ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆ ವಾಪಸ್; ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅಭಿನಂದನೆ

Most read

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ  ಪ್ರತಿಮೆ ಅನಾವರಣ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿರುವ ಮುಖ್ಯಮಂತ್ರಿ  ಸಿದ್ಧರಾಮಯ್ಯ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಅಪಾರವಾದ ಕನ್ನಡಾಭಿಮಾನದಿಂದ ‘ಕನ್ನಡ ರಾಮಯ್ಯ’ ಎನ್ನಿಸಿಕೊಂಡವರು. ಕನ್ನಡ ನಾಮಫಲಕ ಹೋರಾಟದ ಸಂದರ್ಭದಲ್ಲಿ ನಾನು ಹದಿನಾರು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದೆ. ನನ್ನ ಮೇಲೆ ಒಂದೇ ದಿನ ಹದಿನಾರು ಪ್ರಕರಣಗಳನ್ನು ದಾಖಲಿಸಲಾಯಿತು. ಆದರೆ ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಸಿದ್ಧರಾಮಯ್ಯನವರು ಕಾಯ್ದೆಯನ್ನು ರೂಪಿಸಿ ಜಾರಿಮಾಡಿದ್ದು ನಮ್ಮ ನೋವನ್ನು ಮರೆಯಿಸಿತು‌‌. ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ತಡೆಯುವ ನಮ್ಮ ಹೋರಾಟ ಯಶಸ್ವಿಯಾಗಿದ್ದೂ ಸಹ ಸಿದ್ಧರಾಮಯ್ಯನವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಎಂದು ನೆನಪು ಮಾಡಿಕೊಂಡಿದ್ದಾರೆ. ಇಂತಹ ಅಭೂತಪೂರ್ವ ನಿರ್ಣಯ ಕೈಗೊಂಡಿದ್ದಕ್ಕಾಗಿ ಎಲ್ಲ ಕನ್ನಡಪರ ಹೋರಾಟಗಾರರ ಪರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ,, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನಾರಾಯಣಗೌಡರು ತಿಳಿಸಿದ್ದಾರೆ.

ಕನ್ನಡನಾಡು ಸಿದ್ಧರಾಮಯ್ಯನವರಿಂದ ಇನ್ನಷ್ಟು ನಿರೀಕ್ಷಿಸುತ್ತಿದೆ. ಮತ್ತಷ್ಟು ಕನ್ನಡದ ಕೆಲಸಗಳು ಅವರಿಂದ ಆಗಬೇಕಿದೆ. ಕನ್ನಡಿಗರ ಬದುಕನ್ನು ಹೊರ ರಾಜ್ಯದಿಂದ ಬಂದವರು ಕಿತ್ತುಕೊಳ್ಳುತ್ತಿದ್ದಾರೆ. ಕರ್ನಾಟಕದ ಉದ್ಯಮಗಳು, ಉದ್ಯೋಗಗಳು ಕನ್ನಡಿಗರ ಕೈ ತಪ್ಪುತ್ತಿವೆ. ಈ ಸಮಸ್ಯೆಗಳನ್ನು ಸಮರ್ಥವಾಗಿ ನಿಗ್ರಹಿಸಲು ಸಮರ್ಪಕವಾದ ಕಾಯ್ದೆ ರೂಪಿಸಿಬೇಕಿದೆ. ಬಹುಶಃ ಸಿದ್ಧರಾಮಯ್ಯ ಅವರು ಈ ಕಾರ್ಯವನ್ನು ಈಗ ಮಾಡದಿದ್ದರೆ ಮುಂದೆ ಇನ್ನ್ಯಾರೋ ಬಂದು ಇದನ್ನೆಲ್ಲ ಮಾಡುವರೆಂಬ ನಂಬಿಕೆ ನನಗಿಲ್ಲ ಎಂದು ಹೇಳಿದ್ದಾರೆ.

ಕನ್ನಡದ ಕುಲದೇವತೆ ಭುವನೇಶ್ವರಿಯ ಸನ್ನಿದಾನದಲ್ಲೇ ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕ ಪಡೆಯುವುದಾಗಿ ಅವರು ಘೋಷಿಸಿದ್ದಾರೆ. ಆ ತಾಯಿಯ ಎದುರು ಆಡಿದ ಮಾತು ಸುಳ್ಳಾಗಬಾರದು. ಹಿಂದೆ ಹಲವು ಮುಖ್ಯಮಂತ್ರಿಗಳು, ಗೃಹಸಚಿವರು ಇಂತಹುದೇ ಭರವಸೆಗಳನ್ನು ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿರಲಿಲ್ಲ. ಈಗ ಹಾಗೆ ಆಗದಿರಲಿ. ಕೊಟ್ಟ ಮಾತು ಮುಖ್ಯಮಂತ್ರಿಗಳು ತಪ್ಪದಿರಲಿ. ಹಾಗೆಯೇ ಕನ್ನಡದ ಅಸ್ಮಿತೆ ಎತ್ತಿಹಿಡಿಯುವ ಕಾಳಜಿಯ ಕನ್ನಡಪ್ರೇಮಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ಏನೇನು ಸಾಧ್ಯವೋ ಅದನ್ನೆಲ್ಲ ಅವರು ಮಾಡಲಿ ಎಂದು ನಾರಾಯಣಗೌಡರು ಆಶಿಸಿದ್ದಾರೆ.

More articles

Latest article