ಮುಖ್ಯ ಚುನಾವಣಾ ಆಯುಕ್ತರ ನೇಮಕ; ಕಾಂಗ್ರೆಸ್‌ ಆಕ್ಷೇಪ

Most read

ನವದೆಹಲಿ: ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ (ಸಿಇಸಿ) ಮತ್ತು ಹರಿಯಾಣದ ಮುಖ್ಯ ಕಾರ್ಯದರ್ಶಿ ಡಾ. ವಿವೇಕ್ ಜೋಶಿ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವುದನ್ನು  ನಮ್ಮ ಸಂವಿಧಾನದ ಆಶಯ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಾದ ಮಧ್ಯರಾತ್ರಿಯ ಆತುರದ ನಡೆ ಎಂದು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.

ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನಿರ್ಧರಿಸುವವರೆಗೆ ನೇಮಕಾತಿ ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದರು. ರಾಹುಲ್‌ ಅವರು ಪತ್ರ ಬರೆದ ಕೆಲವೇ ಗಂಟೆಗಳಲ್ಲಿ ನೂತನ ಆಯುಕ್ತರ ನೇಮಕ ಆಗಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಫೆ.19, ಬುಧವಾರ ನಡೆಯಲಿದೆ.

ಇದು ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆ. ಚುನಾವಣಾ ಪ್ರಕ್ರಿಯೆಯು ಸರಿಯಾಗಿ ನಡೆಯಬೇಕಾದರೆ, ಮುಖ್ಯ ಚುನಾವಣಾ ಆಯುಕ್ತರು ನಿಷ್ಪಕ್ಷಪಾತ ಪಾಲುದಾರರಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಪುನರುಚ್ಚರಿಸಿದೆ ಎಂದು ಕಾಂಗ್ರೆಸ್ ಸಂಸದ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.

ತಿದ್ದುಪಡಿ ಮಾಡಿದ ಕಾನೂನಿನಲ್ಲಿ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡಲಾಗಿದೆ. ಸರ್ಕಾರ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಮೊದಲು ಫೆಬ್ರವರಿ 19ರಂದು ನಡೆಯುವ ಸುಪ್ರೀಂ ಕೋರ್ಟ್‌ನ ವಿಚಾರಣೆಯವರೆಗೆ ಕಾಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂದು ತರಾತುರಿಯಲ್ಲಿ ಸಭೆ ನಡೆಸಿ ಹೊಸ ಚುನಾವಣಾ ಆಯುಕ್ತರನ್ನು ನೇಮಿಸುವ ಅವರ (ಸರ್ಕಾರದ) ನಿರ್ಧಾರವು ಸುಪ್ರೀಂ ಕೋರ್ಟ್‌ನ ಪರಿಶೀಲನೆಯನ್ನು ತಪ್ಪಿಸಲು ಮತ್ತು ಸ್ಪಷ್ಟ ಆದೇಶ ಬರುವ ಮೊದಲು ನೇಮಕಾತಿಯನ್ನು ಪೂರ್ಣಗೊಳಿಸಲು ಅವರು ಉತ್ಸುಕರಾಗಿದ್ದಾರೆಂದು ತೋರಿಸುತ್ತದೆ. ಇಂತಹ ನಡವಳಿಕೆಯು, ಆಡಳಿತ ನಡೆಸುತ್ತಿರುವ ಸರ್ಕಾರವು ಚುನಾವಣಾ ಪ್ರಕ್ರಿಯೆಯನ್ನು ಹೇಗೆ ನಾಶಪಡಿಸುತ್ತಿದೆ ಮತ್ತು ನಿಯಮಗಳನ್ನು ತನ್ನ ಲಾಭಕ್ಕಾಗಿ ಹೇಗೆ ಬದಲಾಯಿಸುತ್ತಿದೆ ಎಂಬುದರ ಬಗ್ಗೆ ಅನೇಕರು ವ್ಯಕ್ತಪಡಿಸಿರುವ ಅನುಮಾನಗಳನ್ನು ದೃಢಪಡಿಸುತ್ತದೆ. ಅದು ನಕಲಿ ಮತದಾರರ ಪಟ್ಟಿಗಳಾಗಿರಬಹುದು, ಬಿಜೆಪಿಗೆ ಅನುಕೂಲಕರವಾದ ವೇಳಾಪಟ್ಟಿಯಾಗಿರಬಹುದು ಅಥವಾ ಇವಿಎಂ ಹ್ಯಾಕಿಂಗ್ ಬಗ್ಗೆ ಕಳವಳಗಳಾಗಿರಬಹುದು. ಸರ್ಕಾರ ಮತ್ತು ಅದು ನೇಮಿಸುವ ಚುನಾವಣಾ ಆಯುಕ್ತರು ಇಂತಹ ಘಟನೆಗಳಿಂದಾಗಿ ಆಳವಾದ ಅನುಮಾನಕ್ಕೆ ಒಳಗಾಗುತ್ತಾರೆ ಎಂದು ವೇಣುಗೋಪಾಲ್ ಎಕ್ಸ್‌ನಲ್ಲಿಕಳವಳ ವ್ಯಕ್ತಪಡಿಸಿದ್ದಾರೆ.

 ವಿರೋಧ ಪಕ್ಷದ ನಾಯಕರು ಸರಿಯಾಗಿಯೇ ಹೇಳಿದಂತೆ, ಸುಪ್ರೀಂ ಕೋರ್ಟ್ ಸಂವಿಧಾನಕ್ಕೆ ಅನುಗುಣವಾಗಿ ಈ ವಿಷಯವನ್ನು ನಿರ್ಧರಿಸುವವರೆಗೆ ಈ ನಿರ್ಧಾರವನ್ನು ಪಕ್ಕಕ್ಕೆ ಇಡಬೇಕಾಗಿತ್ತುಎಂದಿದ್ದಾರೆ. ನೂತನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಲಿ ಆಯುಕ್ತ ರಾಜೀವ್ ಕುಮಾರ್ ಫೆ.18 ರಂದು ನಿವೃತ್ತರಾಗಲಿದ್ದಾರೆ.

More articles

Latest article