ಎಲ್ಲಾ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಸಚಿವ ಕೆ.ಜೆ.ಜಾರ್ಜ್

Most read

ಬೆಂಗಳೂರು: ಇಂಧನ ಇಲಾಖೆ ಸಿಬ್ಬಂದಿಗೆ 5 ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವ ಸೌಲಭ್ಯವನ್ನು ಎಲ್ಲಾ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ) ಗಳಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚಿಸಿದ್ದಾರೆ. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರ್‌ಗಳ ಸಂಘದ ವಜ್ರಮಹೋತ್ಸವ ಸಂವಹನ ಉಪನ್ಯಾಸ ಹಾಗೂ ಸಂಘದ 2025ನೇ ಸಾಲಿನ ತಾಂತ್ರಿಕ ದಿನಚರಿ ಬಿಡುಗಡೆ ಸಮಾರಂಭ ಉದ್ಘಾಟಿಸಿ, ತಾಂತ್ರಿಕ ದಿನಚರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಈಗಾಗಲೇ ಚಾಮುಂಡೇಶ್ವರಿ ವಿದ್ಯುತ್ ಕಂಪನಿ (ಸೆಸ್ಕ್) ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ. ಇತರೆ ಎಸ್ಕಾಂಗಳಲ್ಲೂ ಶೀಘ್ರವೇ ಈ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಕಾರ್ಯಕ್ರಮದಲ್ಲಿ ಹಾಜರಿದ್ದ ಎಸ್ಕಾಂಗಳ ಅಧ್ಯಕ್ಷರೂ ಆಗಿರುವ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಅವರಿಗೆ ಸೂಚನೆ ನೀಡಿದರು. ಇಲಾಖೆಯಲ್ಲಿ ಹಿರಿತನದ ಆಧಾರದ ಮೇಲೆ ಬಡ್ತಿ, ಹುದ್ದೆಗಳ ಭರ್ತಿ, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಇಲಾಖೆ ಪ್ರಗತಿ ಜತೆಗೆ ಜನರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಶ್ರಮಿಸುತ್ತಿರುವ ಇಂಧನ ಇಲಾಖೆಯ ಅಧಿಕಾರಿಗಳು, ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ”, ಎಂದು ಹೇಳಿದರು.

ರೈತರಿಗೆ ಸೌರ ಪಂಪ್ ಸೆಟ್ ಗಳನ್ನು ಒದಗಿಸುವ ಕುಸುಮ್-ಬಿ ಯೋಜನೆ ಜತೆಗೆ ಫೀಡರ್ ಮಟ್ಟದ ಸೌರೀಕರಣ ಮೂಲಕ ರೈತರ ಪಂಪ್‍ಸೆಟ್‍ಗಳಿಗೆ ಸೌರ ಶಕ್ತಿಯಿಂದ ವಿದ್ಯುತ್ ಸರಬರಾಜು ಮಾಡುವ ಕುಸುಮ್- ಸಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದ ಯೋಜನೆ ಪ್ರಗತಿಯಲ್ಲಿದ್ದು, 2ನೇ ಹಂತದಲ್ಲಿ ಫೀಡರ್ ಮಟ್ಟದ ಸೌರೀಕರಣ ಮೂಲಕ 1200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ರೈತರಿಗೆ ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದರೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಬಹುತೇಕ ಬಗೆಹರಿಯುತ್ತದೆ. ಆದ್ದರಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಹೆಚ್ಚು ಆದ್ಯತೆ ನೀಡಬೇಕು”, ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಮನವಿ ಮಾಡಿದರು.

“ವಿದ್ಯುತ್ ಉತ್ಪಾದನೆ ಜತೆಗೆ ಅದನ್ನು ಶೇಖರಣೆ ಮಾಡಿ ಅಗತ್ಯ ಸಂದರ್ಭದಲ್ಲಿ ಜನರಿಗೆ ಒದಗಿಸಲು ನಮ್ಮ ಸರ್ಕಾರ ಯೋಜನೆ ರೂಪಿಸಿದೆ. ಅದರಂತೆ ಶರಾವತಿಯಲ್ಲಿ 2000 ಮೆಗಾವ್ಯಾಟ್ ಮತ್ತು ವಾರಾಹಿಯಲ್ಲಿ 1500 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಿದಂತೆ ಶೇಖರಣಾ ವ್ಯವಸ್ಥೆಯ ಅಗತ್ಯವಿದ್ದು, ಇದಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಲಿದೆ”, ಎಂದು ತಿಳಿಸಿದರು.

ಸೆಸ್ಕ್ ಅಧ್ಯಕ್ಷ ಎ.ರಮೇಶ್ ಬಂಡಿಸಿದ್ದೇಗೌಡ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮಪೀರ್ ಎಸ್. ಖಾದ್ರಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಪಿಸಿಕೆಎಲ್ ವ್ಯವಸ್ಥಾಪಕ ನಿರ್ದೇಶಕ ಲೋಖಂಡೆ ಸ್ನೇಹಲ್ ಸುಧಾಕರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಶೀಲಾ ಸಿ., ಕೆಇಬಿ ಎಂಜಿನಿಯರ್ ಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

More articles

Latest article