ಅನಂತ್‌ ಕುಮಾರ್‌ ಹೆಗಡೆ ಸಂವಿಧಾನ ವಿರೋಧಿಸುವುದರ ಹಿಂದಿನ ಅಸಲಿ ಸಂಚು ಏನು ಗೊತ್ತೇ?

Most read

ಬೆಂಗಳೂರು: ಐದು ಬಾರಿ ಸಂಸದರಾಗಿರುವ ಅನಂತ ಕುಮಾರ್‌ ಹೆಗಡೆ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು, ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತ ಬಂದಿದ್ದರೂ ಭಾರತೀಯ ಜನತಾ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಾರಣ ಬಿಜೆಪಿಯ ಹಾರ್ಡ್‌ ಕೋರ್‌ ಹಿಂದುತ್ವವನ್ನೇ ಅವರು ಪ್ರತಿಪಾದಿಸುತ್ತ ಬಂದಿದ್ದಾರೆ. ಇತ್ತೀಚಿಗೆ ಅವರು ನೀಡಿದ ಸಂವಿಧಾನ ವಿರೋಧಿ ಹೇಳಿಕೆಯಿಂದಾಗಿ ಅವರು ಪ್ರತಿನಿಧಿಸುತ್ತಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆಯಾದರೂ, ಈ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹೆಸರನ್ನು ಇನ್ನೂ ಘೋಷಿಸಿಲ್ಲ. ಸಂವಿಧಾನ ವಿರೋಧಿ ಹೆಗಡೆಗೆ ಮಣೆ ಹಾಕಿ ಭಾರತೀಯ ಜನತಾ ಪಕ್ಷ ತಾನೂ ಸಂವಿಧಾನ ವಿರೋಧಿ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲಿದೆಯೇ ಅಥವಾ ಸಂವಿಧಾನ ವಿರೋಧದ ತನ್ನ ಹಿಡನ್‌ ಅಜೆಂಡಾವನ್ನು ಇನ್ನಷ್ಟು ಕಾಲ ಹೊರಗೆ ತರದೇ ಇರಲು ನಿರ್ಧರಿಸಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅನಂತ ಕುಮಾರ್‌ ಹೆಗಡೆ ಪದೇಪದೇ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಅವರು ಹಿಂದೆ ಘೋಷಿಸಿದ್ದರು. ದೇಶಾದ್ಯಂತ ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾದಾಗ ಕನಿಷ್ಠ ಕ್ಷಮೆಯನ್ನೂ ಕೇಳದ ಹೆಗಡೆ, ತಮ್ಮನ್ನು ವಿರೋಧಿಸುವವರನ್ನು ಬೀದಿನಾಯಿಗಳೆಂದು ಹೀನರೀತಿಯಲ್ಲಿ ಜರಿದಿದ್ದರು.

ಕಳೆದ ಐದು ವರ್ಷಗಳಲ್ಲಿ ಹೆಚ್ಚು ಕಡಿಮೆ ನಾಲ್ಕು ವರ್ಷ ಯಾರ ಕಣ್ಣಿಗೂ ಬೀಳದೆ ಅಜ್ಞಾತವಾಸದಲ್ಲೇ ಇದ್ದ ಅನಂತ ಕುಮಾರ್‌ ಹೆಗಡೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅವರು ಮತ್ತೆ ಪ್ರತ್ಯಕ್ಷರಾದರು. ಮತ್ತೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿದರು.

ಅನಂತ ಕುಮಾರ್‌ ಹೆಗಡೆ ಯಾಕೆ ಪದೇ ಪದೇ ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಾರೆ? ಅವರ ಮಾತಿನ ಹಿಂದಿನ ಹುನ್ನಾರವಾದರೂ ಏನು?

ಹೇಳಿ ಕೇಳಿ ಅನಂತ ಕುಮಾರ್‌ ಹೆಗಡೆ ವರ್ಣಾಶ್ರಮ ವ್ಯವಸ್ಥೆಯ ಪ್ರತಿಪಾದಕ. ವರ್ಣಾಶ್ರಮ ವ್ಯವಸ್ಥೆಯ ಪ್ರತಿಪಾದಕರಿಗೆ ಮೇಲು ಕೀಳು ಜಾತಿ ವ್ಯವಸ್ಥೆ ಇದ್ದರಷ್ಟೇ ಬೇಳೆ ಕಾಳು ಬೇಯುವುದು. ಅವರಿಗೆ ಮನುಧರ್ಮ ಶಾಸ್ತ್ರವೇ ಶ್ರೇಷ್ಠ. ವೇದ ಓದಿದ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕು ಎಂದ ಮನುಧರ್ಮ ಶಾಸ್ತ್ರವೇ ಇವರಿಗೆ ಪ್ರಿಯ. ಭಾರತ ಸಂವಿಧಾನ ಎಲ್ಲರನ್ನೂ ಒಂದೇ ಸಮನಾಗಿ ನೋಡುವುದನ್ನು ಇವರಿಂದ ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಬಾಬಾ ಸಾಹೇಬ್‌ ಅಂಬೇಡ್ಕರ್‌ ದೇಶದ ಪ್ರತಿಯೊಬ್ಬ ನಾಗರಿಕನೂ ಕಾನೂನಿನ ಅಡಿಯಲ್ಲಿ ಸಮಾನರು ಎಂದು ಹೇಳಿದ್ದನ್ನು ಏಳು ದಶಕಗಳ ನಂತರವೂ ಸಹಿಸಿಕೊಳ್ಳಲು ಇವರಿಂದ ಸಾಧ್ಯವಾಗುತ್ತಿಲ್ಲ.

ಅನಂತ ಕುಮಾರ್‌ ಹೆಗಡೆ ಮತ್ತು ಅವರಂಥವರಿಗೆ ಸಂವಿಧಾನವೆಂದರೆ ಯಾಕೆ ಅಪಥ್ಯವೆಂದರೆ ಅದು ದುರ್ಬಲ ವರ್ಗದ, ಅಸ್ಪೃಶ್ಯ ಜನಜಾತಿಗಳಿಗೆ ಮೀಸಲಾತಿಯನ್ನು ಕಲ್ಪಿಸುತ್ತದೆ. ಎಲ್ಲರಿಗೂ ಸಮಾನ ಹಕ್ಕು ಅವಕಾಶಗಳನ್ನು ಕಲ್ಪಿಸುತ್ತದೆ. ಶತಶತಮಾನಗಳಿಂದ ಮೇಲ್ವರ್ಗದ ಶೋಷಣೆಗೆ ಒಳಗಾದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಯತ್ನಿಸುತ್ತದೆ. ಸಾವಿರಾರು ವರ್ಷಗಳಿಂದ ಎಲ್ಲ ಅವಕಾಶಗಳನ್ನು ಪಡೆಯುತ್ತ ಬಂದವರಿಗೆ ಇದನ್ನು ಸಹಿಸಿಕೊಳ್ಳಲು ಹೇಗೆ ಸಾಧ್ಯ?

ಭಾರತೀಯ ಜನತಾ ಪಕ್ಷ ರಾಮಜನ್ಮಭೂಮಿ ಹೋರಾಟ ಆರಂಭಿಸಿದ ಸಂದರ್ಭದಲ್ಲಿ ಮತ್ತೊಂದು ಹೋರಾಟದಲ್ಲಿ ಪರೋಕ್ಷವಾಗಿ ಪಾಲ್ಗೊಂಡಿತ್ತು. ಹಿಂದುಳಿದ ವರ್ಗಗಳಿಗೆ ಪ್ರಧಾನಿ ವಿ.ಪಿ.ಸಿಂಗ್‌ ಅವರ ನೇತೃತ್ವದ ಸರ್ಕಾರ ಮಂಡಲ್‌ ಆಯೋಗದ ವರದಿಯಂತೆ ಮೀಸಲಾತಿ ಕಲ್ಪಿಸಿದ್ದು, ಮೇಲ್ಜಾತಿಗಳ ಪಕ್ಷವಾದ ಬಿಜೆಪಿಗೆ ಪಥ್ಯವಾಗಿರಲಿಲ್ಲ. ಬಿಜೆಪಿ ನೇರವಾಗಿ ಮಂಡಲ್‌ ಆಯೋಗದ ವರದಿ ವಿರುದ್ಧ ನಿಲ್ಲದೇ ಹೋದರೂ ಸಂಘಪರಿವಾರದ ಮೂಲಕ ದೇಶಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವಂತೆ ಮಾಡಿತ್ತು. ಬಿಜೆಪಿ ಕಾರ್ಯಕರ್ತರೇ ಬೇರೆ ಬೇರೆ ಸಂಘಟನೆಗಳ ಹೆಸರಿನಲ್ಲಿ ಮಂಡಲ್‌ ಆಯೋಗದ ಶಿಫಾರಸು ಅನುಷ್ಠಾನದ ವಿರುದ್ಧ ಬೀದಿಗಿಳಿದು ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಕಾರಣವಾದರು.

ಆದರೆ ಮಂಡಲ್‌ ಆಯೋಗದ ವರದಿ ಜಾರಿಗೆ ಬಂದಿತು. ಹಿಂದುಳಿದ ವರ್ಗಗಳಿಗೆ ಮೀಸಲಾತಿಯೂ ಜಾರಿಯಾಯಿತು. ಆಗಿನಂದಲೂ ಅನಂತ ಕುಮಾರ್‌ ಹೆಗಡೆಯಂಥ ಹಾರ್ಡ್ ಕೋರ್‌ ಹಿಂದುತ್ವವಾದಿಗಳು ಹಿಂದುಳಿದ ವರ್ಗಗಳ ಮೀಸಲಾತಿ ವಿರುದ್ಧ ಒಳಗೊಳಗೆ ಕುದಿಯುತ್ತಲೇ ಇದ್ದಾರೆ. ದೇಶದಲ್ಲಿ ಮೀಸಲಾತಿ ವ್ಯವಸ್ಥೆಯನ್ನೇ ಕಿತ್ತುಹಾಕಬೇಕೆನ್ನುವುದು ಅವರ ದೊಡ್ಡ ಗುರಿ. ಅವರ ಮೊದಲ ಗುರಿ ಹಿಂದುಳಿದ ಸಮುದಾಯಗಳಾದರೆ, ನಂತರ ಪರಿಶಿಷ್ಟ ಜಾತಿ ಮತ್ತು ವರ್ಗ. ಈಗ ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಮೀಸಲಾತಿ ವಿರುದ್ಧ ಮಾತನಾಡದ ಬಿಜೆಪಿಗರು ಒಂದಲ್ಲ ಒಂದು ದಿನ ಮೀಸಲಾತಿಯನ್ನು ರದ್ದುಗೊಳಿಸುವ ಕನಸು ಕಾಣುತ್ತಲೇ ಇದ್ದಾರೆ.

ಅನಂತ ಕುಮಾರ್‌ ಹೆಗಡೆ ಈ ಬಾರಿ ನೀಡಿದ ಹೇಳಿಕೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಬಿಜೆಪಿಗೆ ಕೊಟ್ಟರೆ ಮಾತ್ರ ಸಂವಿಧಾನ ಬದಲಿಸಬಹುದು ಎಂದು ಹೇಳಿದರು. ಈ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ವಾಸ್ತವವಾಗಿ ಸಂವಿಧಾನ ತಿದ್ದುಪಡಿಗೆ ಎರಡನೇ ಮೂರರಷ್ಟು ಬಹುಮತ ಬೇಕಾಗಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸರಳ ಬಹುಮತವಿದ್ದರೆ ಸಂವಿಧಾನ ತಿದ್ದುಪಡಿಗಳಿಗೆ ಅಂಗೀಕಾರ ಪಡೆಯಬೇಕು. ಈಗಾಗಲೇ ನೂರಾರು ಸಂವಿಧಾನ ತಿದ್ದುಪಡಿಗಳು ಇದೇ ರೀತಿ ಆಗಿವೆ. ಆದರೆ ಅನಂತ ಕುಮಾರ್‌ ಹೆಗಡೆ ಬಯಸುತ್ತಿರುವುದು ಈ ಮಾದರಿಯ ಸಂವಿಧಾನ ತಿದ್ದುಪಡಿಯಲ್ಲ. ಅವರು ಸಂವಿಧಾನದ ಮೂಲ ಆಶಯಗಳನ್ನೇ ಬದಲಾಯಿಸುವ ಗುರಿ ಹೊಂದಿದ್ದಾರೆ.

ಭಾರತ ಸಂವಿಧಾನದ ಪ್ರಸ್ತಾವನೆಯು WE, THE PEOPLE OF INDIA, having solemnly resolved to constitute India into a SOVEREIGN SOCIALIST SECULAR DEMOCRATIC REPUBLIC and to secure to all its citizens: JUSTICE, social, economic and political; LIBERTY of thought, expression, belief, faith and worship; EQUALITY of status and of opportunity;and to promote among them allFRATERNITY assuring the dignity of the individual and the unity and integrity of the Nation ಎಂದು ಹೇಳುತ್ತದೆ.
ಸಂವಿಧಾನದ ಈ ಮೂಲ ಆಶಯಗಳನ್ನು ಬದಲಾಯಿಸುವಂತಿಲ್ಲ. ಸಂವಿಧಾನಕ್ಕೆ ಎಷ್ಟೇ ತಿದ್ದುಪಡಿಗಳನ್ನು ತಂದರೂ, ಸಂವಿಧಾನದ ಮೂಲ ಆಶಯಗಳನ್ನು ಬದಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸಂವಿಧಾನಪೀಠವೂ ಈ ಹಿಂದೆ ಹೇಳಿದೆ.

ಆದರೆ ಹಿಂದುಳಿದ ಸಮುದಾಯಗಳು, ದಲಿತ ವರ್ಗ, ಶೋಷಿತರನ್ನು ನಖಶಿಖಾಂತ ದ್ವೇಷಿಸುವ ಜನರು ಹೇಗಾದರೂ ಮಾಡಿ ಮೀಸಲಾತಿಯನ್ನು ತೆಗೆದುಹಾಕಬೇಕೆಂದು ಬಯಸುತ್ತಾರೆ. ಅನಂತ ಕುಮಾರ್‌ ಹೆಗಡೆಯವರು ಸಂವಿಧಾನ ಬದಲಿಸಬೇಕು ಎಂದರೆ ನಾವು ಅದನ್ನು ಮೀಸಲಾತಿ ತೆಗೆದುಹಾಕಬೇಕು ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಅವರ ದೊಡ್ಡ ಹಿಡನ್‌ ಅಜೆಂಡಾ ಮೀಸಲಾತಿಯನ್ನು ತೆಗೆದುಹಾಕುವುದು. ಸದ್ಯಕ್ಕೆ ಪರಿಶಿಷ್ಟ ಜಾತಿ/ವರ್ಗದ ಮೀಸಲಾತಿಯನ್ನು ತೆಗೆದುಹಾಕುವುದು ಅಷ್ಟು ಸುಲಭವಲ್ಲದ ಕಾರಣ ಅವರ ಮೊದಲ ಗುರಿ ಹಿಂದುಳಿದ ಸಮುದಾಯಗಳು.

ಸಂವಿಧಾನದ ಪ್ರಸ್ತಾವನೆಯಲ್ಲಿರುವ ಜಾತ್ಯತೀತ ಪದವನ್ನು ತೆಗೆದುಹಾಕಬೇಕು ಎಂದು ಅನಂತ ಕುಮಾರ್‌ ಹೆಗಡೆ ಹೇಳಿದ್ದರು. ಜಾತ್ಯತೀತ ಪದವನ್ನು ಅವರು ಯಾಕೆ ತೆಗೆಯಬೇಕೆಂದು ಬಯಸುತ್ತಾರೆ. ಭಾರತ ಜಾತಿವಾದಿ ದೇಶವಾಗಿರುವುದೇ ಅವರಿಗೆ ಬೇಕಾಗಿದೆ ಎಂದಲ್ಲವೇ? ಭಾರತ ಧರ್ಮ ನಿರಪೇಕ್ಷ ನೆಲೆಯಲ್ಲಿ ಬೆಳೆಯುವುದು ಅವರಿಗೆ ಬೇಕಾಗಿಲ್ಲ.

ಅನಂತ ಕುಮಾರ್ ಹೆಗಡೆ ಆಳದಲ್ಲಿ ಸ್ತ್ರೀ ದ್ವೇಷಿಯಂತೆಯೂ ಕಾಣುತ್ತಾರೆ. ಮನುಧರ್ಮಶಾಸ್ತ್ರದಲ್ಲೂ ಮಹಿಳೆಯರಿಗೆ ಸ್ವಾತಂತ್ರ್ಯ ಇರಬಾರದು ಎಂದು ಹೇಳಲಾಗಿರುವಂತೆ ಮಹಿಳೆಯರು ಮುಖ್ಯಭೂಮಿಕೆಗೆ ಬಂದರೆ ಮನುಧರ್ಮ ಶಾಸ್ತ್ರ ಅನುಸರಿಸುವವರು ಸಹಿಸುವುದೂ ಇಲ್ಲ. ಹಿಂದೆ ಅನಂತ ಕುಮಾರ್‌ ಹೆಗಡೆ ಸಂಸದರಾಗಿ ತಮ್ಮ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದರು. ಇದೊಂದು ರಾಜಕೀಯ ಸವಾಲಿನ ಪ್ರಶ್ನೆಯಾಗಿತ್ತು ಮತ್ತು ಅದನ್ನು ರಾಜಕೀಯವಾಗಿ ಉತ್ತರಿಸಬೇಕಿತ್ತು. ಆದರೆ ಅನಂತ ಕುಮಾರ್‌ ಹೆಗಡೆಯವರು ದಿನೇಶ್‌ ಅವರ ಕುಟುಂಬವನ್ನು ಎಳೆದುತಂದು ಮಾತನಾಡಿದರು. ʻಆತ ಮುಸ್ಲಿಂ ಮಹಿಳೆಯ ಹಿಂದೆ ಓಡಿ ಹೋದ ವ್ಯಕ್ತಿʼ ಎಂದು ನೀಚತನದಿಂದ ಪ್ರತಿಕ್ರಿಯೆ ನೀಡಿದ್ದರು. ಹೆಣ್ಣುಮಕ್ಕಳ ಕುರಿತು ಹೆಗಡೆಗೆ ಇರುವ ಕೀಳು ಅಭಿಪ್ರಾಯ ಇದರಿಂದ ಗೊತ್ತಾಗುತ್ತದೆ. ಇಷ್ಟೇ ಅಲ್ಲ, 2019ರಲ್ಲಿ ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಿದಾಗ, ಇದು ಹಿಂದೂಗಳ ಮೇಲೆ ಹಾಡುಹಗಲೇ ನಡೆದ ಅತ್ಯಾಚಾರ ಎಂದು ತಮ್ಮ ಸ್ತ್ರೀ ದ್ವೇಷವನ್ನು ತೋಡಿಕೊಂಡಿದ್ದರು.

ಯಾರನ್ನಾದರೂ ಟೀಕಿಸುವಾಗ ಅವರ ತಂದೆ ತಾಯಿಯನ್ನು, ಕುಟುಂಬದವರನ್ನು ಎಳೆತರುವ ಅನಂತ ಕುಮಾರ್‌ ಹೆಗಡೆ 2019ರಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಹುಟ್ಟಿನ ಕುರಿತೂ ಮಾತನಾಡಿ ಅವರು ಒಂದು ಬಗೆಯ ಹೈಬ್ರಿಡ್‌ ಉತ್ಪನ್ನ ಎಂದು ಕೀಳುಮಟ್ಟದ ಭಾಷೆಯಲ್ಲಿ ಮಾತನಾಡಿದ್ದರು.

ದೇಶ ಇಂದಿಗೂ ಮಹಾತ್ಮ ಗಾಂಧಿಯವರನ್ನು ಆರಾಧಿಸುತ್ತದೆ. ದೇಶ ಮಾತ್ರವಲ್ಲ ಇಡೀ ಜಗತ್ತು ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟವನ್ನು ಒಪ್ಪಿಕೊಂಡು ಕೊಂಡಾಡುತ್ತದೆ. ಇಂಥ ಗಾಂಧಿಯವರು ನಡೆಸಿದ ಹೋರಾಟವನ್ನು ʻನಾಟಕʼ ಎಂದು ಜರಿದ ಅನಂತ ಕುಮಾರ್‌ ಹೆಗಡೆ ಸಂಸತ್‌ ಕ್ಷೇತ್ರ ಮಾತ್ರವಲ್ಲ ಕರ್ನಾಟಕದ ಒಂದು ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ಅರ್ಹರಲ್ಲ.

ಬಿಜೆಪಿ ಈ ಬಾರಿ ಅನಂತ ಕುಮಾರ್‌ ಹೆಗಡೆಗೆ ಟಿಕೆಟ್‌ ನೀಡುತ್ತದೋ ಇಲ್ಲವೋ ಕಾದು ನೋಡಬೇಕು. ಆದರೆ ಉತ್ತರ ಕನ್ನಡ ಕ್ಷೇತ್ರ ಹಿಂದುಳಿದ ಸಮುದಾಯಗಳ ಜನರು, ವಿಶೇಷವಾಗಿ ನಾಮಧಾರಿಗಳು (ಈಡಿಗರು), ಮರಾಠರು, ಆದಿವಾಸಿ ಬುಡಕಟ್ಟು ಜನರು, ಪರಿಶಿಷ್ಟ ಜಾತಿ ವರ್ಗದ ಜನರು ಹೆಗಡೆಯ ಹುನ್ನಾರವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿದೆ. ಹಿಂದುಳಿದ ವರ್ಗಗಳಿಗೆ ಇರುವ ಮೀಸಲಾತಿ ಸೌಲಭ್ಯವನ್ನು ತೆಗೆದುಹಾಕಿ ಅವರನ್ನು ಮತ್ತೆ ಮೇಲ್ಜಾತಿಗಳ ಕಾಲಾಳುಗಳನ್ನಾಗಿ ಮಾಡಿಕೊಳ್ಳುವ ಹುನ್ನಾರಗಳನ್ನು ಉತ್ತರ ಕನ್ನಡದ ಜನತೆ ವಿಫಲಗೊಳಿಸಬೇಕಾಗಿದೆ.

More articles

Latest article