ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಅವರನ್ನು ಬಂಧಿಸಲು ನಿರ್ಬಂಧ ವಿಧಿಸಿ ಹೈಕೋರ್ಟ್ ಆದೇಶವನ್ನು ಆ. 30 ರವರೆಗೆ ವಿಸ್ತರಣೆ ಮಾಡಿತ್ತು. ಇಂದು ಈ ಸಂಬಂಧ ಮತ್ತೆ ವಿಚಾರಣೆ ನಡೆಯಲಿದ್ದು, ಒಂದು ವೇಳೆ ಮಧ್ಯಂತರ ಆದೇಶ ತೆರವಾದರೆ ಬಿಎಸ್‌ವೈಗೆ ಬಂಧನ ಭೀತಿ ಎದುರಾಗಲಿದೆ.
ಬೆಂಗಳೂರಿನ ಮಹಿಳೆಯೊಬ್ಬರು, ತಮ್ಮ ಪುತ್ರಿಯ ಮೇಲೆ ಯಡಿಯೂರಪ್ಪನವರು ಲೈಂಗಿಕ ಕಿರುಕುಳ ಎಸಗಿದ್ದಾರೆಂದು ಆರೋಪಿಸಿ ಮಾ. 14ರಂದು ಕೇಸ್ ದಾಖಲಿಸಿದ್ದರು. ಆದರೆ, ಆ ಮಹಿಳೆಯು ಇತ್ತೀಚೆಗೆ (ಮೇ 26) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿತ್ತು. ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ನೀಡಿದ್ದರು.
ಈ ನಡುವೆ ತಮ್ಮ ವಿರುದ್ಧದ ಪ್ರಕರಣ ರದ್ದು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು. ಬಳಿಕ ಮತ್ತೆ ವಿಚಾರಣೆ ನಡೆಸಿ ಆಗಸ್ಟ್ 30 ರವರೆಗೆ ಆದೇಶವನ್ನು ವಿಸ್ತರಣೆ ಮಾಡಿತ್ತು. ಅದರಂತೆ ಇಂದು ವಿಚಾರಣೆ ನಡೆಯಲಿದೆ.