ಬುರ್ರಕಥಾ ಕಮಲಮ್ಮಗೆ ಯುನೆಸ್ಕೊ ಮಾನ್ಯತೆಯ ಕ.ಜಾ.ಪ ವತಿಯಿಂದ ಅಭಿನಂದನಾಪೂರ್ವಕ ಗೌರವ ಸನ್ಮಾನ…!

Most read

ದೇವದುರ್ಗ ನ.11: ಹಟ್ಟಿ ಪಟ್ಟಣದ ಖ್ಯಾತ ಬುರ್ರಕಥಾ ಕಮಲಮ್ಮ ಅವರ ಅಪರೂಪದ ಜನಪದ ಕಲೆ ಮತ್ತು ಸೇವೆಯನ್ನು ಗುರುತಿಸಿ ಈ ಮೊದಲು ನಮ್ಮ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ರಾಜ್ಯ ಘಟಕ ಹಾಗೂ ಲಿಂಗಸೂಗೂರು ತಾಲೂಕು ಘಟಕದ ವತಿಯಿಂದ‌ ದಿ: 03-04-2021 ರಂದು ಲಿಂಗಸೂಗೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದಿದ್ದ 2021 ರ ರಾಯಚೂರು ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನದಲ್ಲಿ ಜಾನಪದ ಸಿರಿ ಜಿಲ್ಲಾ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಗಿತ್ತು. ತದನಂತರ ಅವರಿಗೆ ಕರ್ನಾಟಕ ಸರ್ಕಾರವು 2022 ರಲ್ಲಿ ಜಾನಪದ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿತು. ಆದ್ದರಿಂದ ಯುನೆಸ್ಕೊ ಮಾನ್ಯತೆ ಪಡೆದ ನಮ್ಮ ಸಂಸ್ಥೆ ನಾಡೋಜ ಡಾ. ಎಚ್ ಎಲ್ ನಾಗೇಗೌಡ ಸ್ಥಾಪಿತ ಕರ್ನಾಟಕ ಜಾನಪದ ಪರಿಷತ್ತಿನ ರಾಯಚೂರು ಜಿಲ್ಲಾ ಘಟಕದ ವತಿಯಿಂದ ಎರಡನೇ ಜಾನಪದ ಸಮ್ಮೇಳನವು ದೇವದುರ್ಗದ ಖೇಣೇದ್ ಮುರಿಗೆಪ್ಪ ಮಹಾವಿದ್ಯಾಲಯದ ಆವರಣದಲ್ಲಿ ಹಾಗೂ ಪ್ರಕಾಶ ಖೇಣೇದ್ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿಸಿದ ದೇವದುರ್ಗ ಜಾನಪದ ವೈಭವದ ಅಂಗವಾಗಿ ಹಟ್ಟಿ ಪಟ್ಟಣದ ಹಿರಿಯ ಜಾನಪದ, ಬುರ್ರಕಥಾ ಕಲಾವಿದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಖ್ಯಾತಿಯ ಸಾಧಕಿ ಬುರ್ರಕಥಾ ಕಮಲಮ್ಮ ಅವರಿಗೆ ಅಭಿನಂದಿಸಿ, ಮತ್ತೊಮ್ಮೆ ವಿಶೇಷ ಗೌರವದೊಂದಿಗೆ ಸನ್ಮಾನ ಮಾಡಲಾಯಿತು ಎಂದು ಕ.ಜಾ.ಪ ಜಿಲ್ಲಾಧ್ಯಕ್ಷರಾದ ಡಾ. ಶರಣಪ್ಪ ಆನೆಹೊಸೂರು ಹರ್ಷವ್ಯಕ್ತಪಡಿಸಿದರು.

ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದ ಬುರ್ರಕಥಾ ಖ್ಯಾತಿಯ ಈ ಕಮಲಮ್ಮನವರು ಬಹಳಷ್ಟು ಲೆಕ್ಕವಿಲ್ಲದಷ್ಟು ಜನಪದ, ಸೋಬಾನೆ ಪದ, ಜೋಗುಳ ಪದ, ಬೀಸುವ ಪದ, ಕುಟ್ಟುವ ಪದ, ತೊಟ್ಟಿಲು ಪದ, ಸೀಮಂತ ಕಾರ್ಯಕ್ರಮ, ಹಬ್ಬ-ಹುಣ್ಣಿಮೆಗಳಲ್ಲಿ ಹತ್ತಿ ಬಿಡಿಸುವಾಗಿನ ಪದಗಳು, ಬಿತ್ತನೆ ಸಂದರ್ಭದ ಪದ, ಮದುವೆಯ ಅರಿಶಿಣದ ಪದಗಳನ್ನು, ಮೈನೆರೆದಾಗ ಕರೆದ್ರೆ ಅಲ್ಲೂ ಸಹ ಸಾಕಷ್ಟು ಹಾಡುಗಳನ್ನು ಹಾಡುತ್ತಾ ಹಾಗೂ ಪರಂಪರಾಗತ ಹಾಡುಗಳ ಜೊತೆಗೆ ಬುರ್ರಕಥೆಗಳನ್ನು ಹೇಳುತ್ತಾರೆ. ಇವರು ಪ್ರಮುಖವಾಗಿ ಹಾಡುವ ಬುರ್ರಕಥೆಗಳೆಂದರೆ- ಬಾಲನಾಗಮ್ಮನ ಕಥೆ, ಏಳು ಮಕ್ಕಳ ತಾಯಿ ಭೂಲಕ್ಷ್ಮೀ ಕಥೆ, ಶರಬಂಧರಾಜ ಕಥೆ, ಬಾಲರಾಜ ಕಥೆ, ಚಿತ್ರಶೇಖರ-ಸೋಮಶೇಖರ ಕಥೆ, ಲಕ್ಷಪತಿರಾಜ ಕಥೆ, ಆದೋನಿ ತಿಕ್ಕಲಕ್ಷಮ್ಮ ಕಥೆ, ಸವಾರೆಮ್ಮ ಕಥೆ, ಹೇಮರೆಡ್ಡಿ ಮಲ್ಲಮ್ಮ ಕಥೆ, ಬಳ್ಳಾರಿ ಕೂಸಲಿಂಗ ಕಥೆ, ಕುಮಾರಸ್ವಾಮಿ ಕಥೆ ಇತ್ಯಾದಿ ಬುರ್ರಕಥಾಗಳನ್ನು ಹಾಡುತ್ತಾರೆ. ಈ ಅದ್ಭುತ ಕಲಾವಿದೆಯ ಜನಪದ ಹಾಡುಗಳು, ಕಾವ್ಯಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳು ಪುಸ್ತಕ ರೂಪದಲ್ಲಿ ಸಂಗ್ರಹಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ.

ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷರು ಪ್ರಕಾಶ ಖೇಣೇದ್, ಕ.ಜಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷರು ಮಹಾಂತೇಶ ಮಸ್ಕಿ, ಕ.ಜಾ.ಪ ತಾಲೂಕಾಧ್ಯಕ್ಷರು ಬಸವರಾಜ ಯಾಟಗಲ್, ಶ್ರೀದೇವಿ ಆರ್ ನಾಯಕ್, ಡಾ. ಅರುಣಾ ಹಿರೇಮಠ ಮಹಿಳಾ ಘಟಕದ ಜಿಲ್ಲಾಧ್ಯಕ್ಷರು, ರವಿ ರಾಯಚೂರಕರ್, ಅಭಿಷೇಕ ಬಳೆ ಮಸರಕಲ್ ಹಾಗೂ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.

More articles

Latest article