ಶಿವಮೊಗ್ಗ: ಮಂಡ್ಯದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದೆ ಸುಮಲತಾ ಸ್ಪರ್ಧಿಸುತ್ತಾರೋ ಇಲ್ಲವೇ ಮಿತ್ರಪಕ್ಷ ಜೆಡಿಎಸ್ಗೆ ಕ್ಷೇತ್ರವನ್ನು ಬಿಟ್ಟುಕೊಡಲಾಗುವುದೋ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಈ ವಿಷಯ ಇನ್ನೂ ತೀರ್ಮಾನವಾಗಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.
ಜೆಡಿಎಸ್ ಪಕ್ಷವು NDA ಮೈತ್ರಿಕೂಟ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ, ಮೂರರಿಂದ ನಾಲ್ಕು ಸ್ಥಾನಗಳನ್ನು ತನಗೆ ಬಿಟ್ಟುಕೊಡುವಂತೆ ಭಾರತೀಯ ಜನತಾಪಕ್ಷವನ್ನು ಕೇಳಿದೆ. ಈ ಪೈಕಿ ಮಂಡ್ಯ ಕ್ಷೇತ್ರವೂ ಒಂದು. ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರೇ ಸ್ಪರ್ಧಿಸುವ ಸಾಧ್ಯತೆ ಇದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಸುಮಲತಾ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದರಲ್ಲದೆ, ಬಿಜೆಪಿಯಿಂದಲೇ ಸ್ಪರ್ಧಿಸುವ ಕುರಿತು ತೀರ್ಮಾನ ಮಾಡಿದ್ದರು. ಆದರೆ ಜೆಡಿಎಸ್ ಜೊತೆಗಿನ ಬಿಜೆಪಿ ಮೈತ್ರಿ ಅವರಿಗೆ ಮುಳ್ಳಾಗಿದೆ.
ನಾನು ಮಂಡ್ಯದ ಸೊಸೆ, ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ಮಂಡ್ಯ ಜನರಿಗಾಗಿ. ನಾನು ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಮೊನ್ನೆಯಷ್ಟೇ ಸುಮಲತಾ ಹೇಳಿದ್ದರು. ಮಂಡ್ಯ ಕ್ಷೇತ್ರದ ಬದಲಿಗೆ ಬೆಂಗಳೂರು ಉತ್ತರ ಅಥವಾ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸುಮಲತಾ ಅವರಿಗೆ ಬಿಜೆಪಿ ಮನವಿ ಮಾಡಿದೆ ಎಂಬ ಊಹಾಪೋಹದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದರು.
ಒಂದು ವೇಳೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟರೆ ಸುಮಲತಾ ಮುಂದೆ ಹಲವು ಆಯ್ಕೆಗಳಿವೆ. ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಆ ಪಕ್ಷದಿಂದ ಸ್ಪರ್ಧಿಸುವುದು ಒಂದು ಆಯ್ಕೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸುಮಲತಾ ಅವರ ಸೇರ್ಪಡೆಗೆ ಬೆಂಬಲವಿಲ್ಲ. ಕಳೆದ ಬಾರಿಯಂತೆಯೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಮತ್ತೊಂದು ಆಯ್ಕೆ. ಎರಡೂ ಸಾಧ್ಯವಾಗದಿದ್ದರೆ ಬಿಜೆಪಿ ಸೂಚಿಸುವ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಅವರ ಮುಂದಿನ ಮೂರನೇ ಆಯ್ಕೆ. ಸುಮಲತಾ ಯಾವ ದಾರಿಯನ್ನು ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.