ಸಂವಿಧಾನ ವಿರೋಧಿಗಳಿಗೆ ಬೀಳೋ ದಲಿತರ ಓಟು ಬಾಬಾ ಸಾಹೇಬರನ್ನು ಅವಮಾನಿಸಿದಂತೆ

Most read

ದಲಿತ, ಹಿಂದುಳಿದ ಸಮುದಾಯವನ್ನು ಅನ್ಯ ಧರ್ಮೀಯರ ವಿರುದ್ಧ ಛೂ ಬಿಟ್ಟು  ಅವರನ್ನ ಕೋರ್ಟು ಕಚೇರಿ ಜೈಲು ಅಲೆದಾಡಿಸಿ ದಾರಿದ್ರ್ಯಕ್ಕೆ ತಳ್ಳುವುದರೊಂದಿಗೆ ಮುಂದೆ ಪ್ರತಿಸ್ಪರ್ಧಿಯಾಗುವಂತಹ ಅನ್ಯಧರ್ಮೀಯರನ್ನು ಹಿಡಿತದಲ್ಲಿಟ್ಟುಕೊಳ್ಳೋ ಬ್ರಾಹ್ಮಣ್ಯವಾದಿಗಳ ತಂತ್ರವನ್ನು ಅರಿತುಕೊಂಡರೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲ ಉದ್ದೇಶ ಅರ್ಥವಾದೀತು. ಇದನ್ನರಿತು ಮತ ಚಲಾಯಿಸಬೇಕು- ಶಂಕರ್‌ ಸೂರ್ನಳ್ಳಿ.

ಸ್ವಾತಂತ್ರ್ಯಾನಂತರದ ಈ ದೇಶದಲ್ಲಿ ದಲಿತ ಹಾಗು ಹಿಂದುಳಿದ ಸಮುದಾಯದ ಲೆಕ್ಕವಿಲ್ಲದಷ್ಟು ಮಂದಿ ಎಲ್ಲಾ ಕ್ಶೇತ್ರಗಳಲ್ಲೂ ಅಧಿಕಾರಿಗಳಾಗಿ ಮೆರೆದವರಿದ್ದಾರೆ. ದೊಡ್ಡ ಮಟ್ಟದ ರಾಜಕಾರಣಿಗಳಾಗಿ ಮಿಂಚಿದವರಿದ್ದಾರೆ. ಸಮಾಜದಲ್ಲಿ ಶಾಲೆಗೂ ಪ್ರವೇಶವಿರದಿದ್ದ ತೀರಾ ನಿಕೃಷ್ಟವಾಗಿ ಪರಿಗಣಿಸಲ್ಪಟ್ಟಿದ್ದ ದಲಿತ ಸಮುದಾಯದಲ್ಲಿ ಶಿಕ್ಷಕರಿಂದ ಹಿಡಿದು ರಾಷ್ಟ್ರಪತಿಯ ಸ್ಥಾನದವರೆಗೆ ಹೋಗಿ ಸಾಧನೆ ಗೈದವರಿದ್ದಾರೆ. ಈತನಕ ಪ್ರಭುತ್ವವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಸಂಪ್ರದಾಯವಾದಿಗಳ ಆಡಂಬೋಲದ ಭಾರತದಂತಹ ಈ ನೆಲದಲ್ಲಿ ಇದೆಲ್ಲ ಸಾಧ್ಯವಾದದ್ದು ಆಕಸ್ಮಿಕವಾಗಿಯೇನೂ ಅಲ್ಲ. ಅದು ಕೇವಲ ನಮ್ಮ ಸಂವಿಧಾನದಿಂದ. ಸಮಾನತಾ ನೆಲೆಗಟ್ಟಿನಲ್ಲಿ ಮೂಡಿಬಂದ ಸಂವಿಧಾನ ಕೊಟ್ಟಂತಹ ಹಕ್ಕು ಕರ್ತವ್ಯಗಳ ಕಾನೂನು ನ್ಯಾಯ ಪಾಲನೆಯ ತತ್ವದಡಿಯಿಂದಲೇ ಇದೆಲ್ಲಾ ಖಂಡಿತಾ ಸಾಧ್ಯವಾಗುವಂತಾಯಿತು.

ದ್ರೌಪದಿ ಮುರ್ಮು

ಫ್ಯಾಸಿಸ್ಟ್ ಮನಸ್ಥಿತಿಯ ಕನ್ನಡ ನಾಡಿನ ಮಾಜಿ ಸಂಸದರೊಬ್ಬರು ನೇರವಾಗಿಯೇ ನಾವು ಬಂದಿರೋದೇ ಸಂವಿಧಾನ ಬದಲಾವಣೆಗೋಸ್ಕರವಾಗಿ ಎಂದು ಬಹಿರಂಗವಾಗಿಯೇ ಸಭೆಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಇದೇ ಕಾರಣಕ್ಕಲ್ಲದಿದ್ದರೂ (ಅವರ ಮೂಲ ಅಜೆಂಡಾವೇ ಇದು ಹಾಗಾಗಿ) ಮತ್ಯಾವುದೋ ಆಂತರಿಕ ಸರ್ವೆ ಸಮೀಕ್ಷೆಗಳ ಕಾರಣಕ್ಕೆ ಅವರಿಗೆ ಈ ಸಲ ಟಿಕೆಟ್ ನಿರಾಕರಿಸಲ್ಪಟ್ಟಿದ್ದರೂ ಮೊನ್ನೆ ಮೊನ್ನೆ ಉತ್ತರ ಭಾರತದ ಇದೇ ಪಕ್ಷದ ಮಹಿಳಾ ಅಭ್ಯರ್ಥಿಯೊಬ್ಬರು ’ನಮಗೆ ಬಹುಮತ ಕೊಡಿ ನಮ್ಮ ಸಂವಿಧಾನ ಬದಲಾವಣಾ ಉದ್ದೇಶಕ್ಕೆ ಇದು ತುಂಬಾ ಅವಶ್ಯ” ಎಂದು ಪ್ರಚಾರ ಭಾಷಣ ಮಾಡಿದ್ದರು. ವಿಚಿತ್ರವೆಂದರೆ ಮಹಿಳೆಯರಿಗೆ ಗೌರವ ಪೂರ್ಣ ಸ್ವಾಭಿಮಾನದ ಬದುಕು ನೀಡಲು ಮೂಲವೆನಿಸಿದ್ದೇ ಈ ಸಂವಿಧಾನ. ಹೀಗಿದ್ದೂ ಮಹಿಳೆಯೊಬ್ಬರ ಬಾಯಿಯಿಂದ ಇಂತಹ ಮಾತು..!?

ಸರಿ, ಇಲ್ಲಿ ಇವರು ಹೇಳುತ್ತಿರುವ ಮಾತು ಸಂವಿಧಾನ ಬದಲಾವಣೆಯೇ ಹೊರತು ಸಂವಿಧಾನ ಇಲ್ಲವಾಗಿಸುವ ವಿಚಾರವಲ್ಲ. ಇಲ್ಲಿ ಬದಲಾವಣೆ ಅಂದರೆ ಆ ಬದಲಿಯಾಗಿ ಬರಲಿರುವ ಹೊಸ ಸಂವಿಧಾನವೊಂದು ಇರಲೇಬೇಕಲ್ಲ. ಈ ಕಲ್ಪನೆ ಇಟ್ಟುಕೊಳ್ಳದೇ ಇವರ ಬಾಯಿಂದ ಇಂತಹ ಮಾತು ಬರಲು ಖಂಡಿತಾ ಸಾಧ್ಯವಿಲ್ಲ. ಆ ಬದಲಿ ಸಂವಿಧಾನವಾದ್ರೂ ಯಾವುದು? ಅದೇನೂ ದೊಡ್ಡ ಒಗಟೇನಲ್ಲ. ಅವರು ಆರಾಧಿಸಿಕೊಂಡು ಬರುವ ಮನುಧರ್ಮ ಶಾಸ್ತ್ರವೇ ಈ ಬದಲಿ ಸಂವಿಧಾನ. ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಅನೇಕ ನಾಯಕರುಗಳು ಈವಾಗಲೇ ಸಾಕಷ್ಟು ಬಾರಿ ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ ಇದರಲ್ಲಿ ಅಂತಾ ರಹಸ್ಯವೇನೂ ಇಲ್ಲ.

ಮನುಧರ್ಮ ಶಾಸ್ತ್ರ ಈ ಕಾಲಕ್ಕೆ ನೇರವಾಗಿ ಹೊಂದುವಂತಿರದಿದ್ದರೂ ಅದನ್ನು ಈ ಕಾಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವುದು ಸನಾತನವಾದಿಗಳಿಗೆ ಕಷ್ಟವೇನಲ್ಲ. ಮುಖ್ಯವಾಗಿ ಅದರಲ್ಲಿ ಪ್ರಸ್ತಾಪಿತವಾದ ವರ್ಣಾಶ್ರಮ ಧರ್ಮ, ಸ್ತ್ರೀ ನಿರ್ಬಂಧಗಳು ಮತ್ತು ಬ್ರಾಹ್ಮಣ್ಯ ಶ್ರೇಷ್ಟತೆಯನ್ನು ಹಂತ ಹಂತವಾಗಿ  ಸಮಾಜದಲ್ಲಿ ಜಾರಿಗೊಳಿಸುತ್ತಾ ಗಟ್ಟಿಗೊಳಿಸಿಕೊಂಡರೆ ಸ್ವಾತಂತ್ರ್ಯ ಪೂರ್ವದ ರಾಜರು, ಸುಲ್ತಾನರು, ದೊರೆಗಳ ಕಾಲದ ಬ್ರಾಹ್ಮಣ್ಯದ ಸುವರ್ಣ ಯುಗವನ್ನು ಮರಳಿ ಪ್ರತಿಷ್ಠಾಪಿಸುವ ಕನಸು ಈ ಮಂದಿಯದ್ದು.

ಸಾಂದರ್ಭಿಕ ಚಿತ್ರ- ಮನು ಧರ್ಮ ಶಾಸ್ತ್ರ

ಇದೇ ಪಕ್ಷದ ಹಿಂದಿ ಪ್ರದೇಶದ ಮಹಿಳಾ ರಾಜಕಾರಣಿಯೊಬ್ಬರು ಹಿಂದೊಮ್ಮೆ ಸಭೆಯಲ್ಲಿ ಅಣಿಮುತ್ತೊಂದನ್ನ ಉದುರಿಸಿದ್ದರು “ನಾವು ಚಪ್ಪಲು ಇಡುವ ಜಾಗದಲ್ಲಿ ದೈನೇಸಿಯಾಗಿ ನಿಲ್ಲುವಂತವರೆಲ್ಲ ಇಂದು ನಮ್ಮನ್ನು ಆಳುವಂತಾಗಿದೆ. ಅಧಿಕಾರಿಗಳಾಗಿ ಆಜ್ಞೆ ಹೊರಡಿಸುವಂತಾಗಿದೆ” ಎಂದು. ಆ ಮಹಿಳೆಯ ಮಾತನ್ನು ನಾನು ಗೌರವಿಸುತ್ತೇನೆ. ಯಾಕೆಂದರೆ, ಪಾರಂಪರಿಕವಾಗಿ ಬೆವರು ಹರಿಸದೇ ಬಿಟ್ಟಿ ಸೊತ್ತನ್ನು ಅನುಭವಿಸಿಕೊಂಡು ಬರುತ್ತಿದ್ದ ಅವರ ನೋವು ಈಗಿನ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಸಂವಿಧಾನಗಳ ಕಾರಣ ಪಲ್ಲಟ ಗೊಂಡಿದ್ದರ ನೋವು ಪಾಪ ಅವರಿಗೇ ಗೊತ್ತು. ಇನ್ನೊಂದು ಈ ಮಹಿಳೆ ತಮ್ಮ ಮನಸ್ಸಿನ ಮಾತನ್ನ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಬಹುತೇಕರು ಒಳಗೊಳಗೇ ಕುದಿಯುತ್ತಾ ಸಂವಿಧಾನದ ವಿರುದ್ಧ ಇದೇ ಕಾರಣಕ್ಕೆ ಕತ್ತಿ ಮಸೆಯುತ್ತಿರುವುದು ಗುಟ್ಟೇನಲ್ಲ.

ದಲಿತರು ಮತ್ತು ಹಿಂದುಳಿದ ಜಾತಿಗಳ ಜನರು ಪೀಳಿಗೆಯಿಂದ ಪೀಳಿಗೆಗೆ ಅಭಿವೃದ್ಧಿ ಹೊಂದುತ್ತಿದ್ದಾರೆ ಮತ್ತು ಸ್ವಾಭಿಮಾನದ ಬದುಕನ್ನ ಕಟ್ಟಿಕೊಳ್ಳುತ್ತಿದ್ದಾರೆ. ಈ ಮೂಲಕ ಬ್ರಾಹ್ಮಣ್ಯಕ್ಕೆ ಪ್ರತಿಸ್ಪರ್ಧಿಯಾಗಿ ಶೂದ್ರವರ್ಗ ಮಿಂಚುತ್ತಿರುವುದು ಅನೇಕರ ಕಣ್ಣು ಕುಕ್ಕುವಂತೆ ಮಾಡಿದ್ದರಲ್ಲಿ ಅಚ್ಚರಿಯೇನಿಲ್ಲ. ನೂರಕ್ಕೆ ನೂರು ಎಲ್ಲಾ ಬ್ರಾಹ್ಮಣರು ಈ ಭಾವನೆಯನ್ನು ಹೊಂದಿದ್ದಾರೆನ್ನುವುದು ಮೂರ್ಖತನದ ಮಾತು. ಆದರೆ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಲು ಪರ್ಸೆಂಟೇಜ್ ಯಾವತ್ತೂ ಮುಖ್ಯವಲ್ಲ. ಬೆರಳೆಣಿಕೆಯ ಮಂದಿಯೇ ಇದಕ್ಕೆ ಸಾಕಲ್ಲವೆ?

ಇದನ್ನೂ ಓದಿ- ಭವಿಷ್ಯದ ದಲಿತ ವಿಜ್ಞಾನಿಯನ್ನು ಬಲಿ ಪಡೆದ ಬಿಜೆಪಿ

ಭಾರತೀಯ ಸಮಾಜದಲ್ಲಿ ಶತಮಾನದಿಂದ ಇಂದಿನವರೆಗೆ ಒಂದು ತಪ್ಪು ಅಭಿಪ್ರಾಯ (ಇಂದು ಇದೇ ಚುನಾವಣೆಯ ಪ್ರಮುಖ ಅಜೆಂಡಾಗಳಿಗೆ ಮೂಲಧಾತು ಎನಿಸಿದೆ) ಬಿಂದಾಸ್ ಆಗಿ ಚಾಲ್ತಿಯಲ್ಲಿದೆ. ಅದೆಂದರೆ ಸನಾತನವಾದ ಮತ್ತು ಮುಸಲ್ಮಾನರು ಪರಸ್ಪರ ಬದ್ಧ ದ್ವೇಷಿಗಳು ಎಂದು.  ಗೋಹತ್ಯೆ, ಭಯೋತ್ಪಾದನೆ, ಲವ್ ಜಿಹಾದ್ ಎಂಬ ಕಹಾನಿಗಳ ಮೂಲಕ ಮುಸಲ್ಮಾನರ ವಿರುದ್ಧ ಕೆಳವರ್ಗವನ್ನು ಎತ್ತಿಕಟ್ಟಿ ಅದನ್ನು ಮತಗಳನ್ನಾಗಿಸುವ ಸಂಚು ಗೊತ್ತಿದ್ದದ್ದೆ. ಇದನ್ನೇ ಕ್ರಿಶ್ಚಿಯನ್ನರ ವಿಚಾರದಲ್ಲಿ ಮತಾಂತರದ ನೆಪವೊಡ್ಡಿ ಹುಯಿಲೆಬ್ಬಿಸಲಾಗುತ್ತಿದೆ.  ನಿಜಕ್ಕೂ ಮುಸಲ್ಮಾನರು ಸನಾತನವಾದಿಗಳ ದ್ವೇಷಿಗಳೆಂಬುದು ನಿಜವೇ? ನಿಜವಲ್ಲದಿದ್ದರೆ ಸನಾತನವಾದಿಗಳು ನಿಜವಾಗಿ ದ್ವೇಷಿಸುವುದು ಯಾರನ್ನು?

ಡಾ. ಅಂಬೇಡ್ಕರ್

ಮುಸಲ್ಮಾನ ಸುಲ್ತಾನರ, ನಿಜಾಮರುಗಳ, ಬಾದ್ ಷಾಹ್ ಗಳ ಆಸ್ಥಾನದಲ್ಲಿ ಈ ಬ್ರಾಹ್ಮಣ್ಯವಾದಿಗಳ ಹುಕುಮ್ಮೇ ಬಹುತೇಕ ನಡೆಯುತ್ತಿತ್ತು. ಅವರಿಗೆ ಇನ್ನಿಲ್ಲದ ಮರ್ಯಾದೆಯೂ ಇತ್ತು. ಅದೇ ರೀತಿ, ಇಲ್ಲಿನ ಭಾಷೆ ಸಂಸ್ಕೃತಿಗಳ ಪರಿಚಯವೇ ಇರದ ಕ್ರಿಶ್ಚಿಯನ್ ಬ್ರಿಟಿಷರ ದರ್ಬಾರಿನಲ್ಲಿ ದಿವಾನರೂ, ಶಾನುಭೋಗರೂ, ಗ್ರಾಮಕರಣಿಕರಾಗಿ ಆಡಳಿತ ಮೇಲುಸ್ತುವಾರಿಯನ್ನು ಹಿಡಿತದಲ್ಲಿಟ್ಟು ಕೊಂಡವರು ಇವರುಗಳೇ ಆಗಿದ್ದರು. ಸಾಬರಿಂದಾಗಲೀ ಕಿರಿಸ್ತಾನರಿಂದಾಗಲೀ ನೇರ ಅಪಾಯಗಳನ್ನು ಇವರು ಎದುರಿಸಿಯೇ ಇರಲಿಲ್ಲ. (ಹಿಂದೂ ಸಮ್ರಾಟ ಎಂದು ಇವರುಗಳು ಬಿಂಬಿಸುವ ಶಿವಾಜಿ ಮಹಾರಾಜರ ಸೈನ್ಯದ ಪ್ರಮುಖ ಹುದ್ದೆಯಲ್ಲಿ ಮುಸಲ್ಮಾನರೇ ಇದ್ದಿದ್ದರು. ಮುಸಲ್ಮಾನ ಮೊಗಲ್ ದೊರೆಯಿಂದ ವೈರಿ ಸ್ವಧರ್ಮೀಯನೆಂದು ಸಂಚು ಹೂಡದೇ ಶಿವಾಜಿಯನ್ನು ರಕ್ಷಿಸಿದಾತನೂ ಮುಸಲ್ಮಾನನೇ) ಮುಸಲ್ಮಾನ ದೊರೆಗಳನ್ನ, ಬ್ರಿಟಿಷ್ ಲಾರ್ಡ್ ಗಳನ್ನ ಅವರ ಆಡಳಿತವನ್ನ ಇವರುಗಳು ಹೊಗಳಿಕೊಂಡೇ ಬಂದ ಸಂಗತಿ ಇತಿಹಾಸದಲ್ಲೇ ದಾಖಲಾಗಿವೆ. ಕಾಲದ ವ್ಯತ್ಯಾಸಗಳಿಂದ ವಿದ್ಯೆಯೇ ಮೊದಲಾದ ಸಾಮಾಜಿಕ ಸೌಲಭ್ಯಗಳ ಕಾರಣದಿಂದ ಈ ತನಕ ತಮಗೆ ಪೂರಕವಾಗಿದ್ದ ವರ್ಣಾಶ್ರಮ ತತ್ವವನ್ನು ಮೀರಿ ನಡೆಯುತ್ತಿರುವ ಶೂದ್ರವರ್ಗ ಮತ್ತು ಸ್ತ್ರೀ ಸಮುದಾಯದ ಮೇಲೆ ಇವರ ಅಸಹನೆಯಿತ್ತೇ ಹೊರತು ಅನ್ಯ ಮತೀಯರ ವಿರುದ್ಧವಲ್ಲ.

ಇದನ್ನೂ ಓದಿ- ದಲಿತರೇಕೆ ಬಿಜೆಪಿ-ಮೋದಿಗೆ ಓಟು ಹಾಕುವುದಿಲ್ಲ?

ಶಂಕರ್ ಸೂರ್ನಳ್ಳಿ

ಲೇಖಕರು

More articles

Latest article