ದೆಹಲಿ ಅಬಕಾರಿ ನೀತಿ ಪ್ರಕರಣದ ಆರೋಪಿ ಉದ್ಯಮಿಯಿಂದ ಬಿಜೆಪಿಗೆ ಚುನಾವಣಾ ಬಾಂಡ್‌ ಮೂಲಕ 30 ಕೋಟಿ ರೂ. ದೇಣಿಗೆ

Most read

ಚುನಾವಣಾ ಬಾಂಡ್‌ನ ಎಲ್ಲಾ ಮಾಹಿತಿ ಬಹಿರಂಗವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಮುಖವಾಡ ಕಳಚಿ ಬೀಳುತ್ತಿದ್ದೆ. ಹೌದು, ಕಳೆದ ವಾರದಲ್ಲಿ, ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ರಾಜಕಾರಣಿಗಳನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಚುನಾವಣಾ ಅಯೋಗ ಚುನಾವಣಾ ಬಾಂಡ್‌ಗಳ ಎಲ್ಲಾ ದಾಖಲಾತಿಯನ್ನು ಬಿಡುಗಡೆ ಮಾಡಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಪ್ರಮುಖ ಅರೋಪಿಯಾಗಿ ಬಂಧನವಾಗಿದ್ದ ಉದ್ಯಮಿ ಶರತ್ ಚಂದ್ರ ರೆಡ್ಡಿ ಅವರು 55 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳ ಖರೀದಿಸಿ ಶೇಕಡಾ 66 ರಷ್ಟನ್ನು ಬಿಜೆಪಿ ಪಾವತಿಸಿದೆ ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು ಬಹಿರಂಗಪಡಿಸಿವೆ.

2022ರ ನವೆಂಬರ್‌ನಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧಿತರಾದ ಶರತ್ ಚಂದ್ರ ರೆಡ್ಡಿ ಅವರ ಕಂಪನಿಯಾದ ಅರಬಿಂದೋ ಫಾರ್ಮಾ ಈ ಬಾಂಡ್‌ಗಳನ್ನು ಖರೀದಿಸಿ ಬಿಜೆಪಿಗೆ ನೀಡಿದೆ ಎಂದು ದಾಖಲೆಗಳು ಬಹಿರಂಗವಾಗಿದೆ. ಏಪ್ರಿಲ್ 2021 ಮತ್ತು ನವೆಂಬರ್ 2023 ರ ನಡುವೆ ಅರಬಿಂದೋ ಫಾರ್ಮಾ 52 ಕೋಟಿ ರೂಪಾಯಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ ಅದರಲ್ಲಿ ಶೇಕಡಾ 66ರಷ್ಟು ಬಾಂಡ್‌ಗಳು ಬಿಜೆಪಿಗೆ ಸಂದಾಯವಾಗಿದೆ. ಶೇಕಡಾ 29 ರಷ್ಟು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಉಳಿದ ಭಾಗವನ್ನು ತೆಲುಗು ದೇಶಂ ಪಾರ್ಟಿ (ಟಿಡಿಪಿ) ನೀಡಿದೆ ಎಂದು ದಾಖಲೆಗಳು ತಿಳಿಸಿವೆ.

2022 ನವೆಂಬರ್ 10ರಲ್ಲಿ ಶರತ್ ರೆಡ್ಡಿಯನ್ನು ಬಂಧಿಸಿದ ಐದು ದಿನಗಳ ನಂತರ (ನವೆಂಬರ್ 15, 2022 ) 52 ಕೋಟಿ ರೂಪಾಯಿಗಳ ಬಾಂಡ್‌ಗಳಲ್ಲಿ 5 ಕೋಟಿ ರೂ. ಬಾಂಡ್‌ ಅನ್ನು ಅರಬಿಂದೋ ಫಾರ್ಮಾ ಹೆಸರಿನಲ್ಲಿ ಖರೀದಿಸಲಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಆ 5 ಕೋಟಿ ರೂ.ಗಳನ್ನು ಬಿಜೆಪಿಯು ನವೆಂಬರ್ 21, 2022 ರಂದು ರಿಡೀಮ್ ಮಾಡಿದೆ ಎಂದು ಬಹಿರಂಗವಾಗಿದೆ.

ಜಾರಿ ನಿರ್ದೇಶನಾಲಯದ ಪ್ರಕಾರ, ದೆಹಲಿಯಲ್ಲಿ ಮದ್ಯದ ವ್ಯವಹಾರದ ಮೇಲೆ ಹಿಡಿತ ಸಾಧಿಸಲು ಕವಿತಾ ಮತ್ತು ಇತರ ವ್ಯಕ್ತಿಗಳು “ಸೌತ್ ಗ್ರೂಪ್” ಮೂಲಕ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ನಾಯಕರಿಗೆ 100 ಕೋಟಿ ರೂಪಾಯಿಗಳ ಲಂಚವನ್ನು ಪಾವತಿಸಿದ್ದಾರೆ. “ಸೌತ್ ಗ್ರೂಪ್” ನ ಸದಸ್ಯರಿಗೆ ಸಂಪರ್ಕ ಹೊಂದಿದ ಸಂಸ್ಥೆಗಳು, ಚುನಾವಣಾ ಬಾಂಡ್‌ಗಳ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಕನಿಷ್ಠ 55 ಕೋಟಿ ರೂ.ಗಳನ್ನು ಪಾವತಿಸಿವೆ ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು ಬಹಿರಂಗಪಡಿಸಿವೆ.

ಹೈದರಾಬಾದ್ ಮೂಲದ ಉದ್ಯಮಿ ಶರತ್ ಚಂದ್ರ ರೆಡ್ಡಿ ಅವರು ಅಬಕಾರಿ ನೀತಿಯಡಿ ಐದು ಮದ್ಯದಂಗಡಿ ಪರವಾನಗಿ ಪಡೆದಿದ್ದಾರೆ ಎಂದು ಇಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಅಬಕಾರಿ ನೀತಿಯು ದೆಹಲಿಯಲ್ಲಿ ನವೆಂಬರ್ 2021 ರಿಂದ ಜುಲೈ 2022 ರವರೆಗೆ ಜಾರಿಯಲ್ಲಿತ್ತು. ಶರತ್ ರೆಡ್ಡಿ ಅವರನ್ನು ಜಾರಿ ನಿರ್ದೇಶನಾಲಯವು ನವೆಂಬರ್ 11, 2022 ರಂದು ಬಂಧಿಸಿತ್ತು. ನಂತರ (ನವೆಂಬರ್ 15, 2022 ) 52 ಕೋಟಿ ರೂಪಾಯಿಗಳ ಬಾಂಡ್‌ಗಳಲ್ಲಿ 5 ಕೋಟಿ ರೂ. ಬಾಂಡ್‌ ಅನ್ನು ಅರಬಿಂದೋ ಫಾರ್ಮಾ ಹೆಸರಿನಲ್ಲಿ ಖರೀದಿಸಿ ಬಿಜೆಪಿಗೆ ಹಸ್ತಾಂತರಿಸಿತ್ತು. ಮೇ 2023 ರಲ್ಲಿ, ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ, ಇಡಿ ಅದನ್ನು ವಿರೋಧಿಸಲಿಲ್ಲ. ಅವರು ಜೈಲಿನಿಂದ ಬಿಡುಗಡೆಯಾದ ನಂತರ, ಅರಬಿಂದೋ ಫಾರ್ಮಾವು ನವೆಂಬರ್ 8, 2023 ರಂದು ಬಾಂಡ್‌ಗಳ ಮೂಲಕ ಬಿಜೆಪಿಗೆ ಇನ್ನೂ 25 ಕೋಟಿ ರೂ. ದೇಣಿಗೆ ನೀಡಿರುವುದು ದಾಖಲೆಯಲ್ಲಿ ಬಹಿರಂಗವಾಗಿದೆ.

CompanyDirectorDateAmount
Aurobindo PharmaSarath Chandra ReddyNovember 15, 2022Rs 5 crore
Aurobindo PharmaSarath Chandra ReddyNovember 8, 2023Rs 25 crore
APL Healthcare LtdSarath Chandra ReddyNovember 8, 2023Rs 10 crore
Eugia Pharma Specialities LtdRagunathan Kannan (also Director of Aurobindo)November 8, 2023Rs 15 crore
TotalRs 55 crore

2022-’23ರ ಪೋಷಕ ಕಂಪನಿಯ ವಾರ್ಷಿಕ ವರದಿಯ ಪ್ರಕಾರ, ಯುಜಿಯಾ ಫಾರ್ಮಾ ಸ್ಪೆಷಾಲಿಟೀಸ್ ಲಿಮಿಟೆಡ್ ಮತ್ತು ಎಪಿಎಲ್ ಹೆಲ್ತ್‌ಕೇರ್ ಲಿಮಿಟೆಡ್ ಅರಬಿಂದೋ ಫಾರ್ಮಾದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಳಾಗಿವೆ. ಈ ಎರಡೂ ಕಂಪನಿಗಳು ಅರಬಿಂದೋ ಫಾರ್ಮಾದೊಂದಿಗೆ ಕನಿಷ್ಠ ಒಬ್ಬ ನಿರ್ದೇಶಕರನ್ನು ಹಂಚಿಕೊಳ್ಳುತ್ತವೆ.

ಜೂನ್ 2023 ರಲ್ಲಿ, ದೆಹಲಿ ನ್ಯಾಯಾಲಯವು ಪ್ರಸ್ತುತ ಅರಬಿಂದೋ ಫಾರ್ಮಾದ ಕಾರ್ಯನಿರ್ವಾಹಕ ಅಲ್ಲದ ನಿರ್ದೇಶಕರಾಗಿರುವ ಶರತ್ ರೆಡ್ಡಿ ಅವರಿಗೆ ಮದ್ಯ ನೀತಿ ಪ್ರಕರಣದಲ್ಲಿ ಅನುಮೋದಕರಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಿತು. ಹೆಚ್ಚುವರಿಯಾಗಿ, ಈ ಪ್ರಕರಣದಲ್ಲಿ ನ್ಯಾಯಾಲಯವು ರೆಡ್ಡಿಗೆ ಕ್ಷಮಾದಾನವನ್ನು ವಿಸ್ತರಿಸಿತು.

More articles

Latest article