ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲದಿರುವ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಊಹಿಸಿಕೊಳ್ಳಲು ಅಸಾಧ್ಯ ಎಂದು ಸಮಾಜಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ. ಅವರು ಮೈಸೂರಿನ ಸೆನೆಟ್ ಭವನದಲ್ಲಿ ಇಂದು ವಿಧಾನ ಪರಿಷತ್ ಗೆ ನೂತನವಾಗಿ ಆಯ್ಕೆಯಾಗಿರುವ ಕೆ. ಶಿವಕುಮಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಒಂದು ವೇಳೆ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದರೆ ಅಹಿಂದ ಸಮುದಾಯವೇ ಮುಳುಗಲಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ ಅವರು 2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಬೇಕು ಎನ್ನುವುದು ನಮ್ಮೆಲ್ಲರ ಅಭಿಲಾಷೆ. ಅವರೂ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸವೂ ನಮಗಿದೆ ಎಂದು ಹೇಳಿದರು.
ಅಧಿಕಾರ ಯಾವಾಗಲು ಯೋಗ್ಯರ ಕೈಯಲ್ಲಿ ಇರಬೇಕು. ನನ್ನ ಪರವಾಗಿ ಪರಮೇಶ್ವರ್ ಪರವಾಗಿ ಜೈಕಾರ ಕೂಗಬಹುದು. ಆದರೆ ಇರುವುದು ಒಂದೇ ಮುಖ್ಯಮಂತ್ರಿ ಹುದ್ದೆ. 2028ರವರೆಗೂ ಸಿದ್ದರಾಮಯ್ಯ ಅವರು ಮುಂದುವರೆಯಬೇಕು.
ಇತ್ತೀಚೆಗಷ್ಟೇ ಮತ್ತೆ ಮುಖ್ಯಮಂತ್ರಿ ಎಂಬ ಹೊಸ ನಾಟಕ ನೋಡಿದೆ. ನಾಟಕ ರಾಜಕೀಯ ಗುಂಪುಗಾರಿಕೆಯನ್ನು ಚೆನ್ನಾಗಿ ಕಟ್ಟಿಕೊಡುತ್ತದೆ. ಈ ನಾಟಕ ನೋಡಿದ ಮೇಲೆ ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಎನ್ನುವುದು ಅರ್ಥವಾಗುತ್ತಿಲ್ಲ. ಸಿದ್ದರಾಮಯ್ಯ ಅವರಿಗೂ ಈ ನಾಟಕ ನೋಡಲು ಹೇಳಿದ್ದೇನೆ ಎಂದು ಮಹಾದೇವಪ್ಪ ತಿಳಿಸಿದರು.

