ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿ, ಪುಲ್ವಾಮಾ ದಾಳಿ ಸೇರಿದಂತೆ ಇತ್ತೀಚೆಗೆ ಸ್ಫೋಟಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಲೆಫ್ಟಿನೆಂಟ್ ಗವರ್ನರ್ ಸತ್ಯಪಾಲ್ ಮಲಿಕ್ ಅವರ ನಿವಾಸ ಮತ್ತು ಕಚೇರಿಯಲ್ಲಿ ಸಿಬಿಐ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ.
ಜಮ್ಮು ಮತ್ತು ಕಾಶ್ಮೀರದ ಕಿರು ಹೈಡ್ರೊ ಎಲೆಕ್ಟ್ರಿಕ್ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಪ್ರಕರಣದಲ್ಲಿ ಸಿಬಿಐ ಗುರುವಾರ ಬೆಳಿಗ್ಗೆ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರ ದೆಹಲಿ ನಿವಾಸ ಮತ್ತು ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದೆ.
ಸತ್ಯಪಾಲ್ ಮಲೀಕ್ 2018ರ ಆಗಸ್ಟ್ 23 ರಿಂದ 2019ರ ಆಕ್ಟೋಬರ್ 30ರವರೆಗೆ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದರು. ಸತ್ಯಪಾಲ್ ಮಲಿಕ್ ಅವರು ರಾಜ್ಯದ ರಾಜ್ಯಪಾಲರಾಗಿದ್ದಾಗ ಯೋಜನೆಗೆ ಸಂಬಂಧಿಸಿದ ಎರಡು ಕಡತಗಳನ್ನು ಅನುಮೋದಿಸಲು 300 ಕೋಟಿ ರೂಪಾಯಿ ಲಂಚದ ಆಫರ್ ನೀಡಲಾಗಿತ್ತು ಎಂದು ಆರೋಪ ಕೇಳಿ ಬಂದಿತ್ತು. ಕಳೆದ ತಿಂಗಳು ಕೂಡ ಕೇಂದ್ರೀಯ ತನಿಖಾ ದಳ (ಸಿಬಿಐ) ಈ ತನಿಖೆಯ ಭಾಗವಾಗಿ ದೆಹಲಿ ಮತ್ತು ಕಾಶ್ಮೀರದ ಸುಮಾರು 8 ಸ್ಥಳಗಳ ಮೇಲೆ ದಾಳಿ ನಡೆಸಿತ್ತು.
ಸಿಬಿಐ ಕಳೆದ ತಿಂಗಳು ನಡೆಸಿದ ದಾಳಿಯಲ್ಲಿ ಡಿಜಿಟಲ್ ಸಾಧನಗಳು, ಕಂಪ್ಯೂಟರ್‌ಗಳು, ಆಸ್ತಿ ದಾಖಲೆಗಳ ಜೊತೆಗೆ 21 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ (ಅಂದಾಜು) ನಗದು ವಶಪಡಿಸಿಕೊಂಡಿತ್ತು. ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ (ಪ್ರೈ) ಲಿಮಿಟೆಡ್‌ನ (ಸಿವಿಪಿಪಿಪಿಎಲ್) ಮಾಜಿ ಅಧ್ಯಕ್ಷ ನವೀನ್ ಕುಮಾರ್ ಚೌಧರಿ, ಮಾಜಿ ಅಧಿಕಾರಿಗಳಾದ ಎಂಎಸ್ ಬಾಬು, ಎಂಕೆ ಮಿತ್ತಲ್ ಮತ್ತು ಅರುಣ್ ಕುಮಾರ್ ಮಿಶ್ರಾ ಮತ್ತು ಪಟೇಲ್ ಇಂಜಿನಿಯರಿಂಗ್ ಲಿಮಿಟೆಡ್ ವಿರುದ್ಧ ಕೇಂದ್ರ ಸಂಸ್ಥೆ ಪ್ರಕರಣ ದಾಖಲಿಸಿದೆ. ಚೌಧರಿ ಅವರು 1994ರ ಬ್ಯಾಚ್‌ನ ಜಮ್ಮು ಮತ್ತು ಕಾಶ್ಮೀರ ಕೇಡರ್ (ಈಗ AGMUT ಕೇಡರ್) ಐಎಎಸ್ ಅಧಿಕಾರಿಯಾಗಿದ್ದಾರೆ.
ಈ ಪ್ರಕರಣವು ಕಿಶ್ತ್ವಾರ್‌ನ ಚೆನಾಬ್ ನದಿಯಲ್ಲಿ ಉದ್ದೇಶಿತ ಕಿರು ಜಲವಿದ್ಯುತ್ ಯೋಜನೆಗೆ 2019 ರಲ್ಲಿ 2200 ಕೋಟಿ ರೂಪಾಯಿ ಮೌಲ್ಯದ ಸಿವಿಲ್ ವರ್ಕ್ ಗುತ್ತಿಗೆಯನ್ನು ನೀಡುವಲ್ಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ್ದಾಗಿದೆ. ಏಪ್ರಿಲ್ 20, 2022ರಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಮನವಿ ಮೇರೆಗೆ ಈ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿದೆ. ಅಂದಿನ ಕಿರು ಜಲವಿದ್ಯುತ್ ಯೋಜನೆಯ ಚಯರ್ ಮ್ಯಾನ್, ಎಂಡಿ, ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್‌ನ (ಸಿವಿಪಿಪಿಪಿಎಲ್) ಇಬ್ಬರು ನಿರ್ದೇಶಕರು, ಖಾಸಗಿ ಕಂಪನಿ ಮತ್ತು ಇತರ ಅಪರಿಚಿತರ ವಿರುದ್ಧ ಅವ್ಯವಹಾರದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಪುಲ್ವಾಮಾ ದಾಳಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಆರ್‌ಪಿಎಫ್ ಅದಕ್ಷತೆಯೇ ಕಾರಣ. ಯೋಧರ ಪ್ರಯಾಣಕ್ಕೆ ವಿಮಾನವನ್ನು ಕೇಳಿದ್ದರೂ, ಗೃಹ ಸಚಿವಾಲಯ ನೀಡಿರಲಿಲ್ಲ. ಇದು ಸರ್ಕಾರದ್ದೇ ಲೋಪ. ಈ ಬಗ್ಗೆ ಏನೂ ಮಾತನಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ನನಗೆ ತಾಕೀತು ಮಾಡಿದ್ದರು ಎಂದು ಜಮ್ಮು- ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ರಾಜನಾಥ್ ಸಿಂಗ್ ಅವರು ಆಗ ಕೇಂದ್ರ ಗೃಹಸಚಿವರಾಗಿದ್ದರು ಎಂದು ಏಪ್ರಿಲ್ 2023ರಂದು ದೆಹಲಿಯ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಹೇಳಿದ್ದರು.