ಬೆಂಗಳೂರು: ಮುಸಲ್ಮಾನರೂ ಈ ದೇಶದ ಪ್ರಜೆಗಳೇ, ಆಗಿದ್ದು ಎಲ್ಲರಂತೆ ಅವರಿಗೂ ಮತದಾನದ ಹಕ್ಕು ಇರುತ್ತದೆ. ಮುಸಲ್ಮಾನರಿಗೆ ಮತದಾನದ ಹಕ್ಕನ್ನು ರದ್ದುಗೊಳಿಸಬೇಕು ಎಂದು ನಿನ್ನೆ ಬಾಯಿ ತಪ್ಪಿ ನೀಡಿದ ಹೇಳಿಕೆಯಿಂದ ಮುಸಲ್ಮಾನ ಸಹೋದರರಿಗೆ ಬೇಸರವಾಗಿದ್ದರೆ, ಅದಕ್ಕಾಗಿ ನಾವು ಹೃತ್ಪೂರ್ವಕವಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಆದ್ದರಿಂದ ಈ ವಿಷಯವನ್ನು ಬೆಳೆಸದೆ ಇಲ್ಲಿಗೆ ಮುಕ್ತಾಯ ಮಾಡಬೇಕೆಂದು ಶ್ರೀ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಮನವಿ ಮಾಡಿಕೊಂಡಿದ್ದಾರೆ.
ನಿನ್ನೆ ಭಾರತೀಯ ಕಿಸಾನ್ ಸಂಘ ಫ್ರೀಡಂ ಪಾರ್ಕ್ ಬಳಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಾತಾನಾಡುತ್ತಾ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಮುಸಲ್ಮಾನರ ಮತದಾನದ ಹಕ್ಕನ್ನು ರದ್ದುಗೊಳಿಸಬೇಕು ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಕುರಿತು ವಿವಾದ ಭುಗಿಲೇಳುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಸ್ವಾಮೀಜಿಗಳು ಬಾಯಿ ತಪ್ಪಿ ಆಡಿದ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಮುಸಲ್ಮಾನ ಜನಾಂಗ ಕುರಿತು ಮನಗೆ ಯಾವುದೇ ಅಸಹಿಷ್ಣುತೆ ಇರುವುದಿಲ್ಲ. ಹಿಂದೆ ಆಡಳಿತಾರೂಢ ಪಕ್ಷಗಳು ವಕ್ಫ್ ಮಂಡಳಿಗೆ ವಿಶೇಷ ಸವಲತ್ತುಗಳು ಹಾಗೂ ವಿಶೇಷ ಕಾನೂನಿನ ವ್ಯವಸ್ಥೆ ಮಾಡಿಕೊಟ್ಟಿರುವುದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿ (ಜೆ.ಪಿ.ಸಿ) ಕೂಡಾ ರಚನೆಯಾಗಿರುತ್ತದೆ. ಜೆ.ಪಿ.ಸಿಯ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ವಕ್ಸ್ ಮಂಡಳಿಗೆ ಜಮೀನುಗಳು ಯಾವ ರೀತಿ ಬಂದಿವೆ ಎಂಬುದರ ನಿಖರವಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡಿ ಆ ಜಮೀನುಗಳನ್ನು ಉಳಿಸಿಕೊಳ್ಳುವುದರ ಬಗ್ಗೆ ನಮಗೆ ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ ತಲತಲಾಂತರಗಳಿಂದ ಕೃಷಿ ಮಾಡುತ್ತಿರುವ ನಮ್ಮ ರೈತರನ್ನು ವಕ್ಫ್ ಮಂಡಳಿಯ ಹೆಸರಿನಲ್ಲಿ ಒಕ್ಕಲೆಬ್ಬಿಸುವಂತಿಲ್ಲ. ಮೂಲತಃ ಒಕ್ಕಲಿಗರು ಧರ್ಮ ಸಹಿಷ್ಣುಗಳು, ನಾವು ಎಲ್ಲಾ ಧರ್ಮದವರನ್ನು ಇಲ್ಲಿಯವರೆಗೂ ಸಮಾನವಾಗಿ ಕಂಡಿರುತ್ತೇವೆ. ನಮ್ಮ ಶ್ರೀಮಠಕ್ಕೆ ಮುಸ್ಲಿಂ ಜನಾಂಗದವರೂ ಸಂಪರ್ಕವಿಟ್ಟುಕೊಂಡಿದ್ದು ಬೇಟಿ ನೀಡುತ್ತಿರುತ್ತಾರೆ. ನಾವೂ ಸಹ ಮುಸ್ಲಿಂ ಜನಾಂಗದ ಮದುವೆ ಹಾಗೂ ಇತರೆ ಶುಭ ಸಮಾರಂಭಗಳಿಗೆ ಭಾಗಿಯಾಗಿರುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಕ್ಫ್ ಮಂಡಳಿ ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ರೈತಾಪಿ ಜನಗಳನ್ನು ಒಕ್ಕಲೆಬ್ಬಿಸಿ ಅವರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ಗಮನಿಸುತ್ತೇವೆ. ರೈತನನ್ನು ಒಕ್ಕಲೆಬ್ಬಿಸುವ ಯಾವುದೇ ಸಂಸ್ಥೆಯ ನಡೆಯನ್ನು ಒಪ್ಪಲಾಗದು ಎಂದೂ ಅವರು ತಿಳಿಸಿದ್ದಾರೆ.