ಪ್ರಧಾನಿ ಮೋದಿಗಾಗಿ ಶೌಚಾಲಯವನ್ನು ಕಾಯ್ದಿರಿಸಬಹುದೇ?: ಖರ್ಗೆ ವಾಗ್ದಾಳಿ

Most read

ರಾಂಚಿ: ಜಾರ್ಖಂಡ್‌ನಲ್ಲಿ ತಮ್ಮ ಮತ್ತು ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ಉದ್ದೇಶಪೂರ್ವಕವಾಗಿ ತಡೆಯೊಡ್ಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭದ್ರತಾ ಕಾರಣಗಳ ಹೆಸರಿನಲ್ಲಿ ಹಾರಾಟ ನಿಷೇಧ ವಲಯವನ್ನಾಗಿ (ನೋ ಫ್ಲೈಯಿಂಗ್ ಝೋನ್) ಘೋಷಿಸಿದ್ದರಿಂದ ನನ್ನ ಮತ್ತು ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನಿರಾಕರಿಸಲಾಯಿತು ಎಂದು ಖರ್ಗೆ ಟೀಕಿಸಿದ್ದಾರೆ.


ಜಾರ್ಖಂಡ್‌ನ ದೇವಘರ್‌ನಲ್ಲಿ ಶುಕ್ರವಾರ ಪ್ರಧಾನಿ ಮೋದಿ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಸುಮಾರು ಎರಡು ಗಂಟೆ ಅವರು ಅಲ್ಲಿಯೇ ಇರಬೇಕಾಯಿತು. ಭದ್ರತಾ ಕಾರಣಗಳಿಂದ ಹಾರಾಟ ನಿಷೇಧ ವಲಯವನ್ನಾಗಿ ಘೋಷಿಸಿದ್ದರಿಂದ ರಾಹುಲ್ ಗಾಂಧಿ ಅವರ ಪ್ರಯಾಣದಲ್ಲೂ ತಡವಾಗಿತ್ತು. ಜತೆಗೆ, ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ನನ್ನ ಹೆಲಿಕಾಪ್ಟರ್ ಅನ್ನು 20 ನಿಮಿಷ ತಡ ಮಾಡಲಾಯಿತು. ಅಮಿತ್ ಶಾ ಅವರ ಮಾರ್ಗವೇ ಬೇರೆಯಾಗಿತ್ತು. ನನ್ನ ಮಾರ್ಗವೇ ಪ್ರತ್ಯೇಕವಾಗಿತ್ತು. ಆದರೂ ಉದ್ದೇಶಪೂರ್ವಕವಾಗಿ ನನ್ನ ಹೆಲಿಕಾಪ್ಟರ್ ಅನ್ನು ತಡೆಯಲಾಯಿತು ಎಂದು ಖರ್ಗೆ ಗುಡುಗಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಕ್ಯಾಬಿನೆಟ್ ಸಚಿವ ಸ್ಥಾನಮಾನ ಹೊಂದಿದ್ದಾರೆ. ಆದೇ ರೀತಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ ನನಗೂ ನನ್ನದೇ ಆದ ಗೌರವವಿದೆ. ವಿಮಾನ ನಿಲ್ದಾಣವನ್ನು ಹಾರಾಟ ನಿಷೇಧ ವಲಯವನ್ನಾಗಿ ಘೋಷಣೆ ಮಾಡುವುದಾದರೇ, ಪ್ರಧಾನಿ ಮೋದಿಗಾಗಿ ಶೌಚಾಲಯವನ್ನು ಕಾಯ್ದಿರಿಸಬಹುದೇ? ಎಂದು ನಾನು ಅಧಿಕಾರಿಗಳನ್ನು ಕೇಳಲು ಬಯಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.


ಒಳನುಸುಳುವಿಕೆ ಕುರಿತು ಬಿಜೆಪಿಯನ್ನು ತರಾಟೆಗೆ ತೆಗದುಕೊಂಡ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನಿದ್ದೆ ಮಾಡುತ್ತಿದ್ದಾರೆಯೇ? ಅಧಿಕಾರದಲ್ಲಿದ್ದರೂ ಅವರು ಒಳನುಸುಳುವಿಕೆಯನ್ನು ಏಕೆ ನಿಯಂತ್ರಿಸುತ್ತಿಲ್ಲ? ಬಿಜೆಪಿ ನಾಯಕರು ನಮ್ಮ ಹೆಲಿಕಾಪ್ಟರ್‌ಗಳನ್ನು ನಿಲ್ಲಿಸಬಹುದಾದರೇ ನುಸುಳುಕೋರರನ್ನು ಏಕೆ ತಡೆಯಲು ಸಾಧ್ಯವಿಲ್ಲ? ಎಂದು ಖಾರವಾಗಿ ಟೀಕಿಸಿದ್ದಾರೆ.

More articles

Latest article