ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ, ಗುರುವಿನ ಮಹಾಸಮಾಧಿ ಶತಾಬ್ಧಿ ಮತ್ತು ಸರ್ವಮತ ಸಮ್ಮೇಳನ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 3ರಂದು ಮಂಗಳೂರಿನ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿ ಕ್ಯಾಂಪಸ್ ಆವರಣದಲ್ಲಿ ನಡೆಯಲಿದೆ. ನಾರಾಯಣ ಗುರುಗಳು ಸಾರಿದ ಜೀವನ ಮೌಲ್ಯಗಳನ್ನು ಮತ್ತೊಮ್ಮೆ ನೆನಪಿಸಿ, ಜನಮಾನಸಕ್ಕೆ ತಲುಪಿಸುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಮತ್ತು ಕಾರ್ಯಕ್ರಮ ಆಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷರೂ ಆದ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
1855ರಲ್ಲಿ ಜನಿಸಿದ ಶ್ರೀ ನಾರಾಯಣ ಗುರುಗಳು 1928ರ ಸೆಪ್ಟೆಂಬರ್ 20ರಂದು ಶಿವೈಕ್ಯರಾದರು. ನಾರಾಯಣ ಗುರುಗಳ ಮಹಾ ಸಮಾಧಿಯ ಶತಮಾನೋತ್ಸವವೂ ಸಮೀಪಿಸುತ್ತಿದ್ದು, ಸರ್ವ ಧರ್ಮಗಳ ಮಧ್ಯೆ ಸಮಭಾವ, ಸಮಾನತೆ, ಸೌಹಾರ್ದ, ಭ್ರಾತೃತ್ವ ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವ ಸಂದಿಗ್ಧ ಕಾಲ ಇದಾಗಿದೆ. ಆದ್ದರಿಂದ ವರ್ಕಳದ ಶಿವಗಿರಿ ಮಠ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಡಿ. 3ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ, ಲೋಕಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ಅವರು ಶ್ರೀ ನಾರಾಯಣ ಗುರು ಮತ್ತು ಗಾಂಧಿ ಸಮಾಗಮ ಸಂದೇಶದ ಪ್ರಧಾನ ಭಾಷಣ ಮಾಡುವರು. ಶಿವಗಿರಿ ಮಠದ ಕಾರ್ಯದರ್ಶಿ ಸ್ವಾಮೀಜಿ ಶುಭಾಂಗಾನಂದ ಅವರು ಪರಿನಿರ್ವಾಣ ಸಂದೇಶ ಭಾಷಣ ನೀಡುವರು.
ಶಿವಗಿರಿ ಮಠದ ಶ್ರೀಮದ್ ಶಾರದಾನಂದ, ಸ್ವಾಮಿ ರಿತಾಂಭರಾನಂದ, ಸ್ವಾಮಿ ಆಸಂಗಾನಂದ ಗಿರಿ, ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾನಂದಜಿ ಮಹಾರಾಜ, ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಸಚಿವರಾದ ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮ್ಮದ್ ಖಾನ್, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬಿಜೇಶ್ ಚೌಟ ಮತ್ತು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸರ್ವಮತ ಸಮ್ಮೇಳನ:
ಇದೇ ದಿನ ಮಧ್ಯಾಹ್ನ 2ರಿಂದ 4ರವರೆಗೆ ಸರ್ವಮತ ಸಮ್ಮೇಳನ ನಡೆಯಲಿದೆ. ಖ್ಯಾತ ಸಂಸ್ಕೃತಿ ಚಿಂತಕ ಗಣೇಶ ದೇವಿ ಸಮ್ಮೇಳನ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯರು ಮತ್ತು ಕಾರ್ಯಕ್ರಮದ ಕೇಂದ್ರ ಸಮಿತಿ ಅಧ್ಯಕ್ಷರೂ ಆಗಿರುವ ಬಿ.ಕೆ. ಹರಿಪ್ರಸಾದ್ ಅವರು ಅಧ್ಯಕ್ಷತೆ ವಹಿಸುವರು. ಶಿವಗಿರಿ ಮಠದ ಸ್ವಾಮಿ ರಿತಾಂಭರಾನಂದ ಅವರು ಸರ್ವಮತ ಸಂದೇಶ ಭಾಷಣ ನೀಡುವರು. ಶಿಹಾಬ್ ತಂಞಳ್ ಪಾಣಕ್ಕಾಡ್ ಮುನಾವರ್ ಅಲಿ, ಮಂಗಳೂರು ಧರ್ಮ ಪ್ರಾಂತ್ಯದ ವಂದನೀಯ ಬಿಷಪ್ ಡಾ. ಪೀಟರ್ ಪಾಲ್ ಸಲ್ಡಾನ, ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಂದನೀಯ ಬಿಷಪ್ ಜೇಮ್ಸ್ ಪಟ್ಟೆರಿಲ್, ಬ್ರಹ್ಮಕುಮಾರಿ ವೀಣಾ ಬೆಹನ್‌ಜಿ ಸರ್ವಮತ ಸಮ್ಮೇಳನದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಧರ್ಮ, ಜಾತಿಗಳ ಹೆಸರಿನಲ್ಲಿ ಸಮಾಜದ ವಿಘಟನೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಅರಿಯುವ, ಅದನ್ನು ಸಮಾಜದ ಉದ್ದಗಲಕ್ಕೆ ಪಸರಿಸುವ ಪ್ರಯತ್ನಕ್ಕೆ ಈ ಕಾರ್ಯಕ್ರಮ ನಾಂದಿ ಹಾಡಲಿದೆ ಎಂಬ ಆಶಯವಿದೆ. ಸುಧಾರಣೆಯ ಹಾದಿಗೆ ಸಮಾಜವನ್ನು ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದೂ ಹೇಳಿದರು.
ವಿವಿಧ ಧರ್ಮಗುರುಗಳು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು, ಸಮುದಾಯಗಳ ಮುಖಂಡರು, ರಾಜಕೀಯ ಮುಖಂಡರು, ಅತಿಥಿಗಳಾಗಿ ಭಾಗವಹಿಸುವರು.
ನಾರಾಯಣ ಗುರುಗಳ ಇತಿಹಾಸ:
ದಕ್ಷಿಣ ಭಾರತದಲ್ಲಿ, ಅದರಲ್ಲೂ ಪ್ರಮುಖವಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಗಾಢವಾದ ಪ್ರಭಾವ ಬೀರಿದ ಸಮಾಜ ಸುಧಾರಕರಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಜನರನ್ನು ಮೌಢ್ಯ, ಮತಾಂಧತೆಯಿಂದ ಹೊರ ತಂದು ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಸಮಾಜವನ್ನು ಸುಧಾರಣೆಯ ಕಡೆಗೆ ಕೊಂಡೊಯ್ಯಲು ಜೀವನವನ್ನೇ ಮುಡಿಪಾಗಿಟ್ಟವರು ನಾರಾಯಣ ಗುರುಗಳು. 1924-25 ಶ್ರೀ ನಾರಾಯಣ ಗುರುಗಳ ಜೀವನದಲ್ಲಿ ಹಲವು ಮಹತ್ವದ ಐತಿಹಾಸಿಕ ಘಟನೆಗಳು ಘಟಿಸುತ್ತವೆ.
1924ರ ವೇಳೆಗೆ ಕೇರಳದಲ್ಲಿ ಹಿಂದೂ ಧರ್ಮದಲ್ಲಿನ ಅಸಮಾನತೆ, ಜಾತಿ ಆಧಾರಿತ ತಾರತಮ್ಯದಿಂದ ಬೇಸತ್ತ ತಳ ಸಮುದಾಯಗಳ ಜನರು ಮತಾಂತರ ಹೊಂದುತ್ತಿರುತ್ತಾರೆ. ಅದೇ ಹೊತ್ತಿನಲ್ಲಿ ನಾರಾಯಣ ಗುರುಗಳು ಸಮಾನತೆ, ಭ್ರಾತೃತ್ವ, ಧಾರ್ಮಿಕ ಸಹಿಷ್ಣುತೆ, ಸಾಮಾಜಿಕ ನ್ಯಾಯದ ತತ್ವಗಳ ಜೊತೆಯಲ್ಲೇ ವೈಜ್ಞಾನಿಕ ದೃಷ್ಟಿಕೋನದ ಮೂಲಕ ಸಮಾಜದಲ್ಲಿ ಸುಧಾರಣೆ ತರಲು ಪ್ರಬಲವಾದ ಪ್ರಯತ್ನ ನಡೆಸುತ್ತಿರುತ್ತಾರೆ. 1925ರ ಮಾರ್ಚ್ 9 ಮತ್ತು 10ರಂದು ವೈಕಂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕೇರಳದ ವೈಕಂನಲ್ಲಿ ವಾಸ್ತವ್ಯ ಹೂಡಿದ್ದ ಮಹಾತ್ಮ ಗಾಂಧೀಜಿ ಅವರನ್ನು ಭೇಟಿಮಾಡಿದ ಕೇರಳದ ಹಿಂದೂ ಮುಖಂಡರು, ನಾರಾಯಣ ಗುರುಗಳು ನಡೆಸುತ್ತಿರುವ ಸುಧಾರಣಾ ಚಳವಳಿ ಕುರಿತು ಗಾಂಧೀಜಿಯವರ ಗಮನ ಸೆಳೆಯುತ್ತಾರೆ. ತಕ್ಷಣವೇ ಶಿವಗಿರಿಗೆ ಹೊರಟ ಮಹಾತ್ಮ ಗಾಂಧೀಜಿ ಅಲ್ಲಿನ ವನಜಾಕ್ಷಿ ಮಂಟಪದಲ್ಲಿ ನಾರಾಯಣ ಗುರುಗಳನ್ನು ಭೇಟಿಮಾಡಿ, ದೀರ್ಘ ಸಂವಾದ ನಡೆಸಿದ್ದರು. ಸಹಸ್ರಾರು ಮಂದಿ ಜಮಾಯಿಸಿದ್ದರು. ಗಾಂಧೀಜಿಯವರ ಜೊತೆ ಚಕ್ರವರ್ತಿ ರಾಜಗೋಪಾಲಾಚಾರಿ, ದೇವದಾಸ್ ಗಾಂಧಿ, ಮಹದೇವ ದೇಸಾಯಿ ಮೊದಲಾದ ಮಹನೀಯರಿದ್ದರು. ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಕಾರ್ಯದರ್ಶಿ ಅಡ್ವೊಕೇಟ್ ಎನ್. ಕುಮಾರನ್ ಅವರು ಗಾಂಧೀಜಿ – ಗುರುಗಳ ನಡುವಿನ ಸಂವಾದಕ್ಕೆ ಭಾಷಾ ಸಂವಹನಕಾರರಾಗಿದ್ದರು.
ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸಮಾನತೆ, ತಾರತಮ್ಯದ ವಿರುದ್ಧದ ಹೋರಾಟ ಸೇರಿದಂತೆ ಹಲವು ವಿಷಯಗಳ ಕುರಿತು ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧೀಜಿಯವರ ನಡುವೆ ದೀರ್ಘ ವಿಚಾರ ವಿನಿಮಯ, ಸಂವಾದ ನಡೆಯಿತು. ಆ ದಿನ ಗಾಂಧೀಜಿಯವರು ಶಿವಗಿರಿಯಲ್ಲೇ ವಿಶ್ರಾಂತಿ ಪಡೆದರು. ಶ್ರೀ ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧೀಜಿಯವರ ಮಧ್ಯೆ ನಡೆದ ಐತಿಹಾಸಿಕ ಸಂವಾದಕ್ಕೆ ಈಗ 100 ವರ್ಷ. ಗುರು- ಗಾಂಧಿ ಸಂವಾದದ ಶತಮಾನೋತ್ಸವ ಆಚರಣೆಯ ವರ್ಷದಲ್ಲಿ ನಾವು ಇದ್ದೇವೆ.
ಎಲ್ಲ ಧರ್ಮದವರೂ ಸೌಹಾರ್ದದಿಂದ ಬದುಕಬೇಕು. ಇದಕ್ಕಾಗಿ ಧಾರ್ಮಿಕ ಸಹಿಷ್ಣುತೆ ಅಗತ್ಯ ಎಂಬುದು ನಾರಾಯಣ ಗುರುಗಳ ಪ್ರತಿಪಾದನೆಯ ಬಹುಮುಖ್ಯ ಅಂಶ. ಈ ಕಾರಣಕ್ಕಾಗಿಯೇ ಅವರು ತಮ್ಮ ಶಿಷ್ಯರ ನೆರವಿನಿಂದ ಆಲುವಾ ಅದ್ವೈತಾಶ್ರಮದಲ್ಲಿ 1924ರ ಮಾರ್ಚ್ 4 ಮತ್ತು 5ರಂದು ಸರ್ವ ಮತ ಸಮ್ಮೇಳನ ಆಯೋಜಿಸಿದ್ದರು. 1924 ರ ಮಾರ್ಚ್ 4,5 ಮಂಗಳವಾರ ಮತ್ತು ಬುಧವಾರ ಮಹಾ ಶಿವರಾತ್ರಿ ದಿನಗಳಲ್ಲಿ ನಾರಾಯಣ ಗುರುಗಳು ಶಿಷ್ಯರ ನೆರವಿನಿಂದ ಆಲು ವಾ ಅದ್ವೈತಾ ಶ್ರಮದಲ್ಲಿ ಸರ್ವಮತ ಸಮ್ಮೇಳನ ಏರ್ಪಡಿಸಿದರು. ಇದು ಏಷ್ಯಾದ ಪ್ರಪ್ರಥಮ ಹಾಗೂ ವಿಶ್ವದ ಎರಡನೆಯ ಸರ್ವಮತ ಸಮ್ಮೇಳನವಾಗಿತ್ತು. ಈ ಸರ್ವಮತ ಸಮ್ಮೇಳನದ ಸಭಾಂಗಣ ದ್ವಾರದಲ್ಲಿ “ಈ ಧರ್ಮಸಮ್ಮೇಳನ ವಾದಿಸಲಿಕ್ಕಲ್ಲ, ವಾದಿಸಿ ಜಯಿಸಲಿಕ್ಕೂ ಅಲ್ಲ,, ತಿಳಿಯಲು ಮತ್ತು ತಿಳಿಸಲು” ಎಂದು ಗುರುಗಳು ಬರೆಯಿಸಿದ್ದರು. ಇಂತಹದ್ದೊಂದು ಐತಿಹಾಸಿಕ ಸರ್ವ ಮತ ಸಮ್ಮೇಳನ ನಡೆದು 100 ವರ್ಷ ಕಳೆದಿದೆ.

