ನಾ ನಿನ್ನ ಮುಟ್ಟ ಬಹುದಾ…?

Most read

ಗಂಡನಾದವನು ತನ್ನ ಹೆಂಡತಿಯನ್ನ ವಿಶ್ವಾಸ, ಪ್ರೀತಿ, ಪರಸ್ಪರ ಒಪ್ಪಿಗೆಯಿಂದ ಪ್ರೇಮದಿಂದ ಗೆದ್ದು ಅವಳ ಒಪ್ಪಿಗೆಯ ಮೇಲೆಯೇ ಒಂದಾಗುವುದು ಅತ್ಯಂತ ನ್ಯಾಯಯುತವಾದದ್ದು ಮತ್ತು ಸರಿಯಾದ ಸುಂದರವಾದ ಜೀವನ ಪ್ರೀತಿಯನ್ನು ತೋರುವಂತದ್ದು – ಶೃಂಗಶ್ರೀ ಟಿ, ಉಪನ್ಯಾಸಕಿ

ಯಾವುದೋ ಹೆಣ್ಣಿನ ಮೇಲೆ ಅತ್ಯಾಚಾರವಾಗಿದೆ ಎಂದಾಕ್ಷಣ ಕೆಲವರಂತೂ ಅದೆಷ್ಟು ಆಕ್ರೋಶ, ಕೋಪವನ್ನು ವ್ಯಕ್ತಪಡಿಸುತ್ತಾ ಅತ್ಯಾಚಾರಿಯ ಮೇಲೆ ನಿಗಿ ನಿಗಿ ಬೆಂಕಿ ಉಗುಳುತ್ತಾ ಅತ್ಯಾಚಾರಿಗೆ ಮರಣ ದಂಡನೆಯೇ ಆಗಲಿ, ಅವನನ್ನ ತುಂಡು ತುಂಡಾಗೇ ಕತ್ತರಿಸಲಿ, ನೇಣಿಗೆ ಹಾಕಲಿ, ಗುಂಡಿಕ್ಕಿ ಕೊಲ್ಲಲಿ ಎಂಬೆಲ್ಲಾ ಮಾತುಗಳನ್ನಾಡುತ್ತಾ ರೋಶಾವೇಷದಿಂದ ಪ್ರತಿಕ್ರಿಯಿಸುತ್ತಿರುತ್ತಾರೆ.

ಆದರೆ ತನ್ನದೇ ಮನೆಯ ತನ್ನದೇ ಹೆಂಡತಿಯ ದೇಹವನ್ನು ಮುಟ್ಟುವ ಮುನ್ನ ನಾ ನಿನ್ನ ಮುಟ್ಟ ಬಹುದಾ ? ಮುದ್ದಾಡ ಬಹುದಾ? ಚುಂಬಿಸಬಹುದಾ? ನಿನ್ನೊಟ್ಟಿಗೆ ನಿನ್ನ ಒಪ್ಪಿಗೆಯ ಮೇರೆಗೆ ಮಿಲನ ಕ್ರಿಯೆಯಲ್ಲಿ ಒಂದಾಗ ಬಹುದಾ? ಅನ್ನುವ ಬಹಳ ಮುಖ್ಯವಾದ ಪ್ರಶ್ನೆಗಳನ್ನು  ಹೆಚ್ಚಿನವರು ಕೇಳುವುದೇ ಇಲ್ಲ.

ಹೆಣ್ಣಿನ ಅನಿಸಿಕೆಗಳನ್ನ, ಅವಳ ಒಪ್ಪಿಗೆ, ಸಂಕೋಚ, ಅವಳನ್ನ ಕಾಡುವ ಭಯಗಳ, ಅವಳ ಅಂಜಿಕೆಗಳ, ಆಸೆಗಳ, ಬಯಕೆಗಳ ಕುರಿತು ಒಂದಿನಿತೂ ಒಂದು ಮಾತನ್ನೂ ಕೇಳದೆ, ತಿಳಿಯದೆ ಹಿಗ್ಗಾಮುಗ್ಗಾ ಅವಳ ದೇಹದ ಮೇಲೆ ಹಸಿದ ಹುಲಿಯಂತೆ ಬಿದ್ದು ಅವಳನ್ನ ಸಂಪೂರ್ಣ ನಗ್ನಳಾಗಿಸಿ ತನಗೆ ಬೇಕಾದ ರೀತಿಯಲ್ಲಿ ಬೇಕಾದದ್ದನ್ನೆಲ್ಲ ಮಾಡುವ ಗಂಡಸರ ನಡವಳಿಕೆಗಳು ಕ್ರಿಯೆಗಳು ನನಗೆ ಅತ್ಯಾಚಾರಿಯ ನಡೆಯಂತೆಯೇ ಭಾಸವಾಗುತ್ತದೆ.

ಕೇವಲ ಮದುವೆಯಾದ ಮಾತ್ರಕ್ಕೆ ಅಥವಾ ಮದುವೆಯಾಗಿದ್ದಿನೀ ಅನ್ನುವ ಕಾರಣಕ್ಕೆ, ನಾನು ಅವಳ ಗಂಡ ಅವಳು ನನ್ನ ಹೆಂಡತಿ ಅನ್ನುವ ಕಾರಣಕ್ಕೆ ಹೇಗೆ ಬೇಕೋ ಹಾಗೆ ನಡೆದುಕೊಳ್ಳುವ ಗಂಡಸೂ ಸಹ ನನಗೆ ಅತ್ಯಾಚಾರಿಯಂತೆಯೇ ಕಾಣುತ್ತಾನೆ.

ಒಪ್ಪಿಗೆಯಿಲ್ಲದೆ ತನ್ನ ಸಂಗಾತಿಯೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗುವುದನ್ನು ವೈವಾಹಿಕ ಅತ್ಯಾಚಾರ ಅಥವಾ ಸಂಗಾತಿಯ ಅತ್ಯಾಚಾರ ಎಂದು ಕರೆಯಲಾಗುತ್ತದೆ.  ವೈವಾಹಿಕ ಅತ್ಯಾಚಾರವನ್ನು ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಒಂದು ರೂಪವೆಂದು ಪರಿಗಣಿಸಲಾಗಿದೆ. ಮದುವೆಯೊಳಗೆ ಸಾಂಪ್ರದಾಯಿಕವಾಗಿ ಲೈಂಗಿಕ ಸಂಭೋಗವನ್ನು ಸಂಗಾತಿಯ ಹಕ್ಕು ಎಂದು ಪರಿಗಣಿಸಲಾಗಿದ್ದರೂ, ಸಂಗಾತಿಯ ಒಪ್ಪಿಗೆಯಿಲ್ಲದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿ ಕೊಳ್ಳುವುದನ್ನು ಈಗ ಪ್ರಪಂಚದಾದ್ಯಂತದ ಅನೇಕ ಸಮಾಜಗಳಿಂದ ಅತ್ಯಾಚಾರ ಎಂದು ವರ್ಗೀಕರಿಸಲಾಗಿದೆ, ಅಂತಾರಾಷ್ಟ್ರೀಯ ಸಂಪ್ರದಾಯಗಳಿಂದ ಅದು ತ್ಯಜಿಸಲ್ಪಟ್ಟಿದೆ ಮತ್ತು ಹಂತಹಂತವಾಗಿ ಅದನ್ನು ಅಪರಾಧೀಕರಿಸಲಾಗಿದೆ.

ಐಪಿಸಿ ಸೆಕ್ಷನ್ 375 ರ ಪ್ರಕಾರ “ಒಬ್ಬ ಪುರುಷನು ತನ್ನ ಹೆಂಡತಿಯೊಂದಿಗೆ ಒಪ್ಪಿಗೆಯಿಲ್ಲದ ಲೈಂಗಿಕ ಸಂಭೋಗವನ್ನು ಮಾಡಿದಾಗ ಅವಳು 15 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಅದು ಅತ್ಯಾಚಾರವಲ್ಲ”. ಹೀಗಾಗಿ, ಪತಿ ತನ್ನ ಹೆಂಡತಿಯೊಂದಿಗೆ ನಡೆಸುವ (15 ವರ್ಷಕ್ಕಿಂತ ಮೇಲ್ಪಟ್ಟ) ಬಲವಂತದ ಮತ್ತು ಒಪ್ಪಿಗೆಯಿಲ್ಲದ ಸಂಭೋಗವು ಅತ್ಯಾಚಾರದ ವ್ಯಾಪ್ತಿಯಿಂದ ಹೊರಗಿದೆ. ಮದುವೆಯ ಬಳಿಕ  ಮಹಿಳೆಯು ತನ್ನ ಪತಿಗೆ ಲೈಂಗಿಕ ಸಂಭೋಗಕ್ಕೆ  ಶಾಶ್ವತವಾಗಿ ಒಪ್ಪಿಗೆಯನ್ನು ನೀಡುತ್ತಾಳೆ ಎಂದು ಊಹಿಸಲಾಗಿದೆ.

ಭಾರತದಲ್ಲಿ 2015-16 ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯ ಪ್ರಕಾರ,  15 ರಿಂದ 49 ವರ್ಷದ ನಡುವಿನ ವಿವಾಹಿತ ಮಹಿಳೆಯರಲ್ಲಿ ಸುಮಾರು ಶೇ.83 ರಷ್ಟು ಮಂದಿ ತಮ್ಮ ಪತಿಯನ್ನು ಲೈಂಗಿಕ ಹಿಂಸಾಚಾರಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಅಂದಾಜು 7% ಮಹಿಳೆಯರು ತಮ್ಮ ಮಾಜಿ ಪತಿಯನ್ನು ಅಪರಾಧಿ ಎಂದು ಕರೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಬಿಡುಗಡೆ ಮಾಡಿದ 2015-16 ರ ವರದಿ ತಿಳಿಸಿದೆ.

NFHS-4ರ ಪ್ರಕಾರ, 4% ಮಹಿಳೆಯರು ತಮ್ಮ ಗಂಡಂದಿರಿಂದ ಬಲವಂತವಾಗಿ ಲೈಂಗಿಕ ಸಂಪರ್ಕಕ್ಕೆ ಒಳಗಾಗಿದ್ದಾರೆ. 2.1% ಮಹಿಳೆಯರು ಲೈಂಗಿಕ ಕ್ರಿಯೆಗಳನ್ನು ಮಾಡಲು ಬಲವಂತಕ್ಕೆ ಒಳಗಾಗಿದ್ದಾರೆ. ಮತ್ತು 3% ಮಹಿಳೆಯರು ಲೈಂಗಿಕ ಕ್ರಿಯೆಗೆ ಇಚ್ಛೆ ತೋರಿಸದಿದ್ದಾಗ ಬೆದರಿಸಲ್ಪಟ್ಟಿದ್ದಾರೆ.

2017 ರಲ್ಲಿ ಇಂಟರ್‌ ನ್ಯಾಷನಲ್ ಸೆಂಟರ್ ಫಾರ್ ರಿಸರ್ಚ್ ಆನ್ ವುಮೆನ್ ಮತ್ತು ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡ್‌ನ ಇತ್ತೀಚಿನ ವರದಿಯನ್ನು ಭಾರತದ ಏಳು ರಾಜ್ಯಗಳಲ್ಲಿ 9,500 ಪ್ರತಿಸ್ಪಂದಕರ ಮೇಲೆ ವಿವರಿಸಿದೆ. 17 ಪ್ರತಿಶತದಷ್ಟು ಪತ್ನಿಯರು ಸಂಗಾತಿಯಿಂದ ಲೈಂಗಿಕ ದುಷ್ಟತನವನ್ನು ಘೋಷಿಸಿದರೆ, 31 ಪ್ರತಿಶತ (ಪ್ರತಿ ಮೂವರಲ್ಲಿ ಒಬ್ಬರು) ಪುರುಷರು ತಮ್ಮ ಹೆಂಡತಿಯರ ವಿರುದ್ಧ ಲೈಂಗಿಕ ಅನಾಗರಿಕತೆಯನ್ನು ತೋರಿದ್ದಾರೆ ಎಂದು ಒಪ್ಪಿಕೊಂಡರು ಎಂದು ವರದಿ ಹೇಳಿದೆ.

2012 ರಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ಜಸ್ಟಿಸ್ ವರ್ಮಾ ಸಮಿತಿಯು ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಎಂದು ಸೂಚಿಸಿತು ಮತ್ತು ಮದುವೆ ಎಂದರೆ ಲೈಂಗಿಕ ಚಟುವಟಿಕೆಗಳಿಗೆ ಹಿಂತೆಗೆದುಕೊಳ್ಳಲಾಗದ ಒಪ್ಪಿಗೆ ಎಂದರ್ಥ ಎಂದು ಹೇಳಲಾಯಿತು.

ಆದರೆ ಭಾರತ ಸರ್ಕಾರ ಈ ಸಲಹೆಯನ್ನು ನಿರ್ಲಕ್ಷಿಸಿದೆ. ಜೂನ್ 25, 2019 ರಂದು, ವೈವಾಹಿಕ ಅತ್ಯಾಚಾರವನ್ನು ನಿಲ್ಲಿಸಲು ಮತ್ತು ಕಾನೂನು ಕೊರತೆಗಳನ್ನು ನೀಗಿಸಲು UN ರಾಷ್ಟ್ರಗಳನ್ನು ಒತ್ತಾಯಿಸಿತು. ಈ ವರದಿಯ ಪ್ರಕಾರ ಮನೆಯು ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ತಾಣಗಳಲ್ಲಿ ಒಂದಾಗಿದೆ ಎಂದು ವಿಶ್ವಸಂಸ್ಥೆಯು ಜೂನ್ 25, 2019 ರಂದು ಹೇಳಿದೆ.

ಬಹುಶಃ ಕೆಲವರಿಗೆ ಈ ಲೇಖನ ಸಿಟ್ಟು ತರಿಸಬಹುದು, ಹಾಸ್ಯಾಸ್ಪದವಾಗಿಯೂ ಕಾಣಬಹುದು. ಯಾರಪ್ಪ ಇವಳು ತಲೆ ಕೆಟ್ಟವಳು ಗಂಡ ಹೆಂಡತಿಯನ್ನ ಮುಟ್ಟುವುದಕ್ಕೆ ಮೊದಲು ಅನುಮತಿ ಕೇಳುವುದಾ ಅಂತ ಅನಿಸಿರಬಹುದು. ನನ್ನ ನಿಲುವು ಹುಚ್ಚುತನವಾಗಿ ಕಾಣಬಹುದು. ಆದರೆ ಇವೆಲ್ಲವೂ ಬಹಳ ಸೂಕ್ಷ್ಮ ಮತ್ತು ಮುಖ್ಯವಾದ ಸಂಗತಿಗಳೆಂದು ನಾನು ಬಲವಾಗಿ ನಂಬುತ್ತೇನೆ.

ನಿಮ್ಮನ್ನೇ ನೀವು ಪ್ರಶ್ನೆ ಮಾಡಿಕೊಳ್ಳಿ. ಎಷ್ಟು ಜನ ಗಂಡಸರು ತನ್ನದೇ ಹೆಂಡತಿಯ ದೇಹವನ್ನ ಮುಟ್ಟುವ ಮುನ್ನ ನಾ ನಿನ್ನ ಮುಟ್ಟಬಹುದಾ ಎಂದು ಅಭಿಪ್ರಾಯ ಕೇಳಿದ್ದೀರಾ ? ಅವಳ ಅನಿಸಿಕೆಗಳಿಗೆ ಜಾಗ ಕೊಟ್ಟಿದ್ದಿರಾ ? ಅಥವಾ ಸಂಭೋಗಕ್ಕೆ ಅವಳು ಒಪ್ಪಿಗೆ ನೀಡುವವರೆಗೂ ಕಾದು ತದನಂತರ ಅವಳೊಟ್ಟಿಗೆ ಒಂದಾಗಿದ್ದಿರಾ? ಎಂದು ಕೇಳಿದರೆ ಬಹುಶಃ ನಾನು ಕೆಲವು ಗಂಡಸರ ಆಕ್ರೋಶಕ್ಕೆ ಒಳಪಡುತ್ತೇನೆ ಅನ್ನುವುದಂತೂ ಖಚಿತ. ಆದರೂ ಇರಲಿ 21 ರಿಂದ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ತನ್ನ ತಾಯಿಯನ್ನ ಹೊರತು ಪಡಿಸಿ ತನ್ನ ದೇಹವನ್ನ ಎಂದೂ ಯಾರ ಮುಂದೆಯೂ ಬೆತ್ತಲೆಗೊಳಿಸದ ಹೆಣ್ಣು ಮದುವೆಯಾಗಿ ಮೊದಲ ರಾತ್ರಿಯಲ್ಲೇ ಗಂಡನಿಗಾಗಿ ಬೆತ್ತಲಾಗುವಾಗ ಅವಳ ಅಸಂಖ್ಯ ಭಾವಗಳನ್ನ, ಹೆದರಿಕೆಗಳನ್ನ, ಭಯ-ಆತಂಕಗಳನ್ನ ಲೆಕ್ಕಿಸದೆ ಬೆತ್ತಲಾಗುವ ಸಂಕಟಗಳ ಬಗೆಗೆ ಗಂಡು ಎಂದಿಗೂ ಯೋಚಿಸದೇ ಸಂಭೋಗವೊಂದೇ ಅವರಿಗೆ ಮುಖ್ಯವಾಗಿ ಕಾಣುವುದು ದುರಂತವಲ್ಲವೇ?

ಹೆಣ್ಣಿನ ಆತಂಕಗಳು ಅಥವಾ ಅನಿಸಿಕೆಗಳನ್ನು ಎಂದಿಗೂ ಪ್ರಮುಖವಾಗಿ ಖಂಡಿತ ಕಂಡಿಲ್ಲ. ಕಾರಣ ಹೆಣ್ಣನ್ನ ಕೇವಲ ಸುಖ ಕೊಡುವ ವಸ್ತುವಂತೆ, ಪ್ರಾಣಿಯಂತೆ ಚಿತ್ರಿಸಿರುವುದೇ ಆಗಿದೆ. ಹೆಣ್ಣಿರುವುದೇ ಗಂಡನ್ನ ಖುಷಿ ಗೊಳಿಸುವುದಕ್ಕೆ ಎಂಬ ಕಲ್ಪನೆಗಳನ್ನೇ ನಂಬಿ, ಅವುಗಳನ್ನೇ ಕಟ್ಟುಪಾಡುಗಳಂತೆ ಹೇರಿ, ಅವಳನ್ನ ಆಟದ ವಸ್ತುವಂತೆ, ರೋಬೋಟ್ ನಂತೆ, ಸುಖ ಕೊಡುವ ವಸ್ತುವಂತೆ ನಡೆಸಿಕೊಳ್ಳುವುದರ ಹಿಂದೆ ಪುರುಷ ಪ್ರಧಾನ ಸಮಾಜದ ಅಹಂಕಾರ ಅಡಗಿರುವುದನ್ನ ನಾವು ಗಮನಿಸಲೇಬೇಕು.

ಗಂಡು ಚಿಕ್ಕಂದಿನಿಂದಲೂ ಬರೀ ಒಂದು ಚಡ್ಡಿಯಲ್ಲಿ ಇದ್ದರೆ ಸಾಕು ಎನ್ನುವ ಗಂಡೇ ಸೃಷ್ಟಿಸಿಕೊಂಡ ಉಡಾಫೆಯ ವ್ಯವಸ್ಥೆಯನ್ನೇ ನಂಬಿಕೊಂಡ ಬಂದ ಸಮಾಜಕ್ಕೆ ಎಂದೂ ಯಾರೊಂದಿಗೂ ಯಾರ ಮುಂದೆಯೂ ನಗ್ನಳಾಗದ ಹೆಣ್ಣಿನ ಆತಂಕಗಳು ಅರ್ಥವಾಗುವುದು ಕಠಿಣ. ಅವಳ ದೇಹದ ಬಗೆಗೆ, ಅವಳಿಗೆ ಇರುವ ಆತಂಕಗಳ ಬಗೆಗೆ, ಅವಳ ಇಷ್ಟದ ಬಗೆಗೆ ಕೇಳದ ಗಂಡಿನ ವರ್ತನೆಗಳು ತೀರಾ ಆತಂಕಕಾರಿ.

ಅತ್ಯಾಚಾರಿಗೂ ಕೆಲ ಗಂಡಂದಿರಿಗೂ ನಡುವೆ ಇರುವುದು ಕೇವಲ ಕೂದಲೆಳೆಯ ಅಂತರ. ಅವನು ಮದುವೆ ಎಂಬ ಸಂಸ್ಥೆಯಲ್ಲಿ ತಾಳಿ ಕಟ್ಟಿದವನು ಇವನು(ಅತ್ಯಾಚಾರಿ) ಕಟ್ಟದವನು.

ಬಹಳ ಸಾಚಾಗಳಂತೆ ಮಾತನಾಡುವ ಕೆಲವು ಗಂಡಸರು ಈ ಎಲ್ಲಾ ಸೂಕ್ಷ್ಮಗಳನ್ನ ಪಾಲಿಸದೆ, ಅಳವಡಿಸಿಕೊಳ್ಳದೆ ಗಂಡನ ಅಧಿಕಾರ ಚಲಾಯಿಸುವವರು ತಮ್ಮನ್ನು ತಾವು ಪ್ರಶ್ನಿಸಿಕೊಂಡು, ತಮ್ಮನ್ನು ತಾವು ಬದಲಾಯಿಸಿಕೊಂಡು, ತಮ್ಮ ಮಕ್ಕಳನ್ನು ಹುಟ್ಟಿದಾಗಿನಿಂದಲೇ ತಿದ್ದುತ್ತಾ ಅವರನ್ನು  ಲಿಂಗ ಸೂಕ್ಷ್ಮಗೊಳಿಸುತ್ತಾ ಬರುವುದು ಬಹಳ ಮುಖ್ಯವಾದ ಕೆಲಸಗಳು.

ಮದುವೆಯಾದ ನಂತರ ಮೊದಲ ರಾತ್ರಿಯಲ್ಲೇ ಸಂಭೋಗ ನಡೆಸಬೇಕೆಂದು ಹೇಳಿಕೊಡುವ ಸಮಾಜ ಹೆಣ್ಣಿನ ಬಗೆಗಿನ ಈ ಎಲ್ಲಾ ಸೂಕ್ಷ್ಮತೆಗಳನ್ನು ಕೂಡ ಹೇಳಿಕೊಡಬೇಕಾದ ಅಗತ್ಯಗಳಿವೆ. ಹೆಂಡತಿಯನ್ನ ಮನಸೋ ಇಚ್ಛೆ ನಡೆಸಿಕೊಳ್ಳುವವರು ಕಾನೂನಿನ ಬಗ್ಗೆ ಅರಿತು ಬಹಳ ಎಚ್ಚರಿಕೆಯಿಂದ ಬದುಕುವುದು ಈ ದಿನಗಳ ತುರ್ತು.

ಪಿ. ಲಂಕೇಶ್ ಅವರ ಮಾತಿನಂತೆ “ಇಷ್ಟವಿಲ್ಲದವನ ತುದಿ ಬೆರಳ ಸ್ಪರ್ಶದಲ್ಲೂ ಕೂಡ ನರಕವಿದೆ” ಎನ್ನುವ ಮಾತು ಅಕ್ಷರಶಃ ಸತ್ಯ.  ಇಷ್ಟವಿಲ್ಲದವನ ಅಥವಾ ಹಿಂಸೆಯಿಂದ ಗಂಡನಾದವನು ಮುಟ್ಟಿದರೂ ಸಹ ಆ ಸ್ಪರ್ಶ ನರಕ ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಗಂಡನಾದವನು ತನ್ನ ಹೆಂಡತಿಯನ್ನು ವಿಶ್ವಾಸ, ಪ್ರೀತಿ, ಪರಸ್ಪರ ಒಪ್ಪಿಗೆಯಿಂದ ಪ್ರೇಮದಿಂದ ಗೆದ್ದು ಅವಳ ಒಪ್ಪಿಗೆಯ ಮೇಲೆಯೇ ಒಂದಾಗುವುದು ಅತ್ಯಂತ ನ್ಯಾಯಯುತವಾದದ್ದು ಮತ್ತು ಸರಿಯಾದ ಸುಂದರವಾದ ಜೀವನ ಪ್ರೀತಿಯನ್ನು ತೋರುವಂತದ್ದು.

ಶೃಂಗಶ್ರೀ ಟಿ

ಅತಿಥಿ ಉಪನ್ಯಾಸಕಿ, ಶಿವಮೊಗ್ಗ.


ಇದನ್ನೂ ಓದಿ- ಅವನನ್ನು ಕಂಡಾಗಲೆಲ್ಲ ಬೆವರು ತನಗೆ ತಾನೇ ಬರುತ್ತಿತ್ತು…

More articles

Latest article