ಬ್ರಿಡ್ಜ್ ಟೌನ್ (ಬಾರ್ಬಡಸ್): ಕೆರೇಬಿಯನ್ ದ್ವೀಪ ಸಮೂಹದ ದೇಶಗಳಲ್ಲಿ ಒಂದಾದ ಬಾರ್ಬಡಸ್ ನಲ್ಲಿ ಇಂದು ಕ್ರಿಕೆಟ್ ಹಬ್ಬ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 2024ರ T-20 ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿದೆ. ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಈಗ ಬಾರ್ಬಡಸ್ ಮೇಲೆ ನೆಟ್ಟಿದೆ.
ವೆಸ್ಟ್ ಇಂಡೀಸ್ ಎಂಬುದೊಂದು ದೇಶವಲ್ಲ, ಹಲವು ಸಣ್ಣಸಣ್ಣ ದೇಶಗಳು ಸೇರಿದ ಒಂದು ಒಕ್ಕೂಟ. ಅದರಲ್ಲಿ ಬಾರ್ಬಡಸ್ ಕೂಡ ಒಂದು. ಇಡೀ ದೇಶದ ಜನಸಂಖ್ಯೆ 2,82,309 ಮಾತ್ರ. ಭಾರತದ ಹಾಗೆಯೇ ಬಾರ್ಬಡಸ್ ಸಹ ಬ್ರಿಟಿಷರ ಆಳ್ವಿಕೆಯಲ್ಲಿತ್ತು. 1966ರಲ್ಲಿ ಸ್ವತಂತ್ರವಾಯಿತು. ಆದರೆ ಬ್ರಿಟಿಷರು ಇಲ್ಲೂ ತಮ್ಮ ಛಾಪು ಬಿಟ್ಟುಹೋಗಿದ್ದಾರೆ. ಹೀಗಾಗಿ ಇದಕ್ಕೆ ಲಿಟಲ್ ಇಂಗ್ಲೆಂಡ್ ಎಂದೂ ಕರೆಯುತ್ತಾರೆ.
ಜಗತ್ತಿನನಲ್ಲೇ ಅತಿ ಸುಂದರ ಕಡಲ ತೀರಗಳಿರುವ ಬಾರ್ಬಡಸ್ ನಲ್ಲಿ ಇಂದು ಕ್ರಿಕೆಟ್ ಅಭಿಮಾನಿಗಳ ಸುನಾಮಿ ಹರಿದು ಬರುತ್ತಿದೆ. ವೆಸ್ಟ್ ಇಂಡೀಸ್ ಫೈನಲ್ ಗೆ ಬರುತ್ತದೆ ಎಂಬ ಆಸೆ ಇಲ್ಲಿನ ಜನರಿಗೆ ಇತ್ತು. ಆದರೇನಂತೆ ಕ್ರಿಕೆಟ್ ಜಗತ್ತಿನ ಎರಡು ಬಲಾಢ್ಯ ತಂಡಗಳ ಸೆಣಸುವುದನ್ನು ನೋಡಿ ಕಣ್ತುಂಬಿಕೊಳ್ಳಲು ಬಾರ್ಬಡಸ್ ರಾಜಧಾನಿ ಬ್ರಿಡ್ಜ್ ಟೌನ್ ನ ಕೆನ್ಸಿಂಗ್ ಟನ್ ಓವಲ್ ಕ್ರೀಡಾಂಗಣ ಸಜ್ಜಾಗಿದೆ.
ಇಡೀ ಜಗತ್ತಿನಾದ್ಯಂತ ಇಂದು ಭಾರತ ಕ್ರಿಕೆಟ್ ಅಭಿಮಾನಿಗಳದ್ದು ಒಂದೇ ಮೊರೆ:’ಗೆದ್ದು ಬಾ ಇಂಡಿಯಾ’. ಕಳೆದ ಬಾರಿ ಭಾರತದಲ್ಲಿ ನಡೆದ ODI ಕ್ರಿಕೆಟ್ ಕಪ್ ಭಾರತ ಗೆಲ್ಲಲೇಬೇಕಿತ್ತು. ಎಲ್ಲ ಪಂದ್ಯ ಗೆದ್ದು ಬಂದ ಭಾರತ ಫೈನಲ್ ನಲ್ಲಿ ಎಡವಿತು. ಅಹಮದಾಬಾದ್ ನಲ್ಲಿ ಆಸ್ಟ್ರೇಲಿಯಾ ಕಪ್ ಎತ್ತಿಹಿಡಿದಾಗ ಕಣ್ಣೀರಿಟ್ಟ ಜನರೆಷ್ಟೋ. ಈ ಬಾರಿ ಹಾಗೆ ಆಗಬಾರದು. ಭಾರತ ಕಪ್ ಗೆದ್ದೇ ಬರಬೇಕು ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಈ ಬಾರಿಯ ವಿಶೇಷವೆಂದರೆ ಫೈನಲ್ ತಲುಪಿರುವ ಎರಡೂ ತಂಡಗಳು ಲೀಗ್ ಹಂತದಿಂದ ಹಿಡಿದು ಇಲ್ಲಿಯವರೆಗೆ ಒಂದೂ ಪಂದ್ಯ ಸೋತಿಲ್ಲ. ಎರಡೂ ತಂಡಗಳು ಒಂದೆರಡು ಪಂದ್ಯಗಳಲ್ಲಿ ಸೋಲುವ ಅಂಚಿಗೆ ತಲುಪಿದರೂ ಪುಟಿದೆದ್ದು ಗೆದ್ದುಬಂದಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪ್ರಬಲ ಪೈಪೋಟಿಯನ್ನೇ ನಿರೀಕ್ಷಿಸಬಹುದಾಗಿದೆ.
ಈ ವಿಶ್ವಕಪ್ ಭಾರತದ ಹಲವು ದಿಗ್ಗಜ ಆಟಗಾರರಿಗೆ ಕೊನೆಯದಾಗಬಹುದು. ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಟಿ-20 ಯಿಂದ ರಿಟೈರ್ ಆಗುವ ಸಾಧ್ಯತೆ ಹೆಚ್ಚು. ರವೀಂದ್ರ ಜಡೇಜಾ, ಜಸ್ಪೀತ್ ಬುಮ್ರಾ ಅವರಿಗೂ ಇದು ಕೊನೆಯ ಟಿ 20 ವಿಶ್ವಕಪ್ ಆಗಬಹುದು. ಅಷ್ಟೇಕೆ, ಭಾರತದ ಲೆಜೆಂಡರಿ ಆಟಗಾರ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಭಾರತ ಹತ್ತು ವರ್ಷಗಳಿಂದ ಯಾವುದೇ ಐಸಿಸಿ ಟೂರ್ನಿ ಗೆದ್ದಿಲ್ಲ. ಮೊದಲ ಟಿ-20 ವಿಶ್ವಕಪ್ ಭಾರತವೇ ಗೆದ್ದಿತಾದರೂ ನಂತರ ಒಂದೇ ಒಂದು ಟ್ರೋಫಿ ಇದುವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲರಿಗೂ ಇಂದು ಕಪ್ ಗೆದ್ದು ಈ ದಿನವನ್ನು ಸ್ಮರಣೀಯವಾಗಿಸಿಕೊಳ್ಳುವ ಹೆಬ್ಬಯಕೆ. ಅದು ನಿಜವಾಗಲಿ ಎಂದು ಭಾರತ ಕ್ರಿಕೆಟ್ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.