ಕಲಬುರಗಿ: ಕೇಂದ್ರ ಸರ್ಕಾರದ ಅವೈಜ್ಞಾನಿಕ ತೆರಿಗೆ ನೀತಿಯಿಂದಾಗಿ ಕಡಿಮೆ ತೆರಿಗೆ ಕಟ್ಟುವ ಉತ್ತರ ಪ್ರದೇಶಕ್ಕೆ 333 ರೂ. ವಾಪಸ್ ಹೋಗುತ್ತಿದೆ. ಆದರೆ ಅತಿ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಕೇವಲ 12 ಪೈಸೆ ಮಾತ್ರ ವಾಪಸ್ ಬರುತ್ತಿದೆ. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾದರಂತೂ ದಕ್ಷಿಣದ ರಾಜ್ಯಗಳು ತಮ್ಮ ಧ್ವನಿಯನ್ನೇ ಕಳೆದುಕೊಳ್ಳಲಿವೆ ಎಂದು ಐಟಿಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜಿ ಎಸ್ ಟಿ, ಐಟಿ ರಫ್ತು, ಬಾಹ್ಯಾಕಾಶ ವಲಯದ ಉತ್ಪಾದನೆ, ಜೈವಿಕ ತಂತ್ರಜ್ಞಾನ ಸೇರಿದಂತೆ ಹಲವು ವಲಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಅತಿ ಹೆಚ್ಚು ತರಿಗೆ ಪಾಲನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಿದ್ದೇವೆ. ಆದರೆ ಮರಳೀ ರಾಜ್ಯಕ್ಕೆ ನೀಡುವಾಗ ಮಲತಾಯಿ ದೋರಣೆ ಅನುಸರಿಸುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಶೇ.72ರಷ್ಟು ವೆಚ್ಚವನ್ನು ವಿವಿಧ ಮೂಲಗಳ ತೆರಿಗೆ ಸಂಗ್ರಹದಿಂದ ಸಂಗ್ರಹಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದರು.
ಕೇವಲ ರೂ.100 ತೆರಿಗೆ ಪಾವತಿ ಮಾಡುವ ಮಧ್ಯಪ್ರದೇಶಕ್ಕೆ ಕೇಂದ್ರ ಸರ್ಕಾರ ರೂ.297, ಒಡಿಶಾಕ್ಕೆ ರೂ. 187 ಕೊಡುತ್ತಿದೆ. 11ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಕೇಂದ್ರದಿಂದ ಶೇ. 21.10ರಷ್ಟು ತೆರಿಗೆ ಪಾಲು ವಾಪಸ್ ಬರುತ್ತಿತ್ತು. 15ನೇ ಹಣಕಾಸು ಆಯೋಗ ರಚನೆಯಾದ ಬಳಿಕ ಆ ಪ್ರಮಾಣ ಶೇ. 15.8ಕ್ಕೆ ಇಳಿದಿದೆ. ಇದರಿಂದಾಗಿ ಪ್ರತಿವರ್ಷ ರೂ. 78 ಸಾವಿರ ಕೋಟಿ ಹಣ ಕಡಿತವಾಗಿದೆ ಎಂದರು.
ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಗಳ ಬಳಿಕ ಲೋಕಸಭಾ ಸ್ಥಾನಗಳ ಸಂಖ್ಯೆ 545ರಿಂದ 846ಕ್ಕೆ ಹೆಚ್ಚಾಗಲಿವೆ. ಉತ್ತರ ಭಾರತದ ರಾಜ್ಯಗಳಿಗೆ 194 ಹೆಚ್ಚುವರಿ ಸ್ಥಾನಗಳು ಸಿಗಲಿವೆ. ದಕ್ಷಿಣ ಭಾರತಕ್ಕೆ ಕೇವಲ 23 ಸ್ಥಾನಗಳು ಸಿಗಲಿವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳು 20ಕ್ಕೆ ಕುಸಿಯಲಿವೆ. ಮುಂದಿನ ಒಂದೂವರೆ ವರ್ಷದಲ್ಲಿ ಪುನರ್ ವಿಂಗಡಣೆ ಪ್ರಕ್ರಿಯೆ ಆರಂಭವಾಗಲಿದೆ. ಆಗ ರಾಜ್ಯದ ಹಿತಾಸಕ್ತಿ, ತೆರಿಗೆ ಅನ್ಯಾಯ ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳು ಕೇಂದ್ರದ ಅನ್ಯಾಯವನ್ನು ಪ್ರಶ್ನಿಸಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯವೂ ಜನಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.