ಬುದ್ಧ ಮಾರ್ಗದ ಶ್ರೇಷ್ಠ ಜೀವನ ಕ್ರಮವನ್ನು ನಮ್ಮ ಜೀವನದಲ್ಲೂ ತಂದುಕೊಳ್ಳುವ ದೃಢಸಂಕಲ್ಪವನ್ನು ನಾವು ಮಾಡಬೇಕಿದೆ. ಈ ಮೂಲಕ ಮರಳಿ ಬೌದ್ಧ ನೆಲೆಯಲ್ಲಿನ ಪ್ರಬುದ್ಧ ಭಾರತವನ್ನು ನಿರ್ಮಿಸಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಶೋಷಿತರು ಮಾನವ ಕಲ್ಯಾಣದಲ್ಲಿ ನಂಬಿಕೆ ಇರುವವರು ಈ ಒಂದು ಸಂಕಲ್ಪವನ್ನು ಮಾಡಬೇಕು. ಬಾಬಾ ಸಾಹೇಬರ ಆಶಯಗಳನ್ನು ಅವರ ಮಾರ್ಗವನ್ನು ಅನುಸರಿಸಬೇಕು. ಆಗ ತನ್ನಿಂದ ತಾನೇ ಪ್ರಬುದ್ಧ ಭಾರತ ಸೃಷ್ಟಿಯಾಗುತ್ತದೆ. –ಡಾ. ನಾಗೇಶ್ ಮೌರ್ಯ, ಬೌದ್ಧ ಚಿಂತಕರು.
ಅಧ್ಯಯನ ಅನುಸರಣೆ ಸಾಕ್ಷಾತ್ಕಾರ ಈ ಮೂರು ಹಂತಗಳು ಬೌದ್ಧ ಧರ್ಮದಲ್ಲಿ ಬಹಳ ಮುಖ್ಯವಾದುದು. ಬಹು ಜನರಿಗೆ ಬೌದ್ಧ ಧರ್ಮವನ್ನು ಹೇಗೆ ಪಾಲಿಸಬೇಕು? ಎಂಬ ಪ್ರಶ್ನೆ ಬಹಳ ದೊಡ್ಡದಾಗಿದೆ. ಬಹುತೇಕರು ಬೌದ್ಧ ಧರ್ಮವನ್ನು ತಪ್ಪು ತಪ್ಪಾಗಿ ಅರ್ಥೈಸಿಕೊಂಡು ಗೊಂದಲದಲ್ಲಿದ್ದಾರೆ. ಬೌದ್ಧ ಧರ್ಮದಲ್ಲಿ ಹೆಂಡ ಸಾರಾಯಿ ಕುಡಿಯಬಾರದು, ಮಾಂಸ ಆಹಾರ ತಿನ್ನಬಾರದು, ಈ ಧರ್ಮದಲ್ಲಿ ಬುದ್ಧರಿಗೆ ಹೀಗೆ ಮಾಡಬಾರದು ಹಾಗೆ ನಡೆದುಕೊಳ್ಳಬಾರದು ಎಂದು ನಾನಾ ರೀತಿಯಲ್ಲಿ ತಮ್ಮದೇ ರೀತಿಯ ವ್ಯಾಖ್ಯಾನಗಳನ್ನು ನೀಡುತ್ತಿರುತ್ತಾರೆ. ಆದರೆ ಬೌದ್ಧ ಧರ್ಮದಲ್ಲಿ ಬುದ್ಧರು ಹೀಗೆಲ್ಲಾ ಹೇಳಿದ್ದಾರೆಯೆ? ಬುದ್ಧರು ಪ್ರಕೃತಿಗೆ ವಿರುದ್ಧವಾದ ವಿಚಾರಗಳನ್ನು ಯಾವತ್ತೂ ಬೋಧಿಸಿಲ್ಲ. ಯಾವುದು ಪ್ರಕೃತಿಗೆ ವಿರುದ್ಧವಾಗಿದೆಯೋ ಅದನ್ನು ಮಾತ್ರ ಬುದ್ಧರು ತಿರಸ್ಕರಿಸಿದ್ದಾರೆ ಎಂಬುದು ಸರಳವಾದ ಸತ್ಯ.
ಅತಿಯಾದ ಶೀತ ಪ್ರದೇಶದಲ್ಲಿ ಕುಡಿತ ಒಂದು ರೂಢೀಗತವಾಗಿದೆ ಮತ್ತು ಸಂಪ್ರದಾಯದ ಭಾಗವಾಗಿದೆ. ಕರ್ನಾಟಕದ ಕೊಡಗಿನಲ್ಲಿ ಜನರು ಕುಡಿಯುವುದನ್ನು ಅವರ ನಿತ್ಯ ಆಹಾರದ ಭಾಗವಾಗಿಯೇ ತೆಗೆದುಕೊಳ್ಳುತ್ತಾರೆ. ಅದರಲ್ಲೂ ಮಹಿಳೆಯರು ಕುಡಿಯುವ ಪದ್ಧತಿಯನ್ನು ಇಟ್ಟು ಕೊಂಡಿದ್ದಾರೆ. ಇದು ಸರಿಯೆ ಅಥವಾ ತಪ್ಪೇ? ಎಂದು ನಾವು ತೀರ್ಮಾನ ಮಾಡುವುದು ಸರಿಯಲ್ಲ. ಯಾವುದು ಸರಿ ಯಾವುದು ತಪ್ಪು ಎಂದು ಅಲ್ಲಿನ ಜನರೇ ಹೇಳಬೇಕು. ಬೌದ್ಧ ಧರ್ಮವು ಕುಡಿತವನ್ನು ಸರಿ ಎಂದು ಹೇಳುವುದಿಲ್ಲ. ಪ್ರಪಂಚದ ನಾನಾ ಭಾಗಗಳಲ್ಲಿ ಈ ರೀತಿಯ ರೂಢಿ ಸಂಪ್ರದಾಯಗಳು ಜಾರಿಯಲ್ಲಿವೆ. ಬೌದ್ಧರನ್ನು ಒಳಗೊಂಡಂತೆ ಎಲ್ಲಾ ಧರ್ಮಗಳ ಸಾಮಾನ್ಯ ಜನರಲ್ಲಿ ಈ ರೀತಿಯ ಅಭ್ಯಾಸಗಳಿವೆ. ಡಾರ್ವಿನ್ ನ ಸಿದ್ಧಾಂತ ಹೇಳುವುದೇನೆಂದರೆ ಯಾವುದೇ ಜೀವಿಗಳು ಆಯಾ ಭೌಗೋಳಿಕ ವಾತಾವರಣಕ್ಕೆ ಅನುಗುಣವಾಗಿ ಹೊಂದಾಣಿಕೆಯಾಗುವ ಗುಣ ಹೊಂದಿದ್ದಾಗ ಮಾತ್ರ ಬದುಕುಳಿಯುತ್ತವೆ. ಆ ವಾತಾವರಣಕ್ಕೆ ಹೊಂದಿಕೊಳ್ಳುವ ಸ್ವಭಾವ ಪ್ರಕೃತಿಯೇ ಆ ಜೀವಿಗಳಿಗೆ ನೀಡುತ್ತದೆ. ಬುದ್ಧರು ಕುಡಿಯುವುದು ತಪ್ಪು ಎಂದು ಹೇಳಿರುವುದು ನೈತಿಕ ನೆಲೆಗಟ್ಟಿನಲ್ಲಿ ಹಾಗೂ ಕುಡಿತದಿಂದ ಆಗುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಎನ್ನುವುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಬುದ್ಧರು ಯಾವುದನ್ನೂ ನಿಷೇಧ ಮಾಡಲಿಲ್ಲ. ಆದರೆ ಅವುಗಳ ಕೆಟ್ಟ ಪರಿಣಾಮಗಳನ್ನು ವಿವರಿಸಿದ್ದಾರೆ.
ಬುದ್ಧರು ಮಾಂಸ ಆಹಾರವನ್ನು ಎಲ್ಲೂ ನಿಷೇಧ ಮಾಡಲಿಲ್ಲ. ಆದರೆ ಭಿಕ್ಕುಗಳು ಪ್ರಾಣಿ ಹತ್ಯೆಯಲ್ಲಿ ಭಾಗವಹಿಸಬಾರದು ಮತ್ತು ಹತ್ಯೆಯಲ್ಲಿ ಪಾಲುದಾರರಾಗ ಬಾರದೆಂದು ಹೇಳಿದ್ದಾರೆ. ಭಿಕ್ಷೆಯ ರೂಪದಲ್ಲಿ ಸಿಗುವ ಮಾಂಸಾಹಾರವನ್ನು ಭಿಕ್ಕುಗಳು ತಿನ್ನಬಹುದೆಂದು, ಇದರಲ್ಲಿ ಯಾವುದೇ ತಪ್ಪಿಲ್ಲವೆಂದು ಬುದ್ಧರು ಹೇಳಿದ್ದಾರೆ. ಇನ್ನು ಬಾಬಾ ಸಾಹೇಬರು ತಮ್ಮ ಬುದ್ಧ ಮತ್ತು ಆತನ ಧಮ್ಮ ಕೃತಿಯ ಅಹಿಂಸೆ ಎಂಬ ಪಾಠದಲ್ಲಿ ‘wil to kill and Need to Kil’ ಎಂಬ ವಿಚಾರವನ್ನು ಬಹಳ ವೈಜ್ಞಾನಿಕವಾಗಿ ವಿವರಿಸಿದ್ದಾರೆ. ವಿಲ್ ಟು ಕಿಲ್ ಅಂದರೆ ಅನಾವಶ್ಯಕವಾಗಿ, ದುರುದ್ದೇಶ ಪೂರ್ವಕವಾಗಿ, ದ್ವೇಷದಿಂದ ಕೊಲ್ಲುವುದಾಗಿದೆ. ಇಲ್ಲಿ ಅನೈತಿಕತೆ ಇದೆ. ನೀಡ್ ಟು ಕಿಲ್ ಅಂದರೆ ಅವಶ್ಯಕತೆಗೆ ಅನುಗುಣವಾಗಿ ಅಗತ್ಯವಿದ್ದಾಗ, ಪ್ರಾಣರಕ್ಷಣೆಗಾಗಿ, ಪ್ರಾಣಕ್ಕೆ ಸಂಚಕಾರ ಬಂದಂತಹ ಸಂದರ್ಭಗಳಲ್ಲಿ ಕೊಲ್ಲಬಹುದು. ಉದಾಹರಣೆಗೆ ಆಹಾರದ ಭಾಗವಾಗಿ ಕೊಲ್ಲುವುದು ಪ್ರಕೃತಿಯಲ್ಲಿಯೇ ಇರುವಂತಹ ಆಹಾರ ಸರಪಳಿಯ ಕ್ರಮವಾಗಿದೆ. ಪ್ರಕೃತಿಯಲ್ಲಿ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನು ಕೊಂದು ಬದುಕಬೇಕಿದೆ. ಇದು ಜೀವಸಂಕುಲದ ಒಳಗಿನ ಜೀವನ ಕ್ರಮವಾಗಿದೆ ಇಲ್ಲಿ ನೈತಿಕ ಕ್ರಮವಿದೆ.
ಈ ವಿಚಾರಗಳನ್ನು ಹೀಗೆ ಅರ್ಥ ಮಾಡಿಕೊಳ್ಳಬೇಕಾದರೆ ಯಾರಿಗಾದರೂ ಬೌದ್ಧ ಧರ್ಮದ ಮೂಲ ವಿಚಾರಗಳು ಗೊತ್ತಿರಬೇಕು ಮತ್ತು ನಿರಂತರ ಅಧ್ಯಯನದಲ್ಲಿ ತೊಡಗಿರಬೇಕು. ಇದಕ್ಕಾಗಿಯೇ ಬುದ್ಧರು ಭಿಕ್ಕುಗಳನ್ನೊಳಗೊಂಡ ಬಿಕ್ಕು ಸಂಘವನ್ನು ಸ್ಥಾಪನೆ ಮಾಡಿದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಭಿಕ್ಕುಗಳು ಸಾಮಾನ್ಯ ಜನರಿಗೆ ಧಮ್ಮ ಬೋಧಿಸಬೇಕು ಮತ್ತು ಸಮಾಜದಲ್ಲಿ ನೈತಿಕ ವ್ಯವಸ್ಥೆಯನ್ನು ಮುಂದುವರಿಯುವಂತೆ ನೋಡಿಕೊಳ್ಳಬೇಕು. ಇದರ ಭಾಗವಾಗಿ ಬೌದ್ಧ ವಿದ್ವಾಂಸರು ಬೌದ್ಧರಾದವರು ಮೂರು ಹಂತಗಳಲ್ಲಿ ತಮ್ಮ ಜೀವನ ಶೈಲಿಯನ್ನ ರೂಪಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಅವುಗಳೆಂದರೆ ಪರಿಯೆತ್ತಿ ಪತಿಪಟ್ಟಿ ಮತ್ತು ಪಟಿವೇದ. ಪರಿಯೆತ್ತಿ ಅಂದರೆ ನಿರಂತರ ಅಧ್ಯಯನ, ಪತಿಪಟ್ಟಿ ಅಂದರೆ ಅಧ್ಯಯನದಲ್ಲಿ ಕಂಡುಕೊಂಡ ಅರಿವನ್ನು ಅನುಷ್ಠಾನ ಮಾಡಿ ನಿತ್ಯ ಜೀವನದಲ್ಲಿ ಪಾಲಿಸುವುದು. ಕೊನೆಯದಾಗಿ ಪಟಿವೇದ ಅಂದರೆ ಧಮ್ಮದಲ್ಲಿ ನಿರಂತರ ಪ್ರಯತ್ನ ಪಟ್ಟಾಗ ಸತ್ಯದ ಸಾಕ್ಷಾತ್ಕಾರವಾಗುತ್ತದೆ ಅದನ್ನೇ ನಿರ್ವಾಣವೆಂದು ಕರೆಯುತ್ತಾರೆ ಈ ಮಾರ್ಗವು ಅಷ್ಟಾಂಗ ಮಾರ್ಗವೆಂದೆ ಪ್ರಸಿದ್ಧಿಯಾಗಿದೆ.
ಪರಿಯತ್ತಿ :
ಜೀವನ ಪೂರ್ತಿ ಓದಿದರು ಮುಗಿಯದಷ್ಟು ಅಪಾರ ಬೌದ್ಧ ಸಾಹಿತ್ಯವಿದೆ. ಆದರೆ ಸಾಮಾನ್ಯ ಜನರಿಗೆ ನಿತ್ಯ ಜೀವನದಲ್ಲಿ ವ್ಯವಹರಿಸಲು, ಜೀವನ ನಡೆಸಲು ಬೇಕಾದಷ್ಟನ್ನು ಮಾತ್ರ ಅವರಿಗೆ ಭೋದಿಸಬೇಕು. ಅಂತಹ ವಿಚಾರಗಳು ಯಾವುವೆಂದರೆ ತಿಪಿಟಿಕಗಳು (ಮೂರು ಬುಟ್ಟಿಗಳು) ವಿನಯ ಪಿಟಿಕ, ಸುತ್ತಪಿಟಿಕ ಮತ್ತು ಅಭಿಧಮ್ಮ ಪಿಟಿಕ.
ವಿನಯ ಪಿಟಿಕದಲ್ಲಿ ಸಂಘದ ನಿಯಮಗಳಿಗೆ ಕಟ್ಟಿಬದ್ಧರಾದ ಭಿಕ್ಕುಗಳು ಪಾಲಿಸಬೇಕಾದ ನಿಯಮಗಳಿರುತ್ತವೆ. ಸುತ್ತ ಪಿಟಿಕದಲ್ಲಿ ಬುದ್ಧರು ವಿವಿಧ ಸಂದರ್ಭಗಳಲ್ಲಿ ಅನೇಕ ಸಂಗತಿಗಳ ಮೇಲೆ ನೀಡಿರುವ ಉಪದೇಶಗಳಿವೆ. ಹಾಗೆಯೇ ಅಭಿಧಮ್ಮ ಪಿಟಿಕದಲ್ಲಿ ಮನಸ್ಸು ಮತ್ತು ಆಧ್ಯಾತ್ಮಿಕ ವಿಚಾರಗಳ ಮೇಲೆ ಬುದ್ಧರು ನೀಡಿದ ಆಳವಾದ, ವಿಶ್ಲೇಷಣಾತ್ಮಕವಾದ ಧರ್ಮೋಪದೇಶಗಳಿವೆ. ಇವುಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಅದರ ಸಾರವನ್ನು ಒಂದು ಗ್ರಂಥದ ರೂಪದಲ್ಲಿ ನಿತ್ಯ ಅಧ್ಯಯನಕ್ಕೆ ಉಪಯೋಗವಾಗುವಂತೆ ಬರೆದು ಕೊಟ್ಟವರು ಬೋಧಿಸತ್ವ ಬಾಬಾ ಸಾಹೇಬರು. ಆ ಗ್ರಂಥವೇ “ಬುದ್ಧ ಮತ್ತು ಆತನ ದಮ್ಮ”. ಸೈದ್ಧಾಂತಿಕ ಅಧ್ಯಯನ ಮತ್ತು ಬೌದ್ಧ ಪ್ರವಚನಗಳನ್ನ ತಿಳಿಯುವುದು, ಬೌದ್ಧ ಸಿದ್ಧಾಂತ ಸಾಹಿತ್ಯಗಳನ್ನ ಅಧ್ಯಯನ ಮಾಡಿಕೊಳ್ಳುವುದು ಮೂರು ತಿಪಿಟಿಕಗಳಲ್ಲಿನ ಸಾರವನ್ನು, ಅದರ ಜೊತೆಗೆ ಪಂಚಶೀಲ ಅಷ್ಟಾಂಗ ಮಾರ್ಗ ಮತ್ತು ದಶ ಪಾರಮಿತಗಳನ್ನು ಅರಿಯುವುದು ಮತ್ತು ನಿತ್ಯ ಜೀವನದಲ್ಲಿ ಪಾಲಿಸುವುದು ಉಪಾಸಕರುಗಳನ್ನು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ತಯಾರು ಮಾಡುವುದು ಇದೆ ಪರಿಯತ್ತಿಯ ಉದ್ದೇಶವಾಗಿದೆ.
ಪತಿಪಟ್ಟಿ:
ಇದರ ಪ್ರಾಮುಖ್ಯತೆ ಎಂದರೆ ಪ್ರವಚನಗಳ ಸಿದ್ಧಾಂತಗಳ ಸಾರವನ್ನು ಅರಿತು ನಿತ್ಯ ಜೀವನದಲ್ಲಿ ಸಾಧ್ಯವಾದಷ್ಟು ಅನುಸರಣೆ ಮಾಡುವುದು. ಪ್ರಜ್ಞಾಪೂರ್ವಕವಾಗಿ ಧ್ಯಾನಿಸುವುದು, ವಿವಿಧ ಸಂದರ್ಭಗಳಲ್ಲಿ ಬೌದ್ಧ ತಾತ್ವಿಕತೆಯನ್ನು ಅನ್ವಯಿಸಿ ಪರಿಹಾರಗಳನ್ನು ಕಂಡುಕೊಂಡು ಮುನ್ನಡೆಯುವುದು. ಪರಿಯೆತ್ತಿಯಲ್ಲಿ ಪಡೆದ ಮತ್ತು ಗಳಿಸಿದ ಜ್ಞಾನವನ್ನು ಪ್ರಾಯೋಗಿಕವಾಗಿ ಒಂದು ನಿರ್ದಿಷ್ಟ ಆಕಾರ ಪಡೆದುಕೊಳ್ಳುವ ಹಾಗೆ ನಮ್ಮ ನಡವಳಿಕೆ ಮತ್ತು ನಡೆನುಡಿಗಳಲ್ಲಿ ಧರ್ಮವು ನೆಲೆಗೊಳ್ಳುವಂತೆ ಮಾಡುವುದಾಗಿದೆ.
ಯಾವುದೇ ಧರ್ಮವು ಯಶಸ್ವಿಯಾಗುವುದು ಆ ಧರ್ಮದ ಆಚಾರ ವಿಚಾರಗಳ ಅನುಷ್ಠಾನದಲ್ಲಿ. ಹಬ್ಬಗಳು, ಶುಭ ಸಮಾರಂಭಗಳು, ಮದುವೆ, ಗೃಹಪ್ರವೇಶ ಮತ್ತು ಜನನ ಮರಣದ ಸಂದರ್ಭದಲ್ಲಿನ ಆಚರಣೆಗಳು ಬಹು ಮುಖ್ಯವಾಗಿವೆ. ಈ ತರದ ಸಂಗತಿಗಳಲ್ಲಿ ಆಯಾ ಧರ್ಮದ ಪ್ರಭಾವ ಎದ್ದು ಕಾಣುತ್ತದೆ. ಅದಕ್ಕೆ ಕಾರಣ ಆ ಧರ್ಮದ ಆಚಾರ ವಿಚಾರಗಳು ಮತ್ತು ಅವುಗಳ ಅನುಸರಣೆ ಎಂದರೆ ತಪ್ಪಾಗಲಾರದು.
ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಮದುವೆಯು ಸರಳವಾಗಿ ವೈಜ್ಞಾನಿಕವಾಗಿ ಇರಬೇಕೆಂದು ಬಯಸಿದ್ದರು. ಒಮ್ಮೆ ಅವರ ಗೆಳೆಯನಿಗೆ ಬೌದ್ಧ ಮದುವೆ ಹೇಗಿರಬೇಕೆಂದು ಕಾಗದ ಒಂದನ್ನು ಬರೆದಿದ್ದರು. ಅದು ಹೀಗಿದೆ “ಬೌದ್ಧರ ಮದುವೆ ಸಮಾರಂಭ ತುಂಬಾ ಸರಳ. ಅಲ್ಲಿ ಹೋಮ ಮತ್ತು ಸಪ್ತಪದಿ ಇರುವುದಿಲ್ಲ. ಆ ಸಮಾರಂಭಕ್ಕೆ ಅವಶ್ಯಕವಾಗಿ ಬೇಕಾಗುವ ಪರಿಕರವೆಂದರೆ ಹೊಸದಾಗಿ ಮಣ್ಣಿನಿಂದ ಮಾಡಿದ ಮಡಿಕೆ. ಅದರಲ್ಲಿ ಶುದ್ಧವಾದ ನೀರನ್ನು ತುಂಬಿ ಮೇಜಿನ ಮೇಲೆ ಇಡಬೇಕು. ಅದರ ಎದುರು ಬದುರು ಹೆಣ್ಣು ಗಂಡು ನಿಲ್ಲಬೇಕು. ಮಡಿಕೆಯಲ್ಲಿ ಹಸಿದಾರವನ್ನು ಹಾಕಿ ಅದನ್ನು ಇಬ್ಬರೂ ಕೈಯಿಂದ ಹಿಡಿದುಕೊಳ್ಳಬೇಕು. ಒಬ್ಬರು ಮಂಗಳ ಸುತ್ತವನ್ನು ಪಠಣ ಮಾಡಬೇಕು. ಹೆಣ್ಣು ಗಂಡು ಇಬ್ಬರೂ ಬಿಳಿ ಬಣ್ಣದ ಉಡುಗೆಗಳನ್ನು ತೊಟ್ಟಿರಬೇಕು”. ಇಲ್ಲಿ ಯಾವುದೇ ಅವೈಜ್ಞಾನಿಕವಾದ ಆಚಾರಗಳಿಲ್ಲ, ಮೂಢನಂಬಿಕೆಗಳಿಲ್ಲ. ರಾಹುಕಾಲ ಗುಳಿಕಾಲದ ಭಯವಿಲ್ಲ, ಧರ್ಮಶಾಸ್ತ್ರಗಳ ಹಂಗಿಲ್ಲ. ಎಲ್ಲರೂ ಕೂಡಿ ಅವರ ಅನುಕೂಲಕ್ಕೆ ತಕ್ಕಂತೆ ಮದುವೆ ಮನೆಯನ್ನು ಕಾದಿರಿಸಿ, ಅವರ ಅತ್ಯಾಪ್ತರನ್ನು, ಬಂಧು ಬಳಗವನ್ನು, ಗೆಳೆಯರನ್ನು ಈ ಸಮಾರಂಭಕ್ಕೆ ಆಹ್ವಾನಿಸಿ ಈ ಮದುವೆಗೆ ಬಂದವರಿಗೆ ಒಳ್ಳೆಯ ರುಚಿಯಾದ ಅಡುಗೆ ವ್ಯವಸ್ಥೆ ಮಾಡಿಸಿ ಸಂತೋಷವಾಗಿ ಊಟ ಮಾಡಿ ಆಶೀರ್ವದಿಸಿ ತೆರಳಬೇಕು. ಯಾವುದೇ ಉಡುಗೊರೆಯ ಅವಶ್ಯಕತೆ ಇಲ್ಲ. ಬೇಕಾದವರು ಉಡುಗೊರೆಯನ್ನು ಕೊಡಬಹುದು. ಅದಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ಈಗಿನ ಆಧುನಿಕ ಶೈಲಿಗೆ ಅನುಗುಣವಾಗಿ ಬೇಕಾದರೆ ಹಾಡು ಕುಣಿತದ ವ್ಯವಸ್ಥೆ ಮಾಡಿಕೊಳ್ಳ ಬಹುದು. ಆದರೆ ಅದು ಯಾರಿಗೂ ಅನುಚಿತ ಅನಿಸಬಾರದು. ಧರ್ಮಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡಬಹುದು ಒಳ್ಳೆಯ ಸಂಗೀತದ ಹಾಡುಗಳಿಗೆ ನೃತ್ಯವನ್ನು ಮಾಡಬಹುದು.
ಮನುಷ್ಯರೇಕೆ ದುಷ್ಟರಾಗುತ್ತಾರೆ?
ಈ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟವೆ. ಆದರೆ ಬುದ್ಧರ ವಿಚಾರಗಳನ್ನು ಬಲ್ಲವರು ಸುಲಭವಾಗಿ ಉತ್ತರಿಸಬಹುದು. ಯಾವುದೇ ಮನುಷ್ಯ ಹುಟ್ಟಿದಾಗ ವಿಶ್ವಮಾನವನಾಗಿ ಹುಟ್ಟುತ್ತಾನೆ ಆದರೆ ಬೆಳೆಯುತ್ತ ಅಲ್ಪ ಮಾನವನಾಗುತ್ತಾನೆಂದು ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ. ಮನುಷ್ಯರಿಗೆ ಸರಿಯಾದ ಮಾರ್ಗ ಸಿಗದಿದ್ದಾಗ ಅವರು ದುಷ್ಟರಾಗುತ್ತಾರೆ. ಕೆಟ್ಟವರು, ಶೋಷಕರು, ಕೊಲೆಗಡುಕರು, ಕ್ರೂರಿಗಳು, ಅತ್ಯಾಚಾರಿಗಳು, ಸರ್ವಾಧಿಕಾರಿಗಳು, ಮೋಸಗಾರರು ಮತ್ತು ವಂಚಕರಾಗುತ್ತಾರೆ. ಈ ಪ್ರಶ್ನೆಗೆ ಬುದ್ಧರ ಉತ್ತರವೇನು? ಎಂಬುದನ್ನು ಅವರ ಪ್ರವಚನಗಳನ್ನು ಅಧ್ಯಯನ ಮಾಡಿದರೆ ತಿಳಿಯುತ್ತದೆ.
ಬುದ್ಧರ ಪಟ್ಟಿಚ್ಚ ಸಮುಪ್ಪಾದ ಬೋಧನೆಯಲ್ಲಿ ದುಃಖದ ಮೂಲ ಕಾರಣವನ್ನು ತಿಳಿಸುತ್ತ ಹೀಗೆ ಹೇಳಿದ್ದಾರೆ “ಅವಿಜ್ಜ ಪಚ್ಚಯ ಸಂಕಾರ” ಅಂದರೆ ಅಜ್ಞಾನದ ಕಾರಣದಿಂದ ರಚನೆ ಉಂಟಾಯಿತು. ಅರ್ಥತ್ ಅಜ್ಞಾನದಿಂದ ಎಲ್ಲ ಕೆಟ್ಟದ್ದು ಉಗಮವಾಗುತ್ತದೆ. ನಾವು ಸೂಕ್ಷ್ಮವಾಗಿ ಗಮನಿಸಿದರೆ ಬಹುತೇಕ ಅಪರಾಧಿಗಳು ಒಂದಲ್ಲ ಒಂದು ರೀತಿಯಲ್ಲಿ ಅಜ್ಞಾನಿಗಳಾಗಿದ್ದಾರೆ.
ಎರಡನೆಯ ಕಾರಣ ವ್ಯಕ್ತಿಯೊಳಗಿನ ಸ್ವಾರ್ಥ, ಮೋಹ ಮತ್ತು ಲೋಭವಾಗಿದೆ. ವ್ಯಕ್ತಿಯೊಳಗೆ ಸ್ವಾರ್ಥವಿದ್ದಾಗ ಇನ್ನೊಬ್ಬರನ್ನು ತುಳಿದಾದರೂ ತಾನು ಉಳಿಯಬೇಕು ಗಳಿಸಬೇಕು ಪಡೆಯಬೇಕು ಎಂದು ಕೊಳ್ಳುತ್ತಾನೆ. ಅದಕ್ಕೆ ಪೂರಕವಾಗಿ ಲೋಭ ಮತ್ತು ಮೋಹವು ತೀವ್ರವಾಗಿ ಪ್ರಚೋದಿಸುತ್ತವೆ.
ಮೂರನೇ ಕಾರಣ ವ್ಯಕ್ತಿಯೊಳಗಿನ ಅಹಂ ಭಾವ. ಯಾವುದೇ ವ್ಯಕ್ತಿಯೊಳಗೆ ಸುಪ್ತವಾಗಿರುವ ಈ ಅಹಂ, ನಾನು ನನ್ನದು ಎಂಬುದರೊಳಗೆ ಲೀನವಾಗಿರುತ್ತದೆ. ಇದಕ್ಕೆ ಪೂರಕವಾಗಿ ಮತ್ಸರ, ದ್ವೇಷ ಹೊಟ್ಟೆಕಿಚ್ಚು ಇವುಗಳು ಅಹಂ ಭಾವಕ್ಕೆ ಇಂಧನವಾಗಿ ಕೆಲಸ ಮಾಡುತ್ತವೆ.
ಒಟ್ಟಾರೆಯಾಗಿ ಕೆಟ್ಟದರ ಮೂಲ ಅಜ್ಞಾನವಾಗಿದೆ ಎಂಬುದು ನಿರ್ವಿವಾದ. ಸಮಾಜದಲ್ಲಿರುವ ಎಲ್ಲಾ ಸಮಸ್ಯೆಗಳ ಮೂಲವೂ ಅಜ್ಞಾನವಾಗಿದೆ. ಅಜ್ಞಾನದ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ಸರಿ ಮಾಡಬಹುದು.
ಒಬ್ಬನು ತಪ್ಪು ಮಾಡುವಾಗ ಧರ್ಮದ ಮೌಲ್ಯಗಳು ಅವನ ಮನಸ್ಸಿನಲ್ಲಿ ಸುಳಿದು ಅವನು ತಪ್ಪು ಮಾಡದಂತೆ ತಡೆಯುವ ಪ್ರಕ್ರಿಯೆ ನಿಜವಾದ ಸಂಸ್ಕಾರವಾಗಬೇಕು. ಇದು ಮಗುವಿನಿಂದಲೇ, ಮನೆಯಿಂದಲೇ ಶುರುವಾಗಬೇಕು. ಬುದ್ಧರ ಮಾರ್ಗದಲ್ಲಿ ನಡೆಯುವುದೆಂದರೆ ಅದು ಸತ್ಯದ ಮಾರ್ಗದಲ್ಲಿ ನಡೆದಂತೆ. ಇಡೀ ಸಮುದಾಯವು ಸತ್ಯದ ಹಾದಿಯಲ್ಲಿ ನಡೆಯುವಂತಾದರೆ ಖಂಡಿತ ನೈತಿಕ ಸಮಾಜವನ್ನು ನಿರ್ಮಾಣ ಮಾಡಬಹುದು. ಈ ರೀತಿಯ ಸಂಸ್ಕಾರ ಇಲ್ಲದಿದ್ದರೆ ಜನರು ಅನೈತಿಕ ಮಾರ್ಗದಲ್ಲಿ ಸುಖವನ್ನು ಅರಸುತ್ತಾ ಅರಾಜಕತೆಯಡೆಗೆ ಸಾಗಿಬಿಡುತ್ತಾರೆ. ಬುದ್ಧರ ತತ್ವಗಳು ಒಂದು ಸಮಾಜವು ಹೇಗೆ ಜೀವಿಸಬೇಕೆಂದು ತಿಳಿಸುವ ಜೀವನ ಮಾರ್ಗವಾಗಿದೆ. ಆಧುನಿಕ ಯುಗದಲ್ಲೂ ಜಪಾನ್ ನಂತಹ ಪುಟ್ಟ ದೇಶ ಇಡೀ ಪ್ರಪಂಚವೇ ತನ್ನೆಡೆಗೆ ನೋಡುವಂತೆ ಸಾಧನೆ ಮಾಡಿದೆ. ಎರಡನೇ ಮಹಾಯುದ್ಧದ ನಂತರ ಅಳಿವಿನಂಚಿಗೆ ಹೋಗಿದ್ದ ಈ ದೇಶ ಇವತ್ತು ಈ ಮಟ್ಟಿಗೆ ಸಾಧನೆ ಮಾಡಿದೆ ಎಂದರೆ ಅದಕ್ಕೆ ಕಾರಣ ಆ ದೇಶದ ಜನರ ಬೌದ್ಧ ಧರ್ಮದ ಸಂಸ್ಕಾರವೆಂದರೆ ತಪ್ಪಲ್ಲ. ಭೂತಾನ್ ನಂತಹ ಒಂದು ಚಿಕ್ಕ ದೇಶ ಏಷ್ಯಾ ಖಂಡದಲ್ಲಿಯೇ ಅತ್ಯಂತ ಸುಖವಾಗಿ ಜೀವಿಸುವ ಜನರನ್ನ ಹೊಂದಿರುವ ದೇಶವಾಗಿದೆ. ಇದು ಕೂಡ ಒಂದು ಬೌದ್ಧ ದೇಶ. ಭಾರತವು ಬುದ್ಧರ ಕಾಲದಲ್ಲಿ ಸಾಮ್ರಾಟ ಅಶೋಕನ ಕಾಲದಲ್ಲಿ ಅತ್ಯಂತ ಸುಭಿಕ್ಷವಾಗಿದ್ದ, ಸಂತೋಷದಿಂದಿದ್ದ ದೇಶವಾಗಿತ್ತು. ಅದನ್ನ ಮರಳಿ ಸ್ಥಾಪಿಸುವುದೇ ಬಾಬಾ ಸಾಹೇಬರ ಕನಸಾಗಿತ್ತು ಆ ಕನಸನ್ನ ನನಸು ಮಾಡುವ ಅವಕಾಶ ನಮಗೆ ದೊರೆತಿದೆ ಭಾರತದಲ್ಲಿ ಬೌದ್ಧ ಸಿದ್ಧಾಂತ ಇನ್ನೂ ಜೀವಂತವಿದೆ. ಆದರೆ ಅಧ್ಯಯನ ಅನುಸರಣೆಯಲ್ಲಿ ಅದು ಹಿಂದೆ ಇದೆ.
ಪಟಿವೇದ:
ಪಟಿವೇದವೆಂದರೆ ಸತ್ಯದ ಸಾಕ್ಷಾತ್ಕಾರದ ಅನುಭವವನ್ನು ಪಡೆಯುವುದಾಗಿದೆ. ಬೌದ್ಧಿಕವಾಗಿ ಎಷ್ಟೇ ಸಿದ್ಧಾಂತವನ್ನು ತಿಳಿದಿದ್ದರೂ ಸಾಲದು. ಅದೊಂದೆ ಸರಿಯಾದ ಕ್ರಮವಲ್ಲ. ವೈಯಕ್ತಿಕವಾಗಿ ಆ ಸಿದ್ಧಾಂತದ ಜೊತೆ ಅನುಸಂಧಾನ ಮಾಡಬೇಕು. ನೈಸರ್ಗಿಕ ನೈಜತೆಯನ್ನ ನಿರ್ವಾಣದ ಸುಖವನ್ನ ಆನಂದಿಸಬೇಕು. ಇಲ್ಲಿ ಬುದ್ದಿಯ ಸಂಪೂರ್ಣ ಬೆಳವಣಿಗೆ ಆಗಿರುತ್ತದೆ. ಅದೇ ನಿರ್ವಾಣ ಸ್ಥಿತಿ. ಈ ಹಿಂದಿನ ಎರಡು ಹಂತಗಳನ್ನು ಯಶಸ್ವಿಯಾಗಿ ಪರಿಪೂರ್ಣವಾಗಿ ಪೂರೈಸಿದವರು ಅಲ್ಲಿಂದ ಮುಂಬಡ್ತಿ ಪಡೆದು ಮೂರನೇ ಹಂತಕ್ಕೆ ಬರುತ್ತಾರೆ. ಹೀಗೆ ಬಂದವರಿಗಷ್ಟೇ ನಿರ್ವಾಣದ ಪರಮಸುಖ ಗೋಚರಿಸುತ್ತದೆ. ಬುದ್ಧರು ಎಲ್ಲಾ ಸುಖಗಳಿಗಿಂತ ನಿರ್ವಾಣ ಸುಖವು ಪರಮ ಶ್ರೇಷ್ಠವಾದದ್ದು ಎಂದು ಹೇಳಿದ್ದಾರೆ. ಹಿಂದಿನ ಎರಡು ಹಂತಗಳನ್ನು ನಮ್ಮೊಳಗಿನ ಕೆಟ್ಟ ಮನೋಕ್ಲೇಶಗಳನ್ನು ಶುದ್ಧಿಮಾಡಿಕೊಳ್ಳಲು, ನಮ್ಮನ್ನ ನಾವು ತಿದ್ದಿಕೊಂಡು ಉತ್ತಮ ಮಾರ್ಗದಲ್ಲಿ ಬರಲು ಸಹಾಯ ಮಾಡುತ್ತದೆ. ಆ ಎರಡು ಹಂತಗಳಲ್ಲಿ ಪರಿಪೂರ್ಣ ಶುದ್ಧಿಯಾದವರು ಈ ಮೂರನೇ ಹಂತಕ್ಕೆ ಬರುತ್ತಾರೆ. ಇದು ಸಾಮಾನ್ಯ ಜನರು ನಿರ್ವಾಣ ಪಡೆದು ಶ್ರೇಷ್ಠ ವ್ಯಕ್ತಿಗಳಾಗುವ ಒಂದು ಮಹಾ ಧಮ್ಮ ಪಯಣವಾಗಿರುತ್ತದೆ. ಭಿಕ್ಕುಗಳಿಗೆ ಇದು ಅನಿವಾರ್ಯವೂ ಕಡ್ಡಾಯವೂ ಆದ ಜೀವನ ಕ್ರಮವಾಗಿರುತ್ತದೆ. ಲೌಕಿಕ ಜೀವನದಲ್ಲಿ ಇರುವವರಿಗೆ ಇದು ವೈಯಕ್ತಿಕ ಆಯ್ಕೆಯಾಗಿರುತ್ತದೆ. ಲೌಕಿಕ ಜೀವನದಿಂದ ಹೊರಬರಲು ಮಾನಸಿಕವಾಗಿ ಬೌದ್ಧಿಕವಾಗಿ ಸಂಕಲ್ಪ ಮಾಡಿದವರಿಗೆ ಈ ಅಲೌಕಿಕ ಜೀವನ ಕ್ರಮ ಇಷ್ಟವಾಗುತ್ತದೆ. ಬುದ್ಧರು ಸಾಮಾನ್ಯ ಜನರನ್ನು ಭಿಕ್ಕುಗಳನ್ನಾಗಿ ಮಾಡಬೇಕೆಂದು ಬಯಸಿರಲಿಲ್ಲ. ಸಾಮಾನ್ಯ ಜನರಲ್ಲಿ ಯೋಗ್ಯರಾದವರನ್ನ ಆಯ್ಕೆ ಮಾಡಿಕೊಳ್ಳಲು ಅವರಿಗೆ ಮೂಲಭೂತ ತರಬೇತಿ ನೀಡುವುದು ಅಲ್ಲಿಂದ ಮುಂದಿನ ಹಂತಕ್ಕೆ ಕೆಲವರನ್ನಾದರೂ ಮೇಲಕ್ಕೆತ್ತಿಕೊಳ್ಳುವ ಒಂದು ಪ್ರಕ್ರಿಯೆಯಾಗಿರಬೇಕೆಂದು ಬಯಸಿದ್ದರು.
ನಿರ್ವಾಣವು ಅತ್ಯಂತ ಉನ್ನತವಾದ ಆನಂದಕರವಾದ ಒಂದು ಹಂತ. ನಿರ್ವಾಣದ ನಂತರ ಮತ್ತೆ ನರಮಾನವರಾಗುವ ಯಾವುದೇ ಅವಕಾಶ ಇರುವುದಿಲ್ಲ. ನಿರ್ವಾಣ ಪಡೆದವರು ಸಂಪೂರ್ಣ ದುಃಖದಿಂದ ಮುಕ್ತರಾಗಿರುತ್ತಾರೆ . ಇವರು ಯಾವುದಕ್ಕೂ ಅಂಟಿಕೊಂಡಿರುವುದಿಲ್ಲ. ಯಾವುದಕ್ಕೂ ಭಯಪಡುವುದಿಲ್ಲ. ಪ್ರತಿಕ್ಷಣವೂ ಆನಂದದ ಚಿಲುಮೆಯಲ್ಲಿ ಇರುತ್ತಾರೆ. ಇಂತಹವರನ್ನು ಎಲ್ಲರೂ ಗೌರವಿಸುತ್ತಾರೆ, ಪೂಜಿಸುತ್ತಾರೆ, ವಂದಿಸುತ್ತಾರೆ ಹಾಗೂ ಅನುಸರಿಸುತ್ತಾರೆ. ನಿರ್ವಾಣ ಪಡೆದವರು ಪಂಚಶೀಲಗಳಲ್ಲಿ ಪರಿಪೂರ್ಣತೆ ಸಾಧಿಸಿರುತ್ತಾರೆ. ಅಷ್ಟಾಂಗ ಮಾರ್ಗದಲ್ಲಿ ನಡೆದು ಪೂರ್ಣ ಚಂದಿರನಂತೆ ಬೆಳಗುತ್ತಿರುತ್ತಾರೆ. ತಾವರೆ ಹೂವಿನಂತೆ ನೀರೊಳಗಿದ್ದರೂ ಮಣ್ಣಿನೊಳಗಿದ್ದರೂ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಕಮಲದ ಹೂ ನೀರಿನಿಂದ ಮತ್ತು ಮಣ್ಣಿನಿಂದ ಮುಕ್ತವಾಗಿ ಹೊರಗಡೆ ಬಂದು ಅರಳುವ ಹಾಗೆ ನಿರ್ವಾಣ ಪಡೆದವರು ತಾವು ಸಮಾಜದಲ್ಲಿ ಅರಳಿ ಯಾವುದಕ್ಕೂ, ಯಾರಿಗೂ ಅಂಟಿಕೊಳ್ಳದೆ ಕೇವಲ ಮಾರ್ಗದಾತರಾಗುತ್ತಾರೆ. ಜನರಿಗೆ ಕರುಣೆ ಮೈತ್ರಿಗಳನ್ನು ಹಂಚುತ್ತಾರೆ, ಜ್ಞಾನವನ್ನು ಎಲ್ಲರಿಗೂ ಮುಕ್ತವಾಗಿ ತಿಳಿಸುತ್ತಾರೆ. ಮಾನವನ ಏಳಿಗೆಗೆ ತಮ್ಮೆಲ್ಲ ಶಕ್ತಿಯನ್ನು ವ್ಯಯಿಸುತ್ತಾರೆ ಪ್ರತಿಯೊಂದು ಜೀವರಾಶಿಗೂ ಮುದಿತವನ್ನು ಕೊಡುತ್ತಾರೆ. ಪ್ರಕೃತಿಯಲ್ಲಿರುವ ಅತ್ಯಂತ ಶ್ರೇಷ್ಠ ಜೀವನವನ್ನು ಇವರು ನಡೆಸುತ್ತಿರುತ್ತಾರೆ. ಇದಕ್ಕಿಂತ ಶ್ರೇಷ್ಠವಾದದ್ದು ಉನ್ನತವಾದದ್ದು ಬೇರೆ ಯಾವುದು ಇರುವುದಿಲ್ಲ. ಆ ಹಂತವೇ ಅಂತಿಮವಾಗಿರುತ್ತದೆ.
ಗೆಳೆಯರೇ ಇಂತಹ ಶ್ರೇಷ್ಠ ಜೀವನ ಕ್ರಮವನ್ನು ನಮ್ಮ ಜೀವನದಲ್ಲೂ ತಂದುಕೊಳ್ಳುವ ದೃಢಸಂಕಲ್ಪವನ್ನು ನಾವು ಮಾಡಬೇಕಿದೆ. ಈ ಮೂಲಕ ಮರಳಿ ಬೌದ್ಧ ನೆಲೆಯಲ್ಲಿನ ಪ್ರಬುದ್ಧ ಭಾರತವನ್ನು ನಿರ್ಮಿಸಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಶೋಷಿತರು ಮಾನವ ಕಲ್ಯಾಣದಲ್ಲಿ ನಂಬಿಕೆ ಇರುವವರು ಈ ಒಂದು ಸಂಕಲ್ಪವನ್ನು ಮಾಡಬೇಕು. ಬಾಬಾ ಸಾಹೇಬರ ಆಶಯಗಳನ್ನು ಅವರ ಮಾರ್ಗವನ್ನು ಅನುಸರಿಸಬೇಕು. ಆಗ ತನ್ನಿಂದ ತಾನೇ ಪ್ರಬುದ್ಧ ಭಾರತ ಸೃಷ್ಟಿಯಾಗುತ್ತದೆ. ಬುದ್ಧ ಮಾರ್ಗದ
ಡಾ. ನಾಗೇಶ್ ಮೌರ್ಯ
ಬೌದ್ಧ ಚಿಂತಕರು, ಹಿರಿಯ ಪ್ರಬಂಧಕರು, ಕೆನರಾ ಬ್ಯಾಂಕ್ ಬೆಂಗಳೂರು.
ಮೊ. 9743907399
ಇದನ್ನೂ ಓದಿ- http://“ಕಟ್ಟಡ ಹೇಳುವ ಕತೆ” https://kannadaplanet.com/a-building-tells-a-story/