ಬೆಂಗಳೂರು: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗುತ್ತಿದ್ದರೆ ಇಂದು ಹೆಣ್ಣೂರು ಸಮೀಪದ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದೆ. ಪ್ರಾಥಮಿಕ ಮೂಲಗಳು ಪ್ರಕಾರ ಕಟ್ಟಡ ಅವಶೇಷಗಳಡಿಯಲ್ಲಿ 16 ಕಾರ್ಮಿಕರು ಸಿಲುಕಿರಬಹುದು ಎಂದು ತಿಳಿದು ಬಂದಿದೆ.
ಅವಶೇಷಗಳಡಿ ಸಿಲುಕಿದ್ದ ಮೂವರು ಕಾರ್ಮಿಕರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ.
ಕಾರ್ಮಿಕರ ರಕ್ಷಣಾ ಕಾರ್ಯಚರಣೆ ನಡೆದಿದೆ. ಭಾರೀ ಮಳೆಗೆ ಈ ಕಟ್ಟಡ ಕುಸಿದು ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಸಂಜೆ 4 ಗಂಟೆ 10 ನಿಮಿಷಕ್ಕೆ ಈ ಕಟ್ಟಡ ಕುಸಿದಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯಾಹ್ನ ಸುರಿದ ಭಾರೀ ಮಳೆಗೆ ಕಟ್ಟಡ ಕುಸಿದಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಶಾಸಕ ಭೈರತಿ ಬಸವರಾಜ್ ಭೇಟಿ ನೀಡಿ ಕಟ್ಟಡ ಕುಸಿತದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಆರು ಅಂತಸ್ತಿನ ಅಪಾರ್ಮೆಂಟ್ ನಿರ್ಮಾಣ ಕೆಲಸ ನಡೆಯುತ್ತಿದ್ದು, ಪೇಟಿಂಗ್ ಕೆಲಸಗಳು ನಡೆಯುತ್ತಿದ್ದವು ಎಂದು ವರದಿಯಾಗಿದೆ.