ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸ್ ಇಲಾಖೆಯಿಂದ ಕೇಂದ್ರ ಅಪರಾಧ ದಳಕ್ಕೆ (CCB) ವರ್ಗಾವಣೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಘಟನೆಯಲ್ಲಿನ ಗಾಯಾಳುಗಳು ಗುಣಮುಖರಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿರುವುದುದಿಲ್ಲ’ ಎಂದು ತಿಳಿಸಿದ್ದಾರೆ.
ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ ಅಧಿಕೃತವಾಗಿ ಸಿಸಿಬಿಗೆ ವರ್ಗಾವಣೆಯಾಗಿದ್ದು, ತನಿಖಾಧಿಕಾರಿಯಾಗಿ ACP ನವೀನ್ ಕುಲಕರ್ಣಿ ನೇಮಕ ಮಾಡಲಾಗಿದೆ.
ರಾಮೇಶ್ವರ ಕೆಫೆಗೆ ಬಾಂಬ್ ಇಟ್ಟು ಹೋದ ವ್ಯಕ್ತಿ ಕೆಫೆಯ ಸಿಸಿಟಿವಿ ಹೊರತು ಪಡಿಸಿ ಬೇರೆ ಎಲ್ಲಿಯೂ ಸಿಕ್ಕಿ ಬಿದ್ದಿಲ್ಲ. ರಸ್ತೆ ಬದಿಯ ಫುಟ್ ಪಾತ್ ಮೇಲೆ ನಡೆದಿದ್ದರೆ ಸಿಸಿಟಿವಿಯಲ್ಲಿ ಸೆರೆಯಾಗ್ತಿದ್ದ. ಆದ್ರೆ ಬಾಂಬ್ ಇಟ್ಟವನು ನೇರ ರಸ್ತೆ ಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಕೆಫೆ ನಂತ್ರ ನೂರು ಮೀಟರ್ ಹೋಗಿರುವ ಬಗ್ಗೆಯೂ ಸಿಸಿಟಿವಿಯಲ್ಲಿ ಸೆರೆ ಆಗಿಲ್ಲ. ನಂತ್ರ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಅನ್ನೋ ಮಾಹಿತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ನಾಲ್ವರ ಬಂಧನ
ಈ ಕುರಿತಂತೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ಈ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ನಡೆಸುತ್ತಿರುವಂತ ಸಿಸಿಬಿಯ ಅಧಿಕಾರಿಗಳು ಧಾರವಾಡ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿರೋದಾಗಿ ತಿಳಿಸಿವೆ.
ಅಂದಹಾಗೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯಿಸಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣವನ್ನು ಇಲ್ಲಿಯವರೆಗೆ ಪಡೆದ ವಿವಿಧನ್ನ ಸುಳಿವುಗಳ ಆಧಾರದ ಮೇಲೆ ಹಲವಾರು ತಂಡಗಳು ತನಿಖೆಯನ್ನು ನಡೆಸುತ್ತಿವೆ. ಪ್ರಕರಣದ ಸೂಕ್ಷ್ಮತೆ, ಭದ್ರತಾ ದೃಷ್ಠಿಯಿಂದ ಮಾಧ್ಯಮಗಳು ಊಹಾಪೋಹಗಳಲ್ಲಿ ತೊಡಗದಂತೆ, ಪೊಲೀಸರಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.