ಸಿಎಎ ಅಸ್ತ್ರದ ಹಿಂದೆ  ಧರ್ಮದ್ವೇಷದ ಪಾತ್ರ ಮತ್ತು ಚುನಾವಣೆ ಗೆಲ್ಲುವ ಸೂತ್ರ

Most read

ಅನ್ಯ ದೇಶದಿಂದ ಬಂದ ಸಂತ್ರಸ್ತರಿಗೆ ಮಾನವೀಯ ನೆಲೆಯಲ್ಲಿ ಆಶ್ರಯ ಕೊಟ್ಟು ಪೌರತ್ವ ನೀಡುವಂತಹ ಕಾಯಿದೆ ಅತ್ಯಂತ ಅಗತ್ಯವಾದದ್ದು. ಇಂತಹುದೊಂದು ಸಿಟಿಜನ್‌ಶಿಪ್‌ ಆಕ್ಟ್ 1955 ರಿಂದಲೂ ಭಾರತದಲ್ಲಿದೆ. ಅಗತ್ಯಕ್ಕೆ ತಕ್ಕಂತೆ ಅದು ಕಾಲಕಾಲಕ್ಕೆ ಬದಲಾಗುತ್ತಲೇ ಬಂದಿದೆ. ಈ ತನಕ, 12 ವರ್ಷದಿಂದ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿದ ಯಾವುದೇ ಧರ್ಮದ ಅನ್ಯದೇಶವಾಸಿಗಳು ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ ಭಾರತೀಯ ಪೌರತ್ವ ಪಡೆಯಬಹುದಾಗಿತ್ತು.

ಸಿಎ ಕಾಯ್ದೆಗೆ ತಿದ್ದುಪಡಿ

ಮುಸ್ಲಿಂ ಧರ್ಮದ್ವೇಷದ ಮೂಲಕವೇ ಅಸ್ತಿತ್ವಕ್ಕೆ ಬಂದ ಬಿಜೆಪಿ ಪಕ್ಷವು 2014 ರ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಮುಸ್ಲಿಮರನ್ನು ಹೊರಗಿಟ್ಟು ಪೌರತ್ವ ತಿದ್ದುಪಡಿ ತರುವುದಾಗಿ ಘೋಷಿಸಿತ್ತು. ಮಾನವೀಯ ಆಧಾರದ ಮೇಲೆ ಪೌರತ್ವ ಕೊಡುವಂತಹ ಕಾಯಿದೆಯನ್ನು ಧರ್ಮಾಧಾರಿತವಾಗಿ ಬದಲಾಯಿಸುವ ಸಂಕಲ್ಪವನ್ನು ಮಾಡಿತು. 2014 ರಲ್ಲಿ ಬಿಜೆಪಿ ನೇತೃತ್ವದ ಮೋದಿ ಸರಕಾರ ಬಂದನಂತರ 2016 ರಲ್ಲಿ ಸಿಎ ( ಸಿಟಿಜನ್‌ಶಿ‌ಪ್ ಆಕ್ಟ್) ಕಾಯಿದೆಗೆ ತಿದ್ದುಪಡಿ ತರುವ ಪ್ರಯತ್ನವನ್ನು ಸಂಸತ್ತಿನಲ್ಲಿ ಆರಂಭಿಸಿತು.

ಎರಡನೇ ಬಾರಿಯೂ ಅಧಿಕಾರಕ್ಕೆ ಬಂದಾಗ 2019 ಡಿಸೆಂಬರ್ 11 ರಲ್ಲಿ ಈ ತಿದ್ದುಪಡಿಗೆ ಸಂಸತ್ತಿನಲ್ಲಿ ಅಂಗೀಕಾರ ಪಡೆಯಲಾಯ್ತು. ಅದರ ಮಾರನೇ ದಿನವೇ ರಾಷ್ಟ್ರಪತಿಯವರ ಅಂಕಿತವೂ ಬಿದ್ದು ಇನ್ನೇನು ಸಿಎಎ( Citizenship Amendment Act) ಜಾರಿಗೆ ಬರಬೇಕು ಎನ್ನುವಷ್ಟರಲ್ಲಿ ದೇಶಾದ್ಯಂತ ಕಾಯಿದೆಗೆ ವಿರೋಧ ಭುಗಿಲೆದ್ದಿತು. ಹೋರಾಟಗಳು ತೀವ್ರಗೊಂಡವು. ಉತ್ತರಪ್ರದೇಶದ ಫಿರೋಜಾಬಾದ್ ನಲ್ಲಿ ಶಾಂತಿಯುತವಾಗಿ ನಡೆದಿದ್ದ ಪ್ರತಿಭಟನೆಯ ಸಮಯದಲ್ಲಿ ಹೋರಾಟವನ್ನು ಹತ್ತಿಕ್ಕಲು ಸಂಘಪರಿವಾರಿಗರು ಹೊರಗಿನಿಂದ ಕರೆತಂದ ಆಗುಂತಕರಿಂದ ಕಲ್ಲು ತೂರಾಟ ಮಾಡಿಸಿದರು. ಇದನ್ನೇ ನೆಪವಾಗಿರಿಸಿ ಪೊಲೀಸರು ಗುಂಡು ಹೊಡೆದು ಆರು ಜನರು ಹತ್ಯೆಗೊಳಗಾದರು. ಪ್ರತಿಭಟನಾಕಾರರ ಮೇಲೆ ಪ್ರಭುತ್ವದ ದಬ್ಬಾಳಿಕೆ ತೀವ್ರಗೊಂಡಿತು. ಹೋರಾಟಗಾರರ ಭಾವಚಿತ್ರದ ಪೋಸ್ಟರ್ ಗಳನ್ನು ಬೀದಿ ಬೀದಿಯಲ್ಲಿ ಅಂಟಿಸಿ ದೇಶದ್ರೋಹಿಗಳೆಂದು ಸಾರಲಾಯ್ತು. ಮುಸ್ಲಿಂ ಮನೆಗಳ ಮೇಲೆ ಡ್ರೋಣ್ ಗಳನ್ನು ಹಾರಿಬಿಟ್ಟು ಆತಂಕ ಸೃಷ್ಟಿಸಲಾಯ್ತು. ಆಳುವವರು ದಮನ ಮಾಡಿದಷ್ಟೂ ಜನರ ಪ್ರತಿಭಟನೆ ತೀವ್ರಗೊಂಡಿತು. ಸಿಎಎ ವಿರೋಧಿ ಹೋರಾಟದಲ್ಲಿ ನೂರಕ್ಕೂ ಹೆಚ್ಚು ಜನ ಮೃತರಾದರು. ಇದರಿಂದಾಗಿ ಬಿಜೆಪಿ ಸರಕಾರ ಅಂತಾರಾಷ್ಟ್ರೀಯವಾಗಿ ಮುಜುಗರ ಅನುಭವಿಸಿತು. ಜನಾಕ್ರೋಶಕ್ಕೆ ಹೆದರಿ ಅಂಗೀಕಾರಗೊಂಡ ಸಿಎಎ ಕಾಯಿದೆಯನ್ನು ಜಾರಿ ಆಗದಂತೆ ತಡೆಹಿಡಿಯಲಾಯ್ತು.

ತೀವ್ರ ವಿರೋಧ ಏನಿತ್ತು?

ಇಷ್ಟಕ್ಕೂ ಈ ರೀತಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುವಂತಹುದೇನು ಈ ತಿದ್ದುಪಡಿಯಲ್ಲಿತ್ತು ಅಂದರೆ ಈ ತಿದ್ದುಪಡಿ ಕಾಯ್ದೆ ಧರ್ಮದ್ವೇಷವನ್ನೇ ಪ್ರತಿಪಾದಿಸುವಂತಿತ್ತು. 2014 ಕ್ಕಿಂತಲೂ ಮುಂಚೆ ಭಾರತದ ನೆರೆಹೊರೆಯ ದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶಗಳಿಂದ ಅಕ್ರಮವಾಗಿ ಬಂದು ಭಾರತದಲ್ಲಿ ನೆಲೆಸಿದವರಿಗೆ  ಪೌರತ್ವವನ್ನು ಕೊಡುವ ಕಾಯಿದೆ ಇದಾಗಿದ್ದರೂ ಅದರಲ್ಲಿ ಮುಸ್ಲಿಂ ಸಮುದಾಯದ ವಲಸಿಗರಿಗೆ ಮಾತ್ರ ಅವಕಾಶವನ್ನು ನಿರಾಕರಿಸಲಾಗಿತ್ತು. ಆ ಮೂರು ದೇಶಗಳಿಂದ ದಮನಕ್ಕೊಳಗಾಗಿ ನೊಂದು ಭಾರತಕ್ಕೆ ಬಂದ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು, ಪಾರ್ಸಿಗಳು, ಜೈನರು ಹಾಗೂ ಸಿಖ್ಖರಿಗೆಲ್ಲಾ ಪೌರತ್ವ ಸಲೀಸಾಗಿತ್ತು. ಆದರೆ ಆ ಮೂರೂ ದೇಶಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದರಿಂದ ಅಲ್ಲಿಂದ ಬಂದವರು ಭಾರತದಲ್ಲಿ ನೆಲೆಸಿದ್ದರೆ ಅಂತವರನ್ನೆಲ್ಲಾ ಹಿಡಿದು ಆಯಾ ದೇಶಕ್ಕೆ ಗಡಿಪಾರು ಮಾಡುವಂತಹ ಮುಸ್ಲಿಂ ದ್ವೇಷದ  ಕಾಯಿದೆ ಇದಾಗಿತ್ತು.

ಪೌರತ್ವ ಕಾಯಿದೆ ಇದ್ದಿದ್ದೇ ನೆರೆಹೊರೆಯ ದೇಶದಿಂದ ದೌರ್ಜನ್ಯಕ್ಕೊಳಗಾಗಿ ಬಂದ ನಿರಾಶ್ರಿತರಿಗೆ ಮಾನವೀಯ ನೆಲೆಯಲ್ಲಿ ಭಾರತೀಯ ಪೌರತ್ವ ಕೊಡಲು. ಆ ದೇಶಗಳಲ್ಲಿ ಮುಸ್ಲಿಮರು ಮೆಜಾರಿಟಿಯಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಒಂದು ಸಮುದಾಯದವರನ್ನು ಕಾಯಿದೆ ವ್ಯಾಪ್ತಿಯಿಂದ ಹೊರಗಿಡುವುದು ಅಮಾನವೀಯ ಹಾಗೂ ತಾರತಮ್ಯದ ನಿರ್ಣಯ. ಇಷ್ಟಕ್ಕೂ ಮುಸ್ಲಿಂ ಬಾಹುಳ್ಯದ ಈ ಮೂರೂ ದೇಶಗಳಲ್ಲಿ ಮುಸ್ಲಿಮರ ಮೇಲೂ  ದಮನ ದಬ್ಬಾಳಿಕೆ ಅತಿಯಾಗಿದೆ. ಭಯೋತ್ಪಾದನೆ ಹಾಗೂ ಆತಂಕವಾದಿಗಳ ಕ್ರೌರ್ಯಕ್ಕೆ ಮುಸ್ಲಿಂ ಸಮುದಾಯದವರೂ ಈಡಾಗಿ ಭಾರತಕ್ಕೆ ಬದುಕು ಅರಸಿ ವಲಸೆ ಬಂದಿದ್ದಾರೆ. ಆ ಮೂರೂ ದೇಶಗಳಿಂದ ವಲಸೆ ಬಂದ ಎಲ್ಲಾ ಧರ್ಮದ ಸಂತ್ರಸ್ತರಿಗೂ ಪೌರತ್ವ ಕೊಟ್ಟು ಮುಸ್ಲಿಂ ಸಂತ್ರಸ್ತರಿಗೆ ಮಾತ್ರ ಅವಕಾಶ ನಿರಾಕರಿಸುವುದು ಬಿಜೆಪಿ ಸರಕಾರದ ಧರ್ಮದ್ವೇಷವನ್ನು ಸಾರುತ್ತದೆ. ಮೋದಿ ಸರಕಾರದ ದ್ವೇಷೋತ್ಪಾದನೆಯೇ ದೇಶಾದ್ಯಂತ ಸಿಎಎ ವಿರುದ್ಧ ಪ್ರತಿಭಟನೆ ಭುಗಿಲೇಳಲು ಕಾರಣವಾಗಿತ್ತು.

ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ಯಾಕೆ ಮುಸ್ಲಿಮರನ್ನು ಹೊರಗಿಡಲಾಯ್ತು?

ಯಾಕೆಂದರೆ ಈ ಮೂರೂ ಮುಸ್ಲಿಂ ದೇಶಗಳಿಂದ ಭಾರತಕ್ಕೆ ಬಂದು ನೆಲೆಸಿದ ಮುಸ್ಲಿಂ ಸಂತ್ರಸ್ತರ ಸಂಖ್ಯೆ ಲಕ್ಷ ಲಕ್ಷಗಳ ಲೆಕ್ಕದಲ್ಲಿದೆ. ಉತ್ತರ ಭಾರತದಿಂದ ಹಿಡಿದು ದಕ್ಷಿಣ ಭಾರತದಲ್ಲೂ ಈ ವಲಸಿಗರು ಹರಡಿಕೊಂಡಿದ್ದಾರೆ. ಆಧಾರ ಕಾರ್ಡ್, ರೇಶನ್ ಕಾರ್ಡ್, ಓಟರ್ ಐಡಿ ಗಳನ್ನೂ ಪಡೆದುಕೊಂಡಿದ್ದಾರೆ. ಬಿಜೆಪಿಯ ಮುಸ್ಲಿಂ ವಿರೋಧಿ ನಿಲುವಿನಿಂದಾಗಿ ಈ ವಲಸಿಗ ಮುಸ್ಲಿಮರು ಆ ಪಕ್ಷಕ್ಕೆ ಮತ ಹಾಕುವುದಿಲ್ಲ. ಹೀಗಾಗಿ ಬಿಜೆಪಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರುವ ಈ ಮತದಾರರನ್ನು ಗಡಿಪಾರು ಮಾಡಬೇಕಿದೆ. ಅದಕ್ಕಾಗಿ ಪೌರತ್ವ ಕಾಯಿದೆಗೆ ತಿದ್ದುಪಡಿ ತಂದು ಭಾರತದಲ್ಲಿ ಬದುಕು ಕಟ್ಟಿಕೊಂಡ  ಲಕ್ಷಾಂತರ ವಲಸಿಗ ಮುಸಲ್ಮಾನರನ್ನು ಭಾರತದಿಂದ ಹೊರದಬ್ಬುವ ಹುನ್ನಾರ ಈ ಸಿಎಎ ಕಾಯಿದೆಯ ಹಿಂದಿದೆ.

ಸಿಎಎಗೆ ವಿರೋಧ

ಈಶಾನ್ಯ ಭಾರತದ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಂ, ತ್ರಿಪುರಾ, ಮಣಿಪುರ ಮತ್ತು ಮೇಘಾಲಯದಲ್ಲಿ ಪರಿಸ್ಥಿತಿ ಬೇರೆಯದೇ ಆಗಿದೆ. ಅಲ್ಲಿ ಬುಡಕಟ್ಟು ಜನರು ಹಾಗೂ ಕ್ರಿಶ್ಚಿಯನ್ ಸಮುದಾಯದವರೇ ಹೆಚ್ಚಾಗಿದ್ದಾರೆ. ಬಾಂಗ್ಲಾ ಮತ್ತು ಪಾಕಿಸ್ತಾನಗಳಿಂದ ವಲಸೆ ಬಂದು ನೆಲೆಸಿದ ಹಿಂದೂಗಳೂ ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಅಂತಹ ಹಿಂದೂಗಳಿಗೆ ಭಾರತದ ಪೌರತ್ವವನ್ನು ಕೊಟ್ಟು ಕ್ರಿಶ್ಚಿಯನ್ ಪ್ರಾಬಲ್ಯವನ್ನು ಮುರಿಯುವ ಶಡ್ಯಂತ್ರವೂ ಈ ಸಿಎಎ ಹಿಂದಿದೆ. ಹೀಗಾಗಿ ಈ ರಾಜ್ಯಗಳ ನಿವಾಸಿಗಳು ವಲಸೆ ಬಂದ ಹಿಂದೂಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. 2019 ರಲ್ಲಿ ಸಿಎ ಬಿಲ್ ಸಂಸತ್ತಿನಲ್ಲಿ ಪಾಸ್ ಆದ ತಕ್ಷಣ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಆಸ್ಸಾಂ ಗಣ ಪರಿಷತ್ ಮೈತ್ರಿಯನ್ನು ಕಡಿದುಕೊಂಡು ಸಿಎಎ ವಿರೋಧಿಸಿತು. ಮಣಿಪುರದ ಸಿಎಂ ಬಿರೇನ್ ಸಿಂಗ್ ಈ ತಿದ್ದುಪಡಿ ಕಾಯಿದೆಯನ್ನು ತಿರಸ್ಕರಿಸಿದರು. ಮೇಘಾಲಯದ ಯುಡಿಪಿ ಹಾಗೂ ಎನ್ ಪಿಪಿ ಪಕ್ಷಗಳು ತಿರುಗಿ ಬಿದ್ದವು. ನಾಗಾಲ್ಯಾಂಡಿನಲ್ಲಿ ಪ್ರತಿಭಟನೆಗಳು ತೀವ್ರಗೊಂಡವು. ಇಡೀ ಈಶಾನ್ಯ ಭಾರತದ ರಾಜ್ಯಗಳು ಬಿಜೆಪಿಯ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ತಿರುಗಿ ಬಿದ್ದವು. ಈ ರಾಜ್ಯದ ನಿವಾಸಿಗಳಿಗೆ ಮುಸ್ಲಿಂ ವಲಸಿಗರಿಗಿಂತಲೂ ಹಿಂದೂ ವಲಸಿಗರ ಪ್ರಾಬಲ್ಯ ಹೆಚ್ಚುವ ಆತಂಕವೇ ಹೆಚ್ಚಾಗಿತ್ತು. ಒಂದು ಕಡೆ ಮುಸ್ಲಿಂ ವಿರೋಧಿ ಎಂದು ದೇಶಾದ್ಯಂತ ಪ್ರತಿಭಟನೆಗಳು ನಡೆದರೆ ಇನ್ನೊಂದು ಕಡೆ ಈಶಾನ್ಯ ಭಾರತದಲ್ಲಿ ಹಿಂದೂ ವಲಸಿಗರಿಗೆ ಪೌರತ್ವ ವಿರೋಧಿಸಿ ಹೋರಾಟಗಳು ಶುರುವಾದವು. ಈ ಎಲ್ಲಾ ಪ್ರತಿರೋಧದಿಂದಾಗಿ ಇಕ್ಕಟ್ಟಿಗೆ ಸಿಲುಕಿದ ಮೋದಿ ಸರಕಾರ ಸಿಎಎ ಕಾಯಿದೆಯನ್ನು ಜನಾಕ್ರೋಶದ ವಿರುದ್ಧ ಜಾರಿ ಮಾಡುವ ದುಸ್ಸಾಹಸಕ್ಕಿಳಿಯಲಿಲ್ಲ. ಆದರೆ ಬಿಜೆಪಿ ಸರಿಯಾದ ಸಮಯಕ್ಕೆ ಕಾಯುತ್ತಲೇ ಇತ್ತು. ಕಾಯಿದೆಯನ್ನು ಸಂಸತ್ತಿನಲ್ಲಿ ನವೀಕರಿಸುತ್ತಲೇ ಬಂದಿತ್ತು. ಅಮಿತ್ ಶಾ ರವರು ಚುನಾವಣೆಗೆ ಮುನ್ನ ಈ ಕಾಯಿದೆಯನ್ನು ಜಾರಿ ಮಾಡುವುದು ಶತಸಿದ್ಧ ಎಂದು ಹೇಳಿಯಾಗಿತ್ತು.

ಕಾಯ್ದೆಯ ಜಾರಿ

ಈಗ 2024. ಲೋಕಸಭೆಯ ಚುನಾವಣೆಗೆ ಸಮಯ ಘೋಷಣೆಯಾಗಲು ಕೆಲವೇ ದಿನಗಳು ಬಾಕಿ ಇವೆ. ಹತ್ತು ವರ್ಷಗಳ ಹಿಂದೆ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಜಾರಿ ಮಾಡಲು ಬಿಜೆಪಿ ಈಗ ಮುಹೂರ್ತ ನಿಗದಿಪಡಿಸಿತು. 2019 ರಿಂದ ಜನರ ಪ್ರತಿಭಟನೆಯಿಂದಾಗಿ ನೆನಗುದಿಗೆ ಬಿದ್ದಿದ್ದ ಸಿಎಎ ಕಾಯಿದೆಯನ್ನು ಜಾರಿಗೆ ತರಲು ಈಗ  2024 ಮಾರ್ಚ್ 11 ರಂದು ಅಧಿಸೂಚನೆ ಹೊರಡಿಸಲಾಯ್ತು. ಇದೇ ದಿನಾಂಕದಿಂದಲೇ ಉತ್ತರ ಪ್ರದೇಶದಲ್ಲಿ ಈ ಕಾಯಿದೆ ಜಾರಿ ಮಾಡಲಾಯ್ತು.

ಚುನಾವಣೆಯ ಸಂದರ್ಭದಲ್ಲೇ ಯಾಕೆ?

ಇಷ್ಟು ವರ್ಷ ಬಿಟ್ಟು ಈಗ ಚುನಾವಣೆಯ ಸಂದರ್ಭದಲ್ಲಿ ಯಾಕೆ ಈ ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಮಾಡಲಾಯ್ತು? ಯಾಕೆಂದರೆ 2014 ರಲ್ಲಿ ರಾಮಜನ್ಮಭೂಮಿ ವಿವಾದವನ್ನು ದೊಡ್ಡದಾಗಿಸಿ ಭಾವನಾತ್ಮಕ ಪ್ರಚೋದನೆ ಮಾಡಿ ಹಿಂದೂಗಳ ಮತ ಕ್ರೋಢೀಕರಿಸಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. 2019 ರಲ್ಲೂ ಪುಲ್ವಾಮಾ ಯೋಧರ ಹತ್ಯಾಕಾಂಡವನ್ನು ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿ ರಾಷ್ಟ್ರೀಯತೆಯನ್ನು ಪ್ರಚೋದಿಸಿ ಮತ್ತೆ ಬಹುಮತ ಗಳಿಸಿತು. ಈ ಸಲ, 2024 ರ ಚುನಾವಣೆಯಲ್ಲಿ ತರಾತುರಿಯಲ್ಲಿ ಅಪೂರ್ಣ ರಾಮಮಂದಿರ ಉದ್ಘಾಟಿಸಿ ರಾಮಭಕ್ತಿಯ ಮೇನಿಯಾ ಸೃಷ್ಟಿಸಿ ಮತ್ತೆ ಅಧಿಕಾರಕ್ಕೆ ಬರುವುದೇ ಮೋದಿಯವರ ಉದ್ದೇಶವಾಗಿದೆ. ಆಡಳಿತ ವಿರೋಧಿ ಅಲೆಯನ್ನು ತಡೆಯಲು ರಾಮನಾಮದ ಅಲೆಯೊಂದೇ ಸಾಲದು ಎಂದು ಅರಿತು ಈಗ ಹಿಂದೂಗಳ ಮತ ಕ್ರೋಢಿಕರಿಸಲು ಮುಸ್ಲಿಂ ಧರ್ಮದ್ವೇಷ ಪೀಡಿತ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಚುನಾವಣಾ ಹೊಸ್ತಿಲಲ್ಲಿ ಜಾರಿಗೊಳಿಸಿದೆ. ಕೊನೆಯ ಕ್ಷಣದಲ್ಲಿ ಈ ಕರಾಳ ಕಾಯಿದೆ ಜಾರಿಗೊಳಿಸಿದ್ದರ ಹಿಂದೆ ಧರ್ಮದ್ವೇಷ ಹಾಗೂ ರಾಜಕೀಯ ಶಡ್ಯಂತ್ರ ಬಿಟ್ಟರೆ ಇನ್ನೇನೂ ಇಲ್ಲ.

ಮೋದಿ ಶಾ ಗೆ ಆತಂಕ..

ಸಿಎಎ ಕಾಯಿದೆ ಅನುಷ್ಠಾನದ ಅಧಿಸೂಚನೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಸರಕಾರಗಳು ನಿರ್ಣಯ ತೆಗೆದುಕೊಂಡಿವೆ. ಆಸ್ಸಾಂ ರಾಜ್ಯದ ವಿರೋಧ ಪಕ್ಷಗಳು ಪ್ರತಿಭಟನೆಗೆ ಕರೆ ಕೊಟ್ಟಿವೆ. ದೇಶಾದ್ಯಂತ ಮುಸ್ಲಿಂ ಸಮುದಾಯ ಅಸಹನೆ ಹೊಂದಿದೆ. ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಇಷ್ಟೆಲ್ಲಾ ವಿರೋಧಗಳ ನಡುವೆಯೂ ಬಿಜೆಪಿ ಸರಕಾರ ಧರ್ಮಾಧಾರಿತವಾದ ಪೌರತ್ವ ಕಾಯಿದೆಯನ್ನು ಜಾರಿಗೆ ತರಲು ಕಟಿಬದ್ಧವಾಗಿದೆ. ಉತ್ತರಪ್ರದೇಶದಲ್ಲಿ ಅದನ್ನು ಜಾರಿ ಮಾಡಲಾಗಿದೆ. ಈ ಕಾಯಿದೆ ಉಭಯ ಸದನಗಳಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಯವರ ಒಪ್ಪಿಗೆ ಸಿಕ್ಕ ನಾಲ್ಕು ವರ್ಷಗಳ ನಂತರ ಮತ್ತು ಚುನಾವಣೆ ಘೋಷಣೆಗೆ ನಾಲ್ಕಾರು ದಿನಗಳ ಮುಂಚೆ ಜಾರಿ ಮಾಡಿದ್ದಾದರೂ ಯಾಕೆ? ಯಾಕೆಂದರೆ ಚುನಾವಣಾ ಬಾಂಡ್ ವಿವರವನ್ನು ಬಹಿರಂಗಪಡಿಸಲು SBI ಗೆ ಸುಪ್ರೀಂ ಕೋರ್ಟ್ ಆದೇಶಿಸಿತು. ಎಲ್ಲಿ ಈ ವರದಿಯಲ್ಲಿ ಬಿಜೆಪಿ ಪಕ್ಷದ ಆರ್ಥಿಕ ಅಪರಾಧಗಳು ಹೊರಗೆ ಬಂದು ಚುನಾವಣೆಯ ಗೆಲುವಿಗೆ ಧಕ್ಕೆ ಬರುತ್ತದೋ ಎಂದು ಆತಂಕಗೊಂಡ ಮೋದಿ ಶಾ ಜೋಡಿ ಕೋಮಾದಲ್ಲಿದ್ದ ಸಿಎಎ ಎಂಬ ಭೂತವನ್ನು ಬಡಿದೆಬ್ಬಿಸಿದೆ. ಜನರ ಗಮನವನ್ನು ಅತ್ತ ಡೈವರ್ಟ್ ಮಾಡಿ ಚುನಾವಣಾ ಬಾಂಡ್ ಹಗರಣದ ತೀವ್ರತೆಯನ್ನು ಕಡಿಮೆ ಮಾಡುವುದೇ ಬಿಜೆಪಿ ಯ ಉದ್ದೇಶವಾಗಿದೆ.

ದೇಶವನ್ನು ಕಾಪಾಡಿಕೊಳ್ಳಬೇಕಿದೆ

ಮುಸ್ಲಿಮರ ಮೇಲೆ ಹಿಂದೂಗಳನ್ನು ಎತ್ತಿಕಟ್ಟಿ ಧರ್ಮದ್ವೇಷೋತ್ಪಾದನೆಯ ಮೂಲಕ ಮತ್ತೆ ಮೋದಿ ಸರಕಾರ ಪ್ರತಿಷ್ಠಾಪಿಸುವ ಹುನ್ನಾರವನ್ನು ಈ ದೇಶದ ಸಮಸ್ತ ಜನರು ಅರ್ಥ ಮಾಡಿಕೊಳ್ಳಬೇಕಿದೆ. ಕಳೆದ ಹತ್ತು ವರ್ಷಗಳಿಂದ ಹಿಂದೂ ಧರ್ಮ ಅಪಾಯದಲ್ಲಿದೆ, ಭಾರತಕ್ಕೆ ಆತಂಕವಿದೆ ಎನ್ನುವ ಹಸಿ ಸುಳ್ಳುಗಳನ್ನು ಬಿತ್ತುತ್ತಲೇ ಭಾವಪ್ರಚೋದನೆ ಮಾಡುವ ಕಾಯಕವನ್ನು ಬಿಟ್ಟು ಬೇರೇನನ್ನೂ ಮಾಡದೆ ಭಾರತೀಯರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿ, ಭಾರತವನ್ನು ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿಸಿದ ಮೋದಿ ಸರಕಾರವನ್ನು ತಿರಸ್ಕರಿಸುವ ಅವಕಾಶ ಬಂದಿದೆ. ಸಮಾನತೆ ಸಾರುವ ಸಂವಿಧಾನ ಬದಲಾವಣೆ ಹಾಗೂ ಮನುವಾದಿ ಪ್ರಣೀತ ಹಿಂದುತ್ವದ ಸ್ಥಾಪನೆಯೇ ಬಿಜೆಪಿ ಪಕ್ಷ ಹಾಗೂ ಅದರ ಮಾತೃ ಸಂಸ್ಥೆ ಆರೆಸ್ಸೆಸ್ ಉದ್ದೇಶವೆಂಬುದನ್ನು ಈ ದೇಶವಾಸಿಗಳು ಅರಿತುಕೊಂಡು ಬಿಜೆಪಿ ಯನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಬಹುತ್ವವನ್ನು, ಸಂವಿಧಾನವನ್ನು ಆ ಮೂಲಕ ದೇಶವನ್ನು ಕಾಪಾಡಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಸರ್ವಾಧಿಕಾರಿ ಪ್ರಭುತ್ವದ ದಮನಕ್ಕೆ ಬಲಿಯಾಗಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article