ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಸುವ ದುರುದ್ದೇಶದಿಂದ ನುಸುಳುಕೋರರಿಗೆ ರಾಜ್ಯ ಪ್ರವೇಶಿಸಲು ಗಡಿ ಭದ್ರತಾ ಪಡೆ ನೆರವಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಇಸ್ಲಾಂಪುರ, ಸಿತಾಯಿ ಹಾಗೂ ಚೋಪ್ರಾ ಪ್ರದೇಶಗಳಿಂದ ನುಸುಳುಕೋರರು ರಾಜ್ಯ ಪ್ರವೇಶಿಸುತ್ತಿದ್ದಾರೆ. ಗಡಿ ಕಾಯುವ ಹೊಣೆ ಗಡಿ ಭದ್ರತಾ ಪಡೆ ಜವಬ್ದಾರಿ. ಆದರೆ ನುಸುಳುವಿಕೆ ತಡೆಯದ ಬಿಎಸ್ ಎಫ್ ವಿರುದ್ಧ ಏಕೆ ಧನಿ ಎತ್ತುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ನುಸುಳುಕೋರರಿಗೆ ಗಡಿಯಲ್ಲಿ ನೆರವಾಗಿ, ತೃಣಮೂಲ ಕಾಂಗ್ರೆಸ್ ಮೇಲೆ ಅನಗತ್ಯ ಆರೋಪ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅವರು ಎಚ್ಚರಿಎಕ ನೀಡಿದ್ದಾರೆ. ಇಂತಹ ಕೆಲಸವನ್ನು ಟಿಎಂಸಿ ಯಾವತ್ತೂ ಮಾಡುವುದಿಲ್ಲ. ಬಿಎಸ್‌ಎಫ್ ಮಾಡುವ ತಪ್ಪುಗಳನ್ನು ಬೆಂಬಲಿಸುವ ಮೂಲಕ ತೃಣಮೂಲ ಪಕ್ಷವನ್ನು ಟೀಕಿಸಬೇಡಿ ಎಂದು ಹೇಳಿದ್ದಾರೆ.
ಗಡಿ ಕಾಯುತ್ತಿರುವುದು ಬಿಎಸ್‌ಎಫ್ ಹೊರತೂ ಟಿಎಂಸಿ ಪಕ್ಷ ಅಲ್ಲ. ಈ ಭಾಗಗಳಿಂದ ರೌಡಿಗಳು ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ. ಗಡಿಯುದ್ದಕ್ಕೂ ಕೊಲೆಗಳನ್ನು ಮಾಡುತ್ತಿದ್ದಾರೆ. ಇವೆಲ್ಲವೂ ಬಿಎಸ್‌ಎಫ್‌ನ ಆಂತರಿಕ ಕೆಲಸವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಕುಮ್ಮಕ್ಕೂ ಇದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ವಿಷಯ ಇಲ್ಲಿಗೆ ನಿಲ್ಲುವುದಿಲ್ಲ. ಗಡಿಯುದ್ದಕ್ಕೂ ರಾಜ್ಯದ ಮಹಿಳೆಯರ ಮೇಲೆ ಬಿಎಸ್‌ಎಫ್ ದೌರ್ಜನ್ಯ ಎಸಗುತ್ತಿದೆ. ಈ ಕುರಿತು ಕೇಂದ್ರಕ್ಕೆ ನಿರಂತರವಾಗಿ ದೂರು ನೀಡುತ್ತಾ ಬರಲಾಗಿದೆ. ಆದರೂ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ರಾಜ್ಯಕ್ಕೆ ಅಗತ್ಯ ಸೌಕರ್ಯಗಳನ್ನು ನೀಡದಿದ್ದಲ್ಲಿ ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಎಂದು ಮಮತಾ ತಿಳಿಸಿದ್ದಾರೆ.