ಲಿಂಗಾಯತರು “ಲಿಂಗಾಯತ” ಎಂದೇ ಬರೆಸುವಂತೆ ತೋಂಟದ ಸಿದ್ಧರಾಮ ಸ್ವಾಮೀಜಿ ಮನವಿ

Most read

ಗದಗ: ರಾಜ್ಯ ಸರ್ಕಾರ ಕೈಗೊಂಡಿರುವ ಹಿಂದುಳಿದ ವರ್ಗಗಳ ಆಯೋಗದ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತರು ಲಿಂಗಾಯತ ಧರ್ಮ ಎಂದೇ ಬರೆಸಬೇಕು ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.

ಸಂವಿಧಾನದ ಪ್ರಕಾರ ದೇಶದಲ್ಲಿ ಪ್ರಚಲಿತದಲ್ಲಿರುವ ಎಲ್ಲ ಧರ್ಮಗಳನ್ನು ಮಾನ್ಯ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಇದೇ ಕಾರಣಕ್ಕೆ ಜಾತಿಗಣತಿ ಅರ್ಜಿಯ ಎಂಟನೇ ಕಾಲಂನ 11ನೇ ಉಪಕಾಲಂನಲ್ಲಿ ‘ಇತರೆ’ ಎಂದು ಪ್ರತ್ಯೇಕ ಕಾಲಂ ಮೀಸಲಾಗಿರಿಸಿದೆ. ಇಲ್ಲಿ ‘ಲಿಂಗಾಯತ ಧರ್ಮ’ ಎಂದು ಬರೆಸಬೇಕು. ಹಾಗೆ ಬರೆದುಕೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು  ಎಂದು ತಿಳಿಸಿದ್ದಾರೆ.

ಜಾತಿ ಕಾಲಂನಲ್ಲಿ ಲಿಂಗಾಯತದ ಬೇರೆ ಬೇರೆ ಪಂಗಡದವರು ತಮ್ಮ ತಮ್ಮ ಜಾತಿಗಳ ಹೆಸರನ್ನು ಲಿಂಗಾಯತ ಪಂಚಮಸಾಲಿ, ಲಿಂಗಾಯತ ಕುಡುವಕ್ಕಲಿಗ, ಲಿಂಗಾಯತ ಬಣಜಿಗ, ಲಿಂಗಾಯತ ರೆಡ್ಡಿ ಇತ್ಯಾದಿ ಬರೆಸಬೇಕು.  ಇದರಿಂದ ಲಿಂಗಾಯತರ ಜನಸಂಖ್ಯೆಯನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಸಣ್ಣ ಸಣ್ಣ ಸಮುದಾಯಗಳು ಲಿಂಗಾಯತ ಧರ್ಮದಿಂದ ದೂರ ಸರಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜಾತಿಗಣತಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಅಖಂಡ ಲಿಂಗಾಯತ ಸಮಾಜವನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. ಇದಕ್ಕಾಗಿ ಲಿಂಗಾಯತರು ಒಗ್ಗಟ್ಟು ಪ್ರದರ್ಶಿಸಬೇಕು ಎಂದೂ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.

More articles

Latest article