ಭಾರತ–ಪಾಕ್ ಕದನ ವಿರಾಮ: ಸರ್ವಪಕ್ಷ ಸಭೆ, ಸಂಸತ್‌ ಅಧಿವೇಶನಕ್ಕೆ ಕಾಂಗ್ರೆಸ್‌ ಒತ್ತಾಯ

Most read

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಕರೆಯುವಂತೆ ಕಾಂಗ್ರೆಸ್‌ ಆಗ್ರಹಪಡಿಸಿದೆ.

ಪಹಲ್ಗಾಮ್‌ ದಾಳಿ ನಡೆದ ನಂತರದ 18 ದಿನಗಳ ಬೆಳವಣಿಗೆಗಳ ಬರ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಒತ್ತಾಯಿಸಿದ್ದು, ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ತಮ್ಮ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷರು ಪ್ರಕಟಿಸಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು ತಮ್ಮ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ಕರೆದು ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯ ಈಗ ಮೊದಲಿಗಿಂತ ಹೆಚ್ಚಾಗಿದೆ ಎಂದು ಜೈರಾಮ್‌ ರಮೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಇಂದು ಸಂಜೆ 5 ಗಂಟೆಯಿಂದಲೇ ಅನ್ವಯವಾಗುವಂತೆ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಒಪ್ಪಿಕೊಂಡಿರುವುದಾಗಿ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.

ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ಇಂದು ಮಧ್ಯಾಹ್ನ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಭಾರತ ಡಿಜಿಎಂಒ ಅವರೊಂದಿಗೆ ಮಾತುಕತೆ ನಡೆಸಿದ್ದು, ಭಾರತೀಯ ಕಾಲಮಾನ 5 ಗಂಟೆಯಿಂದ ಜಾರಿಗೆ ಬರುವಂತೆ ಭೂ, ವಾಯು ಮತ್ತು ನೌಕಾದಳದ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದರು.

ಈ ಮೂಲಕ ಎರಡು ದೇಶಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಉಭಯ ದೇಶಗಳ ಡಿಜಿಎಂಒಗಳು ಮೇ 12ರಂದು ಮಧ್ಯಾಹ್ನ 12 ಗಂಟಗೆ ಮತ್ತೆ ಮಾತುಕತೆ ನಡೆಸಲಿದ್ದಾರೆ ಎಂದು  ಅವರು ತಿಳಿಸಿದ್ದಾರೆ.

More articles

Latest article