ಎಂಎಸ್‌ಪಿ ಕುರಿತು ನಾಳೆ ರೈತರೊಂದಿಗೆ ಕೇಂದ್ರ ಸರ್ಕಾರ ಮಹತ್ವದ ಸಭೆ

Most read

ಚಂಡೀಗಢ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಮತ್ತೊಂದು ಸುತ್ತಿನ ಮಾತುಕತೆಯನ್ನು ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ನಾಳೆ ಶನಿವಾರ ಈ ಸಭೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಮುಂದಿನ ಸಭೆಯನ್ನು ದೆಹಲಿಯಲ್ಲಿ ನಡೆಸುವಂತೆ ರೈತರು ಕಳೆದ ಸಭೆಯಲ್ಲಿ ಸರ್ಕಾರವನ್ನು ಕೋರಿದ್ದರು. ಆದರೆ ಕೇಂದ್ರ ಸರ್ಕಾರ ಸಭೆಯನ್ನು ಚಂಡೀಗಢದಲ್ಲಿ ನಿಗದಿಪಡಿಸಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಪೂರ್ಣ ಚಂದ್ರ ಕೃಷ್ಣ ಅವರು ರೈತ ನಾಯಕರಾದ ಜಗಜಿತ್ ಸಿಂಗ್ ಡಲ್ಲೇವಾಲ್ ಮತ್ತು ಸರವಣ ಸಿಂಗ್ ಪಂಡೇರ್ ಅವರಿಗೆ ಪತ್ರ ಮುಖೇನ ಸಭೆ ನಡೆಸುವ ಸಂಬಂಧ ಮಾಹಿತಿ ನೀಡಿದ್ದಾರೆ.

ಚಂಡೀಗಢದಲ್ಲಿ ಕಳೆದ 14ರಂದು ಎಸ್ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಜತೆ ನಡೆದ ಸಭೆಯ ಮುಂದುವರಿದ ಭಾಗ ಇದೇ 22 ರಂದು (ಶನಿವಾರ) ನಡೆಯಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರದ ಸಚಿವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಫೆ.14ರಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವದ ಕೇಂದ್ರದ ತಂಡವು ರೈತ ಪ್ರತಿನಿಧಿಗಳ ಜತೆ ಸಭೆ ನಡೆಸಿತ್ತು.

More articles

Latest article