ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಕರ್ನಾಟಕದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಮೂಲಕ ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಹಿನ್ನೆಡೆಯಾಗಿದೆ ಎಂದು ಭಾವಿಸಲಾಗಿದೆ. ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿತ್ತು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವವನ್ನೂ ಸಲ್ಲಿಸಿತ್ತು. ಶಿವಕುಮಾರ್ ಅವರು ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಮೂಲಕ ರಾಮನಗರವೂ ಬೆಂಗಳೂರಿಗೆ ಸೇರಿದೆ ಎಂದು ಬಿಂಬಿಸಲು ಹೊರಟಿದ್ದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಶಿವಕುಮಾರ್ ಅವರು ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗುತ್ತದೆ. ಇದರಿಂದ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬರುತ್ತದೆ ಎಂದು ಕಿಡಿ ಹೊತ್ತಿಸಿದ್ದರು. ಇದು, ಕೇಂದ್ರ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ಶಿವಕುಮಾರ್ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಶಿವಕುಮಾರ್ ಅವರು ತಮ್ಮ ಬೇನಾಮಿ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ಈ ಸಂಚು ರೂಪಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದರು.
ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ, ನಿಮ್ಮ ಆಸ್ತಿ ಮೌಲ್ಯಗಳನ್ನು ಹತ್ತು ಪಟ್ಟು ಹೆಚ್ಚು ಮಾಡುವ ಶಕ್ತಿ ದೇವರು ನೀಡಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವಿದ್ಯೆ ನೀಡಬಹುದು ಅಷ್ಟೇ. ಕನಕಪುರದವರು ರಾಮನಗರ ಜಿಲ್ಲೆಯವರಲ್ಲ. ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಡಿಕೆ ಶಿವಕುಮಾರ್ ಅವರು ಕನಕಪುರ ಜನತೆಗೆ ಕಿವಿಮಾತು ಹೇಳಿದ್ದರು.