ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣವನ್ನು ಮರೆಮಾಚಲು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ಇಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವರೂ ಆದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಮತ್ತು ಅನುಭವಿ ರಾಜಕಾರಣಿಯಾದ ಆಯನೂರು ಮಂಜುನಾಥ್ ಅವರ ಹೇಳಿಕೆಯನ್ನು ಪಕ್ಷ ಖಂಡಿಸುತ್ತದೆ. ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯಕ್ಕೆ ಯಡಿಯೂರಪ್ಪ ಅವರು ನೀಡಿರುವ ಕೊಡುಗೆಯನ್ನು ಅವರು ಗಮನಿಸಬೇಕು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನ್ಯಾಯಾಲಯ ಮತ್ತು ಜನತಾ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಪಡೆದ ಯಡಿಯೂರಪ್ಪ ಅವರ ಬಗ್ಗೆ ಆಯನೂರು ಮಂಜುನಾಥ್ ಅವರು ಲಘುವಾಗಿ ಮಾತನಾಡಬಾರದು. ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗಿ ಚುನಾವಣೆ ರಾಜಕೀಯದಿಂದ ದೂರ ಇರುವ ಯಡಿಯೂರಪ್ಪ ಅವರ ಬಗ್ಗೆ ವಿನಾ ಅರೋಪ ಮಾಡುವುದನ್ನು ನಾವು ಖಂಡಿಸುತ್ತೇವೆ. ಯಾವುದೇ ಹಿರಿಯ ರಾಜಕಾರಣಿಯ ಬಗ್ಗೆ ಟೀಕೆ ಮಾಡುವಾಗ ಯೋಚನೆ ಮಾಡಬೇಕು ಎಂದು ಹೇಳಿದರು.
ಆಯನೂರು ಮಂಜುನಾಥ್ ಅವರು ನಾಲ್ಕು ಸದನಗಳನ್ನು ಪ್ರತಿನಿಧಿಸಿದ್ದವರು, ಅನೇಕ ಹೋರಾಟ ಮಾಡಿಕೊಂಡು ಬಂದಿರುವವರು. ಈಗ ಕಾಂಗ್ರೆಸ್‌ನಲ್ಲಿದ್ದುಕೊಂಡು ಅಲ್ಲಿನ ನಾಯಕರನ್ನು ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುತಿದ್ದಾರೆ. ಮುಡಾ ಮತ್ತು ವಾಲ್ಮೀಕಿ ನಿಗಮದ ಭ್ರಷ್ಟಾಚಾರಗಳ ಬಗ್ಗೆ ಬಿಜೆಪಿ ಹೋರಾಟ ಮಾಡುತ್ತಿದೆ. ತಮ್ಮ ಪಕ್ಷದ ಸರಕಾರ ಮತ್ತು ನಾಯಕರ ಮೇಲಿನ ಆರೋಪಗಳನ್ನು ಮರೆಮಾಚಲು ಹಿರಿಯ ರಾಜಕೀಯ ಮುತ್ಸದ್ದಿ ಯಡಿಯೂರಪ್ಪ ಅವರ ಮೇಲೆ ಆರೋಪ ಮಾಡುವುದು ತರವಲ್ಲ. ಆಯನೂರು ಮಂಜುನಾಥ್ ಈ ರೀತಿಯ ಟೀಕೆಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.