ಬೆಂಗಳೂರು: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಕುರಿತು ಚರ್ಚೆ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ಜಾತಿ ಜನಗಣತಿ ವರದಿಯನ್ನು ಸರ್ಕಾರ ಸ್ವೀಕಾರ ಮಾಡಿದೆ. ಆದರೆ, ಮಾಧ್ಯಮಗಳಲ್ಲಿ ಬರುತ್ತಿರುವ ಅಂಕಿ ಅಂಶಗಳು ಸುಳ್ಳು. ಆ ವರದಿಯನ್ನು ಖಜಾನೆಯಲ್ಲೇ ಇಟ್ಟಿದ್ದೇವೆ. ಅದರ ಬಿಡುಗಡೆಗೂ ಮುನ್ನವೇ ವಿರೋಧ ಬೇಡ. ಗಣತಿಗಾಗಿ 166 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಆ ಗಣತಿಯ ಬಿಡುಗಡೆಗೆ ಯಾವ ಮತ್ತು ಯಾರ ಭಯ, ಆತಂಕವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜನವರಿ 27ರಂದು ವಿಧಾನಸೌಧದ ಆವರಣದಲ್ಲಿ ನಿರ್ಮಿಸಲಾದ ಭುವನೇಶ್ವರಿ ದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅನಾವರಣ ಮಾಡಲಿದ್ದಾರೆ. ಈ ಮೂರ್ತಿ ಪ್ರತಿಷ್ಠಾಪನೆ ಕನ್ನಡಿಗರ ಆಶಯ ಆಗಿತ್ತು, ಅದು ಈಡೇರಿದೆ ಎಂದು ಹೇಳಿದ್ದಾರೆ.
ಕಂಚಿನ ಭುವನೇಶ್ವರಿ ದೇವಿ ಪ್ರತಿಮೆ 25 ಅಡಿ ಎತ್ತರವಿದೆ. ಮೂರ್ತಿಯ ಹಿಂಭಾಗದಲ್ಲಿ 30 ಅಡಿ ಎತ್ತರದ ಕರ್ನಾಟಕ ಭೂಪಟವಿದೆ. ಎರಡೂ ಸೇರಿದರೆ 41 ಅಡಿಗಳಷ್ಟಾಗುತ್ತದೆ. ಬೆಂಗಳೂರಿನ ನಾಲ್ಕು ದಿಕ್ಕುಗಳಿಂದ ರಥಗಳು ಬರಲಿದೆ. ಆಯಾ ಭಾಗದ ಶಾಸಕರು ರಥ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ಪತ್ರಿಕೆ ಕೊಟ್ಟಿದ್ದೇವೆ. ಆಟೋ ಮತ್ತು ಕನ್ನಡಪರ ಸಂಘಟನೆಗಳಿಗೂ ಆಹ್ವಾನ ಕೊಟ್ಟಿದ್ದೇವೆ. 12 ಗಂಟೆಯಿಂದ ರಥದ ಮೆರವಣಿಗೆ ಕಾರ್ಯ ನಡೆಯಲಿದೆ. ಕಂಚಿನ ಪ್ರತಿಮೆಗೆ ಹೋಲುವ ಬಾವುಟ ತಯಾರು ಮಾಡಲು ಚಿಂತನೆ ಇದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಶ್ರೀರಾಮುಲು ಅವರನ್ನು ಕಾಂಗ್ರೆಸ್ಗೆ ಕರೆ ತರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಬಿಜೆಪಿಯಲ್ಲಿ ಹಿಂದೆ ಮೂರು ಬಾಗಿಲಿತ್ತು, ಈಗ 6 ಬಾಗಿಲಾಗಿದೆ. ಶ್ರೀರಾಮುಲು ಅವರನ್ನು ಹೊರಗೆ ಹಾಕಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ಅದನ್ನು ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡ್ತಾರೆ. ಜನಾರ್ದನ ರೆಡ್ಡಿ ಸುಳ್ಳು ಹೇಳುತ್ತಿದ್ದಾರೆ. ಅವರು ಸುಳ್ಳಿನ ಮನೆಯನ್ನೇ ಕಟ್ಟುತ್ತಿದ್ದಾರೆ ಎಂದು ನಾನು ಹಲವು ಬಾರಿ ಹೇಳಿದ್ದೆ. ಈಗ ಸ್ವತಃ ಶ್ರೀರಾಮುಲು ಅವರೇ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.