2025-26ನೇ ಸಾಲಿನ ಬಜೆಟ್‌ ಮುಖ್ಯಾಂಶಗಳು

Most read

ಸನ್ಮಾನ್ಯ ಸಭಾಧ್ಯಕ್ಷರೆ,

  1. 2025-26ನೇ ಸಾಲಿನ ಆಯವ್ಯಯವನ್ನು ಸದನದ ಮುಂದೆ ಮಂಡಿಸಲು ನಾನು ಹರ್ಷಿಸುತ್ತೇನೆ.
  2. ಆಯವ್ಯಯ ಎನ್ನುವುದು ಕೂಡಿ ಕಳೆಯುವ ಅಂಕಿ ಸಂಖ್ಯೆಗಳ ನಿರ್ಜೀವ ಆಟವಲ್ಲ. ಏಳು ಕೋಟಿ ಜನರ ಬದುಕಿನ ಭರವಸೆಯ ಉಸಿರು ಎಂಬ ಅರಿವಿನೊಂದಿಗೆ ನಮ್ಮ ಸಂಕಲ್ಪಗಳನ್ನು
    ನಾಡಿನ ಜನಕೋಟಿಯ ಮುಂದಿರಿಸುವ ಬಹುದೊಡ್ಡ ಹೊಣೆಗಾರಿಕೆಯೊಂದಿಗೆ ನಿಂತಿದ್ದೇನೆ.
    ನಮ್ಮ ಕೈಬುಟ್ಟಿಯಲಿ
    ಸಿಡಿಲ ಗೂಡಿಹುದು
    ಹುಡುಕಿ ನೋಡಿದರಲ್ಲಿ
    ಸುಮದ ಬೀಡಿಹುದು
  • ಕುವೆಂಪು
  1. ರಾಜ್ಯದ ಪ್ರತಿ ಪ್ರಜೆಯ ಕನಸನ್ನು ಸಾಕಾರಗೊಳಿಸುವ, ನಾಳೆಗಳ ಬಗ್ಗೆ ಭರವಸೆ ಮೂಡಿಸುವ, ನುಡಿದಂತೆ ನಡೆಯುವ ನಮ್ಮ ವಾಗ್ದಾನವನ್ನು ಈ ಆಯವ್ಯಯ ಇನ್ನಷ್ಟು ದೃಢಪಡಿಸುತ್ತದೆ. ಆಯವ್ಯಯವು ಸುಸ್ಥಿರ ಮತ್ತು ನ್ಯಾಯಬದ್ಧ ಆರ್ಥಿಕತೆಯ ಮೂಲಕ ಪ್ರತಿಯೊಬ್ಬರ ಕಲ್ಯಾಣ ಸಾಧ್ಯವೆಂಬ ಮಹಾತ್ಮಾ ಗಾಂಧೀಜಿಯವರ ಆಶಯದ ಸ್ಪಷ್ಟ ದಿಕ್ಸೂಚಿಯಾಗಿದ್ದು,
    ಸರ್ಕಾರದ ಸಾಮಾಜಿಕ, ಆರ್ಥಿಕ ಸಮಾನತೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
  2. ಬಲಿಷ್ಠವಾದುದು ಮಾತ್ರ ಬದುಕುತ್ತದೆ ಎಂಬುದು ಮೃಗೀಯ ತತ್ವ. ಮನುಷ್ಯ ಸಮಾಜದಲ್ಲೂ ಈ ರೀತಿಯಾದರೆ ಅದನ್ನು ʻಸೋಷಿಯಲ್‌ ಡಾರ್ವಿನಿಸಂʼ ಎಂದು ಕರೆಯಲಾಗುತ್ತದೆ. ಈ ತತ್ವಕ್ಕೆ ವಿರುದ್ಧವಾಗಿ ಮಾನವೀಯ ನೆಲೆಯಲ್ಲಿ ಸಮ ಸಮಾಜದ ಆಶಯದ ಮೂಲಕ ದೇಶವನ್ನು ಕಟ್ಟಲು ಬಾಬಾ ಸಾಹೇಬ್‌
    ಡಾ|| ಬಿ.ಆರ್.‌ ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿಕೊಟ್ಟಿದ್ದಾರೆ. ಸಂವಿಧಾನದ ಹಿಂದೆ ಬುದ್ಧ, ಬಸವಣ್ಣ, ನಾರಾಯಣ ಗುರು ಮುಂತಾದ ದಾರ್ಶನಿಕರ ಕನಸುಗಳಿವೆ. ಇವರೆಲ್ಲರ ಆಶಯಗಳಂತೆ ನಾವು ಬದ್ಧತೆಯಿಂದ ರಾಜ್ಯವನ್ನು ಮುನ್ನಡೆಸುತ್ತಿದ್ದೇವೆ. ಸಾಮಾಜಿಕ ನ್ಯಾಯದ ತಳಹದಿ ಭದ್ರಗೊಳ್ಳುತ್ತಲೇ ಇರಬೇಕು ಎನ್ನುವುದು ನಮ್ಮ ಸರ್ಕಾರದ ದೃಢ ಸಂಕಲ್ಪ.

ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನ ಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು.

  • ಗೋಪಾಲ ಕೃಷ್ಣ ಅಡಿಗ
  1. ಲಭ್ಯ ಸಂಪನ್ಮೂಲಗಳನ್ನು ಸರ್ವರಿಗೂ ಲಭ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆರ್ಥಿಕ ಅಭಿವೃದ್ಧಿ ಹಾಗೂ ಜನಕಲ್ಯಾಣಗಳ ನಡುವೆ ಸಮತೋಲನ ಸಾಧಿಸಿ, ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಮೂಲಕ ಕರ್ನಾಟಕ ಅಭಿವೃದ್ಧಿ ಮಾದರಿಯನ್ನು ರೂಪಿಸುತ್ತಿದ್ದೇವೆ.
  2. ಪಂಚ ಗ್ಯಾರಂಟಿಗಳು ಸೇರಿದಂತೆ ನೀಡಿರುವ ಹಲವು ಕಲ್ಯಾಣ ಕಾರ್ಯಕ್ರಮಗಳು ಉಚಿತ ಕೊಡುಗೆಗಳಲ್ಲ; ಇವು ಆರ್ಥಿಕ ಮತ್ತು ಸಾಮಾಜಿಕ ತತ್ವದಲ್ಲಿ ಮಾಡಿರುವ ಹೂಡಿಕೆಗಳು ಎಂದು ಆತ್ಮವಿಶ್ವಾಸದಿಂದ ಹೇಳಬಯಸುತ್ತೇನೆ. ನಾಡಿನ ಖ್ಯಾತ ವಿದ್ವಾಂಸರಾಗಿದ್ದ ಮುಜಾಫರ್‌ ಅಸ್ಸಾದಿಯವರು “ಗ್ಯಾರಂಟಿ ಯೋಜನೆಗಳ ಹಿಂದೆ ಬಡತನದ ನೋವಿದೆ, ಬಡತನದ ಹಿಂಸೆ ಇದೆ, ಮಹಿಳೆಯರಲ್ಲಿ ಮಡುಗಟ್ಟಿದ ನೋವುಗಳಿವೆ, ಅಸಮಾನ ಭಾರತದ ಪರಿಕಲ್ಪನೆ ಇದೆ” ಎಂದಿದ್ದಾರೆ.
  3. ‌ವಿಶ್ವದ ವಿವಿಧ ವೇದಿಕೆಗಳು ಯಾವ ಪ್ರಶ್ನೆಗಳಿಗೆ ಇಂದು ಹುಡುಕಾಟ ನಡೆಸುತ್ತಿವೆಯೊ ಅವುಗಳಿಗೆ ಕರ್ನಾಟಕ ಸರ್ಕಾರವು ಉತ್ತರ ರೂಪದಲ್ಲಿ ತನ್ನ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಲಭಿಸಲಿ ಎಂಬ ಆಶಯದಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಮಹಿಳಾ ಸಶಕ್ತೀಕರಣದ ಮೂಲಕ ನಾಡನ್ನು ಮುನ್ನಡೆಸುವುದು ಒಂದು ಬಗೆಯಾದರೆ, ʻಹಸಿರು ಆರ್ಥಿಕತೆʼ ಯ ಮೂಲಕ ಪರಿಸರದ ಬಿಕ್ಕಟ್ಟುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ರಾಜ್ಯವು ಇಂದು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಪರಿಸರಕ್ಕೆ ಹಾನಿಕಾರಕವಲ್ಲದ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಬಳಸಿದ ನೀರನ್ನು ಶುದ್ಧೀಕರಿಸಿ ಸಶಕ್ತವಾಗಿ ಮರುಬಳಕೆ ಮಾಡುತ್ತಿರುವ ವಿಧಾನವೂ ಕೂಡ ವಿಶ್ವ ವೇದಿಕೆಗಳಿಂದ ಶ್ಲಾಘನೆಗೆ ಒಳಗಾಗಿದೆ. ರಾಜ್ಯವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದೆ. ನಮ್ಮ ವಸತಿ ಶಾಲೆಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಮತ್ತು ಆಹಾರವನ್ನು ಪಡೆಯುತ್ತಿದ್ದಾರೆ. ಯುವ ಜನರನ್ನು ಜಾಗತಿಕ ಮಟ್ಟದ ಕೌಶಲ್ಯವಂತರನ್ನಾಗಿಸಲು ಹಲವು ರೀತಿಯ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ.
  4. ಈ ವರ್ಷದ ಆಯವ್ಯಯದಲ್ಲಿ ಪ್ರಮುಖವಾಗಿ ಆರು ಅಭಿವೃದ್ಧಿಯ ಆಯಾಮಗಳನ್ನು ಗುರುತಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ:
    ಅ.​ಕಲ್ಯಾಣ ಕಾರ್ಯಕ್ರಮಗಳ ಆಯವ್ಯಯ; ಗ್ಯಾರಂಟಿ ಯೋಜನೆಗಳ ಜೊತೆಗೆ ಇತರ ಜನಪರ ಕಾರ್ಯಕ್ರಮಗಳಿಗೂ ನಮ್ಮ ಸರ್ಕಾರ ಒತ್ತು ನೀಡಿದೆ. ದುರ್ಬಲ ವರ್ಗದವರಿಗೆ ನೀಡುತ್ತಿರುವ ಸವಲತ್ತುಗಳನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿದ್ದೇವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಶ್ರಮಿಕರು ಸೇರಿದಂತೆ ವಿವಿಧ ವರ್ಗಗಳ ಅಭ್ಯುದಯಕ್ಕೆ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಿದೆ.
    ಆ.​ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಆಯವ್ಯಯ;‌ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿಗಳು ಪರಸ್ಪರ ಪೂರಕವಾಗಿ ದುಡಿಯುವ ಕಾರ್ಯಕ್ಷೇತ್ರಗಳು. ಇವುಗಳ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ರೈತರು, ಮೀನುಗಾರರು ಮುಂತಾದವರ ಆದಾಯ ಹೆಚ್ಚಿಸುವ ಈ ಯೋಜನೆಗಳು ಭವಿಷ್ಯದ ಕರ್ನಾಟಕದ ಆರ್ಥಿಕಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿವೆ. ಕೃಷಿ ಮತ್ತು ಇನ್ನಿತರೆ ಆಸ್ತಿಗಳ ದಾಖಲೀಕರಣ, ಮೂಲಸೌಲಭ್ಯ ಒದಗಿಸುವಿಕೆ, ಸಮರ್ಪಕ ವಿದ್ಯುತ್‌ ಪೂರೈಕೆ, ಗೋದಾಮುಗಳ ಒದಗಿಸುವಿಕೆ ಮುಂತಾದ ಚಟುವಟಿಕೆಗಳ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಹಾಗೂ ಗ್ರಾಮೀಣ ಜನರ ಆದಾಯ ಹೆಚ್ಚಿಸಲು ಶ್ರಮಿಸಲಾಗುವುದು.
    ಇ. ಅಭಿವೃದ್ಧಿ ಕೇಂದ್ರಿತ ಆಯವ್ಯಯ: ನಮ್ಮ ಸರ್ಕಾರ ರಾಜ್ಯದ ಆಮೂಲಾಗ್ರ ಆರ್ಥಿಕ ಬೆಳವಣಿಗೆ ಹೆಚ್ಚಿಸುವಲ್ಲಿ ಮೂಲಸೌಕರ್ಯ ಕ್ಷೇತ್ರದ ನಿರ್ಣಾಯಕ ಪಾತ್ರವನ್ನು ಗುರುತಿಸಿ, ಈ ಬಾರಿ ಬಂಡವಾಳದ ಮೇಲಿನ ವೆಚ್ಚಗಳಿಗೆ ಗಣನೀಯವಾದ ಅನುದಾನ ಒದಗಿಸಿದೆ. ಬಂಡವಾಳ ಲೆಕ್ಕದಲ್ಲಿ ಶೇ. 47.3 ರಷ್ಟು ಹೆಚ್ಚಳವಾಗಿರುವುದು ಅಭಿವೃದ್ಧಿ ಕೇಂದ್ರಿತ ಆಯವ್ಯಯ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಹೂಡಿಕೆಯು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ದಾರಿಯಾಗಲಿದೆ.
    ಈ.​ನಗರಾಭಿವೃದ್ಧಿಗೆ ಆದ್ಯತೆ; ದಿನೇ ದಿನೇ ವೇಗವಾಗಿ ಬೆಳೆಯುತ್ತಿರುವ ರಾಜ್ಯದ ನಗರಗಳಲ್ಲಿ ನಾಗರೀಕರಿಗೆ ಸಮರ್ಪಕ ಮೂಲಸೌಕರ್ಯ ಹಾಗೂ ಗುಣಮಟ್ಟದ ಸೇವೆಗಳನ್ನು ಒದಗಿಸಲು ನಗರಾಭಿವೃದ್ಧಿ ಯೋಜನೆಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಜೊತೆಗೆ ರಾಜ್ಯದ ಬೊಕ್ಕಸಕ್ಕೆ ಅತಿ ದೊಡ್ಡ ಕೊಡುಗೆ ನೀಡುವ ಬೆಂಗಳೂರು ಮಹಾನಗರದ ಮೂಲಸೌಕರ್ಯ, ಸೇವಾಪೂರೈಕೆ ಹಾಗೂ ಸಂಚಾರ ಸುವ್ಯವಸ್ಥೆಗಳಿಗಾಗಿ ʻಬ್ರ್ಯಾಂಡ್‌ ಬೆಂಗಳೂರುʼ ಎಂಬ
    ಪರಿಕಲ್ಪನೆಯಡಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಎರಡನೇ ಮತ್ತು ಮೂರನೇ ಹಂತದ ನಗರಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದರ ಮೂಲಕ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಯೋಜನೆಗಳನ್ನು ರೂಪಿಸಲಾಗಿದೆ.
    ಉ.​ಹೂಡಿಕೆ ಮತ್ತು ಉದ್ಯೋಗ ಸೃಜನೆ; ಅತಿಹೆಚ್ಚು ಉದ್ಯೋಗ ಸೃಜನೆಯಾಗುವ ಎಂ.ಎಸ್.ಎಂ.ಇ, ಪ್ರವಾಸೋದ್ಯಮ, ಐಟಿಬಿಟಿ ವಲಯಗಳಲ್ಲಿ ಹೊಸ ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಾಣವಾಗಿ ಹೆಚ್ಚಿನ ಹೂಡಿಕೆ ಆಕರ್ಷಿಸಿ ಉದ್ಯೋಗ ಸೃಜನೆಗೆ ಆದ್ಯತೆ ನೀಡಲಾಗುತ್ತಿದೆ.
    ಊ.​ಆಡಳಿತ ಸುಧಾರಣೆ: ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಹಾಗೂ ಭ್ರಷ್ಟಾಚಾರವನ್ನು ನಿಗ್ರಹಿಸಲು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ನಾಗರೀಕ ಸೇವಾ ಪೂರೈಕೆ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಿ, ಕೌನ್ಸೆಲಿಂಗ್‌ ಮುಖಾಂತರ ವರ್ಗಾವಣೆ ನೀತಿ ಅಳವಡಿಸಿಕೊಂಡು ಆಡಳಿತ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನಸ್ನೇಹಿ ಮತ್ತು ಪರಿಣಾಮಕಾರಿಯಾದ ಸೇವೆಯನ್ನು ಒದಗಿಸಲು ಕಾರ್ಯತಂತ್ರಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತೇವೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ 1 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ನೇರವಾಗಿ ಫಲಾನುಭವಿಗಳ ಖಾತೆಗೆ ಹಾಗೂ ಕೆಲವು ರೀತಿಯ ಸಹಾಯಧನಗಳನ್ನು ಇಲಾಖೆಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳೊಂದರಲ್ಲೆ ಈ ವರೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸರಾಸರಿ 233 ಕೋಟಿ ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗಿದೆ. ನೇರ ನಗದು ವರ್ಗಾವಣೆಯಂತಹ ಕ್ರಮಗಳು ನಮ್ಮ ಸರ್ಕಾರದ ಉತ್ತರದಾಯಿತ್ವಕ್ಕೆ ಹಿಡಿದ ಕನ್ನಡಿ. ಇವೆಲ್ಲವೂ ಸರ್ಕಾರದ ಮೇಲೆ ಜನರ ಭರವಸೆಯನ್ನು ಇನ್ನಷ್ಟು ದೃಢಪಡಿಸುವ ಹೆಜ್ಜೆಗಳಾಗಿವೆ.
  5. ಇವುಗಳ ಜೊತೆಗೆ ಪ್ರಾದೇಶಿಕ ಅಸಮಾನತೆಯ ನಿವಾರಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಲವರ್ಧನೆ, ಸಾರಿಗೆಯ ಸುಗಮ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ ನಿಭಾವಣೆಗೆ ಹೊಸ ಕಾರ್ಯತಂತ್ರಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಕಲ್ಯಾಣ ಇಲಾಖೆಗಳ ಮೂಲಕ ಅಸಹಾಯಕರ ಸಬಲೀಕರಣಕ್ಕೆ
    ಈ ಆಯವ್ಯಯದಲ್ಲಿ ಒತ್ತು ನೀಡಲಾಗಿದೆ.
  6. ನಾಡು ಕಟ್ಟುವ ಪ್ರಕ್ರಿಯೆಯಲ್ಲಿ ಸುಸ್ಥಿರ ಅಭಿವೃದ್ಧಿಯ ಇಟ್ಟಿಗೆಗಳನ್ನು ಸುವ್ಯವಸ್ಥಿತವಾಗಿ ಜೋಡಿಸುವ ಆಶಯಕ್ಕೆ ಈ ಆಯವ್ಯಯ ಬಲ ನೀಡುತ್ತದೆ.
    ರಾಜ್ಯದ ಆರ್ಥಿಕತೆ
  7. ಕರ್ನಾಟಕ ರಾಜ್ಯವು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದ್ದು, ದೇಶದ ಜಿ.ಡಿ.ಪಿ. ಗೆ ಶೇ. 8.4ರಷ್ಟು ಕೊಡುಗೆ ನೀಡಿದೆ. 2024-25ನೇ ಸಾಲಿನಲ್ಲಿ ರಾಜ್ಯ ಆರ್ಥಿಕತೆಯ ಬೆಳವಣಿಗೆಯು ಶೇ. 7.4ರಷ್ಟು ದಾಖಲಾಗಿದ್ದು, ದೇಶದ ಆರ್ಥಿಕತೆಯು ಶೇ. 6.4ರಷ್ಟು ಬೆಳವಣಿಗೆಯಾಗಿದೆ. ರಾಜ್ಯವು ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿದ್ದು, ಪ್ರಸಕ್ತ ವರ್ಷದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಯು ದೇಶದ ಆರ್ಥಿಕತೆಗಿಂತ ಹೆಚ್ಚಾಗಿದೆ.
  8. ಕಳೆದ ವರ್ಷದಲ್ಲಿ ಶೇ.-4.9 ರಷ್ಟು ಬೆಳವಣಿಗೆ ದಾಖಲಾಗಿದ್ದ ಕೃಷಿ ವಲಯವು, 2024-25ರಲ್ಲಿ ಶೇ. 4ರಷ್ಟು ಬೆಳವಣಿಗೆ ಸಾಧಿಸುವ ಮೂಲಕ ಚೇತರಿಕೆ ಕಂಡಿದ್ದು, ದೇಶದ ಕೃಷಿ ವಲಯದ ಬೆಳವಣಿಗೆ ಶೇ.3.8ಕ್ಕಿಂತ ಹೆಚ್ಚಾಗಿದೆ. ಮುಂಗಾರು ಬಿತ್ತನೆಗೆ ಸರ್ಕಾರದ ಸಕಾರಾತ್ಮಕ ಕ್ರಮಗಳೊಂದಿಗೆ ಉತ್ತಮ ಮುಂಗಾರು ಮತ್ತು ಜಲಾಶಯಗಳು ಭರ್ತಿಯಾಗಿದ್ದರಿಂದ 2024-25ನೇ ಸಾಲಿನಲ್ಲಿ ಕೃಷಿ ವಲಯದಲ್ಲಿ ಒಳ್ಳೆಯ ಬೆಳವಣಿಗೆ ಸಾಧಿಸಲು ಕಾರಣವಾಗಿದೆ. ರಾಜ್ಯ ಸರ್ಕಾರವು ರೈತರ ಕಲ್ಯಾಣ ಉದ್ದೇಶಿತ ಯೋಜನೆಗಳಿಗೆ ವಿವಿಧ ಇಲಾಖೆಗಳಿಗೆ ಕಳೆದ ವರ್ಷ 44,000 ಕೋಟಿ ರೂ. ನೀಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಒಟ್ಟು 51,339 ಕೋಟಿ ರೂ. ಅನುದಾನವನ್ನು ನೀಡಿದೆ.
  9. ಕೈಗಾರಿಕಾ ವಲಯದಲ್ಲಿ ಹೂಡಿಕೆ ಸ್ನೇಹಿ ವಾತಾವರಣವನ್ನು ನಿರ್ಮಿಸುವಲ್ಲಿ ಕರ್ನಾಟಕವು ನೆಚ್ಚಿನ ರಾಜ್ಯವಾಗಿದೆ. ನಮ್ಮ ಸರ್ಕಾರವು ಹೆಚ್ಚಿನ ಉದ್ಯೋಗವನ್ನು ಸೃಜಿಸುವುದರೊಂದಿಗೆ, ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯ ಸರ್ಕಾರವು ಕೈಗಾರಿಕಾ ನೀತಿ 2025-30ಕ್ಕೆ ಚಾಲನೆ ನೀಡಿದ್ದು, ಇದು 2030 ರ ವೇಳೆಗೆ ಉತ್ಪಾದನಾ ವಲಯದಲ್ಲಿ ಶೇ.12ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸುವುದರೊಂದಿಗೆ 20 ಲಕ್ಷ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಿದೆ. 2024-25ನೇ ಸಾಲಿನಲ್ಲಿ ಕೈಗಾರಿಕಾ ವಲಯವು
    ಶೇ.5.8ರಷ್ಟು ಬೆಳವಣಿಗೆ ಸಾಧಿಸಿದೆ. ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ಒಟ್ಟು 13,692 ಕೋಟಿ ರೂ. ಆರ್ಥಿಕ ನೆರವು ಮತ್ತು ಸಹಾಯಧನವನ್ನು ಒದಗಿಸಲು ಸರ್ಕಾರವು ಸಮ್ಮತಿಸಿದೆ.
  10. ಕರ್ನಾಟಕದ ಆರ್ಥಿಕತೆಯಲ್ಲಿ ಸೇವಾ ವಲಯದ ಕೊಡುಗೆಯೂ ಪ್ರಮುಖವಾಗಿದ್ದು, ಒಟ್ಟು ಮೌಲ್ಯವರ್ಧನೆಯಲ್ಲಿ (Gross Value Added) ಸೇವಾ ವಲಯಗಳ ಪಾಲು ಶೇ.66 ರಷ್ಟಿದೆ.
    2024-25ನೇ ಸಾಲಿಗೆ ರಾಜ್ಯದಲ್ಲಿ ಸೇವಾ ವಲಯವು ಗಣನೀಯವಾಗಿ ಬೆಳವಣಿಗೆಯಾಗಿದ್ದು, ಶೇ.8.9 ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿನ ಸೇವಾ ವಲಯದ ಬೆಳವಣಿಗೆ ಶೇ.7.2 ಕ್ಕಿಂತ ಹೆಚ್ಚಾಗಿದೆ.
  11. ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಜಿಸಲು ಸರ್ಕಾರವು ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಜೈವಿಕ ತಂತ್ರಜ್ಞಾನ ಸೇರಿದಂತೆ ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಹಲವು ನೀತಿಗಳನ್ನು ಜಾರಿಗೆ ತಂದಿದೆ. ಈ ನೀತಿಗಳು ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸುವುದರ ಜೊತೆಗೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಉತ್ತೇಜಿಸಲಿವೆ. ಸರ್ಕಾರವು ಜಾರಿಗೆ ತಂದಿರುವ ಈ ನೀತಿಗಳಿಂದ ರಾಜ್ಯದಲ್ಲಿ ಅಂದಾಜು ಒಂದು ಲಕ್ಷ ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಈ ಉದ್ದೇಶಕ್ಕೆ ಸರ್ಕಾರವು 13,500 ಕೋಟಿ ರೂ. ಸಹಾಯಧನ ಮತ್ತು ಆರ್ಥಿಕ ನೆರವು ನೀಡಲು ಸಹಮತಿಸಿದೆ.
  12. ನಮ್ಮ ಸರ್ಕಾರವು ಆರ್ಥಿಕತೆಯ ಬೆಳವಣಿಗೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, 2024-25ರ ಡಿಸೆಂಬರ್‌ ಅಂತ್ಯದವರೆಗೆ 4.4 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ.
    ರಾಜ್ಯದ ಹಣಕಾಸು ಪರಿಸ್ಥಿತಿ
  13. ಕರ್ನಾಟಕ ರಾಜ್ಯವು, ಸುಸ್ಥಿರ ಋಣ ನಿರ್ವಹಣೆ ಮತ್ತು ವಿತ್ತೀಯ ಶಿಸ್ತು ಪಾಲಿಸುವ ಮೂಲಕ ವಿತ್ತೀಯ ಹೊಣೆಗಾರಿಕೆಯನ್ನು ಉತ್ತಮವಾಗಿ ನಿಭಾಯಿಸಿದೆ. ನಮ್ಮ ರಾಜ್ಯದಲ್ಲಿ ವಿತ್ತೀಯ ಹೊಣೆಗಾರಿಕೆ ಅಧಿನಿಯಮವನ್ನು ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತರುವ ಮುನ್ನವೇ ಜಾರಿಗೆ ತರಲಾಯಿತು. ಅಲ್ಲದೆ, ರಾಜ್ಯದ ಒಟ್ಟು ಹೊಣೆಗಾರಿಕೆಗಳಲ್ಲಿ ಆಯವ್ಯಯದ ಹೊರಗಿನ ಸಾಲಗಳನ್ನು ಪರಿಗಣಿಸಿದ ಮೊದಲ ರಾಜ್ಯ ಕರ್ನಾಟಕ. ಆದಾಗ್ಯೂ, ಜಿ.ಎಸ್.ಟಿ ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾದ ಕಾರಣ ಮತ್ತು ಕೇಂದ್ರ ಸರ್ಕಾರ ವಿಧಿಸುವ ಸೆಸ್ಗಳು ಮತ್ತು ಸರ್‌ಚಾರ್ಜ್‌ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸದಿರುವುದರಿಂದ ಹಾಗೂ 15ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ ರಾಜ್ಯವು ವಿತ್ತೀಯ ಸವಾಲುಗಳನ್ನು ಎದುರಿಸುವಂತಾಯಿತು.
  14. ೧೫ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ತೆರಿಗೆ ಹಂಚಿಕೆಯಲ್ಲಿ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ ರಾಜ್ಯ ಕರ್ನಾಟಕ. 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದ್ದ ತೆರಿಗೆ ಪಾಲು ಶೇ. 4.713 ರಿಂದ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.೩.೬47ಕ್ಕೆ ಇಳಿಕೆಯಾಯಿತು. ಇದರಿಂದಾಗಿ ರಾಜ್ಯದ ತೆರಿಗೆ ಹಂಚಿಕೆಯು ಶೇ.೨3ರಷ್ಟು ಕುಸಿತವಾಗಿ, ರಾಜ್ಯವು ವಾರ್ಷಿಕ ಅಂದಾಜು ೧೨ ಸಾವಿರ ಕೋಟಿ ರೂ. ನಷ್ಟ ಅನುಭವಿಸಬೇಕಾಯಿತು. ಅಲ್ಲದೆ, ೧೫ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 5,495 ಕೋಟಿ ರೂ.ಗಳ ವಿಶೇಷ ಅನುದಾನ, ಬೆಂಗಳೂರಿನಲ್ಲಿ ಕೆರೆಗಳ ಸಂರಕ್ಷಣೆಗಾಗಿ 3,000 ಕೋಟಿ ರೂ. ಮತ್ತು ಪೆರಿಫೆರಲ್‌ ರಿಂಗ್ ರಸ್ತೆ ಅಭಿವೃದ್ಧಿಗೆ 3,000 ಕೋಟಿ ರೂ. ಸೇರಿ ಒಟ್ಟು 11,495 ಕೋಟಿ ರೂ.ಗಳನ್ನು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿತು. ಆದರೆ, ಕೇಂದ್ರ ಸರ್ಕಾರ ಈ ಅನುದಾನವನ್ನು ಬಿಡುಗಡೆ ಮಾಡಿರುವುದಿಲ್ಲ. 2023-24ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಘೋಷಿಸಿತ್ತು. ಆದರೆ, ಕೇಂದ್ರ ಸರ್ಕಾರವು ಈವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ.
  15. ರಾಜ್ಯಗಳಿಗೆ ತೆರಿಗೆ ಹಂಚಿಕೆಯನ್ನು ಹೆಚ್ಚಿಸುವ ಬಗ್ಗೆ 16ನೇ ಹಣಕಾಸು ಆಯೋಗದ ಮುಂದೆ ರಾಜ್ಯವು ಪ್ರಬಲವಾಗಿ ತನ್ನ ವಾದವನ್ನು ಪ್ರತಿಪಾದಿಸಿದೆ. ಆರೋಗ್ಯಕರ ಮತ್ತು ಸಾಮರಸ್ಯದ ಆರ್ಥಿಕ ಒಕ್ಕೂಟ ರೂಪಿಸಲು ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಸಮಾನತೆ ಮತ್ತು ದಕ್ಷತೆಯನ್ನು ಆಧರಿಸಿ ಹಂಚಿಕೆ ಮಾಡುವಂತೆ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿದೆ. ಬಲಿಷ್ಠ ಆರ್ಥಿಕತೆ ಹೊಂದಿರುವ ರಾಜ್ಯಗಳು ಬಡ ರಾಜ್ಯಗಳಿಗೆ ನೆರವಾಗಲು ಬದ್ಧರಾಗಿದ್ದರೂ, ಅದು ತನ್ನ ನಾಗರೀಕರ
    ಹಿತ ಕಾಯುವಲ್ಲಿ ಅಥವಾ ಆರ್ಥಿಕ ಪ್ರಗತಿಗೆ ಕುಂದುಂಟು ಮಾಡುವಂತಿರಬಾರದು. ಆದಾಯ-ಅಂತರ ಮತ್ತು ತಲಾ ಆದಾಯ ನಿರ್ಧರಿಸುವ ಮಾನದಂಡಗಳಲ್ಲಿಯೂ ಲೋಪಗಳಿರುವ ಹಿನ್ನೆಲೆಯಲ್ಲಿ, ಈ ಮಾನದಂಡಗಳಿಗೆ ಕಡಿಮೆ ಅಂಕ ನೀಡುವಂತೆ ಮನವಿ ಮಾಡಿದ್ದೇವೆ.
  16. ಕೇಂದ್ರ ಹಾಗೂ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯಲ್ಲಿ ಕನಿಷ್ಠ ಶೇ.50ರಷ್ಟು ಪಾಲನ್ನು ರಾಜ್ಯಗಳಿಗೆ ನೀಡಬೇಕು ಎಂದು ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯನ್ನು ಖಚಿತಪಡಿಸುತ್ತದೆ. ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ಒಟ್ಟು ತೆರಿಗೆ ರಾಜಸ್ವದ ಶೇ.5 ಕ್ಕೆ ಮಿತಿಗೊಳಿಸಬೇಕು. ಇದಕ್ಕಿಂತ ಹೆಚ್ಚಿನ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ವಿಧಿಸಿದರೆ, ಹೆಚ್ಚಿನ ಮೊತ್ತವನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸಬೇಕು. ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ,
    ಒಟ್ಟು ತೆರಿಗೆ ಹಂಚಿಕೆಯಲ್ಲಿ ತೆರಿಗೆ ಸಂಗ್ರಹಿಸುವ
    ರಾಜ್ಯಕ್ಕೆ ಶೇ.60ರಷ್ಟು ಪಾಲನ್ನು ಮರಳಿಸಬೇಕು. ಆದ್ದರಿಂದ, ಹಂಚಿಕೆಯಾಗುವ ತೆರಿಗೆಯಲ್ಲಿ ಇತರೆ ರಾಜ್ಯಗಳ ಪಾಲನ್ನು
    ಶೇ.40ಕ್ಕೆ ಮಿತಿಗೊಳಿಸಬೇಕು ಎಂದು ನಾವು 16ನೇ ಹಣಕಾಸು ಆಯೋಗಕ್ಕೆ ಒತ್ತಾಯ ಮಾಡಿದ್ದೇವೆ.
  17. ಈ ಸವಾಲುಗಳ ನಡುವೆಯೂ, ರಾಜ್ಯ ಸರ್ಕಾರದ ಸಂಪನ್ಮೂಲ ಕ್ರೊಢೀಕರಣ ಕ್ರಮಗಳಿಂದ ರಾಜಸ್ವ ಸ್ವೀಕೃತಿಗಳು ಉತ್ತಮ ಬೆಳವಣಿಗೆ ಸಾಧಿಸಿದ್ದು, ರಾಜ್ಯದ ಅಭಿವೃದ್ಧಿ ಕುರಿತ ನಮ್ಮ ದೂರದೃಷ್ಟಿಯ ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ. 2024-25ನೇ ಸಾಲಿಗೆ ರಾಜಸ್ವ ಸ್ವೀಕೃತಿಗಳು ವಾರ್ಷಿಕ ಶೇ. 10.3 ರಷ್ಟು ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ.
  18. 2024-25ನೇ ಸಾಲಿಗೆ ತೆರಿಗೆಯೇತರ ರಾಜಸ್ವದಲ್ಲಿ 14,500 ಕೋಟಿ ರೂ.ಗಳು ಸಂಗ್ರಹವಾಗುವ ನಿರೀಕ್ಷೆಯಿದ್ದು, ಆಯವ್ಯಯ ಗುರಿಗಿಂತ ಹೆಚ್ಚು ಸಂಗ್ರಹವಾಗಲಿದೆ. ತೆರಿಗೆಯೇತರ ರಾಜಸ್ವವು ವರ್ಷವಾರು ಶೇ.10.5ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಆದರೂ ಜಿ.ಎಸ್.ಡಿ.ಪಿ.ಯ ಶೇಕಡಾವಾರು ಪರಿಗಣಿಸಿದಾಗ ತೆರಿಗೆಯೇತರ ಸಂಪನ್ಮೂಲ ಹೆಚ್ಚಳಕ್ಕೆ ವಿಪುಲ ಅವಕಾಶಗಳಿವೆ. ಸಂಪನ್ಮೂಲ ಕ್ರೊಢೀಕರಣಕ್ಕಾಗಿ ರಾಜ್ಯ ಸರ್ಕಾರವು ʻಸಂಪನ್ಮೂಲ ಕ್ರೊಢೀಕರಣ ಸಮಿತಿʼಯನ್ನು ರಚನೆ ಮಾಡಿರುತ್ತದೆ.
    ಈ ಸಮಿತಿಯು ಮಧ್ಯಂತರ ವರದಿಯನ್ನು ನೀಡಿದ್ದು, ಸಮಿತಿಯ ಶಿಫಾರಸ್ಸಿನ ಅನ್ವಯ ಸರ್ಕಾರವು ಸಮಯಾನುಸಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
  19. ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 51,034 ಕೋಟಿ ರೂ. ಒದಗಿಸಲಾಗಿದೆ. ಕಳೆದ ಎರಡು ಆಯವ್ಯಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ. ಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿ.ಎಸ್.ಡಿ.ಪಿ. ಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ವಿತ್ತೀಯ ಶಿಸ್ತನ್ನು ಪಾಲಿಸಲಾಗಿರುತ್ತದೆ ಎಂಬುದು ಗಮನಾರ್ಹ.
  20. ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು.
    ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ ಹಾಗೂ ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ. ನೀಡಲಾಗುವುದು.
  21. ಸರ್ಕಾರವು ತನ್ನ ಆಡಳಿತ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸಲು ಬದ್ಧವಾಗಿದೆ.
    ಈ ನಿಟ್ಟಿನಲ್ಲಿ ವಿವಿಧ ತೆರಿಗೆ ಸಂಗ್ರಹಣಾ ಇಲಾಖೆಗಳಾದ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ʻಬಿʼ ಮತ್ತು ʻಸಿʼ ವೃಂದಗಳಲ್ಲಿ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಪ್ರಕ್ರಿಯೆ ಜಾರಿಗೊಳಿಸಲಾಗುವುದು. ವಿವಿಧ ನಿಯಮಗಳ ಸರಳೀಕರಣದ ಮೂಲಕ ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಲಾಗುವುದು.
  22. ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಸೂಚಿಸಿರುವ ಮಿತಿಯೊಳಗೆ ನಿರ್ವಹಿಸಿ, ನಾವು ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡುವುದರೊಂದಿಗೆ ಬಂಡವಾಳ ವೆಚ್ಚದಲ್ಲಿಯೂ ಗಣನೀಯ ಹೆಚ್ಚಳ ಮಾಡಿದ್ದು, ಹೆಮ್ಮೆಯ ಸಂಗತಿ.
  23. ವಿತ್ತೀಯ ಶಿಸ್ತು ಕಾಯ್ದುಕೊಂಡು ಜನಕಲ್ಯಾಣ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಆಯವ್ಯಯ ಹಂಚಿಕೆ ಮಾಡುವುದರೊಂದಿಗೆ, ಬಂಡವಾಳ ವೆಚ್ಚಗಳಿಗೂ ಅನುದಾನ ಒದಗಿಸಿ, ರಾಜ್ಯದ ಆರ್ಥಿಕತೆಯನ್ನು ಸದೃಢಗೊಳಿಸುವ ಅಂಶಗಳೊಂದಿಗೆ ಕಳೆದ ಸಾಲಿನ ಆಯವ್ಯಯ ಮಂಡಿಸಿದ್ದೆನು. ಇದೀಗ 2025-26ನೇ ಸಾಲಿನ ಆಯವ್ಯಯವನ್ನು ಸಹ ಇದೇ ಆಶಯದೊಂದಿಗೆ ಮಂಡಿಸುತ್ತಿದ್ದೇನೆ.

More articles

Latest article