ತಪಡಿಸಿದರು.

More articles

Latest article