ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪೂರೈಕೆ ಮಾಡಲು ಸಂಗ್ರಹಿಸಲಾಗಿದ್ದ 28.75 ಕೋಟಿ ಮೌಲ್ಯದ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್, ಹೈಡ್ರೋಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರತ್ಯೇಕ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಾಂಜೇನಿಯಾ ಮೂಲದ ನ್ಯಾನ್ಸಿ ಮತ್ತು ನೈಜೀರಿಯಾ ಮೂಲದ ಎಮುನಲ್ ಅರೆಂಜಿ ಇಡಿಕೋ ಎಂಬ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ಮೊದಲ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ವಿದೇಶಿ ಮಹಿಳೆ ಪ್ರವಾಸಿ ವೀಸಾ ಅಡಿಯಲ್ಲಿ 2023 ರಲ್ಲಿ ಭಾರತಕ್ಕೆ ಆಗಮಿಸಿ ನಂತರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಸಂಪಿಗೆಹಳ್ಳಿಯ ಪಿ ಅಂಡ್‌ಟಿ ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.
ಈಕೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡಲು ಡ್ರಗ್ಸ್ ಸಂಗ್ರಹಿಸಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ನಂತರ ಈಕೆಯ ಮನೆಯ ಮೇಲೆ ದಾಳಿ ನಡೆಸಿ ರೂ.18.50 ಕೋಟಿ ಮೌಲ್ಯದ 9 ಕೆಜಿ 254 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ.
ಈ ಮಹಿಳೆ ನಗರದಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಲೇ ಸ್ಥಳೀಯ ಡ್ರಗ್ ಪೆಡ್ಲರ್‌ಗಳನ್ನು ಪರಿಚಯ ಮಾಡಿಕೊಂಡು ದೆಹಲಿ ಮತ್ತಿತರ ನಗರಗಳಿಂದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡನೇ ಪ್ರಕರಣದಲ್ಲಿ ವ್ಯಾಪಾರಿ ವೀಸಾ ಪಡೆದು 2021 ರಲ್ಲಿ ಭಾರತಕ್ಕೆ ಆಗಮಿಸಿ 2022 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿ ಮಾದಕವಸ್ತು ವ್ಯಾಪಾರ ಮಾಡುತ್ತಿದ್ದ ಮತ್ತೊಬ್ಬ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ ಆತನಿಂದ ರೂ.2.25 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಪ್ರತಿದಿನ ಲಾಲ್‌ಬಾಗ್ ಸೌತ್ ಗೇಟ್ ನ ಬಾಸ್ಕೆಟ್‌ಬಾಲ್ ಕೋರ್ಟ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿತ್ತು. ಲಾಲ್ ಬಾಗ್ ಬಳಿಯೇ ಈತನನ್ನು ಮಾದಕ ವಸ್ತು ಸಹಿತ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈತನ ವಿರುದ್ಧಈ ಹಿಂದೆಯೂ ಗೋವಿಂದಪುರ ಪೊಲೀಸ್ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುವಾಗ ಸಿಕ್ಕಿಬಿದ್ದು ಜೈಲಿಗೆ ಹೋಗಿ ಬಂದಿದ್ದ. ನಂತರವೂ ಇದೇ ದಂಧೆಯನ್ನು ಮುಂದುವರೆಸುತ್ತಿದ್ದಎಂದು ತಿಳಿದು ಬಂದಿದೆ.

