ಗಳೂರು: ಚೀನಾದವರನ್ನು ಕೆಂಪು ಕಣ್ಣಿನಿಂದ ನೋಡುವ ಬದಲು, ಕೆಂಪು ಹಾಸಿಗೆಯ ಮೇಲೆ ಹೆಜ್ಜೆ ಹಾಕುವ ಮೂಲಕ ಪ್ರಧಾನಿ Narendra Modi ತಮ್ಮ ವರಸೆ ಬದಲಿಸಿದ್ದಾರೆ. ಚೀನಿಯರನ್ನು ಕೆಂಪು ಕಣ್ಣಿನಿಂದ ನೋಡುವುದೆಂದರೆ ಪಬ್ ಜೀ ಆ್ಯಪ್ ಬ್ಯಾನ್ ಮಾಡಿದಷ್ಟು ಸುಲಭವಲ್ಲ ಪ್ರಧಾನಿಗಳೇ.. ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಚೀನಾಗೆ ಬೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿಗಳೇ, ಚೀನಿ ಅಧ್ಯಕ್ಷರನ್ನು ಕೈ ಕುಲುಕುವಾಗ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರಿಂದ ಹುತಾತ್ಮರಾದ 20 ಸೈನಿಕರ ಮುಖಗಳು ನೆನಪಿಗೆ ಬರಲಿಲ್ಲವೇ? ನಮ್ಮ ಸೈನಿಕರ ಸಾವಿಗೆ ನ್ಯಾಯವನ್ನು ಕೇಳುವ ಧೈರ್ಯ 56 ಇಂಚಿನ ಎದೆಯಲ್ಲಿ ಬರಲಿಲ್ಲವೇ?
ಅರುಣಾಚಲ ಪ್ರದೇಶದ ನಮ್ಮ ನೆಲದಲ್ಲಿ ಚೀನಾ ಹಳ್ಳಿಗಳನ್ನೇ ನಿರ್ಮಾಣ ಮಾಡಿ, ರಸ್ತೆ ನಿರ್ಮಿಸಿದ್ದಲ್ಲದೇ ಗಡಿಯಿಂದ ಸುಮಾರು 60-70 ಕಿ.ಮೀ.ನಷ್ಟು ಒಳಗಿನ ಪ್ರದೇಶದವರೆಗೂ ಚೀನಾ ಬಂದಿದೆ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಾಪಿರ್ ಗಾವೊ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದು ಮಾತುಗಳನ್ನು ಚೀನಿ ಅಧ್ಯಕ್ಷರಿಗೆ ಕೇಳುವ ಸಾಹಸ ಮಾಡಲಿಲ್ಲ ಯಾಕೆ?
ನಮ್ಮ ದೇಶದ 38 ಸಾವಿರ ಚದರ ಕಿಲೋ ಮೀಟರ್ ಭೂ ಭಾಗವನ್ನು ಚೀನಾ ವಶಕ್ಕೆ ಪಡೆದಿದೆ ಎಂದು ಸಂಸತ್ತಿನಲ್ಲಿ ವಿದೇಶಾಂಗ ರಾಜ್ಯ ಸಚಿವರಾಗಿದ್ದ ಮುರುಳಿಧರನ್ ಒಪ್ಪಿಕೊಂಡ ಮೇಲೂ ಚೀನಿ ಅಧ್ಯಕ್ಷರನ್ನ ಎದೆಯುಬ್ಬಿಸಿ ನಮ್ಮ ಭೂ ಭಾಗ ಬಿಟ್ಟು ಕೊಡಿ ಎಂದು ಕೇಳಲಿಲ್ಲ ಯಾಕೆ?
ಪುಲ್ವಾಮಾ ದಾಳಿಯಲ್ಲಿ ನಮ್ಮ ಸೈನಿಕರನ್ನು ಬಲಿಪಡೆದ, ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯ ಪ್ರವಾಸಿಗರನ್ನ ಬಲಿ ಪಡೆದ ಪಾಕಿಸ್ತಾನ ಮೂಲಕ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ಚೀನಾ ದೇಶದವರಿಂದ ಯಾವ ಸಹೋದರತೆಯ ಸಂಬಂಧ ನಿರೀಕ್ಷಿಸುತ್ತಿದ್ದೀರಿ?
ಜಗತ್ತಿಗೆ ಮಾದರಿಯಾಗಿದ್ದ ಭಾರತದ ವಿದೇಶಾಂಗ ನೀತಿಯನ್ನು ವಿದೇಶಾಂಗ ಪ್ರವಾಸಕ್ಕೆ ಸೀಮಿತಗೊಳಿಸಿದ್ದೇ ನಿಮ್ಮ ಸಾಧನೆ. ಅದರಿಂದ ಜಗತ್ತಿನ ಎದುರು ಭಾರತದ ಗೌರವ, ಘನತೆಯನ್ನು ಕುಗ್ಗಿಸಿದ್ದೀರಿ. ಅದಕ್ಕಾಗಿ ದೇಶ ಭಾರಿ ಬೆಲೆ ತೆತ್ತಿದೆ. ಅದಕ್ಕೆ ತಾಜಾ ಉದಾಹರಣೆ ನಿಮ್ಮ ಸ್ನೇಹಿತ ಅಮೇರಿಕಾದ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಹೇರುತ್ತಿರುವ ಭಾರಿ ತೆರಿಗೆಗಳೇ ಸಾಕ್ಷಿ. ದೇಶದ ಜನರನ್ನು ಮತ್ತಷ್ಟೂ ಮೂರ್ಖರನ್ನಾಗಿ ಮಾಡಬೇಡಿ. ನಿಮ್ಮ ಮುಖವಾಡಗಳು ಒಂದೊಂದೆ ಕಳಚುತ್ತಿವೆ ಎಂದು ಹರಿಹಾಯ್ದಿದ್ದಾರೆ.